‘ನಾನು ಧರ್ಮಸೂಕ್ಷ್ಮ, ಕರ್ಮಸೂಕ್ಷ್ಮದ ಸರ್ವಪರ್ಯಾಯಗಳನ್ನು ಕಂಡಿದ್ದೇನೆ. ಪಾಪವೆಂದರೇನು? ಪಾಪ ಹುಟ್ಟುವುದು ಹೇಗೆ? ಇಂಥ ಪಾಪಗಳನ್ನು ನಾವು ತಡೆಗಟ್ಟುವ, ಪಾಪದ ಸುಳಿವನ್ನು ಬೇರುಸಹಿತ ಕಿತ್ತುಹಾಕುವ ಬಗೆಹೇಗೆ? ನಾವು ಯಾವುದನ್ನೂ ಕನಿಷ್ಠವೆಂದು ತಿಳಿಯದೆ, ಕೇವಲ ಸಾಧನ ಸಾಮಗ್ರಿಯೆಂದು ಭಾವಿಸದೆ, ಆ ಭಾವ ನನ್ನನ್ನು ಬಂಧಿಸದಂತೆ, ನನ್ನ ತಿಳಿವನ್ನೂ ನುಡಿಯನ್ನೂ ನಡತೆಯನ್ನೂ ಪಳಗಿಸುವ ಸರ್ವವಿಧಾನಗಳನ್ನು ತಿಳಿದುಕೊಂಡಿದ್ದೇನೆ. ಇದು ವಿಷಯಜ್ಞಾನವಲ್ಲ. ಇದೇ ಆತ್ಮಜ್ಞಾನ. ನನ್ನಲ್ಲಿರುವ ವಿಷಯಜ್ಞಾನ ಅತ್ಯಲ್ಪ. ಆದರೆ ನನಗೆ ಆತ್ಮಜ್ಞಾನದಲ್ಲಿ ಸಂಪೂರ್ಣ ನಂಬಿಕೆ ಇದೆ. ಆ ನಂಬಿಕೆಯ ಪ್ರತ್ಯಕ್ಷ ದರ್ಶನ ನನಗಾಗಿದೆ. ಆ ಸಂಪೂರ್ಣ ನಂಬಿಕೆಯೆ ನನ್ನ ಸರ್ವಜ್ಞತ್ವ.
ಜೈನ ಧರ್ಮದ ಇಪ್ಪತ್ನಾಲ್ಕು ತೀರ್ಥಂಕರರಲ್ಲಿ ಕೊನೆಯವನು ವರ್ಧಮಾನ
ಮಹಾವೀರ. ವರ್ಧಮಾನನು ಕ್ರಿ.ಪೂ. 599ರ ಚೈತ್ರ ಶುದ್ಧ ತ್ರಯೋದಶಿಯ ದಿನ ಅಂದಿನ ಗಣರಾಜ್ಯಗಳಲ್ಲೊಂದಾದ ಬಿಹಾರದ
ಕುಂಡಗ್ರಾಮ ಎಂಬಲ್ಲಿ ಜ್ಞಾತ್ರಿಕ ಬುಡಕಟ್ಟಿನ ರಾಜ ಸಿದ್ದಾರ್ಥ ಮತ್ತು ತಾಯಿ ತ್ರಿಶಲಾ ದೇವಿಯ
ಮಗನಾಗಿ ಜನಿಸಿದನು. ಈತನಿಗೆ ಜ್ಞಾತಪುತ್ರ,
ಸನ್ಮತಿ ನಾಯಕ, ಅತಿವೀರ, ನಿರ್ಗಂಥ ಎಂಬ ಹೆಸರುಗಳೂ
ಇದ್ದವು.
