ಹೆಣ್ಣು ಮಕ್ಕಳೇ ಸ್ಟ್ರಾಂಗು ಗುರು...!

Upayuktha
0




ಹಿರಿಯ ಫೇಸ್ಬುಕ್ ಸ್ನೇಹಿತೆಯೊಬ್ಬರ ಪೋಸ್ಟ್ ನಲ್ಲಿ ಹೆಣ್ಣು ಮಕ್ಕಳನ್ನು ಹಗುರವಾಗಿ ಕಾಣುತ್ತಾರೆ. ಆಕೆಯ ಸ್ವಾಭಿಮಾನವನ್ನು ಸೊಕ್ಕು ಎಂಬಂತೆ ತಪ್ಪಾಗಿ ಪರಿಭಾವಿಸುತ್ತಾರೆ ಎಂಬರ್ಥ ನೀಡುವ ವಾಕ್ಯಗಳನ್ನು ಓದಿದೆ. ನಿಜಕ್ಕೂ ಚಿಂತನೆಗೆ ಹಚ್ಚುವ ವಾಕ್ಯಗಳು.

ಕೆಲವು ವರ್ಷಗಳ ಹಿಂದೆ ನನ್ನ ಸ್ನೇಹಿತೆಯ ಮಗ ಚಿಕ್ಕವನಾಗಿದ್ದು ಅವನು ಮನೆಗೆ ಬಂದಾಗಲೆಲ್ಲ ನಾನು ತಿಂಡಿಯ ಕಪಾಟನ್ನು ತೆರೆದೊಡನೆ ಬಂದು ನಿಲ್ಲುತ್ತಿದ್ದ. ಆತ ಕೈ ಮಾಡಿ ತೋರುತ್ತಿದ್ದ ತಿಂಡಿಗಳನ್ನು ಸ್ವಲ್ಪ ಸ್ವಲ್ಪವೇ ಆತನಿಗೆ ನಾನು ಹಾಕಿ ಕೊಡುತ್ತಿದ್ದೆ. ಇದು ನನಗೆ ಇಷ್ಟದ ಕೆಲಸವೂ ಆಗಿತ್ತು. ಒಂದು ದಿನ ಆತನ ತಾಯಿ ನನ್ನನ್ನು ತಡೆದು ಬೇಡ ನಿಮ್ಮ ಮನೆಯಲ್ಲಿ ಹಕ್ಕಿನಿಂದ ಇಸಿದುಕೊಂಡು ತಿನ್ನುವ ನನ್ನ ಮಗ ಬೇರೊಬ್ಬರ ಮನೆಯಲ್ಲಿಯೂ ಅದೇ ರೂಢಿಯನ್ನು ಮುಂದುವರಿಸಬಹುದು ಎಂದು ಹೇಳಿದರು.


ತಿನ್ನುವ ಮಕ್ಕಳನ್ನು ಯಾರೂ ತಡೆಯುವುದಿಲ್ಲ ಎಂದು ನಾನು ವಾದಿಸಿದೆ. ಅದಕ್ಕೆ ನನ್ನ ಸ್ನೇಹಿತೆ ನಿಮಗೆ ಗೊತ್ತಿಲ್ಲ, ಶ್ರೀಮಂತರ ಮಕ್ಕಳು ತಮ್ಮ ಬಳಿ ಕೇಳುವುದು ಮಹಾಭಾಗ್ಯ ಎಂಬಂತೆ ಅವರು ಕೇಳುವ ಮುನ್ನವೇ ಎಲ್ಲವನ್ನೂ ಅವರಿಗೆ ಹಾಕಿ ಕೊಟ್ಟು ಧನ್ಯನಾದೆ ಎಂಬ ಭಾವದಲ್ಲಿ ಇರುವ ಜನರು ತಮಗಿಂತ ತುಸು ಕಡಿಮೆ ಸೌಲಭ್ಯವನ್ನು ಹೊಂದಿರುವ ಜನರಿಗೆ ಏನಾದರೂ ಎತ್ತಿ ಕೊಡುವಾಗ ಮೇಲರಿಮೆಯನ್ನು ತೋರುತ್ತಾರೆ. ಮಕ್ಕಳು ಎಂದು ಕೂಡ ನೋಡದೆ ಇವೇನು ತಿನ್ನಲೆಂದೇ ಹುಟ್ಟಿವೆ ಎಂಬಂತೆ ಅಪಹಾಸ್ಯ ಮಾಡಿ ನಮ್ಮಲ್ಲಿ ಕೀಳರಿಮೆ ಹುಟ್ಟಿಸುತ್ತಾರೆ ಎಂದಾಗ ನನಗೆ ಸೋಜಿಗವೂ, ನಿಜದ ಅರಿವು ಆಯಿತು.


