ಶ್ರೀರಾಮನವಮಿ: ಧರ್ಮ, ಆದರ್ಶಗಳ ಸಾಕಾರಮೂರ್ತಿ ಅವತರಿಸಿದ ದಿನ

Upayuktha
0



ಶ್ರೀ ರಾಮ ಜಯರಾಮ ಜಯ ಜಯರಾಮ

ಸೀತಾರಾಮ ಕೋದಂಡರಾಮ

ಸಾಕೇತದರಸ ಕೌಸಲ್ಯೆ ರಾಮ

ಅನುಜ ಲಕ್ಷ್ಮಣ ಸೇವಿಪ ರಾಮ


ತೂಗಿರೆ ಸಖಿಯರೆ ರಾಮಚಂದ್ರನ

ಪಾಡಿರೆ ಅಯೋಧ್ಯೆ ಸುಕುಮಾರನ

ಲೋಕ ವಿಖ್ಯಾತನ ಕೋದಂಡಪಾಣಿಯ

ಹಾಡುತ ಭಜಿಸುತ ಕೊಂಡಾಡಿರೇ


ವಸಂತ ಋತುವಿನ ಚೈತ್ರ ಮಾಸದ ನವಮಿಯ ಶುಭ ಮಧ್ಯಾಹ್ನದಂದು ಅಯೋಧ್ಯೆಯಲ್ಲಿ  ಮಾತೆ ಕೌಸಲ್ಯೆಯ ಗರ್ಭದಿಂದ ಉದಿಸಿದವ ಪ್ರಭು ಶ್ರೀರಾಮಚಂದ್ರ ಎಂಬುದಾಗಿ ರಾಮಾಯಣದ ಮಹಾಕಾವ್ಯದಲ್ಲಿ ಶ್ರೀರಾಮನ ಜನನದ ಉಲ್ಲೇಖವಿದೆ. ಭಾರತೀಯ ಭಾಷೆಗಳಲ್ಲಿ ರಚಿಸಲ್ಪಟ್ಟ ಸಾವಿರ ‌ಸಾವಿರ ಕೃತಿಗಳಿಗೆ ರಾಮಾಯಣ ಕಾಲದೃಷ್ಟಿಯಿಂದಲೂ, ಯೋಗ್ಯತಾ ಸ್ಥಾನದಿಂದಲೂ ಮುಂಚೂಣಿಯಲ್ಲಿದೆ ಎನ್ನಬಹುದು. ರಾಮಾಯಣವೆಂಬುದು ಅದ್ಭುತ, ಅಮೋಘವಾದ ಮಹಾಕಾವ್ಯವಾಗಿದೆ. ಪ್ರಭು ಶ್ರೀರಾಮನು ಮನುಷ್ಯರೂಪಿಯಾಗಿ, ದೇವತ್ವವನ್ನು ಹೊಂದಿದ ಅದ್ಭುತ ‌ಸೃಷ್ಟಿ. ಹಲವಾರು ಕವಿಗಳಿಂದ ರಾಮಾಯಣ ಬರೆಯಲ್ಪಟ್ಟಿದೆ. ಪುರಂದರ ದಾಸರು ಹಾಡಿ ಹೊಗಳಿದ ಪರಿ "ರಾಮ ಮಂತ್ರವ ಜಪಿಸೋ ಹೇ ಮನುಜ, ಶ್ರೀರಾಮ ಮಂತ್ರವ ಜಪಿಸೋ, ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ" ಎಷ್ಟೊಂದು ಅರ್ಥಗರ್ಭಿತವಾಗಿದೆ, ಸರ್ವರೋಗ ಪರಿಹಾರವಾದ ರಾಮತಾರಕ ಮಂತ್ರವಾಗಿದೆ.


ನಮ್ಮೆಲ್ಲರ ನಂಬುಗೆಯಂತೆ ಭಗವಾನ್ ವಿಷ್ಣುವಿನ ಏಳನೆಯ ಅವತಾರವೇ 'ಶ್ರೀರಾಮ'ನಂತೆ. ನಿರ್ಣಯ ಸಿಂಧುವಿನ ಉಲ್ಲೇಖ ಹೀಗಿದೆ.

