ಸೈಬರ್ ವಂಚನೆ: ಮತ್ತೆ ಮತ್ತೆ ಮೋಸ ಹೋಗುವ 'ವಿದ್ಯಾವಂತರು'

Upayuktha
0

 



"ಹಲೋ, ಈ ವೀಡಿಯೋ ಕರೆ ಮಾಡುತ್ತಿರುವ ನಾನು ಸುನೀಲ್ ಗೌತಮ್ ಫ್ರಮ್ CBI"


ಶೃಂಗೇರಿ ಪಟ್ಟಣದ ಹರಿಹರ ಬೀದಿಯ ವೃದ್ಧ ದಂಪತಿಗೆ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಿಡಿಯೊ ಕರೆ ಮಾಡಿ ಲಕ್ಷಾಂತರ ರೂ. ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಪೇಪರ್‌ನಲ್ಲಿ ಸುದ್ದಿಯಾಗಿದೆ.


ದಂಪತಿಗೆ ವಿಡಿಯೊ ಕರೆ ಮಾಡಿದ ವ್ಯಕ್ತಿ ಸಿಬಿಐ ಅಧಿಕಾರಿ ಸುನೀಲ್‌ ಗೌತಮ್ ಎಂದು ಪರಿಚಯಿಸಿಕೊಂಡಿದ್ದಾನಂತೆ. "ನಿಮ್ಮ ಹೆಸರಿನ ಆಧಾರ್ ಕಾರ್ಡ್ ಅನ್ನು ಬೇರೆ ವ್ಯಕ್ತಿಯೊಬ್ಬರು ಉಪಯೋಗಿಸಿಕೊಂಡು ಮನಿ ಲಾಂಡರಿಂಗ್ ಮಾಡುತ್ತಿದ್ದು, ಆತನನ್ನು ಬಂಧನ ಮಾಡಲಾಗಿದೆ. ನಿಮ್ಮ ವಿಳಾಸ ಮತ್ತು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಆರ್‌ಬಿಐನಿಂದ ಪರಿಶೀಲನೆ ಮಾಡಿಸಿ, ನಿಮ್ಮ ಹಣವನ್ನು ನಿಮಗೆ ವಾಪಾಸ್ ನೀಡುತ್ತೇವೆ" ಎಂದು ತಿಳಿಸಿ, ಬೇರೆ ತನ್ನ ಸ್ವಂತ ಖಾತೆಗೆ ಹಣ ವರ್ಗಾವಣೆ ಮಾಡಲು ತಿಳಿಸಿದ್ದಾನೆ.


ವಂಚಕನನ್ನು ನಂಬಿದ ಶೃಂಗೇರಿಯ ದಂಪತಿಗಳು ತಮ್ಮ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ₹.37,30,000 ಗಳನ್ನು ಕಳೆದುಕೊಂಡಿದ್ದಾರೆ.  ಹಂತ ಹಂತವಾಗಿ ವಂಚಕ ದಂಪತಿಗಳಿಂದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.


ಪ್ರಕರಣ ಪೋಲೀಸ್ ಠಾಣೆಗೆ ಹೋಗಿದೆ.  


ದಂಪತಿಗಳಿಗೆ ಹಣ ವಾಪಾಸ್ ಬರುತ್ತಾ? ಗೊತ್ತಿಲ್ಲ.


****


ನಾವು ಯಾರಿಗಾದರೂ ಕಾಲ್ ಮಾಡಿದರೆ, ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಕಾಲರ್ ಟ್ಯೂನ್‌ಗಳನ್ನು ಕೇಳುತ್ತೇವೆ 


"ಜಾಗರೂಕರಾಗಿರಿ, ನೀವು ಪೋಲೀಸ್, CBI, ಕಸ್ಟಮ್ಸ್ ಅಥವಾ ನ್ಯಾಯಾಧೀಶರಿಂದ, ಅಪರಿಚಿತ ಸಂಖ್ಯೆಗಳಿಂದ ವೀಡಿಯೋ ಕರೆಗಳನ್ನು ಪಡೆದರೆ ಭಯಪಡಬೇಡಿ. ಅವರು ಸೈಬರ್ ಅಪರಾಧಿ, ವಂಚಕ ಆಗಿರಬಹುದು..."