ಇಕ್ವಾಕು ವಂಶದವನಾದ ಸಿದ್ಧಾರ್ಥ ಲಿಚ್ಛವಿಗಳ ನಾಯಕ, ಕುಂಡಗ್ರಾಮದ ರಾಜ. ವರ್ಧಮಾನನು ಬಾಲ್ಯದಲ್ಲಿ ಸೂಕ್ತ ಶಿಕ್ಷಣ ಪಡೆದು, ತಾರುಣ್ಯದಲ್ಲಿ ತನ್ನ ತಂದೆಯ ಆಡಳಿತ ಕಾರ್ಯಗಳಲ್ಲಿ ಸಹಕಾರಿಯಾಗತೊಡಗಿದನು. ತನ್ನ ಮೂವತ್ತನೆಯ ವಯಸ್ಸಿನಲ್ಲಿ ಸತ್ಯಾನ್ವೇಷಣೆಯ ಹುಟುಕಾಟದಲ್ಲಿ ತೊಡಗಿದ ಸಿದ್ಧಾರ್ಥನು ಮನೆಯನ್ನೂ , ಸಂಸಾರವನ್ನೂ ತ್ಯಜಿಸಿದನು. ನಂತರ ಹನ್ನೆರಡು ವರ್ಷಗಳ ಕಾಲ ಸತ್ಯದ ಹುಡುಕಾಟದಲ್ಲಿ ಅಲೆದಾಡಿದ, ತಪಸ್ಸು ಮಾಡಿದ ಇವನು ಉಪವಾಸ ಮಾಡುವ ಮೂಲಕ ಸದಾ ತನ್ನ ದೇಹವನ್ನು ದಂಡಿಸಿಕೊಂಡನು.
ವರ್ಧಮಾನನಿಗೆ ತನ್ನ ನಲವತ್ತೆರಡನೇ ವಯಸ್ಸಿನಲ್ಲಿ, ಕ್ರಿ.ಪೂ 557 ರ ವೈಶಾಖ ಮಾಸದ ದಶಮಿಯಂದು ‘ಕೇವಲಜ್ಞಾನ’ ಪ್ರಾಪ್ತವಾಯಿತು. ಈ ಜ್ಞಾನವನ್ನು ‘ತೀರ್ಥ’ ಎಂದೂ ಕರೆಯುತ್ತಾರೆ. ಅದನ್ನು ಎಲ್ಲರಿಗೂ ಹಂಚುತ್ತ ಸಾಗಿದ ಮಹಾವೀರ, ‘ತೀರ್ಥಂಕರ’ ಎನ್ನಿಸಿಕೊಂಡ. "ಕೇವಲ ಜ್ಞಾನ" ಅಥವಾ "ಕೈವಲ್ಯ ಜ್ಞಾನ" ವೆಂದರೆ ಜ್ಞಾನೋದಯವೆಂದರ್ಥ. ಇವನು ಇಂದ್ರಿಯಗಳನ್ನು ನಿಗ್ರಹಿಸಿ ಸುಖ ಹಾಗೂ ಯಾತನೆಗಳ ಮೇಲೆ ನಿಯಂತ್ರಣವನ್ನು ಸಾಧಿಸಿಕೊಂಡನು ಈ ಸಾಧನೆಗಾಗಿ ಇವನು ಮಹಾವೀರನೆಂದು ಕರೆಸಿಕೊಂಡು ಜಿನನಾದನು.'ಜಿನ' ನೆಂದರೆ ಎಲ್ಲವನ್ನು ನಿಗ್ರಹಿಸಿದವನು, ಜಯಿಸಿದವನು ಎಂದರ್ಥ ಹೀಗಾಗಿ ಇವನ ಅನುಯಾಯಿಗಳನ್ನು ಜನರೆಂದು ಅವರೆಲ್ಲರೂ ಪಾಲಿಸುವ ಧರ್ಮವು ಜೈನ ಧರ್ಮವೆಂದು ಆಯಿತು.
