ಶುಭ ನುಡಿ: ಅಹಂಕಾರದಿಂದ ಗೆಲ್ಲಲಾಗದು

Upayuktha
0


ಒಮ್ಮೊಮ್ಮೆ ನಾವು ಎಷ್ಟು ಆಲೋಚಿಸಿದರೂ ಸಾಕಾಗುವುದಿಲ್ಲ. 'ನಮಗೆಲ್ಲ ಗೊತ್ತಿದೆ' ಎನ್ನುವ ಒಂದು 'ಅಹಂ' ಸಹ ಇರಬಹುದು ಅನ್ನಿಸುವುದಿದೆ. ಮಹಾಭಾರತದ ಅರ್ಜುನ ಬಿಲ್ವಿದ್ಯೆ ಪ್ರವೀಣನೇನೋ ಹೌದು. ಆಚಾರ್ಯ ದ್ರೋಣರು ಅವನಿಗೆ ಯಾವುದೇ ರೀತಿಯ ಅಡ್ಡಿ ಬಾರದಂತೆ ಕಲಿಸಿದವರು. ಅದೇ ಅಹಂ ಅವನಿಗಿದ್ದಿರಬೇಕು. ಏಕಲವ್ಯನ ಪ್ರಕರಣ ನಾವು ಓದಿ ತಿಳಿದವರು.


ತನ್ನ ಸಾಮರ್ಥ್ಯವೇ ಮೇಲೆಂಬ ಭ್ರಮೆಯನ್ನು ಶ್ರೀಕೃಷ್ಣ ಒಂದಿಲ್ಲೊಂದು ಘಟನೆಯಿಂದ ಇಳಿಸಿದ್ದಾನೆ. ಭಕ್ತಾಗ್ರೇಸರನಾದ ಸುಧನ್ವನ ಭಕ್ತಿಭಾವವನ್ನು ದರ್ಪದಿಂದ ಹೀಯಾಳಿಸಿ ಸೋತವನು ಪಾರ್ಥ. ಅದನ್ನೇ ಧನಾತ್ಮಕವಾಗಿ ಸ್ವೀಕರಿಸಿದ್ದರೆ ಸೋಲು ಹತ್ತಿರ ಸಹ ಸುಳಿಯುತ್ತಿರಲಿಲ್ಲ. ವಿಧಿಯಾಟದಂತೆ ನಡೆಯಲು ಕಪಟ ನಾಟಕದ ವೇದಿಕೆ ನಿರ್ಮಾಣ ಮಾಡುವವ ಭಗವಂತ ಶ್ರೀಕೃಷ್ಣನಲ್ಲವೇ? ತನ್ನಿಂದಲೇ ಎನ್ನುವ ಮನೋಭಾವವೊಂದು ಮನದಲ್ಲಿತ್ತು. ತನ್ನ ವಿಶೇಷವಾದ ಶಕ್ತಿ ಸಾಮರ್ಥ್ಯಗಳಿಗೆ ಭಗವಂತನ ಕೃಪೆಯಿದೆ ಎಂದು ಒಂದೇ ಒಂದು ಸಲ ಯೋಚಿಸಿದ್ದರೆ ಅಹಂಕಾರದ ಪರದೆ ಸರಿಯುತ್ತಿತ್ತು. ಕೊನೆಗೆ ದೇವ  ಪ್ರತ್ಯಕ್ಷವಾದದ್ದು, ಪ್ರತಿಜ್ಞೆ ಈರ್ವರದ್ದೂ ಈಡೇರುವುದರಲ್ಲಿ ಪ್ರಕರಣ ಕೊನೆಗೊಂಡಿತು.


'ಅಹಂಕಾರ, ದರ್ಪ, ನನ್ನಿಂದಲೇ ಭಾವ' ಬೇಡ. ಇದೆಲ್ಲ ನಕಾರಾತ್ಮಕ ಅಂಶಗಳು. ಎಲ್ಲರೊಂದಾಗಿ ಕಲೆತು, ಪರಸ್ಪರ ಸಹಕಾರದಿಂದ ಇರೋಣ. ಮಹಾಭಾರತ, ಭಾಗವತ, ರಾಮಾಯಣ, ವೇದ ಉಪನಿಷತ್‌ಗಳು, ಉಪಕಥೆಗಳು, ಘಟನೆಗಳು, ಪುರಾಣ ಇತಿಹಾಸ, ಚರಿತ್ರೆಗಳ  ಸಾರಗಳನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳೋಣ. ನಮ್ಮ ಮಕ್ಕಳಿಗೂ ತಿಳಿಸಿಕೊಡೋಣ.


ಇಂದಿನ ವರ್ತಮಾನದಲ್ಲಿ ಮೊಬೈಲ್ ಹಾವಳಿಯಿಂದಾಗಿ ಯಾರಿಗೂ ಯಾವುದೂ ಬೇಡವಾಗಿದೆ. ಸಂಬಂಧಗಳಿಗೆ ಬೆಲೆಯಿಲ್ಲವಾಗಿದೆ. ಬಂಧುಗಳು ಏನೋ ಬರುವುದು ಉಂಡೊಡನೆ ತೆರಳುವುದಾಗಿದೆ. ಮಾತು, ನಗೆ, ಹರಟೆ ಬೆರಳೆಣಿಕೆಯ ಮಂದಿಗೆ ಮಾತ್ರ. ಹೀಗಾದರೆ ನಾಲ್ಕು ಜನರೊಂದಿಗೆ ಸೇರಿ ಬೆರೆಯುವ ಮನೋಭಾವ ಎಲ್ಲಿಂದ ಬರಲು ಸಾಧ್ಯ? ಸ್ವತ: ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ, ಸಮಯಪ್ರಜ್ಞೆ, ಧೈರ್ಯ, ಆತ್ಮಾಭಿಮಾನ ನಶಿಸದಂತೆ ಹೆತ್ತವರು ಮಕ್ಕಳಲ್ಲಿ ತುಂಬಬೇಕಾಗಿದೆ. 'ನಾನು' ಎನ್ನುವ ಎರಡಕ್ಷರದ ಸ್ಥಳದಲ್ಲಿ 'ನಾವು' ಮೂಡಬೇಕಾಗಿದೆ. ಆ ಮನೋಭಾವ ಹಿರಿಯರಲ್ಲಿದ್ದರೆ ಮಗುವಿಗೆ ತಾನಾಗಿಯೇ ಬರುವುದು. ಕಲಿಸೋಣ-ಅನುಸರಿಸೋಣ-ಮಗುವಿನ ಬಾಳನ್ನು ಬೆಳಗಿಸೋಣ.


- ರತ್ನಾ ಕೆ ಭಟ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top