ನಿಜ ಆಕೆ ಹೇಳುವುದು,  ಅನುಭವಿಸಿದವರಿಗೆ ಗೊತ್ತಲ್ಲವೇ ಅವರ ನೋವು. ಅವರ ಅಭಿಮಾನಕ್ಕೆ ಪೆಟ್ಟು ಬಿದ್ದಂತಾಗಿರಬಹುದು ಅಲ್ಲವೇ?ಅವರ ಮಾತಿನ ಹಿಂದಿನ ತಥ್ಯವನ್ನು ತಿಳಿದು ಅಂದಿನಿಂದ ನನಗೇನು ಕೊಡಬೇಕು ಎಂದಿದೆಯೋ ಅದನ್ನು ಸ್ವಲ್ಪವೇ ಹಾಕಿ ಕೊಟ್ಟು ಮನೆಯ ಮತ್ತು ಹೊರಗಿನ ಜನರೊಂದಿಗೆ ಮಕ್ಕಳು ಯಾವ ರೀತಿ ವರ್ತಿಸಬೇಕು ಎಂಬುದಕ್ಕೆ ಸೀಮಿತತೆಯನ್ನು ನೀಡಿ ಅನಿವಾರ್ಯವಾಗಿಯಾದರೂ ಅತ್ಯವಶ್ಯಕ ಎಂಬಂತೆ ಪಾಲಿಸತೊಡಗಿದೆ.


ತುಸು ಹೆಚ್ಚು ಮಾತನಾಡಿದರೆ ವಾಚಾಳಿ ಎಂದೂ ಕಡಿಮೆ ಮಾತನಾಡಿದರೆ ಮುಷಂಡಿ ಎಂದು, ತುಸು ಜೋರಾಗಿ ನಕ್ಕರೆ ಮ್ಯಾನರ್ಸ್ ಇಲ್ಲದ ಹೆಣ್ಣೆಂದು, ಕಡಿಮೆ ನಕ್ಕರೆ ಇಲ್ಲವೇ ನಗದೆ ಹೋದರೆ ಗಂಟು ಮುಖದಾಕೆ ಎಂದು, ಜೋರಾಗಿ ಮಾತನಾಡಿದರೆ ಗಯ್ಯಾಳಿಯೆಂದು ಮಾತನಾಡದೆ ಹೋದರೆ ಮುತ್ತು ಉದುರುತ್ತವೆ ಎಂದು, ತನಗೆ ಸರಿ ಕಂಡ ವಿಷಯಗಳಿಗೆ ತುಸುವೇ ವಾದ ಮಾಡಿದರೂ ಮೊಂಡು ಹೆಣ್ಣುಮಗಳು ಎಂದು ವಾದಿಸದೇ ಒಪ್ಪಿಕೊಂಡರೆ ಕೋಲೆ ಬಸವ ಎಂದೂ, ನಯ ವಿನಯ ತೋರಿದರೆ ನಾಟಕ ಮಾಡುತ್ತಾಳೆಂದು ತನ್ನ ಪಾಡಿಗೆ ತಾನಿದ್ದರೆ ಸೊಕ್ಕು ತೋರಿಸುತ್ತಾಳೆಂದು, ದುಡ್ದು ಖರ್ಚು ಮಾಡಿದರೆ ಆಕೆಯ ಕೈಯಲ್ಲಿ ಹಣ ನಿಲ್ಲುವುದಿಲ್ಲವೆಂದು ಖರ್ಚು ಮಾಡದೆ ಹೋದರೆ ಜಿಪುಣಿ ಎಂದು, ಪ್ರೀತಿಯಿಂದ ಅಕ್ಕರೆಯಿಂದ ಮಾತನಾಡಿಸಿದರೆ ನಾಟಕ ಮಾಡುತ್ತಾಳೆಂದು ಮಾತನಾಡದೆ ಹೋದರೆ ಬಿಂಕ, ಸೊಕ್ಕು ತೋರಿಸುತ್ತಾಳೆ ಎಂದು, ಏನಾದರೂ ಬುದ್ಧಿ ಮಾತು ಹೇಳಿದರೆ ಓದಿದ್ದೀನಿ ಅಂತ ಧಿಮಾಕು ಎಂದು, ಇಲ್ಲವೇ ಕಂಡಿಲ್ಲವೇ ಈಕೆಯ ಬುದ್ಧಿಯನ್ನು ಎಂದು ಆಕೆ ಏನು ಮಾಡಿದರೂ ತಪ್ಪು ಹುಡುಕುವುದರಲ್ಲಿ ನಿಸ್ಸೀಮರಾಗಿರುವ ಈ ಜಗದ ಜನರ ಕಣ್ಣುಗಳಲ್ಲಿ ಹೆಣ್ಣು ತನ್ನ ಆತ್ಮಾಭಿಮಾನ ವನ್ನು ಉಳಿಸಿಕೊಳ್ಳುವುದು ತುಸು ಕಷ್ಟವೇ ಸರಿ. ಆಕೆಯ  ಅಭಿಮಾನ ಉಳಿದವರ ಕಣ್ಣಿಗೆ ಸೊಕ್ಕು, ಅಹಂ ಎಂದು ತೋರಿದರೆ ಅಚ್ಚರಿಯಿಲ್ಲ.