ಈ ರೀತಿ ಸೈಬರ್ ಅಪರಾಧ ಜಾಗೃತಿ ಕಾಲರ್ ಟ್ಯೂನ್ ಅನ್ನು ದಿನಕ್ಕೆ 8-10 ಬಾರಿ ಪ್ಲೇ ಮಾಡುವಂತೆ ದೂರಸಂಪರ್ಕ ಇಲಾಖೆ ಎಲ್ಲಾ ಮೊಬೈಲ್ ಸೇವಾ ಆಪರೇಟರ್‌ಗಳಿಗೆ ಆದೇಶವೂ ಇದೆ. ದಿನಾ ರಿಂಗ್ ಟೋನ್ ಬರ್ತಾನೂ ಇದೆ.


ರಿಂಗ್ ಟೋನನ್ನು ದಿನಾ ನಾವು ಕೇಳುತ್ತಿರುತ್ತೇವೆ. ಅಷ್ಟೆ. ಆದರೆ, ಆ ಜಾಗೃತಿ ಕಾಲರ್ ಟ್ಯೂನ್‌ನ್ನು ಗಮನಿಸುವುದೂ ಇಲ್ಲ, ಅರ್ಥೈಸಿಕೊಳ್ಳುವುದೂ ಇಲ್ಲ.  


ಡಿಜಿಟಲ್ ಬಂಧನದಂತಹ ಹೊಸ ವಂಚನೆಗಳ ಮೂಲಕ ಹಣಕಾಸಿನ ವಂಚನೆಯ ಘಟನೆಗಳು ಹೆಚ್ಚಾಗಿದ್ದು, ಸೈಬರ್ ಅಪರಾಧಿಗಳು ಪೊಲೀಸರು, CBI, RBI, ಕಸ್ಟಮ್ಸ್ ಅಧಿಕಾರಿಗಳು, ನ್ಯಾಯಾಧೀಶರು ಇತ್ಯಾದಿಗಳಂತೆ ನಟಿಸಿ ಮೋಸ ಮಾಡುತ್ತಾರೆ. ಅದಕ್ಕೆ ಯಾರೂ ಬಲಿಯಾಗದಿರಲಿ ಎಂದು ಈ ರಿಂಗ್ ಟೋನ್ ಕರೆಗಳು. ಆದರೆ, ಆ ರಿಂಗ್ ಟೋನ್ ಕರೆಗಳನ್ನು ನಾವು ಏನು? ಯಾಕೆ? ಅಂತ ಯೋಚನೆಯನ್ನೂ ಮಾಡುವುದಿಲ್ಲ.


ಮತ್ತೆ ಸೈಬರ್ ವಂಚಕರಿಂದ ಹಣ ಕಳೆದುಕೊಳ್ಳುತ್ತಿರುವುದು ಯಾರೋ ಶಿಕ್ಷಣ ಇಲ್ಲದವರಲ್ಲ!! ಓದಿದವರೆ. ಶಿಕ್ಷಣ ಹೊಂದಿದವರೆ!!


ಸೈಬರ್ ಮೋಸದ ಜಾಗೃತಿಯನ್ನು ಬರೀ ರಿಂಗ್ ಟೋನ್ ಮಾತ್ರ ಅಲ್ಲ, ಬ್ಯಾಂಕ್‌ಗಳಲ್ಲಿ ಫಲಕ ಹಾಕಿ, ಕರ ಪತ್ರ ಹಂಚಿ, ದಿನ ಪತ್ರಿಕೆಗಳಲ್ಲಿ ದೊಡ್ಡ ಜಾಹೀರಾತು ಕೊಟ್ಟೂ ಎಚ್ಚರಿಸಲಾಗುತ್ತಿದೆ. ಆದರೂ, ನಮ್ಮ ಲಕ್ಷ್ಯ ಎಚ್ಚರಿಕೆಯ ಕಡೆ ಹರಿಯುವುದೂ ಇಲ್ಲ. ಲಕ್ಷ ಲಕ್ಷ ಕಳೆದುಕೊಳ್ಳುವ ಪ್ರಕರಣಗಳು ನಿತ್ಯ ಸುದ್ದಿಯಾಗುತ್ತಿವೆ.


