ನಿಟ್ಟೆ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾನವಿಕ ವಿಭಾಗವು, ಇಂಡಿಯನ್ ನಾಲೆಡ್ಜ್ ಸಿಸ್ಟಮ್ ಮತ್ತು ಸಿಬ್ಬಂದಿ ಅಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಮೆ 29 ಹಾಗೂ 30 ರಂದು ಆಯೋಜಿಸಲಾದ ಎರಡು ದಿನಗಳ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ “Foundations of Indian Knowledge Systems (IKS) in Higher Education” ನ ಉದ್ಘಾಟನಾ ಸಮಾರಂಭವು ನಿಟ್ಟೆಯಲ್ಲಿ ಮೇ 29 ರಂದು ಬೆಳಗ್ಗೆ ನಡೆಯಿತು.
ಕಾರ್ಯಕ್ರಮವನ್ನು ಭಾರತೀಯ ಸಂಸ್ಕೃತಿ ತಜ್ಞರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು ಭಾರತ ದೇಶದ ಪರಂಪರೆ, ಮೌಲ್ಯಗಳು ಹಾಗೂ ಜ್ಞಾನಸಂಪತ್ತಿನ ಬಗೆಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿಟ್ಟೆ ವಿವಿಯ ಕುಲಾಧಿಪತಿ ಎನ್. ವಿನಯ ಹೆಗ್ಡೆಯವರು ಕಾರ್ಯಕ್ರಮವನ್ನು ಹಮ್ಮಿಕೊಂಡ ವಿಭಾಗವನ್ನು ಅಭಿನಂದಿಸಿ ಮುಂದಿನ ಜನತೆಗೆ ಮೌಲ್ಯಯುತ ಜೀವನ ನಡೆಸಲು ಮಾರ್ಗದರ್ಶನ ಅತ್ಯಗತ್ಯವೆಂದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ವಿಭಾಗದ ಉಪಾಧ್ಯಕ್ಷ ಪ್ರೊ.ಡಾ. ಗೋಪಾಲ್ ಮೊಗೆರಾಯ, ಭಾರತೀಯ ಜ್ಞಾನ ಪರಂಪರೆ ಕೇಂದ್ರದ ಸಂಯೋಜಕ ಡಾ. ಸುಧೀರ್ ರಾಜ್ ಕೆ ಮತ್ತು ಸಿಬ್ಬಂದಿ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಸಾಧನಾ ದೇಶ್ಮುಖ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಲುಂಕರ್ ಪ್ರಾಸ್ತಾವಿಸಿದರು. ಮಾನವಿಕ ವಿಭಾಗದ ಮುಖ್ಯಸ್ಥ ಡಾ. ವಿಶ್ವನಾಥ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ಆಶಯವನ್ನು ವಿವರಿಸಿದರು. ಕಾರ್ಯಕ್ರಮದ ಸಂಯೋಜಕಿ ಅಕ್ಷತಾ ಶೆಟ್ಟಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಭರತ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಮೊದಲ ದಿನ (29 ಮೇ) ರಂದು ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಂದ 'ಭಾರತೀಯ ಜ್ಞಾನ ಪರಂಪರೆ ಮತ್ತು ಸಂಸ್ಕೃತಿಯ ಪ್ರಸ್ತುತ ಪ್ರಸ್ತಾವನೆ' ಎಂಬ ವಿಷಯದ ಬಗೆಗೆ ಗೋಷ್ಠಿ ನಡೆಯಿತು. ಡಾ. ಸುಧೀರ್ ರಾಜ್ ಕೆ. ಅವರಿಂದ 'ರಾಮಾಯಣ ಮತ್ತು ಮಹಾಭಾರತ: ಹೊಸ ಜಗತ್ತಿಗೆ ಪಾಠಗಳು– ಅಧ್ಯಾಪನ-ಅಧ್ಯಯನದಲ್ಲಿ ಕೆಲವು ಪ್ರಯೋಗಗಳು' ಎಂಬುದರ ಬಗೆಗೆ, ಶ್ರೀಮತಿ ಅಕ್ಷತಾ ಕೆ ಜೆ ಶೆಟ್ಟಿ ಅವರಿಂದ 'Indian Knowledge Systems: Course Introduction' ಬಗೆಗೆ, ಶ್ರೀ ವಾದಿರಾಜ ರಿಸರ್ಚ್ ಫೌಂಡೇಶನ್ ಪುತ್ತಿಗೆ ಮಠದ ನಿರ್ದೇಶಕ ಡಾ. ಬಿ. ಗೋಪಾಲಾಚಾರ್ ಅವರಿಂದ 'ಸಂಸ್ಕೃತ ಸಾಹಿತ್ಯದಲ್ಲಿ ಜೀವನದರ್ಶನ ಮತ್ತು ವಾಸ್ತುಶಾಸ್ತ್ರ'ದ ಬಗೆಗೆ ವಿಚಾರವಿನಿಮಯ ನಡೆಯಿತು.