"ಚೈತ್ರಮಾಸೇ ನವಮ್ಯಾಂ ತು ಜಾತೋ ರಾಮ: ಸ್ವಯಂಹರಿ:/

ಪುನರ್ವಸ್ವಕ್ಷ ಸಂಯುಕ್ತ: ಸಾತಿಥಿ: ಸರ್ವಕಾಮದಾ"


ಸಪ್ತಸ್ವರ, ಸಪ್ತವರ್ಣ, ಸಪ್ತ ಋಷಿಗಳು, ಸಪ್ತಸಾಗರಗಳಿದ್ದಂತೆ ಸಪ್ತ ಕಾಂಡಗಳನ್ನು ಹೊಂದಿದೆ ರಾಮಾಯಣ. ಈ ಶುಭದಿನದಂದು ಶ್ರೀರಾಮ ಮೂರುತಿಯನ್ನು ತೊಟ್ಟಿಲಿನಲ್ಲಿಟ್ಟು ಲಾಲಿ ಹಾಡುತ್ತಾ ತೂಗುವರು. ಶ್ರೀರಾಮನ ರಥೋತ್ಸವವನ್ನೂ ನಡೆಸುವರು. ರಾತ್ರಿ ಭಜನೆ, ಕೀರ್ತನೆ, ರಾಮಕಥಾ ಶ್ರವಣ, ನಾಟಕ, ನೃತ್ಯಗಳನ್ನು ಹಮ್ಮಿಕೊಳ್ಳುವರು. ಶ್ರೀರಾಮನ ಲೀಲೋತ್ಸವವನ್ನು ಭಕ್ತರು ವ್ರತಾಚರಣೆ ಮೂಲಕ ಶ್ರದ್ಧಾ ಭಕ್ತಿಗಳಿಂದ ಆಚರಿಸುವರು. ಆದರ್ಶ ಪುರುಷ ಶ್ರೀರಾಮನ ಕುರಿತಾದ ರಾಮಾಯಣ ತುಂಬಿದ ಕೊಡ. ಮಹಾಮೇರು, ಆದರ್ಶಗಳ ಗಣಿ,ಮಾರ್ಗದರ್ಶಕನಾತ.


ಮಿತಭಾಷಿ, ದೃಢತೆಯ ಮನಸ್ಸು, ಚಿಂತನ-ಮಂಥನಗಳ ಸರದಾರ,ಲೋಕಮಾತೆ ಸೀತೆಯ ಹೃದಯವಲ್ಲಭ, ಧರ್ಮಜ್ಞ, ಪಿತೃವಾಕ್ಯ ಪರಿಪಾಲಕ, ಪ್ರಶಾಂತ ಚಿತ್ತದವ, ಗುಣವಂತ, ವೀರ, ಶೂರ, ಧೀರ ಗುಣಗಳ ಆಗರ. ವಾನರ ಸೇನೆಯನ್ನು ಕೂಡಿಕೊಂಡು ತಾನು ಏನು ಮಾಡಬೇಕಿತ್ತೋ ಅದನ್ನು ನೆರವೇರಿಸಿದವ. ವಾಲಿಗೆ ಮೋಕ್ಷವನ್ನು ಕರುಣಿಸಿ, ಆತನ ರಾಜ್ಯಾಡಳಿತಕ್ಕೆ ಆಸೆ ಪಡದವ. ಸ್ವರ್ಣ ಲಂಕೆಯಲ್ಲಿ ರಾವಣನನ್ನು ವಧಿಸಿ, ಅನುಜ ವಿಭೀಷಣ ಇಲ್ಲಿಯೇ ಇರೆಂದಾಗ "ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲೆಂದು ಮಾತೃಭೂಮಿಯ ವಾತ್ಸಲ್ಯವನ್ನು ಜಗತ್ತಿಗೆ ಸಾರಿದವನು. ಶತ್ರುವಾದ ಮಾರೀಚನು "ರಾಮೋ ವಿಗ್ರಹವಾನ್ ಧರ್ಮ: ಸಾಧು: ಸತ್ಯ ಪರಾಕ್ರಮ:" ಎಂದು ಶ್ಲಾಘಿಸಿದ್ದಾರೆ. ತ್ಯಾಗೇನೈಕೇ ಅಮೃತತ್ವ ಮಾನಶು:" ಎಂಬಂತೆ ರಾಮ, ಲಕ್ಷ್ಮಣ, ಭರತ-ಶತ್ರುಘ್ನ, ಜಾನಕಿ ಒಬ್ಬೊಬ್ಬರೂ ತ್ಯಾಗಕ್ಕೆ ಹೆಸರಾದವರೇ. 'ಆದರ್ಶ ಭ್ರಾತೃವಾತ್ಸಲ್ಯ'  ಸದಾ ಅನುಕರಣೀಯ.


