ಇತ್ತೀಚಿನ ವರುಷಗಳಲ್ಲಿ ಬಹುಮುಖ್ಯವಾಗಿ ಕರಾವಳಿ ಜಿಲ್ಲೆಯಲ್ಲಿ ಕೆಲವೊಂದು ವ್ಯಕ್ತಿಗಳು ತಪ್ಪು ಮಾಡಿದಾಗ ಅವರನ್ನು ಶಿಕ್ಷೆಗೆ ಒಳಪಡಿಸುವ ರೀತಿಯಲ್ಲಿ ಕೆಲವೊಂದು ವ್ಯಕ್ತಿಗಳು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಅಮಾನವೀಯವಾಗಿ ಶಿಕ್ಷಿಸುವ ರೀತಿಯನ್ನು ನೇೂಡಿದರೆ ಅತ್ಯಂತ ವಿಷಾದಕರ ಪರಿಸ್ಥಿತಿ ಅನ್ನಿಸುತ್ತದೆ. ಇದು ಕಾನೂನಿನ ರೀತ್ಯಾ ತೀರ ತಪ್ಪು ಕೂಡ.
ಈ ಕುರಿತಾಗಿಯೇ ಸಾಕಷ್ಟು ಹೇಳಿಕೆ ಸರ್ಕಾರದಿಂದಲೂ, ನ್ಯಾಯಾಂಗ ಪರಿಣಿತರಿಂದಲೂ, ಕಾನೂನು ಸಂರಕ್ಷಣಾ ಇಲಾಖೆಯ ಕಡೆಯಿಂದಲೂ, ಮಾಧ್ಯಮಗಳ ಕಡೆಯಿಂದಲೂ ಬರುತ್ತಿದೆ. ಇದು ಸರಿ. ಆದರೆ ಇದಕ್ಕೆ ಪೂರಕವಾಗಿ ಇನ್ನೊಂದು ಮುಖ ತೆರೆದು ಕೊಳ್ಳುತ್ತದೆ. ಅದೇನೆಂದರೆ "ಈ ನಾಗರಿಕ ಸಮಾಜದಲ್ಲಿ ಜನಸಾಮಾನ್ಯರು ಈ ಕಾನೂನನ್ನು ಯಾಕೆ ಕೈಗೆತ್ತಿಕೊಳ್ಳುತ್ತಿದ್ದಾರೆ?ಇಂತಹ ಪರಿಸ್ಥಿತಿ ನಮ್ಮಮುಂದೆ ಹುಟ್ಟಿ ಕೊಳ್ಳಲು ಕಾರಣಗಳೇನು ಅನ್ನುವುದನ್ನು ಈ ನಾಗರಿಕ ಸಮಾಜ, ಸರ್ಕಾರ, ನ್ಯಾಯಾಂಗ, ಮಾಧ್ಯಮಗಳು ಗಂಭೀರವಾಗಿ ಆಲೇೂಚನೆ ಮಾಡಬೇಕಾದ ಸಂದರ್ಭ ನಮ್ಮ ಮುಂದೆ ಬಂದು ನಿಂತಿದೆ ಅನ್ನಿಸುತ್ತದೆ.
ಸಾಮಾನ್ಯ ಒಬ್ಬ ವ್ಯಕ್ತಿ ಕಾನೂನನ್ನು ತನ್ನ ಕೈಗೆ ಎತ್ತಿಕೊಳ್ಳಲು ಹತ್ತು ಹಲವು ವಾಸ್ತವಿಕ ಪರಿಸ್ಥಿತಿ ಅವನ ಮಂದೆ ಬಂದು ನಿಂತಿರುವುದನ್ನು ನಾವುಕಡೆಗಣಿಸುವಂತಿಲ್ಲ. ನಾಗರಿಕ ಸಮಾಜದಲ್ಲಿ ನಮ್ಮ ದೇಹಕ್ಕೊ ವಸ್ತುವಿಗೋ ಆಸ್ತಿಗೋ ಯಾವುದೇ ವ್ಯಕ್ತಿಗಳಿಂದ ತಕ್ಷಣ ತೊಂದರೆ ಯಾದಾಗ ನಾವು ಮೊದಲು ಸಂಪರ್ಕಿಸುವುದು ಪೇೂಲಿಸ್ ಇಲಾಖೆ ಅನಂತರದಲ್ಲಿ ನ್ಯಾಯಾಂಗ ತಾನೆ. ಸರಿ ಇಂದಿನ ಪರಿಸ್ಥಿತಿಯಲ್ಲಿ ಏನಾಗಿದೆ? ನಮ್ಮ ವಸ್ತುವನ್ನು ಯಾರೊ ಕದಿಯುತ್ತಾನೆ ಹಾಳು ಮಾಡುತ್ತಾನೆ ಅಂತ ಇಟ್ಟುಕೊಳ್ಳಿ. ನೀವು ಅಥವಾ ನಾವು ಪೊಲೀಸ್ ಸ್ಟೇಷನ್ ಹೇೂದಾಗ ನಮ್ಮ ದೂರನ್ನು ಪೊಲೀಸರು ಸುಲಭವಾಗಿ ಸ್ವೀಕರಿಸಿ ಕೂಡಲೇ ಸ್ಪಂದಿಸುತ್ತಾರಾ? ಖಂಡಿತವಾಗಿಯೂ ಇಲ್ಲ.
