ವಿಸಿಇಟಿಯ ವಾರ್ಷಿಕ ಕ್ರೀಡಾ ಕೂಟ

Upayuktha
0


ಪುತ್ತೂರು: ಸಮಚಿತ್ತದಿಂದ ನಿರ್ದಿಷ್ಟ ಗುರಿಯನ್ನು ಮುಟ್ಟಲು ಮಾನವನಿಗೆ ದೈಹಿಕ ಸಾಮರ್ಥ್ಯ ಮುಖ್ಯವಾಗಿದೆ. ಈ ದೈಹಿಕ ಸಾಮರ್ಥ್ಯವನ್ನು ಗಳಿಸಿಕೊಳ್ಳಲು ನಿತ್ಯ ಮಿತವಾದ ವ್ಯಾಯಾಮ, ಕ್ರೀಡಾ ಚಟುವಟಿಕೆಗಳು ಅಗತ್ಯ ಎಂದು ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪ್ರೇಮಾ.ಬಿ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಾರ್ಷಿಕ ಕ್ರೀಡಾ ಕೂಟದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಶಿಕ್ಷಣವು ಮಾನವನ ಜೀವನವನ್ನು ರೂಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಅದರಂತೆಯೇ ಕ್ರೀಡೆಗಳೂ ಸಹ ಯಶಸ್ಸಿನ ದೊಡ್ಡ ಮೂಲವಾಗಿದೆ. ಆದರೆ ಕೇವಲ ಸಂಪತ್ತಿನ ಹಿಂದೆ ಓಡುವ ನಾವು ದೈಹಿಕ ಸಮತೋಲನವೂ ಒಂದು ಸಂಪತ್ತೆಂದು ತಿಳಿದುಕೊಳ್ಳದೇ ಇರುವುದು ವಿಪರ್ಯಾಸ ಎಂದರು. ಶಿಕ್ಷಣದೊಂದಿಗೆ ಕ್ರೀಡೆಗೂ ಸಮಾನ ಮಹತ್ವವನ್ನು ನೀಡುವುದರ ಜತೆಯಲ್ಲಿ ಯುವಜನತೆ ದೇಶದ ಪ್ರಜ್ಞಾವಂತ ನಾಗರಿಕರಾಗುವಂತೆ ಅವರು ಕರೆ ನೀಡಿದರು.


ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಮಾತನಾಡಿ ನಿರಂತರ ಪ್ರೋತ್ಸಾಹ, ಉತ್ತಮ ತರಬೇತಿ ಹಾಗೂ ಉನ್ನತ ಸಾಧನೆ ಇದ್ದಾಗ ನಾವು ಖಂಡಿತವಾಗಿಯೂ ಮೇಲ್ಮಟ್ಟಕ್ಕೆ ಏರಬಲ್ಲೆವು ಎಂದರು.  ಸತತ ಮೂರು ವರ್ಷಗಳಿಂದ ನಮ್ಮ ಕಾಲೇಜಿನ ತಂಡವು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಚಾಂಪಿಯನ್ ಆಗಿರುವುದೇ ಇದಕ್ಕೆ ಉದಾಹರಣೆ ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೊಭಾವವನ್ನು ಎಲ್ಲರೂ ಬೆಳೆಸಿಕೊಂಡರೆ ಸಣ್ಣ ಸಣ್ಣ ವಿಷಯಗಳಿಗೆ ಧೃತಿಗೆಡುವ ಪ್ರಮೇಯವು ಬರಲಾರದು ಎಂದರು. ಉತ್ತಮ ಕ್ರೀಡಾಪಟುವಾಗಬೇಕಾದರೆ ಸಮತೋಲಿತ ಆಹಾರ, ಪರಿಶ್ರಮದ ಅಭ್ಯಾಸ ಅಗತ್ಯ ಎಂದರು. ವಿದ್ಯಾರ್ಥಿಗಳ ಕ್ರೀಡಾ ಸಾಧನೆಯ ಹಿಂದೆ ಅನೇಕರ ಪರಿಶ್ರಮವಿದೆ ಅವರೆಲ್ಲರೂ ಅಭಿನಂದನಾರ್ಹರು ಎಂದರು.


ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು, ತರಬೇತಿ ಮತ್ತು ನೇಮಕಾತಿ ವಿಭಾಗ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್, ವಿಧ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಚೇತನ್.ಪಿ.ಡಿ ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಆಕರ್ಷಕ ಪಥ ಸಂಚಲನವನ್ನು ಮಾಡಿದ ತಂಡಗಳನ್ನು ಗುರುತಿಸಿ ಗೌರವಿಸಲಾಯಿತು. ಇದರಲ್ಲಿ ಎಂಸಿಎ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಹಾಗೂ ಎಂಬಿಎ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.


ಅನ್ವಿತ್.ಬಿ.ಎನ್ ಪ್ರತಿಜ್ಞಾವಿಧಿ ಬೋಧಿಸಿದರು, ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕದ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಾದ ವಿದ್ಯಾ.ಸಿ.ಎಸ್, ಭುವನ್ ರಾಂ, ದೀಕ್ಷಿತಾ, ಅನಘಾ, ವರ್ಷಿತಾ, ಅರ್ಪಿತಾ, ಭುವನ್ ಕುಮಾರ್ ಮತ್ತು ಜೀವನ್ ಕ್ರೀಡಾ ಜ್ಯೋತಿಯನ್ನು ಮುಖ್ಯ ಅತಿಥಿಗಳಿಗೆ ಹಸ್ತಾಂತರಿಸಿ ಜ್ಯೊತಿಯನ್ನು ಬೆಳಗಿದರು. ಸನ್ಮಿತ್ ಸ್ವಾಗತಿಸಿ, ಅನೂಷಾ.ಎ ವಂದಿಸಿದರು.



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top