ವರ್ಧಮಾನ ಮಹಾವೀರನು ತನ್ನ ಉಳಿದ ಮೂವತ್ತು ವರ್ಷಗಳ ಜೀವನದಲ್ಲಿ ಗಂಗಾ ನದಿಯ ಪ್ರದೇಶದ ಜನತೆಗೆ ಅರಿವು ಮೂಡಿಸುತ್ತಾ, ಬೋಧನೆಗಳನ್ನು ಮಾಡುತ್ತಾ ಕಳೆದನು. ಪಶ್ಚಿಮ ಭಾರತದ ಕಡೆಗೂ ಪ್ರಯಾಣಿಸಿ ಬೋಧನೆಗಳನ್ನು ಮಾಡಿದನು. ತನ್ನ ಎಪ್ಪತ್ತೆರಡನೇ ವಯಸ್ಸಿನಲ್ಲಿ ಬಿಹಾರದ ಪಾವಪುರಿ ಎಂಬಲ್ಲಿ ಕ್ರಿ.ಪೂ.527 ರಲ್ಲಿ ನಿರ್ವಾಣವನ್ನು ಹೊಂದಿದನು.
ವರ್ಧಮಾನ ಮಹಾವೀರನು ಅಹಿಂಸೆ, ಸತ್ಯ, ಅಸ್ತೇಯ (ಕದಿಯದಿರುವುದು), ಅಪರಿಗ್ರಹ (ಆಸ್ತಿಯನ್ನು ಮಾಡದಿರುವುದು) ಮತ್ತು ಬ್ರಹ್ಮ ಚರ್ಯ ಎಂಬ ಪಂಚ ಪ್ರತಿಜ್ಞೆಗಳನ್ನು ಪ್ರತಿ ಜಿನನು ಪಾಲಿಸಬೇಕೆಂದನು. ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ, ಸಮ್ಯಕ್ ದರ್ಶನಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟ ಮಹಾವೀರ, ಅವುಗಳನ್ನು ‘ತ್ರಿರತ್ನ’ಗಳೆಂದು ಕರೆದು ವಿವರವಾಗಿ ಬೋಧಿಸಿದನು. ಅಹಿಂಸೆಯ ಆಚರಣೆಗೆ ಹೆಚ್ಚಿನ ಮಹತ್ವ ನೀಡಿದ್ದ ಮಹಾವೀರ, “ಅಹಿಂಸಾ ಪರಮೋಧರ್ಮಃ” ಎಂದು ಘೋಷಿಸಿದನು.
ಸಾಂಪ್ರಾದಾಯಿಕವಾಗಿ ಜೈನರಲ್ಲಿ ಶ್ವೇತಾಂಬರ ಮತ್ತು ದಿಂಗಬರರೆಂಬ ಎರಡು ಪಂಗಡಗಳಿದ್ದು, ಬಿಳಿಯ ಉಡುಪು ಧರಿಸಿದ ಜೈನ ಮುನಿಗಳನ್ನು ಹಾಗೂ ಅವರ ಅನುಯಾಯಿಗಳನ್ನು ಶ್ವೇತಾಂಬರರೆಂದು ಕರೆಯುತ್ತಾರೆ. ಉಡುಪನ್ನು ಧರಿಸದ ಜೈನ ಮುನಿಗಳನ್ನು ಹಾಗೂ ಅವರ ಅನುಯಾಯಿಗಳನ್ನು ದಿಗಂಬರ ಪಂಥಕ್ಕೆ ಸೇರಿದವರೆಂದು ಪರಿಗಣಿಸಲಾಗಿದೆ. ಶ್ವೇತಾಂಬರರ ಪ್ರಕಾರ ವರ್ಧಮಾನನಿಗೆ ಮದುವೆಯಾಗಿತ್ತು ಮತ್ತು ಒಂದು ಹೆಣ್ಣು ಮಗುವಿತ್ತು. ಆತ ಸಂಸಾರ ತ್ಯಜಿಸಿ ಸನ್ಯಾಸ ಪಡೆದನು. ದಿಗಂಬರರ ಪ್ರಕಾರ ವರ್ಧಮಾನನು ಬಾಲಬ್ರಹ್ಮಚಾರಿ ಯಾಗಿದ್ದನು ಎಂಬ ನಂಬಿಕೆಯಿದೆ.