ಖುದ್ದು ಹೆಣ್ಣು ಮಕ್ಕಳು ತಮ್ಮ ಪಾಲಕರೊಂದಿಗೆ ಜೋರಾಗಿ ಮಾತನಾಡುವಂತಿಲ್ಲ ಗಂಡನೊಂದಿಗೆ  ವಾದಿಸುವಂತಿಲ್ಲ, ಅತ್ತೆ ಮಾವಂದಿರಿಗೆ ಇದಿರು ಹೇಳುವಂತಿಲ್ಲ. ಮಕ್ಕಳನ್ನು ಬಿಡಿ ಮನೆಯಲ್ಲಿ ಸಾಕಿದ ನಾಯಿಯನ್ನು ಕೂಡ ಗದರುವಂತಿಲ್ಲ ಎಂದರೆ ಮನೆಯಲ್ಲಿ ಆಕೆಯ ಸ್ಥಾನಮಾನ ಹೇಗಿರುತ್ತದೆ ಎಂಬುದನ್ನು ನೀವೇ ಊಹಿಸಿ. ಅದೆಷ್ಟೇ ಕಾಲ ಬದಲಾಗಿದೆ ಅಂದುಕೊಂಡರೂ, ಹೆಣ್ಣು ಮಕ್ಕಳು ಮುಂದುವರೆದಿದ್ದಾರೆ ಎಂದು ತೋರಿದರೂ ಕೂಡ ಅದು ಕೆನೆ ಪದರದಲ್ಲಿ ಮಾತ್ರ.


ಇಂದಿಗೂ ಮನೆಯಲ್ಲಿ ಹೆಣ್ಣು ಮಕ್ಕಳು ದ್ವಿತೀಯ ದರ್ಜೆಯ ಪ್ರಜೆಗಳಾಗಿ ಬದುಕುತ್ತಿದ್ದಾರೆ.ಉಳ್ಳವರ ಮನೆಗಳಲ್ಲಿ ತಿನ್ನಲು ಏನು ಕಡಿಮೆ ಮಾಡಿದ್ದೇನೆ ಬೇಕು ಬೇಕಾದ ಎಲ್ಲವನ್ನು ತಂದು ಹಾಕುತ್ತೇನಲ್ಲವೇ! ಇನ್ನೇನು ದಾಡಿ. ಇಲ್ಲದ ವರಾತವನ್ನು ಹಚ್ಚುತ್ತಾರೆ ಎಂದು ಆ ಮನೆಯ ಗಂಡಸರು ಹೇಳುತ್ತಾರೆ. ಆ ಮನೆಯಲ್ಲಿ ಆಕೆ ಅತ್ತೆ, ಮಾವ, ಗಂಡ ಮಕ್ಕಳಿರಲಿ ಕೆಲಸದವರು ಕೂಡ ಯಾವುದೇ ವಿಷಯಕ್ಕೆ ಆಕೆ ತಗಾದೆ ಮಾಡಿದರೆ ತಿನ್ನಲು ಕೊರತೆ ಇಲ್ಲ ಆದರೂ ತಂಟೆ ತಕರಾರು ತಪ್ಪುವುದಿಲ್ಲ ಈ ಅಮ್ಮನದು ಎಂದು ನಿಕೃಷ್ಟವಾಗಿ ಕಾಣಲ್ಪಡುತ್ತಾಳೆ.


