ಕಲಾಸೇವೆಯ ಸಾರ್ಥಕ ಬದುಕು ಕಂಡ ಗುರು ಕಮಲಾ ಭಟ್

Upayuktha
0


ಮಂಗಳೂರು: ಪಂದನಲ್ಲೂರು ಶೈಲಿಯ ಭರತನಾಟ್ಯವನ್ನು ನಗರಾದ್ಯಂತ ಪ್ರಚಾರ ಮಾಡಿ, ನೂರಾರು ಪ್ರತಿಭಾಶಾಲಿ ಶಿಷ್ಯರನ್ನು ತಯಾರಿಸಿ, ನೃತ್ಯಜಗತ್ತಿಗೆ ಮಹತ್ತರ ಕೊಡುಗೆ ನೀಡಿದ ಕಮಲಾ ಭಟ್ ಅವರು ತಮ್ಮ ಜೀವನವನ್ನೆಲ್ಲ ಕಲಾಸೇವೆಗೆ ಅರ್ಪಿಸಿರುವರು ಎಂದು ತನ್ನ ಶಿಷ್ಯೆಯ ಸಂಸ್ಮರಣೆ ಮಾಡುತ್ತಾ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಹೇಳಿದರು.


ಕರಾವಳಿಯ ನಾಟ್ಯಪ್ರಪಂಚಕ್ಕೆ ಮಹಾನ್ ಕೊಡುಗೆ ನೀಡಿದ ಪoದನಲ್ಲೂರು ಶೈಲಿಯ ಭರತನಾಟ್ಯ ನಿಪುಣೆ, ನೃತ್ಯಗುರು ಕಮಲಾ ಭಟ್ ಅವರ ಸ್ಮರಣಾರ್ಥವಾಗಿ ಕರಂಗಲ್ಪಾಡಿಯ ಸುಬ್ರಹ್ಮಣ್ಯ ಸಭಾ ಸದನದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ  ಅವರ ಶಿಷ್ಯೆ ವಿನಯ ರಾವ್ ಆಯೋಜಿಸಿದ್ದ ‘ಕಮಲಾಂಜಲಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.


ಸುಧೀರ್ಘ 45 ವರ್ಷಗಳ ನಟರಾಜನ ಸೇವೆ ಮಾಡಿದ ಅವರು, ಕಲೆಯೇ ದೇವತೆ, ಕಲೆಯೇ ಧರ್ಮ ಎಂಬ ಭಾವನೆಯೊಂದಿಗೆ ತಮ್ಮ ತಪಸ್ಸನ್ನು ಮುಂದುವರಿಸಿದ್ದರು. ಅವರ ಶಿಷ್ಯರು ಇಂದು ನೃತ್ಯದ ಸಂಸ್ಕೃತಿಯನ್ನು ಮುಂದುವರೆಸುತ್ತಿರುವುದು ನಿಜವಾದ ಅರ್ಥದ ಗುರುಪರಂಪರೆಯ ಪ್ರತೀಕವಾಗಿದೆ ಎಂದರು.


ಕಮಲಾ ಭಟ್ ಅವರು ತಮ್ಮ ಶಿಷ್ಯರ ಜೊತೆ ವಿಶೇಷ ಸಂಬಂಧವನ್ನೇ ಬೆಳೆಸಿದವರಾಗಿದ್ದರು. ಮಕ್ಕಳಿಗೆ ಕಲೆಯನ್ನು ಬೋಧಿಸುವಾಗ ತಾಯಿ ಮಾದರಿಯಾಗಿ ನಿಂತು ಪ್ರೀತಿ, ಶಿಸ್ತು, ಮತ್ತು ಶ್ರದ್ಧೆಯ ಮೂಲಕ ಕಲಾ ಮಾರ್ಗವನ್ನು ತೋರಿಸಿದವರು. ಅವರ ನೆರಳಿನಲ್ಲಿ ಬೆಳೆದ ಶಿಷ್ಯರು ಇಂದು ತಮ್ಮದೇ ಆದ ಗುರುಗಳಾಗಿ ಬೆಳೆಯುತ್ತಿದ್ದಾರೆ. ಈ ಮೂಲಕ ಕಮಲಾ ಭಟ್ ಅವರ ಜೀವನ ಆದರ್ಶಮಯವಾಗಿದೆ ಎಂದು ಭರತಾಂಜಲಿಯ ನಿರ್ದೇಶಕ ಗುರು ಶ್ರೀಧರ ಹೊಳ್ಳ ಹೇಳಿದರು.


