ಉಜಿರೆ: ಕೋವಿಡ್ ನಂತರದ ವರ್ಷಗಳಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ನಡುವಿನ ಸಮತೋಲನ ಕಾಯ್ದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದಕ್ಕನುಗುಣವಾಗಿ ಆರೋಗ್ಯ ವಿಮೆಯ ಕುರಿತ ಜಾಗೃತ ಪ್ರಜ್ಞೆ ಕ್ರಮೇಣ ವ್ಯಾಪಕವಾಗುತ್ತಿದೆ ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ ಅಭಿಪ್ರಾಯ ಪಟ್ಟರು.
ಉಜರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗವು 'ಆರೋಗ್ಯ ಪೂರ್ಣ ನಾಳೆಗಳಿಗಾಗಿ ಸದ್ಯದ ಹೂಡಿಕೆ: ಆರೋಗ್ಯಕರ ಆರಂಭ, ಆಶಾದಾಯಕ ಭವಿಷ್ಯ' ಕುರಿತು ಆಯೋಜಿಸಿದ ಎರಡು ದಿನಗಳ ವಿಚಾರ ಸಂಕಿರಣ ಮತ್ತು ಸ್ಪರ್ಧಾ ಕಾರ್ಯಕ್ರಮ 'ಸಂಭ್ರಮ 2025' ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸಾಂದರ್ಭಿಕ ಸಮಸ್ಯೆ ಹುಟ್ಟು ಹಾಕಿತ್ತು. ಸಮಾಜ ಕಾರ್ಯದಂತಹ ಶೈಕ್ಷಣಿಕ ಜ್ಞಾನ ಶಿಸ್ತನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳು ಇಂತಹ ಸಾಂದರ್ಭಿಕ ಬಿಕ್ಕಟ್ಟುಗಳಿಗೆ ಸಾಮಾಜಿಕ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಮ್ಮ ಜ್ಞಾನವನ್ನು ವಿನಿಯೋಗಿಸಿದಾಗ ಬಹಳ ಜನರಿಗೆ ಪ್ರಯೋಜನ ದೊರಕುತ್ತದೆ. ಆರೋಗ್ಯ ವಿಮೆಯ ಕುರಿತು ಜಾಗೃತ ಪ್ರಜ್ಞೆ ಮೂಡುವುದಕ್ಕೆ ಈ ಬಗೆಯ ಜ್ಞಾನ ಅನ್ವಯದ ಪ್ರಯತ್ನಗಳು ಪ್ರಮುಖ ಪಾತ್ರವಹಿಸಿವೆ. ಬರೀ ಜ್ಞಾನಾರ್ಜನೆಯಿಂದ ಪ್ರಯೋಜನವಿಲ್ಲ. ಪಡೆದ ಜ್ಞಾನವನ್ನು ಅನ್ವಯಿಸಿ ಸಾಮಾಜಿಕವಾಗಿ ಅದನ್ನು ಉಪಯುಕ್ತಗೊಳಿಸುವ ಕ್ರಮ ಪ್ರಧಾನ ಪಾತ್ರ ವಹಿಸುತ್ತದೆ ಎಂದರು.
ಇದೀಗ ಜಗತ್ತಿನ ಲ್ಲಿಜ್ಞಾನದ ಲಭ್ಯತೆ ವ್ಯಾಪಕವಾಗಿದೆ. ತಾಂತ್ರಿಕ ಮಾಧ್ಯಮಗಳ ನೆರವಿನೊಂದಿಗೆ ಜ್ಞಾನವನ್ನು ಪಡೆಯುವ ದಾರಿಗಳು ತೆರೆದುಕೊಂಡಿವೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಪ್ರಕ್ರಿಯೆಯನ್ನು ವಿನೂತನವಾಗಿ ಗ್ರಹಿಸಬೇಕು. ಪಡೆದಜ್ಞಾನ ಹೊಸ ಕಾಲದ ಅಗತ್ಯಗಳಿಗೆ ಹೇಗೆ ಅನ್ವಯಿಸಬೇಕು ಎಂಬ ಕೌಶಲ್ಯವನ್ನು ರೂಢಿಸಿಕೊಳ್ಳುವುದರ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಆಗ ಮಾತ್ರ ಉದ್ಯೋಗಾವಕಾಶಗಳ ಹೊಸ ದಿಕ್ಕು ತೋಚುತ್ತದೆ ಎಂದು ಹೇಳಿದರು.
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ, ಸಂಭ್ರಮ ಸ್ಪರ್ಧಾ ಉತ್ಸವದ ಸಂಚಾಲಕಿ ಸ್ವಾತಿ ಬಿ ಉಪಸ್ಥಿತರಿದ್ದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥಡಾ.ರವಿಶಂಕರ್ ಕೆಆರ್ ಮಾತನಾಡಿ ಸಮಾಜಕಾರ್ಯ ವಿಭಾಗದ ಪ್ರಯೋಗಶೀಲ ಹೆಜ್ಜೆಗಳ ವಿವರ ನೀಡಿದರು. ಮುಂಬರುವ ವರ್ಷದಲ್ಲಿ ಬೆಳ್ಳಿಹಬ್ಬ ಆಚರಿಸಿಕೊಳ್ಳಲಿರುವ ವಿಭಾಗದ ವಿಶೇಷತೆಯನ್ನು ಪರಿಚಯಿಸಿದರು. ವಿದ್ಯಾರ್ಥಿನಿ ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿ ಶರಣ್‌ಜೈನ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