ಅದೊಂದು ಮಟಮಟ ಮಧ್ಯಾಹ್ನದ ಸಮಯ. ಭಗತ್ ಸಿಂಗ್, ರಾಜಗುರು, ಸುಖದೇವ್, ಬಟುಕೇಶ್ವರ್ ದತ್ತ್, ಶಚಿಂದ್ರನಾಥ ಸನ್ಯಾಲ್, ಚಂದ್ರಶೇಖರ್ ಆಜಾದ್ ಸೇರಿದಂತೆ ಕೆಲವಾರು ಕ್ರಾಂತಿಕಾರಿಗಳು ತಮ್ಮ ಮುಂದಿನ ಯೋಜನೆ- ಯೋಚನೆಗಳನ್ನು ಚಿಂತನೆ ಗೈಯುತ್ತಿದ್ದ ಸಂದರ್ಭ. ಅದಾಗಲೇ ಈ ಬಣ ಬಾಂಬ್ ತಯಾರಿಕೆಯ ವಿದ್ಯೆಯನ್ನು ಕರಗತಗೊಳಿಸಿಕೊಂಡಿತ್ತು. ಆದರೆ ಈ ವಿದ್ಯೆಯನ್ನು ಎಲ್ಲಡೆ ಪಸರಿಸಲು ದಾರಿ ತೋಚದಂತೆ ಕುಳಿತಿದ್ದರು. ತಾನು ಬ್ರಿಟಿಷರೊಡನೆ ಸಿಕ್ಕಿಬಿದ್ದಾದರೂ ಈ ವಿದ್ಯೆಯನ್ನು ಪಸರಿಸಬೇಕೆಂಬ ನಿಲುವು ಭಗತ್ ಸಿಂಗ್ ನ ಬಣದವರದ್ದಾದರೆ ಏನಾದರೂ ಸರಿ ಅತಿ ಹೆಚ್ಚು ಕ್ರಾಂತಿಕಾರಿ ಕೆಲಸವನ್ನು ಮಾಡಿ ಬ್ರಿಟಿಷರ ಕೈಯಿಂದ ಪಾರಾಗಿಕೊಂಡು ಬದುಕುವುದೇ ಉತ್ತಮ. ಹೀಗೆ ಹೆಚ್ಚು ಹೆಚ್ಚು ಕ್ರಾಂತಿ ಕಾರ್ಯ ಮಾಡಬೇಕೆಂಬ ನಿಲುವು ಚಂದ್ರಶೇಖರ್ ಆಜಾದ್ ರವರದ್ದು.
ಒಟ್ಟಿನಲ್ಲಿ ಕ್ರಾಂತಿಕಾರಿಯ ಪಥ ಎಲ್ಲರ ರಾಜಮಾರ್ಗವಾಗಿತ್ತು. ಇವರೊಳಗೆ ಓರ್ವ ಸಾಮಾನ್ಯ ಕ್ರಾಂತಿಕಾರಿ, "ರಾಜ ಗುರು" ಎಂಬ ನಾಮಾಂಕಿತದಿಂದ ಪ್ರಸಿದ್ಧಿ ಪಡೆದ ಶಿವರಾಮ್ ಹರಿ ರಾಜಗುರು.
ಮುಯ್ಯಿಗೆ ಮುಯ್ಯಿ, ರಕ್ತಕ್ಕೆ ರಕ್ತ ಎಂಬ ನೀತಿಯೊಂದಿಗೆ ಬಲಿದಾನಕ್ಕೂ ಸಿದ್ಧ ಜೈಲಿನಲ್ಲಿ ನರಳಾಟಕ್ಕು ಬದ್ಧ, ಯಾವ ಕಾಲದಲ್ಲೇ ಆಗಲಿ ತನ್ನದೆಲ್ಲವನ್ನೂ ಬಿಟ್ಟು ಭಾರತ ಮಾತೆಗೆ ಸ್ವ ಪ್ರಾಣ ಸಮರ್ಪಣೆ ಗೈಯಲು ಹಿಂಜರಿಯದ ಧೀಮಂತ ಚೇತನಗಳು ಭಾರತೀಯ ಸ್ವಾತಂತ್ರ್ಯ ಸಮರದಲ್ಲಿ ಸೆಣಸಿದ ಅಪ್ರತಿಮ ದೇಶಭಕ್ತರಾದ ಕ್ರಾಂತಿಕಾರಿಗಳು. ತಮಗೇನು ಬೇಡ ಎಲ್ಲವೂ ಭಾರತಾಂಬೆಯ ಮಡಿಲಿಗೆ ಸಮರ್ಪಣೆ ಎಂದ ಈ ವೀರರ ಚರಿತ್ರೆ ಇಂದು ಭಾರತದ ಇತಿಹಾಸದ ಪುಟಗಳಲ್ಲಿ ಅಷ್ಟಾಗಿ ವಿರಾಜಮಾನವಾಗಿ ಶೋಭಿಸುತ್ತಿಲ್ಲವೆಂಬುದು ದುರಂತವೇ ಸರಿ.
