
ಬಳ್ಳಾರಿ: ಕರ್ನಾಟಕ ರಾಜ್ಯ ಸರ್ಕಾರವು ಅನುಸೂಚಿತ ಉದ್ದಿಮೆಗಳಡಿ ಬರುವ ವಿವಿಧ ವಲಯವಾರು ಹಾಗೂ ವಿವಿಧ ಕುಶಲತೆಯ ಕಾರ್ಮಿಕರಿಗೆ ನೀಡಬೇಕಾಗಿರುವ ದಿನದ ಮತ್ತು ಮಾಸಿಕ ಕನಿಷ್ಠ ವೇತನವನ್ನು ಹೆಚ್ಚಿಸಿರುವುದು ಮತ್ತು ಬೇಡಿಕೆಯಂತೆ 3 ವಲಯಗಳನ್ನು ಮಾಡಿ ಅಧಿಸೂಚನೆ ಪ್ರಕಟಿಸಿರುವುದನ್ನು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಕರ್ನಾಟಕ ರಾಜ್ಯ ಸಮಿತಿ ಸ್ವಾಗತಿಸಿದೆ.
ರಾಜ್ಯದ ಕಾರ್ಮಿಕರು ಮತ್ತು ನೌಕರರು ಮತ್ತಿತರ ದುಡಿಯುವ ಜನರು ಕಡು ಕಷ್ಟದಲ್ಲಿ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಈ ಪರಿಸ್ಕೃತ ವೇತನ ದರಗಳು ಅವರ ಕುಟುಂಬಗಳಿಗೆ ಕನಿಷ್ಟ ಸಮಾಧಾನವನ್ನು ತಂದಿವೆ.
ಎಐಯುಟಿಯುಸಿ ಸೇರಿದಂತೆ ರಾಜ್ಯದ ಕೇಂದ್ರೀಯ ಕಾರ್ಮಿಕ ಸಂಘಗಳು, ಕನಿಷ್ಠ ವೇತನ ಪರಿಷ್ಕರಿಸುವಾಗ ಕಾರ್ಮಿಕರ ಜೀವನ ವೆಚ್ಚಕ್ಕೆ ಸಂಬಂಧಿಸಿದಂತೆ, ಮೆ.ರೆಪ್ಟಕೋಸ್ ಬ್ರೆಟ್ ಅಂಡ್ ಕಂಪನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿದ ಮಾನದಂಡ ಆಧರಿಸಿ ಮಾಸಿಕ ರೂ 35,950/ ಕನಿಷ್ಠ ವೇತನ, ನಿಗದಿಪಡಿಸಬೇಕೆಂದು ವಾಸ್ತವಿಕವಾದ ಅಧ್ಯಯನ ಆಧರಿಸಿ, ಜಂಟಿಯಾಗಿ ಕನಿಷ್ಟ ವೇತನ ಸಲಹಾ ಮಂಡಳಿಯಲ್ಲಿ ಮತ್ತು ಸರ್ಕಾರದ ಸಚಿವರಿಗೆ ಒತ್ತಾಯಿಸಿ ಚರ್ಚಿಸಿದ್ದವು.
ಎಐಯುಟಿಯುಸಿ ಸೇರಿದಂತೆ ಎಲ್ಲಾ ಸಂಘಟನೆಗಳ ಸಂಘಟಿತ ಪ್ರಯತ್ನದ ಫಲವಾಗಿ ಸರ್ಕಾರವು ಇದೀಗ ಕನಿಷ್ಠ ವೇತನ ಪರಿಷ್ಕರಿಸಿರುವುದು ಕಾರ್ಮಿಕರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಇದು ಕಾರ್ಮಿಕರ ಸಂಘಟಿತ ಹೋರಾಟಕ್ಕೆ ಸಿಕ್ಕ ಮಹತ್ವದ ಗೆಲುವಾಗಿದೆ ಎಂದು AIUTUC ಹೇಳಿದೆ.
ಆದರೆ ಕಾರ್ಮಿಕರನ್ನು ವಲಯಗಳಲ್ಲಿ ಹಂಚಿಕೆ ಮಾಡುವಲ್ಲಿ ಹಲವಾರು ಲೋಪದೋಷಗಳು ಇವೆ. ವಿಡಿಎ ಕುರಿತು ಪ್ರಸ್ತಾಪ ವಿಲ್ಲ, ಹಿಂದಿನ ಪರಿಷ್ಕರಣೆ ಮುಕ್ತಾಯವಾಗಿರುವ 2022ರಿಂದ ಅನ್ವಯ ಮಾಡದಿರುವುದು, ಹಲವಾರು ಪ್ರಮುಖ ಸೆಕ್ಟರ್ ಕಾರ್ಮಿಕರ ವೇತನ ಪರಿಷ್ಕರಣೆಯನ್ನು ತಡೆ ಹಿಡಿದಿರುವುದು ಸೇರಿದಂತೆ ಹಲವಾರು ಅಂಶಗಳ ಕುರಿತು ಈ ಅಧಿಸೂಚನೆಯಲ್ಲಿ ಸೇರಿಸಬೇಕು ಎಂದು ಎಐಯುಟಿಯುಸಿಯು ಸರ್ಕಾರ ಮತ್ತು ಕಾರ್ಮಿಕ ಇಲಾಖೆಯನ್ನು ಒತ್ತಾಯಿಸುತ್ತದೆ ಮತ್ತು ಈ ಕುರಿತು ಲಿಖಿತ ಪತ್ರವನ್ನು ಸಲ್ಲಿಸಲಿದೆ.
ಆದ್ದರಿಂದ ಸರ್ಕಾರವು ಕನಿಷ್ಠ ವೇತನ ಕಾಯ್ದೆ ಅಡಿ ಪ್ರದತ್ತವಾದ ಅಧಿಕಾರವನ್ನು ಉಪಯೋಗಿಸಿ ಈ ಅಧಿಸೂಚನೆಯಲ್ಲಿ ನಮೂದಿಸಿರುವ ವೇತನ ದರಗಳನ್ನು ಉಳಿಸಿಕೊಂಡು, ತಾನು ಎತ್ತಿರುವ ಕೆಲವು ಕಾರ್ಮಿಕರ ಪರವಾದ ನ್ಯಾಯಯುತ ಅಂಶಗಳನ್ನು ಈ ಅಧಿಸೂಚನೆಯಲ್ಲಿ ಸೇರಿಸಿ ಕೂಡಲೇ ಜಾರಿಗೆ ಬರುವಂತೆ ಅಂತಿಮ ಅಧಿಸೂಚನೆಯನ್ನು ಹೊರಡಿಸಬೇಕೆಂದು ಎಐಯುಟಿಯುಸಿ, ರಾಜ್ಯ ಸಮಿತಿಯು ಸರ್ಕಾರವನ್ನು ಒತ್ತಾಯಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