ಕೆಲ ಸಂದರ್ಭದಲ್ಲಿ ವಸ್ತುವನ್ನು ಕದ್ದ ಕಳ್ಳ ಕೂಡಾ ಅವನಿಗೆ ಹತ್ತಿರದ ರಾಜಕಾರಣಿಗಳನ್ನೊ ಮಂತ್ರಿಗಳನ್ನು ಹಿಡಿದು ಪೇೂಲಿಸ್ ಇಲಾಖೆಗೆ ಪ್ರಭಾವ ಬೀರುವ ಕೆಲಸವನ್ನು ಮಾಡುವ ಪರಿಸ್ಥಿತಿ ನಮ್ಮಲ್ಲಿದೆ. ಅಲ್ಲಿಗೆ ನಿಮ್ಮ ಕೆಲಸಕ್ಕೆ ಒಂದು ತಡೆ ಬಂತು ಎಂದೇ ತಿಳಿಯಬೇಕು. ಆಯಿತು ಒಂದು ವೇಳೆ ಪೊಲೀಸ್ ಇಲಾಖೆಯಿಂದ ನ್ಯಾಯ ಸಿಕ್ಕಿ ಕೇಸ್ ಹಾಕಿ ಕೇೂರ್ಟಿಗೆ ಹೇೂಯಿತು ಅಂತಹ ಇಟ್ಟುಕೊಳ್ಳಿ; ಅಲ್ಲಿ ಸುಲಭವಾಗಿ ನಿಮಗೆ ನ್ಯಾಯ ಸಿಗುತ್ತದಾ? ಖಂಡಿತವಾಗಿಯೂ ಇಲ್ಲ.
ನೀವು ಕಳೆದುಕೊಂಡಿದ್ದು ಸಾವಿರ ರೂಪಾಯಿ ಇದಕ್ಕಾಗಿ ಖರ್ಚುಮಾಡ ಬೇಕಾದದ್ದು ಸಾವಿರಾರು ರೂಪಾಯಿ. ಇದಕ್ಕಾಗಿಯೇ ಅದೆಷ್ಥೊ ವರುಷಗಳ ಕಾಲ ಕಾಯಬೇಕು. ಇದೆಲ್ಲವನ್ನು ಒಂದು ನಾಗರಿಕ ಸಮಾಜದಲ್ಲಿ ಒಬ್ಬ ಸಭ್ಯ ನಾಗರಿಕ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನಗೆ ನ್ಯಾಯ ಸಿಗ ಬೇಕಾದರೆ ಪಡ ಬೇಕಾದ ಕಷ್ಟದ ಪರಿಸ್ಥಿತಿ. ಹಾಗಾಗಿಯೇ ಈ ಎಲ್ಲಾ ಕಾನೂನಿನ ಜಂಜಾಟವನ್ನು ಮೀರಿ ಒಬ್ಬ ವ್ಯಕ್ತಿ ನೇರವಾಗಿ ತಪ್ಪು ಮಾಡಿದವರಿಗೆ ತಾನೇ ಸುಲಭವಾಗಿ ಬುದ್ಧಿ ಕಲಿಸುತ್ತೇನೆ ಅನ್ನುವ ತಕ್ಷಣವೇ ಒಂದು ತಪ್ಪು ನಿರ್ಧಾರಕ್ಕೆ ಬಂದು ಕಾನೂನನ್ನು ಕೈಗೆತ್ತಿಕೊಳ್ಳುವ ಪರಿಸ್ಥಿತಿ ನಿರ್ಮಾಣವೂ ಸೃಷ್ಟಿಯಾಗ ಬಹುದು. ಈ ಪರಿಸ್ಥಿತಿ ನಿರ್ಮಾಣಕ್ಕೆ ಯಾರು ಕಾರಣ ಅನ್ನುವುದನ್ನು ನಾಗರಿಕ ಸಮಾಜ ಆಲೇೂಚನೆ ಮಾಡಬೇಕಾಗಿದೆ ಅಲ್ವೇ?
ಹಾಗಾಗಿ ಈ ನಿಟ್ಟಿನಲ್ಲಿ ನಮ್ಮ ಘನ ಸರ್ಕಾರ, ಪೊಲೀಸ್ ಇಲಾಖೆ, ನ್ಯಾಯಾಂಗ ತಪ್ಪು ಮಾಡಿದವರಿಗೆ ಕೂಡಲೇ ಶಿಕ್ಷಿಸುವ ದಾರಿಯಲ್ಲಿ ನಿಷ್ಪಕ್ಷಪಾತವಾಗಿ ಶೀಘ್ರವಾಗಿ ನ್ಯಾಯ ಒದಗಿಸಿದಾಗ ನಾಗರಿಕ ಸಮಾಜ ಜವಾಬ್ದಾರಿಯಿಂದ ಕಾನೂನನ್ನು ಗೌರವಿಸಲು ಮುಂದಾಗಬಹುದು. ಇದಕ್ಕೆ ಅನುಕೂಲಕರವಾದ ಪರಿಸ್ಥಿತಿಯನ್ನು ರೂಪಿಸಬೇಕಾದದ್ದು ಈ ನಾಗರಿಕ ಸಮಾಜದಲ್ಲಿನ ಸರ್ಕಾರದ ಜವಾಬ್ದಾರಿ. ಮಾತ್ರವಲ್ಲ ರಾಜಕಾರಣಿಗಳು, ಪೇೂಲಿಸ್ ಇಲಾಖೆಯಲ್ಲಿ ಮೂಗು ತೂರಿಸಲೇ ಬಾರದು. ಮುಕ್ತವಾಗಿ ಕಾರ್ಯವೆಸಗುವ ವಾತಾವರಣ ಒದಗಿಸಬೇಕು. ಮಾಧ್ಯಮಗಳು ಕೂಡಾ ಈ ನಿಟ್ಟಿನಲ್ಲಿ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕಾಗಿದೆ ಅನ್ನುವುದು ನಮ್ಮೆಲ್ಲರ ಖಚಿತವಾದ ಅಭಿಪ್ರಾಯವೂ ಹೌದು.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