ಎರಡನೇ ದಿನ (30 ಮೇ) ರಂದು ಡಾ. ರಾಮಕೃಷ್ಣ ಬಿ. ಅವರು– “ವೇದಿಕ ಯುಗದ ಪರಂಪರೆ ಮತ್ತು ಆಧುನಿಕ ಸಮಾಜದಲ್ಲಿ ಅದರ ಪ್ರಸ್ತುತತೆ, ಡಾ. ವಿಶ್ವನಾಥ್ ಅವರಿಂದ “ಭಾರತೀಯ ಜ್ಞಾನ ಪರಂಪರೆ– ನಿಜವೇ ಅಥವಾ ಕಾಲ್ಪನಿಕ?", ಡಾ. ಶಾಮಪ್ರಸಾದ್ ಸಜಂಕಿಲ– “ಆಯುರ್ವೇದ ಮತ್ತು ಪರಂಪರೆಯ ಭಾರತೀಯ ವೈದ್ಯಕೀಯ ಪದ್ಧತಿಗಳ ಮೂಲ”, ಶ್ರೀನಿವಾಸ ನೆಕ್ಕಾರ್ ಅವರಿಂದ "ಸಂಗೀತ ಮತ್ತು ನೃತ್ಯದ ವೈಜ್ಞಾನಿಕ ಮೂಲಗಳು ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆ” ಮತ್ತು ಶ್ವೇತಾ ಭಾರತ್ ಅವರಿಂದ “ಭಾರತೀಯ ಪರಂಪರೆಯಲ್ಲಿ ಜ್ಞಾನ ಸಂರಕ್ಷಣೆ" ಎಂಬ ವಿಷಯಗಳ ಬಗೆಗೆ ದಿಕ್ಸೂಚಿ ಭಾಷಣಗಳು ನಡೆದವು.
ಈ ಕಾರ್ಯಾಗಾರವು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರಲ್ಲಿ ಉಲ್ಲೇಖಗೊಂಡಂತೆ ಭಾರತೀಯ ಜ್ಞಾನ ಪರಂಪರೆಗಳನ್ನು ತಾಂತ್ರಿಕ ಶಿಕ್ಷಣದಲ್ಲಿ ಒಗ್ಗೊಡಿಸುವ ಮಹತ್ವದ ಪ್ರಯತ್ನವಾಗಿದೆ. ಭಾಗವಹಿಸಿರುವ ಉಪನ್ಯಾಸಕರಿಗೆ ಪಾಠ್ಯಕ್ರಮದ ರೂಪರೇಖೆ, ಜ್ಞಾನಪದ್ಧತಿಗಳ ವೈಜ್ಞಾನಿಕ ಹಿನ್ನೆಲೆ, ಮತ್ತು ಸಂಸ್ಕೃತಿಯ ಬಗ್ಗೆ ಆಳವಾದ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