ಮಧ್ಯಮ ವರ್ಗದ ಹೆಣ್ಣು ಮಕ್ಕಳು ಆರಕ್ಕೇರದ ಮೂರಕ್ಕೆ ಇಳಿಯದ, ತಿಂಗಳ ಕೊನೆಗೆ ಕೈಯಲ್ಲಿ ಹಣವಿಲ್ಲದೆ ಡಬ್ಬಗಳಲ್ಲಿ ದಿನಸಿ ಪದಾರ್ಥಗಳಿಲ್ಲದೆ ಇದ್ದರೂ ಕೂಡ ಅದು ಹೇಗೋ ಮನೆಯನ್ನು ತೂಗಿಸಿಕೊಂಡು ಹೋಗುತ್ತಾರೆ. ಏನಾದರೂ ಕೊಂಚ ದುಡಿದು ಆರ್ಥಿಕವಾಗಿ ಮನೆಗೆ ಊರುಗೋಲಾಗುತ್ತೇನೆ ಎಂದು ಹೇಳಿದರೆ ಅವರನ್ನು ತಮಾಷೆ ಮಾಡಿ ನಗಾಡುವ ಇಲ್ಲವೇ ಹಂಗಿಸುವ ಪ್ರವೃತ್ತಿಯನ್ನು ಕಾಣಬಹುದು. ಅದಾಗ್ಯೂ ಆಕೆ ತನ್ನ ಪ್ರಯತ್ನವನ್ನು ಮಾಡಿ ಯಶಸ್ವಿಯಾದರೆ ಸರಿ ಇಲ್ಲದ ಹೋದರೆ ದೊಡ್ಡದಾಗಿ ಏನೋ ಮಾಡಲು ಹೋದಳು ಎಂಬಂತಹ ಮಾತುಗಳು ಜನರ ಮತ್ತು ಕುಟುಂಬದವರ ಬಾಯಿಂದ ಬರುತ್ತವೆ.