"ಎಲ್ಲಿ ತ್ಯಾಗವೋ ಅಲ್ಲಿ ಭೋಗ" ದೂರವಾಗಲೇ ಬೇಕು. ಒಂದನ್ನು ಪಡೆಯಲು ಇನ್ನೊಂದನ್ನು ತ್ಯಜಿಸಲೇ ಬೇಕು. ಇಲ್ಲಿ ಲಕ್ಷ್ಮಣನ ತ್ಯಾಗಜೀವನಕ್ಕೆ, ಸರಿಸಾಟಿ ಯಾರಿಲ್ಲ. ತುಂಬು ಗರ್ಭಿಣಿ ಸೀತಾಮಾತೆಗೆ ಸ್ವಲ್ಪವೂ ಸಂಶಯ ಬಾರದ ಹಾಗೆ ವನದಲ್ಲಿ ಬಿಟ್ಟು ಬರಲು ಲಕ್ಷ್ಮಣನಿಗೆ ಹೇಳುವ ಆ ಸನ್ನಿವೇಶ ಎಂಥ ಮಾರ್ಮಿಕ? ರಾಮ ಸೇವಕ ಹನುಮಂತ, ಶರಣ ವಿಭೀಷಣ, ವಾಲ್ಮೀಕಿ, ಭರತ-ಶತ್ರುಘ್ನ, ಕೌಸಲ್ಯೆ ಮಾತೆ, ಸುಮಿತ್ರೆ, ಊರ್ಮಿಳೆ, ಕೈಕೇಯಿ, ಮಂಥರೆ ಹೀಗೆ ಹಲವಾರು ಪಾತ್ರಗಳಿಂದ ತುಂಬಿದ ರಾಮಾಯಣ, ಸಾಧನೆಗೆ, ಭಕ್ತಿಗೆ, ತ್ಯಾಗಕ್ಕೆ, ನಿಷ್ಠೆಗೆ ಆದರ್ಶ ಪ್ರಭು ಶ್ರೀರಾಮಚಂದ್ರ. ನಾವು ಯಾವತ್ತು "ರಾವಣನಂತಾಗದೆ,ರಾಮನಂತಾಗೋಣ". ಶ್ರೀರಾಮನ ಆದರ್ಶಗಳನ್ನು ಪಾಲಿಸೋಣ. ಇಂದಿನ ಈ ಶುಭದಿನ ಪ್ರಭು ರಾಮಚಂದ್ರನ ಆರಾಧನೆಯನ್ನು ಮಾಡುತ್ತಾ, ಸರ್ವರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸೋಣ. ಕಷ್ಟ-ಸುಖ ಎರಡೂ ಸಂದರ್ಭಗಳಲ್ಲೂ ರಾಮತಾರಕ ಮಂತ್ರವನ್ನು ಜಪಿಸೋಣ.


ಜೈ ಶ್ರೀರಾಮ ಚಂದ್ರ

(ಸಂಗ್ರಹ)


- ರತ್ನಾ  ಕೆ ಭಟ್ ತಲಂಜೇರಿ, ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top