ಇಂತಹ ಕ್ರಾಂತಿಕಾರಿಗಳಲ್ಲಿ ಭಾರತಾಂಬೆಯ ಅಸಂಖ್ಯಾತ ವೀರ ಪುತ್ರರನ್ನು ಗುರುತಿಸಬಹುದು. ಅಂತಹವರಲ್ಲಿ ಕಿರೀಟ ಪ್ರಾಯವಾಗಿ ರಾರಾಜಿಸುತ್ತಿರುವವರು ಭಗತ್ ಸಿಂಗ್. ಭಗತ್ ಸಿಂಗ್ ರವರ ಚರಿತ್ರೆಯನ್ನು ಕೆಲವೆಡೆ ಕೇಳಿದರೂ ಇವರಿಗೆ ಹೋರಾಟದಲ್ಲೂ ಮರಣದಲ್ಲೂ ಜೊತೆಯಾಗಿದ್ದ ರಾಜಗುರು ಹಾಗೂ ಸುಖದೇವ್ ರವರ ಕುರಿತು ಪಠ್ಯಪುಸ್ತಕಗಳಲ್ಲಿ ದೊರೆಯುವ ವಿವರಣೆ ಅತ್ಯಲ್ಪ.
ಲಾಹೋರ್ನಲ್ಲಿ ಬ್ರಿಟಿಷ್ ಪೊಲೀಸ್ ಆಫೀಸರ್ ನನ್ನು ಕೊಂದು ರಾಷ್ಟ್ರೀಯವಾದಿ ನಾಯಕ ಲಾಲಾ ಲಜಪತ್ ರಾಯ್ ರವರ ಭೀಕರ ಚಡಿಯೇಟಿನ ಮರಣಕ್ಕೆ ಪ್ರತಿಕ್ರಿಯಿಸಿ ಜಯಭೇರಿ ಬಾರಿಸಿದ ಭಗತ್ ಸಿಂಗ್ ಅವರೊಂದಿಗೆ ರಾಜಗುರು ರವರ ಪಾತ್ರವೂ ಸಂಸ್ಮರಣೀಯ. 1908 ರಲ್ಲಿ ಫುಣೆಯ ಕುಗ್ರಾಮ ಒಂದರಲ್ಲಿ ನೆಲೆಯಾಗಿದ್ದ ಬ್ರಾಹ್ಮಣ ಕುಟುಂಬ ಒಂದರಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಅಲ್ಲಿಯೇ ಪೂರೈಸಿ, ಕ್ರಾಂತಿಕಾರಿ ಪಥಕ್ಕೆ ಅಡಿಯನ್ನಿಟ್ಟವರು ಪಾರ್ವತಿ ದೇವಿ ಹಾಗೂ ಹರಿ ನಾರಾಯಣ ರಾಜಗುರು ರವರ ಈ ಹೆಮ್ಮೆಯ ಸುಪುತ್ರ.