ಇನ್ನು ಬಡವರ್ಗದ ಜನರಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯಲೇ ಬೇಕು ಎಂಬಂತಹ ಪರಿಸ್ಥಿತಿ ಇರುತ್ತದೆ. ಇಬ್ಬರು ದುಡಿದು ಕುಟುಂಬವನ್ನು ನಿರ್ವಹಿಸುವಾಗ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ ಕೂಡ. ಸರ್ಕಾರದ ಸವಲತ್ತುಗಳು ಕೂಡ ಅವರಿಗೆ ಅನುಕೂಲ ಮಾಡಿಕೊಡುತ್ತದೆ. ಆದರೆ ಮನೆಯ ಗಂಡಸು ಕುಡಿತದಂತಹ ದುಶ್ಚಟಗಳಿಗೆ ದಾಸನಾದಾಗ  ಆತ ದುಡಿದ ಹಣವೆಲ್ಲವೂ ಹೆಂಡದಂಗಡಿ ಸೇರಿದಾಗ ಮನೆಯನ್ನು ನಡೆಸಲು ಹೆಂಡತಿಯಾದವಳು ತಾಪತ್ರಯ ಪಡುತ್ತಾಳೆ. ಗಂಡನೊಂದಿಗೆ ಜಗಳವಾಡುತ್ತಾಳೆ ಕೂಡ, ಆದರೆ ತನ್ನ ದುಶ್ಚಟಗಳನ್ನು  ತಹಬಂದಿಗೆ ತರದ ಗಂಡಸು ಆಕೆಯ ಮೇಲೆ ದೈಹಿಕ ಹಲ್ಲೆ ಮಾಡುತ್ತ ಕುಡಿತದ ಕಾರಣದಿಂದಾಗಿ ತನ್ನದೇ ಆರೋಗ್ಯವನ್ನು ಕಳೆದುಕೊಂಡು ಮೂಲೆ ಹಿಡಿಯುತ್ತಾನೆ. ಮುಂದೆ ಮನೆಯ ಒಂದೊಂದೇ ಸಾಮಾನುಗಳನ್ನು ತನ್ನ ಚಟಗಳಿಗಾಗಿ ಮಾರುವ, ದುಡ್ಡಿಗಾಗಿ  ಸುಳ್ಳು ಹೇಳುವ ಕೃತ್ಯವೆಸಗುತ್ತಾನೆ. ದಿನಗಳೆದಂತೆ ತಾನು ಮಾಡುವ ಯಾವುದೇ ಕೃತ್ಯಗಳ ಕುರಿತು ಪಶ್ಚಾತಾಪ ಪಡುವ, ತಪ್ಪನ್ನು ತಿದ್ದಿಕೊಳ್ಳುವ ಸ್ಥಿತಿಗಳಿಂದ ಆತ ದೂರವಾಗುತ್ತಾನೆ.. ಕುಡಿಯುವ, ಸುಳ್ಳು ಹೇಳುವ ಮನೆಯ ಸಾಮಾನುಗಳನ್ನೇ ಕದ್ದು ಮಾರುವ ಗಂಡ ಒಂದೆಡೆಯಾದರೆ ಬೆಳೆಯುವ ಮಕ್ಕಳ ಅವಶ್ಯಕತೆಗಳು ಮತ್ತೊಂದೆಡೆ ಆಕೆಯನ್ನು ಹಣ್ಣಾಗಿಸುತ್ತವೆ.


ಅನಿವಾರ್ಯವಾಗಿಯಾದರೂ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳುವ ಆಕೆ ಬದುಕಿನ ನಾವೆಯನ್ನು ದಡ ಸೇರಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಾಳೆ ನಿಜ. ಆದರೆ ಆಕೆಯ ಮಕ್ಕಳು  ಒಳ್ಳೆಯ ಆಹಾರ, ವಿದ್ಯೆಗಳಿಂದ ವಂಚಿತರಾಗಿ ಯಾವುದಾದರು ಕೂಲಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬದುಕಿನ ಬಂಡಿಯನ್ನು ಎಳೆಯಲು ತಾಯಿಗೆ ನೆರವಾಗುತ್ತಾರೆ. ಮನೆಯ ವಾತಾವರಣ ಅವರಿಗೆ ಕಲಿಸುವ ಪಾಠಗಳಲ್ಲಿ ಕೆಲವರು ತಪ್ಪುಗಳಿಂದ ಪಾಠ ಕಲಿತು ಬದುಕನ್ನು ಸರಿಯಾದ ದಿಕ್ಕಿನಲ್ಲಿ ನಿರ್ವಹಣೆಗೈದರೆ ಮತ್ತೆ ಕೆಲವರು ಅದೇ ತಪ್ಪುಗಳನ್ನು ತಮ್ಮ ಬದುಕಿನಲ್ಲಿ ಮುಂದುವರೆಸಿಕೊಂಡು ಹೋಗುತ್ತಾರೆ. 


 ಇದು ಯಾವುದೇ ಹಂತದ ಬದುಕಿನಲ್ಲಿಯೂ ಹೆಣ್ಣು ಮಕ್ಕಳು ಅನುಭವಿಸುವ ತೊಂದರೆಯಾಗಿದ್ದು, ಇಂತಹ ಸವಾಲುಗಳನ್ನು ಎದುರಿಸಿ ಎದ್ದು ಬರುವ ಎಲ್ಲ ಹೆಣ್ಣು ಮಕ್ಕಳಿಗೆ ನನ್ನದೊಂದು ಹೃದಯಪೂರ್ವಕ ನಮಸ್ಕಾರ.


 -ವೀಣಾ ಹೇಮಂತ್ ಗೌಡ ಪಾಟೀಲ್,  ಮುಂಡರಗಿ ಗದಗ್ 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top