ಸುಗ್ಗಿಯ ಸಂಭ್ರಮ ಶುಕ್ರವಾರ ಜನರಲ್ಲಿ ಸಂತೋಷವನ್ನು ತಂದುಕೊಡುತ್ತದೆ. ಇದು ರೈತರಿಗೆ ತೃಪ್ತಿಯನ್ನು ನೀಡುತ್ತದೆ. 'ಬಿಸು ಕಣಿ' ಇಡುವುದೇ ಈ ಹಬ್ಬದ ವಿಶೇಷ. 'ಬಿಸು ಕಣಿ'ಎಂದರೆ ಸುಗ್ಗಿಯ ಕಾಲವಾದುದರಿಂದ ತಮ್ಮಲ್ಲಿ ಬೆಳೆದ ವಿವಿಧ ಹಣ್ಣು ತರಕಾರಿಗಳನ್ನು ಹೂ-ಹಿಂಗಾರಗಳನ್ನು ದೇವರ ಕೋಣೆ ಅಥವಾ ಚಾವಡಿಯಲ್ಲಿ ನಮಸ್ಕರಿಸುವುದು.
ವಿಷು ಹಬ್ಬದ ದಿನದಂದು ಬೆಳಿಗ್ಗೆ ಬೇಗನೆ ಎದ್ದು ದೇವರ ಕೋಣೆ ಅಥವಾ ನಡುಮನೆಯಲ್ಲಿ ಹಾಸು ಮಣೆಯ ಮೇಲೆ ಮಡಿ ಹಾಕಿ ಗಣಪತಿಗೆ ಇಡಬೇಕು. ಕಾಲು ದೀಪ ಹಚ್ಚಿಟ್ಟು ಎರಡು ತುದಿ ಬಾಳೆಯಲ್ಲಿ 1 ಒಂದು ಸೇರು ಅಕ್ಕಿ, 5 ಎಲೆ, 1 ಅಡಿಕೆ, ಗಂಧದ ಕಡ್ಡಿ ಉರಿಸಿ, ತೇದ ಗಂಧವನ್ನು ಅರೆದು ಇಡಬೇಕು. ಇದರ ಮುಂಭಾಗದಲ್ಲಿ ಬೆಳೆದ ತರಕಾರಿ, ಹೂ, ಹಿಂಗಾರ, ಹಣ್ಣು ಹಂಪಲು, ಚಿನ್ನದ ಆಭರಣ, ಕನ್ನಡಿಯನ್ನಿಡುವುದು. ನಂತರ ಮನೆಯವರೆಲ್ಲ ಸೇರಿ ಪ್ರಾರ್ಥನೆ ಮಾಡಿ ದೇವರಿಗೆ ನಮಸ್ಕರಿಸುವುದು. ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯ ಅಂತೆಯೇ ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ತಿಳಿಸುತ್ತದೆ.
ಹಿರಿಯರ ಆಶೀರ್ವಾದವನ್ನು ಕಿರಿಯರು ಈ ಸಂದರ್ಭದಲ್ಲಿ ಪಡೆದುಕೊಳ್ಳುತ್ತಾರೆ. ಮನೆಯ ಹಿರಿಯರು ಕಿರಿಯರೆಲ್ಲರಿಗೂ ಹಣವನ್ನು ನೀಡಿ ಹಬ್ಬದಂದು ಅವರು ಖುಷಿಪಡಿಸುತ್ತಾರೆ. ವರ್ಷ ಪೂರ್ತಿ ಇದು ಸೌಭಾಗ್ಯವನ್ನು ನೀಡುತ್ತದೆ ಎಂಬುದು ಪ್ರತೀತಿ. ಬಿಸು ಹಬ್ಬದ ಅಂಗವಾಗಿ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ವಿಶೇಷ ಪೂಜೆ, ದೇವರ ಬಲಿ ಉತ್ಸವ ನಡೆಯುತ್ತದೆ.
ಈ ವಿಶೇಷ ದಿನಕ್ಕೆ ಸಾಂಪ್ರದಾಯಿಕ ತಿನಿಸನ್ನು ತಯಾರಿಸಿ ಸವಿಯುವುದು ಸಾಮಾನ್ಯ. ಎಲ್ಲರೂ ಪ್ರತಿ ಮನೆ-ಮನೆಗೂ ಹೋಗಿ ಅಲ್ಲಿರುವ ಹಿರಿಯರ ಆಶೀರ್ವಾದ ಪಡೆದು ತಿನಿಸನ್ನು ಸವಿಯುವುದು ಪದ್ಧತಿ ಇದೆ. ಮನೆಯ ಚಾವಡಿಯಲ್ಲಿ ಬಿಸು ಕಣಿ ಇಟ್ಟಾದ ನಂತರ ಮನೆಯ ಯಜಮಾನ ಕ್ಯೆ ಬಿತ್ತು ಹಾಕುವ ಕ್ರಿಯೆಯನ್ನು ಗದ್ದೆಯ ಹುಣೆಯಲ್ಲಿ ನಡೆಸುತ್ತಾರೆ. ಹುಣೆಯ ಬದಿಯಲ್ಲಿ ಮಣ್ಣನ್ನು ಹದಗೊಳಿಸಿ ಭತ್ತದ ಬೀಜವನ್ನು ಹಾಕಿ ಅದಕ್ಕೆ ನೆರಳಾಗಿ ಸರೋಳಿ ಎನ್ನುವ ಗಿಡದ ಕಣೆಗಳನ್ನು ಕುತ್ತುತ್ತಾರೆ. ಅದೇ ದಿನ ಗದ್ದೆಯಲ್ಲಿ ಬೀಜ ಬಿತ್ತಿ ಉಳುಮೆ ಮಾಡುತ್ತಾರೆ.
ಬಿಸು ಹಬ್ಬ ಪ್ರಕೃತಿ ಆರಾಧನೆಯ ಒಂದು ವಿಧಾನವಾಗಿದೆ. ಹೊಸ ವರ್ಷದ ಉನ್ನತಿಯ ಪ್ರಥಮ ಹೆಜ್ಜೆ. ಸುಗ್ಗಿಯ ಸಂಭ್ರಮವು ಜನರಲ್ಲಿ ಸಂತೋಷ -ರೈತರಿಗೆ ತೃಪ್ತಿಯನ್ನು ಇದು ನೀಡುತ್ತದೆ. ತುಳುವರು ಭತ್ತದ ಬೆಳೆಯನ್ನು ಒಂದು ಆರಾಧನಾ ಭಾವದಿಂದ ಕಾಣತ್ತಾರೆ. ವಾಸ್ತವವಾಗಿ ಈ ಆಚರಣೆಯಲ್ಲಿ ಭೂಮಿ ಮತ್ತು ಹೆಣ್ಣನ್ನು ಏಕತ್ರವಾಗಿ ಕಂಡಿದ್ದಾರೆ ಎನ್ನುವುದು ಕಂಡು ಬರುತ್ತದೆ.
- ಡಾ ಮುರಲೀ ಮೋಹನ್ ಚೂಂತಾರು.
ಮಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