ಜಗತ್ತಿನ ಎಲ್ಲಾ ಚರಾಚರ ವಸ್ತುಗಳಲ್ಲಿಯೂ ಆತ್ಮ (ಜೀವ) ವಿದೆ ಎಂಬುದು ಜೈನರ ನಂಬಿಕೆ. ಆತ್ಮ (ಜೀವ) ದ ಶುದ್ಧೀಕರಣವು ಮಾತ್ರ ಪುನರ್ಜನ್ಮದಿಂದ ಮುಕ್ತಿಯನ್ನು ನೀಡುತ್ತದೆ ಹಾಗೂ ನಿರ್ವಾಣ ಸಾಧ್ಯ. ಶುದ್ಧೀಕರಣವು ತಪಸ್ಸು, ಉಪವಾಸ, ದೇಹ ದಂಡನೆ ಹಾಗೂ ಅದರ ಮೂಲಕದಿಂದಾಗುವ ದೇಹ ನಾಶದಿಂದ ಮಾತ್ರ ಸಾಧ್ಯವೆಂಬುದು ಜೈನಮತದ ನಂಬಿಕೆ. ಇದನ್ನು ಸಲ್ಲೇಖನವೆನ್ನುವರು. ಕರ್ಮ ಸಿದ್ದಾಂತವು ಜೈನರ ಬಹು ಮುಖ್ಯ ಆಯಾಮ. ಈ ಧರ್ಮದ ಪ್ರಕಾರ ಉತ್ತಮ ಮತ್ತು ಪುಣ್ಯಕಾರ್ಯಗಳ ಮೂಲಕ ಮಾತ್ರ ವಿಮೋಚನೆಯನ್ನು ಪಡೆಯಬಹುದಾಗಿದೆ ಕೈವಲ್ಯ ಜ್ಞಾನವನ್ನು ಪಡೆಯಲು ದೇಹದ ಬಂಧನದಿಂದ ಆತ್ಮವು ವಿಮುಕ್ತವಾಗಬೇಕು ಎಂಬುದು ಜೈನ ಮತದ ನಂಬಿಕೆಯಾಗಿದೆ.
ಮೊದಲನೇ ಜೈನ ಸಮಾವೇಶದ ನಂತರ ವರ್ಧಮಾನ ಮಹಾವೀರನ ವಿಚಾರಗಳನ್ನು 12 ಗ್ರಂಥಗಳಲ್ಲಿ ಪ್ರಾಕೃತ ಭಾಷೆಯಲ್ಲಿ ಸಂಗ್ರಹಿಸಿ ಇಡಲಾಯಿತು. ಇವುಗಳನ್ನು ಜೈನರು 12 ಅಂಗಗಳೆಂದು ಕರೆದರು. ಬಹಳ ಹಿಂದೆ ಬಿಹಾರದಲ್ಲಿ ಬರಗಾಲ ಬಂದಾಗ ಜೈನರ ಒಂದು ತಂಡವು ದಕ್ಷಿಣ ಭಾರತದ ಕಡೆಗೆ ಬಂದು ಶ್ರವಣಬೆಳಗೊಳದಲ್ಲಿ ನೆಲೆಸಿತು. ಹೀಗೆ ದಕ್ಷಿಣ ಭಾರತದಲ್ಲಿಯೂ ಕೂಡ ಜೈನ ಮತದ ಪ್ರಚಾರವಾಯಿತು. ಇದರಿಂದ ಅಪಾರವಾದ ಗ್ರಂಥಗಳು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ರಚನೆಯಾದವು. ಕನ್ನಡದ ಸುಪ್ರಸಿದ್ಧ ಕವಿಗಳಾದ ಪಂಪ, ರನ್ನ, ಪೊನ್ನ, ಜನ್ನ ಇವರುಗಳೆಲ್ಲ ಜೈನ ಕವಿಗಳಾಗಿದ್ದಾರೆ. ಶ್ರವಣಬೆಳಗೊಳ ಶ್ರೀ ಕ್ಷೇತ್ರವನ್ನು ಭಾರತದ ಜೈನಕಾಶಿ ಎಂದೇ ಕರೆಯಲಾಗಿದೆ.
-ಕೆ.ಎನ್.ಚಿದಾನಂದ. ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