ಅಸಮಾನತೆ ವಿರುದ್ಧ ಹೋರಾಡಿದ ಅಂಬೇಡ್ಕರ್, ಬಾಬು ಜಗಜೀವನ್ ರಾಮ್: ಪ್ರೊ. ಶಿವಾನಂದ ಕೆಳಗಿನಮನಿ

Upayuktha
0


ಕೊಣಾಜೆ:
20ನೇ ಶತಮಾನದ ಭಾರತೀಯ ಸಮಾಜದ ಅಸಮಾನತೆಗಳನ್ನು ಹೋಗಲಾಡಿಸಲು ಹೋರಾಡಿದ ಮಹಾನ್ ಯುಗಪುರುಷರಾದ ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿಗಳನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಆಚರಿಸಲಾಯಿತು.


ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಭಾರತಿಯ ಪ್ರೊಫೆಸರ್ ಶಿವಾನಂದ ಕೆಳಗಿನಮನಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಧಾನ ಭಾಷಣ ಮಾಡಿದರು. ಡಾ. ಬಿ. ಆರ್. ಅಂಬೇಡ್ಕರ್ ಅವರು ಜ್ಞಾನ, ನ್ಯಾಯ ಮತ್ತು ಸಂಘಟನೆಗಳ ಮೂಲಕ ಅಸಮಾನತೆ ಹೋಗಲಾಡಿಸಿದರೆ, ಡಾ. ಬಾಬು ಜಗಜೀವನ್ ರಾಮ್ ರಾಜಕೀಯ ಅಧಿಕಾರ ಬಳಸಿ ಅಸಮಾನತೆ ಹೋಗಲಾಡಿಸಲು ಶ್ರಮಿಸಿದರು, ಎಂದು ಅವರು ಬಣ್ಣಿಸಿದರು. 


ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ, ಅಂಬೇಡ್ಕರ್ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಒದಗಿಸಲು ಪ್ರಯತ್ನಿಸಿದರು.  ಡಾ. ಬಾಬು ಜಗಜೀವನ್ ರಾಮ್ ತಮ್ಮ ತ್ಯಾಗ ಮತ್ತು ಪರಿಶ್ರಮದಿಂದ ದೇಶದ ಸಮಸ್ಯೆಗಳನ್ನು ಪರಿಹರಿಸಿದ ಮುತ್ಸದ್ದಿ ನಾಯಕ, ಈ ಇಬ್ಬರು ಮಹಾನ್ ನಾಯಕರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು, ಎಂದು ಕರೆ ನೀಡಿದರು.


ಕುಲಸಚಿವ ಕೆ. ರಾಜು ಮೊಗವೀರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಣಕಾಸು ಅಧಿಕಾರಿ ಪ್ರೊ. ವೈ. ಸಂಗಪ್ಪ, ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ವಿಶೇಷಾಧಿಕಾರಿ ಡಾ. ಎನ್. ನರಸಿಂಹಯ್ಯ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದ ಮೊದಲು ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.


ಅವಿನಾಶ್ ಮತ್ತು ತಂಡದ ಸಂಶೋಧನಾ ವಿದ್ಯಾರ್ಥಿಗಳು ನಾಡಗೀತೆ ಮತ್ತು ಬುದ್ಧವಂದನೆ ನಡೆಸಿಕೊಟ್ಟರು. ವ್ಯವಹಾರ ಆಡಳಿತ ವಿಭಾಗದ ಕುಮಾರಿ ಆರಾಧನಾ ಮತ್ತು ತಂಡ ರಾಷ್ಟ್ರಗೀತೆ ಹಾಡಿತು. ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top