'ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಸಮ್ಮಿಲನ, 'ಭೀಮ ಸಂಗಮ' ಕಾರ್ಯಕ್ರಮಗಳಲ್ಲಿ ಸಂವಿಧಾನ ಪಾಲನೆಯಾಗಲಿ

Upayuktha
0

ಸಾಂದರ್ಭಿಕ ಚಿತ್ರ



1988 ರ ಮೋಟಾರು ವಾಹನ ಕಾಯ್ದೆಯ ಪ್ರಕಾರ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಮೋಟಾರು ವಾಹನಗಳ ಕಾಯಿದೆಯು ಭಾರತದ ಸಂಸತ್ತಿನ ಕಾಯಿದೆ. 


ಮೋಟಾರು ವಾಹನ ಕಾಯ್ದೆಯು ರಸ್ತೆ ಸಾರಿಗೆ ವಾಹನಗಳ ಎಲ್ಲಾ ಅಂಶಗಳನ್ನು ನಿಯಂತ್ರಿಸುತ್ತದೆ. ಮೋಟಾರು ವಾಹನ ಕಾಯ್ದೆಯು ಸೇರಿದಂತೆ, ಭಾರತದ ಸಂಸತ್ತಿನ ಎಲ್ಲಾ ಕಾಯಿದೆಗಳು ಭಾರತದ ಸಂವಿಧಾನದ ಭಾಗವಾಗಿದೆ. 


"ಸಂವಿಧಾನವನ್ನು ಪಾಲನೆ ಮಾಡುತ್ತಿಲ್ಲ,"

"ಸಂವಿಧಾನಕ್ಕೆ ಅವಮಾನ ಮಾಡಲಾಗಿದೆ" 

"ಆ ಪಕ್ಷದ ಸರಕಾರ ಇದ್ದಾಗ ಸಂವಿಧಾನವನ್ನು ಕಡೆಗಣಿಸಲಾಗಿತ್ತು", 

"ಈ ಪಕ್ಷದ ಸರಕಾರ ಸಂವಿಧಾನವನ್ನು ಕಡೆಗಣಿಸುತ್ತಿದೆ" 

ಇತ್ಯಾದಿ ವಾದ ವಿವಾದಗಳು ರಾಜಕೀಯದಲ್ಲಿ ಆಗಾಗ ದೊಡ್ಡ ಮಟ್ಡದಲ್ಲಿ ಚರ್ಚೆ ಆಗುತ್ತದೆ. ಬ್ರೇಕಿಂಗ್ ನ್ಯೂಸ್ ಆಗುತ್ತದೆ.


ಇತ್ತೀಚೆಗೆ ಬೆಂಗಳೂರಿನಲ್ಲಿ "ಸಂವಿಧಾನ ಉಳಿಸಿ" ಎಂದು ಒಂದು ಬೈಕ್ ರ್‍ಯಾಲಿ ನೆಡೆಯಿತು. ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದವರು ಹೆಲ್ಮೆಟ್‌ನ್ನು ಧರಿಸಿರಲಿಲ್ಲ! ಬದಲಿಗೆ ಒಂದೇ ಬಣ್ಣದ ಬಟ್ಟೆಯ ಕ್ಯಾಪ್. ಅದರಲ್ಲೂ "ಸಂವಿಧಾನ ಉಳಿಸಿ" ಬರಹ!. ಸಂವಿಧಾನ ಉಳಿಸಿ ಅಂತ ಕರೆ ಕೊಟ್ಟವರೇ ಸಂವಿಧಾನ ಪಾಲನೆ ಮಾಡದಿದ್ದರೆ ಅಂತಹ ಸಂದೇಶಗಳು ಅರ್ಥ ಕಳೆದುಕೊಳ್ಳುತ್ತವೆಯಲ್ಲವೆ?


ಅದೇ ರೀತಿ ಒಂದು ಧಾರ್ಮಿಕ ಉತ್ಸವದಲ್ಲಿ  ಒಂದು ಪಕ್ಷ ಬೈಕ್ ರ್‍ಯಾಲಿ ನೆಡೆಸಿತ್ತು. ಸೇಮ್, ಅಲ್ಲೂ ಅಷ್ಟೆ ಬೈಕ್  ರ್‍ಯಾಲಿಯಲ್ಲಿ ಭಾಗವಹಿಸಿದವರು ಹೆಲ್ಮೆಟ್‌ನ್ನು ಧರಿಸಿರಲಿಲ್ಲ!! ಧಾರ್ಮಿಕ ಬಣ್ಣದ ಶಾಲು ಮಾತ್ರ ರಾರಾಜಿಸುತ್ತಿತ್ತು.


