ವಿದ್ಯಾಗಿರಿ: 'ರಂಗ ಚಟುವಟಿಕೆಯೇ ನನ್ನ ಬದುಕಿನ ಯಶಸ್ಸಿನ ಸೂತ್ರ' ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ 'ವಿಶ್ವರಂಗಭೂಮಿ ದಿನಾಚರಣೆ' ಅಂಗವಾಗಿ ಶುಕ್ರವಾರ ಹಮ್ಮಿಕೊಂಡ 'ರಂಗಗೀತೆ- ಉಪನ್ಯಾಸ- ಸನ್ಮಾನ- ನಾಟಕ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಸಮಾಜ ಮತ್ತು ಬದುಕಿಗೆ ರಂಗಭೂಮಿ ಕೊಡುಗೆ ಅಪಾರ. ಪಠ್ಯಕ್ಕಿಂತ ರಂಗ ಚಟುವಟಿಕೆಗಳ ನೆನಪು ನನಗೆ ಇಂದಿಗೂ ಚಿರಸ್ಥಾಯಿಯಾಗಿದೆ' ಎಂದರು. ‘ಭೋಜ ಶೆಟ್ಟ ನಮ್ಮ ಸಮಕಾಲೀನರು. ರಂಗದಲ್ಲಿ ಅವರ ಒಡನಾಟವೇ ಸುಂದರ' ಎಂದು ಶ್ಲಾಘಿಸಿದರು.
ಲಂಕೇಶ್ ಬರೆದ 'ಪೋಲಿಸರಿದ್ದಾರೆ ಎಚ್ಚರಿಕೆ' ನಾಟಕದ 'ರುದ್ರಮೂರ್ತಿ' ಪಾತ್ರ ಸೇರಿದಂತೆ ತಾವು ನಿರ್ವಹಿಸಿದ ‘ಗುಂಡ', ‘ತುಘಲಕ್', 'ಬಯ್ಯಮಲ್ಲಿಗೆ' ನಾಟಕದಲ್ಲಿ ತಾವು ನಿರ್ವಹಿಸಿದ ‘ವಿದೂಷಕ' ಪಾತ್ರ ಸೇರಿದಂತೆ ಎಲ್ಲ ಪಾತ್ರಗಳನ್ನು ತೃಪ್ತ ಭಾವದಿಂದ ಮೆಲುಕು ಹಾಕಿದರು.
ವಿಠಲ್ ಮಾಸ್ಟರ್ ಮೂಲಕ ಭರತ ನಾಟ್ಯ ಕಲಿತು ದೇಶ- ವಿದೇಶಗಳಲ್ಲಿ ಪ್ರದರ್ಶನ ನೀಡಿರುವುದನ್ನು ನೆನಪಿಸಿಕೊಂಡರು. ‘ಮೂಕಾನಭಿಯ, ಮ್ಯಾಜಿಕ್ ಕಲಿತ- ಪ್ರಯೋಗಿಸಿದ ಅನುಭವ ನನ್ನನ್ನು ಗಟ್ಟಿಗೊಳಿಸಿದೆ' ಎಂದ ಅವರು, 'ಮಕ್ಕಳೇ ನೀವು ಎಲ್ಲಿಯೇ ಪ್ರದರ್ಶನ ನೀಡಿದರೂ, ನಾನು ಪ್ರೇಕ್ಷಕನಾಗಿದ್ದೇನೆ ಎಂಬುದನ್ನು ನೆನಪಿಸಿಕೊಳ್ಳಿ' ಎಂದು ಹಿತವಚನ ಹೇಳಿದರು. ‘ಬೆಸ್ತರ, ಬೇಡರ ನೃತ್ಯ ನಿರಂತರವಾಗಿ ಮಾಡಿದ್ದೇನೆ. ಅದೇ ರೀತಿ ಅವಿರತವಾಗಿ ತೊಡಗಿಸಿಕೊಂಡಾಗ ಬದುಕಿನ ಯಶಸ್ಸು ದೊರೆಯುತ್ತದೆ' ಎಂದರು. ‘ಬದುಕೇ ಒಂದು ನಾಟಕ, ವಿವಿಧ ಹಂತದಲ್ಲಿ ನಾವು ನಟನೆ ಮಾಡಬೇಕಾಗುತ್ತದೆ' ಎಂದು ಮಾರ್ಮಿಕವಾಗಿ ಹೇಳಿದರು.
ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹಾಗೂ ಹಿರಿಯ ರಂಗಕರ್ಮಿ ಡಾ| ನರಸಿಂಹಮೂರ್ತಿ ಆರ್. ಮಾತನಾಡಿ, ‘ಲಲಿತಕಲೆಗಳ ಸಂಗಮ ಕ್ಷೇತ್ರವೇ ‘ರಂಗಭೂಮಿ' ಎಂದು ವಿಶ್ಲೇಷಿಸಿದರು. ಪಂಚೇAದ್ರಿಯ ಮೂಲಕ ನೆಮ್ಮದಿ ನೀಡುವ ಮನುಷ್ಯ ಕೃತ ಕ್ರಿಯೆಗಳೇ ಕಲೆ. ಪ್ರಾಚೀನ ಭಾರತದಲ್ಲಿ 64 ಕಲೆಗಳನ್ನು ಗುರುತಿಸಲಾಗಿದೆ. ನಾಟಕ ಎಂಬುದು ‘ಕಲಾ ರಸಾಯನ'. ಹಲವು ಕಲೆಗಳ ಮೇಳೈಸುವಿಕೆ ಎಂದು ವಿವರಿಸಿದರು.
ವಿಭಿನ್ನ ರುಚಿ ಉಳ್ಳವರ ಭೋಜನವೇ ನಾಟಕ. ಎಲ್ಲರಿಗೂ ಏಕ ಕಾಲದಲ್ಲಿ ಕಲೆಗಳ ಖಾದ್ಯ ಲಭ್ಯ. ನಾಟಕ ಅರಿವು- ಮನುಷ್ಯತ್ವ ಮೂಡಿಸಬೇಕು ಎಂದರು. ‘ದೇಗುಲಗಳಿಗೆ ಹೋಗದಿದ್ದರೂ ರಂಗಭೂಮಿಯನ್ನು ಕಳೆದುಕೊಳ್ಳಬೇಡಿ' ಎಂದು ಬರ್ನಾಡ್ ಷಾ ಹೇಳಿದ್ದಾರೆ ಎಂದು ಅವರು ಉಲ್ಲೇಖಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜೀವನ್ ರಾಮ್ ಸುಳ್ಯ, ‘ನಾಟಕವಿಲ್ಲದೇ ಜೀವನ ಇಲ್ಲ. ನಾವು ರಂಗದಲ್ಲಿ ನಾಟಕಕಾರರು, ಆದರೆ, ಎಲ್ಲರೂ ಜೀನದಲ್ಲಿ ನಾಟಕಕಾರರು. ಪಾತ್ರಗಳು ಮಾತ್ರ ವಿಭಿನ್ನ. ಎಲ್ಲ ವೃತ್ತಿಗಳು ‘ನಾಟಕ' ಬಯಸುತ್ತವೆ' ಎಂದು ರಂಗಭೂಮಿ ದಿನದ ಕುರಿತು ಮಾಹಿತಿ ಹಂಚಿಕೊಂಡರು.
ವಿಶ್ವರಂಗ ಸನ್ಮಾನ: ರಂಗಭೂಮಿಯ ಹಿರಿಯ ಮತ್ತು ಚಲನಚಿತ್ರ ಕಲಾವಿದ ಎಂ.ಭೋಜ ಶೆಟ್ಟಿ ತೋಟದಮನೆ ಅವರನ್ನು ಸನ್ಮಾನಿಸಲಾಯಿತು. ಜೀವನ್ ರಾಮ್ ಸುಳ್ಯ, ವಿದುಷಿ ಸುಮನಾ ಪ್ರಸಾದ್ ಮತ್ತು ಮಮತಾ ಕಲ್ಮಕಾರು ಅವರು, ‘ಸಾವಿರದ ಮಾಯೆ...', ‘ಸಣ್ಣ ಹುಡುಗಿ ನಿನ್ನ...' ' ಮದುವೆ ಎಂಬ ಮೂರಕ್ಷರ...' ‘ಅಂತಿಂಥ ಮದುವೆಯಲ್ಲ, ಊಟ' ‘ಗೋರ್ ಮಾಟಿ...' ರಂಗಗೀತೆಗಳನ್ನು ಹಾಡಿದರು. ಚಿನ್ಮಯ ಕಮಲಾಕರ ಭಟ್ ಹಾಗೂ ಮನುಜ ನೇಹಿಗೆ ಸುಳ್ಯ ಹಿನ್ನೆಲೆಯಲ್ಲಿ ಸಾಥ್ ನೀಡಿದರು.
ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಮ್ ಸುಳ್ಯ ನಿರ್ದೇಶನದಲ್ಲಿ ಶಶಿರಾಜ್ ಕಾವೂರು ಬರೆದ ‘ಏಕಾದಶಾನನ' ನಾಟಕವನ್ನು ಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಮನುಜ ನೇಹಿಗೆ ಸುಳ್ಯ ಸಂಗೀತ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