ಜಾಗೃತಿ ಕಾಲರ್ ಟ್ಯೂನ್‌ನ್ನು ಕೇಳಿ, ಮಾಹಿತಿಗಳನ್ನು ಓದಿ ಅರ್ಥೈಸಿಕೊಳ್ಳೋಣ, ಜಾಗರೂಕರಾಗೋಣ.


ನಮ್ಮ ಅಜಾಗರೂರಕತೆ, ನಿರ್ಲಕ್ಷ್ಯ ನಮ್ಮ ಬೆವರ ಪ್ರತಿಫಲದ ಗಳಿಕೆಯನ್ನು ಕಳೆದುಕೊಳ್ಳುವಂತೆ ಮಾಡದಿರಲಿ.


***


ಇಷ್ಟೇ ಅಲ್ಲದೆ, ಯುದ್ಧದ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ, ಪಾಕ್ ದುಷ್ಕರ್ಮಿಗಳಿಂದ ಭಾರತದ ಮೊಬೈಲ್ ಬಳಕೆದಾರರ ಮೇಲೆ ಸೈಬರ್ ದಾಳಿ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಪೊಲೀಸ್ ಕಮಿಷನರ್ ಬಿ.ದಯಾನಂದ್‌ರವರು ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದು, ಅಪರಿಚಿತ ಲಿಂಕ್, ಇ-ಮೇಲ್ ಗಳ ಮೇಲೆ ನಿಗಾವಹಿಸಿ, ಎಕ್ಸ್ ಕ್ಲೂಸಿವ್ ನ್ಯೂಸ್ ಲಿಂಕ್‌ಗಳು ಹಾಗೂ ಎಪಿಕೆ ಫೈಲ್ಸ್, ಅಪರಿಚಿತ ಫಾರ್ವರ್ಡ್ ಲಿಂಕ್ ಕ್ಲಿಕ್ ಮಾಡದಂತೆ ಸೂಚನೆ ನೀಡಿದ್ದಾರೆ.


ಕೆಲವು ಯುದ್ಧಗಳು ದೇಶದ ಗಡಿ ಭಾಗಗಳಲ್ಲಿ ನೆಡೆಯುವುದಿಲ್ಲ. ನಮ್ಮ ಮೊಬೈಲ್‌ನಲ್ಲೇ ನೆಡೆಯಬಹುದು.  


ಹ್ಯಾಕಿಂಗ್ ಕ್ಷಿಪಣಿಗಳು ನಮ್ಮ ಬ್ಯಾಂಕ್ ಸಾಲದ ಮೇಲೆ ಬಿದ್ದು, ಸಾಲ ನಾಶ ಆದರೆ ಪರವಾಗಿಲ್ಲ!!!! ಆದರೆ, ಅದು ಬೀಳುವುದು ಬೆವರು ಸುರಿಸಿ, ಗಳಿಸಿ, ಉಳಿಸಿದ ಉಳಿತಾಯದ ಮೇಲೆ.  


ಮೊನ್ನೆ ಶೃಂಗೇರಿ ಹರಿಹರ ಬೀದಿಯ ವೃದ್ಧ ದಂಪತಿಗಳ ಖಾತೆಗೆ ಸುನೀಲ್ ಗೌತಮ್ ಎನ್ನುವವನು ಮಾಡಿದ್ದು ಈ ರೀತಿ ಕ್ಷಿಪಣಿ ಯುದ್ಧ!!!


ಸುನೀಲ್ ಗೌತಮ್‌ನಂತವರು, ಐ ಯಾಮ್ ಫ್ರಮ್ CBI ಅಂತ ವೀಡಿಯೋ ಕರೆ ಮಾಡಿದರೆ "ಥ್ಯಾಂಕ್ಸ್ ಫಾರ್ ದಿ ಇನಫರ್ಮೇಷನ್" ಅಂತ ಹೇಳಿ ಫೋನ್ ಕಾಲ್ 'ಕತ್ತರಿಸಿ'. ಸಾಧ್ಯವಾದರೆ, ಕೂಡಲೆ ಹತ್ತಿರದ ಪೋಲಿಸ್ ಠಾಣೆಗೆ ಮಾಹಿತಿ ಕೊಡೋಣ. 


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top