ಹೆಲ್ಮೆಟ್ ಧರಿಸದೆ, ಸಂವಿಧಾನ ಪಾಲನೆ ಮಾಡದೆ, ಬೈಕ್ ರ್‍ಯಾಲಿ ನೆಡೆಸುವುದು ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲಾ ಪಕ್ಷದ ಕಾರ್ಯಕರ್ತರಲ್ಲೂ, ಪಕ್ಷ ಬೆಂಬಲಿಗರಲ್ಲೂ ಇದನ್ನು ಕಾಣಬಹುದು. 


ಇಷ್ಟೆಲ್ಲ ಹೇಳುತ್ತಿರುವುದರ ಉದ್ದೇಶ ಇಷ್ಟೆ, ರಾಜ್ಯದಾದ್ಯಂತ ಅಲ್ಲಲ್ಲಿ, ಆಗಾಗ (ನಾಡಿದ್ದು ಆರನೇ ತಾರೀಖು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ) 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮ್ಮಿಲನ' ಎಂಬ ಸಾರ್ವಜನಿಕ ಕಾರ್ಯಕ್ರಮಕ್ಕೆ ಒಂದು ರಾಷ್ಟ್ರೀಯ ಪಕ್ಷ ಕರೆ ಕೊಟ್ಟಿದೆ. ಅದೇ ರೀತಿ ಇನ್ನೊಂದು ರಾಷ್ಟ್ರೀಯ ಪಕ್ಷ ಭೀಮ ಸಂಗಮ ಎಂಬ ಸಾರ್ವಜನಿಕ ಕಾರ್ಯಕ್ರಮವನ್ನೂ ರಾಜ್ಯದಾದ್ಯಂತ ಅಲ್ಲಲ್ಲಿ, ಆಗಾಗ ಆಯೋಜಿಸಿದೆ. ಪಕ್ಷಗಳ ಕಾರ್ಯಕ್ರಮ ಅಂದ ಮೇಲೆ ಪಕ್ಷದ ಶಾಲು ಹೆಗಲ ಮೇಲಿರುತ್ತೆ, ಪಕ್ಷದ ಧ್ವಜವನ್ನು ವಾಹನಗಳಿಗೆ ಕಟ್ಟಲಾಗಿರುತ್ತೆ. ಇರಲಿ. ಪಕ್ಷಗಳ ಬಲ, ಮತ್ತು ಪಕ್ಷಗಳ ಪ್ರಚಾರಕ್ಕೆ ಅವುಗಳೆಲ್ಲ ಬೇಕು. ಅವುಗಳ ಜೊತೆಗೆ ಭಾರತದ ಸಂವಿಧಾನದ ಭಾಗವಾದ, ಮೋಟಾರು ವಾಹನಗಳ ಕಾಯಿದೆಯ ಅಂಶವಾದ, ನಿಯಮವಾದ ಹೆಲ್ಮೆಟ್ ಧರಿಸುವಿಕೆಯನ್ನು 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮ್ಮಿಲನ' ಮತ್ತು ಭೀಮ ಸಂಗಮ ಕಾರ್ಯಕ್ರಮಗಳಲ್ಲಿ ಎಲ್ಲರೂ ಅನುಸರಿಸಲಿ. ಅನುಸರಿಸುವಂತೆ ಪಕ್ಷಗಳ ಮುಖಂಡರು, ನಾಯಕರು ಕಾರ್ಯಕರ್ತರಿಗೆ, ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಕರೆ ಕೊಡಲಿ. ಸಂವಿಧಾನ ಅನುಸರಣೆ ಅರ್ಥಪೂರ್ಣವಾಗಿ ಆಚರಣೆಗೆ ಬರಲಿ. ಮುಂದಿನ ದಿನಗಳಲ್ಲಿನ ಸಮಸ್ತ ಬೈಕ್ ರ್‍ಯಾಲಿಗಳಿಗೆ ಈ ಕಾರ್ಯಕ್ರಮಗಳು ಮಾದರಿಯಾಗಲಿ.


'ಸಂವಿಧಾನದ ಪಾಲನೆ ಎಲ್ಲರ ಕರ್ತವ್ಯ' ಎಂಬ ಸಂದೇಶವೂ ಬೈಕ್ ರ್‍ಯಾಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವೂ ಆಗಲಿ.  


-ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top