ಬಾಂಬು ತಯಾರಿಕೆ ಎನ್ನುವ ವಿದ್ಯೆಯು ಕೇವಲ ಕೆಲವೇ ಕ್ರಾಂತಿಕಾರಿಗಳಿಗೆ ಕರತಲಾಮಲಕವೆನಿಸಿದ್ದ ಕಾಲವದು. ತನ್ನ ಪ್ರಾಣಾರ್ಪಣೆ ಗೈದಾದರೂ ಈ ವಿದ್ಯೆಯನ್ನು ಜನಜನಿತಗೊಳಿಸಿ ಆಂಗ್ಲರ ಗುಂಡಿಗೆಯನ್ನು ಒಡೆಯಬೇಕೆಂಬ ಉದ್ದೇಶ ಭಗತ್ ಸಿಂಗ್ ರವರದ್ದು. ಅವರೊಂದಿಗೆ ಹೆಜ್ಜೆ ಹಾಕಿದವರು ಬಟುಕೇಶ್ವರ ದತ್ ಹಾಗೂ ರಾಜಗುರು. ಘೋರ ಧ್ವನಿಯೊಂದಿಗೆ ದೇಶವನ್ನು ಪುಟಿದೇಳಿಸುವ ಮಹತ್ಕಾರ್ಯ ಇವರದ್ದಾಗಿತ್ತೆ ಹೊರತು ಜೀವ ಹಾನಿಯ ಗುರಿಯಾಗಿರಲಿಲ್ಲ. ಪಬ್ಲಿಕ್ ಸೇಫ್ಟಿ ಬಿಲ್ ಹಾಗೂ ಟ್ರೇಡ್ ಡಿಸ್ಪ್ಯೂಟ್ ಬಿಲ್‌ಗಳು ಮಂಜೂರಾಗುವುದನ್ನು ಯಶಸ್ವಿಯಾಗಿ ತಡೆದರು. ಅಲ್ಲದೆ ತಮ್ಮ ಮೂಲ ಗುರಿಯಲ್ಲಿ ಇವರು ಸಫಲತೆಯ ಅನುಭವ ಪಡೆದರು.
ಹೆಚ್.ಎಸ್.ಆರ್.ಎ ಎಂಬ ಕ್ರಾಂತಿಕಾರಿ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡ ರಾಜಗುರು ಪಂಜಾಬ್ ನಲ್ಲಿ ಇದರ ಕಾರ್ಯ ಚಟುವಟಿಕೆಯನ್ನು ವಿಸ್ತರಿಸುವತ್ತ ಶ್ರಮಿಸಿದ್ದರಲ್ಲದೆ ಈ ಸಂಘಟನೆಯ ಪ್ರಮುಖರಲ್ಲಿ ಒಬ್ಬರಾಗಿದ್ದರು.
ಮುಂದಿನ ದಿನಗಳಲ್ಲಿ ಲಾಹೋರ್ ಪಿತೂರಿ ಕೇಸಿನಲ್ಲಿ ಇವರನ್ನು ಸೆರೆಮನೆಗೆ ತಳ್ಳಲಾಯಿತಲ್ಲದೆ ಲಾಹೋರ್ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಇವರನ್ನು ಅಪರಾಧಿ ಎಂದು ಪರಿಗಣಿಸಿ ನೇಣುಗಂಬಕ್ಕೇರಿಸಲು ನಿಶ್ಚಯಿಸಲಾಯಿತು. ಅಲ್ಲದೆ ಈ ಸುದ್ದಿಯನ್ನು ರಾಷ್ಟ್ರದಾದ್ಯಂತ ಬಿತ್ತರಿಸಲಾಯಿತು. ಇದರ ಪರಿಣಾಮವೆಂಬಂತೆ ಬಾಂಬ್ ತಯಾರಿಕೆಯ ವಿದ್ಯೆ ರಾಷ್ಟ್ರದಾದ್ಯಂತ ಪಸರಿಸಿತು. ಭಗತ್ ಸಿಂಗ್ ರವರ ಕನಸು ನನಸಾಗಿತ್ತಾದರೂ ಈ ದೇಶ ಹಾಗೂ ಇಲ್ಲಿಯ ಜನತೆ 1931 ಮಾರ್ಚ್ 23 ರಂದು ಈ ಧೀಮಂತ ರಾಷ್ಟ್ರ ಭಕ್ತರನ್ನು ಕಳೆದುಕೊಂಡು ಬಡವಾಯಿತು.
- ಅಭಿಜ್ಞಾ ಉಪಾಧ್ಯಾಯ
ಇತಿಹಾಸ ಪ್ರಾಧ್ಯಾಪಕಿ
SDM ಕಾಲೇಜು (ಸ್ವಾಯತ್ತ) ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