ಭರತನಾಟ್ಯವನ್ನು ನಾಟ್ಯಯೋಗದಂತೆ ಪವಿತ್ರತೆಯಿಂದ ಸ್ವೀಕರಿಸಿ, ನಟರಾಜನ ಆರಾಧನೆ ಎಂಬ ಧಾರ್ಮಿಕ ಭಾವದಿಂದ ನೃತ್ಯಸಾಧನೆ ನಡೆಸಿದವರು ಗುರುಗಳಾದ ಕಮಲಾ ಭಟ್. ನೃತ್ಯವನ್ನೇ ಜೀವನವನ್ನಾಗಿ ಮಾಡಿಕೊಂಡು, ತಾವು ಪಡೆದ ಗುರುವಿನ ವಿದ್ಯೆಯನ್ನು ತಮ್ಮ ಶಿಷ್ಯರಿಗೆ ಅಷ್ಟೇ ಶ್ರದ್ದೆಯಿಂದ ದಾರಿಯಾಗಿಸಿದ ಶ್ರೇಷ್ಠ ಗುರುಗಳು. ಅವರು ಕಲಿತ ಮತ್ತು ಕಲಿಸಿದ ಶೈಲಿ ನಾಟ್ಯಪ್ರಪಂಚದಲ್ಲಿ ಅನನ್ಯವಾಗಿದೆ ಹಿರಿಯ ಶಿಷ್ಯೆ ಪ್ರತಿಮಾ ಶ್ರೀಧರ್ ಹೇಳಿದರು.


ಕಮಲಾ ಭಟ್ ಅವರ ಕಲಾ ಪಾಠಗಳು ಕೇವಲ ನೃತ್ಯವಲ್ಲ, ಶಿಸ್ತು, ಸಂಸ್ಕೃತಿ, ಶ್ರದ್ಧೆ, ಭಕ್ತಿ ಇವುಗಳ ಒಟ್ಟುಗೂಡಿದ ಅನುಭವಗಳು. ಇಂದು ಅವರ ನೆನಪಿನಲ್ಲಿ ನಡೆದ 'ಕಮಲಾಂಜಲಿ' ಕಾರ್ಯಕ್ರಮ ಕೇವಲ ಸ್ಮರಣೆಯಲ್ಲ, ಕಮಲಾ ಭಟ್ ಅವರ ಕಲಾ ಪರಂಪರೆಯ ಪ್ರಜ್ವಲಿತ ದೀಪವಾಗಿತ್ತು. ಅವರ ಕಲಾ ಹೆಜ್ಜೆಗಳು ನಾಟ್ಯ ಲೋಕದಲ್ಲಿ ಶಾಶ್ವತವಾಗಿವೆ, ಅವರ ಕಲಾಸಾಧನೆಯ ಪ್ರಭಾವ ಮುಂದಿನ ತಲೆಮಾರಿಗೆ ದಾರಿ ತೋರಿಸುತ್ತಲೇ ಇರುತ್ತದೆ ಎಂದು ಕಲಾಪೊಷಕ ಎಂ ಎಸ್ ಮಾಧವ್ ಹೇಳಿದರು. ನಿರ್ದೇಶಕಿ ಗುರು ವಿದುಷಿ ವಿನಯ ರಾವ್ ಸ್ವಾಗತಿಸಿದರು.  ಸಚಿತಾ ನಂದಗೋಪಾಲ್ ನಿರೂಪಿಸಿದರು. ಇಂದಿರಾ ಕೆ. ವಾಣಿ ಲಕ್ಷ್ಮೀಶ, ಕೃಷ್ಣ ರಾವ್, ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಪರವಾಗಿ ಗುರುಶ್ರೇಷ್ಟರಾದ ಉಳ್ಳಾಲ್ ಮೋಹನ್ ಕುಮಾರ್ ರವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು.ಕೊನೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಮನೋಜ್ಞವಾಗಿ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top