ವಿಜ್ಞಾನದ ಬಗೆಗೆ ಆಸಕ್ತಿ ಮೂಡಿದಾಗ ಹೊಸ ಅನ್ವೇಷಣೆ ಸಾಧ್ಯ : ಗಣೇಶ್ ಪ್ರಸಾದ್

Chandrashekhara Kulamarva
0



ಪುತ್ತೂರು: ವೈಜ್ಞಾನಿಕ ಮನೋಭಾವ, ಹಾಸ್ಯ ಪ್ರಜ್ಞೆ, ಸಮಯಪ್ರಜ್ಞೆಯನ್ನು ಹೊಂದಿದ್ದಂತಹಾ ಮಹಾನ್ ವ್ಯಕ್ತಿ ಸರ್ ಸಿ ವಿ ರಾಮನ್. ಅವರು ಸಂಶೋಧಿಸಿದ ರಾಮನ್ ಎಫೆಕ್ಟ್ ವಿಶ್ವಕ್ಕೆ ಅಮೂಲ್ಯ ಕೊಡುಗೆ. ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿಕೊಂಡರೆ ಹೊಸ ಆಲೋಚನೆ, ಆವಿಷ್ಕಾರದ ಕಡೆ ಗಮನ ಹರಿಸಲು ಸಾಧ್ಯ. ವಿಜ್ಞಾನ  ಕ್ಷೇತ್ರಕ್ಕೆ ಸಿ ವಿ ರಾಮನ್ ಕೊಡುಗೆಯನ್ನು ವಿದ್ಯಾರ್ಥಿಗಳು  ಪ್ರೇರಣೆಯಾಗಿರಿಸಿಕೊಂಡು ಮುಂದಿನ ದಿನಗಳಲ್ಲಿ ಹೊಸ ಆವಿಷ್ಕಾರಕ್ಕೆ ಕಾರಣೀಕರ್ತರಾಗಬೇಕು ಎಂದು ಬಪ್ಪಳಿಗೆಯಲ್ಲಿನ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದ ಉಪಪ್ರಾಂಶುಪಾಲ ಗಣೇಶ ಪ್ರಸಾದ್ ಡಿ.ಎಸ್. ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಶುಕ್ರವಾರ ಆಚರಿಸಲಾದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 


ವಿಜ್ಞಾನ ಶಿಕ್ಷಕಿ ಗೌರಿ ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವವನ್ನು ತಿಳಿಸುತ್ತಾ, ಕನಸು ಕಂಡರೆ ಸಾಲದು ಅದನ್ನು ಸಾಕಾರಗೊಳಿಸುವ ಚೈತನ್ಯ ಹೊಂದಿರಬೇಕು. ಪ್ರತಿಯೊಂದು ವಿಚಾರಕ್ಕೂ ಯಾಕೆ, ಹೇಗೆ ಎಂಬ ಪ್ರಶ್ನೆ ಮಾಡುತ್ತಾ ಹೋದಾಗ ವೈಜ್ಞಾನಿಕ ಚಿಂತನೆ ನಮ್ಮದಾಗುತ್ತದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ವಿದ್ಯಾಲಯದ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಮಾತನಾಡಿ ವಿಜ್ಞಾನ ನಮ್ಮ ದಿನ ನಿತ್ಯದ ಅಂಶಗಳಲ್ಲಿ ಹಾಸುಹೊಕ್ಕಾಗಿದೆ. ಇಂದು ಜಗತ್ತು ಎಐ ಯುಗ ದಲ್ಲಿದೆ,  ಮುಂದೊಂದು ದಿನ ಎಐಯ ಪ್ರಭಾವದಿಂದ ಜಗತ್ತನ್ನು ರಕ್ಷಿಸಬೇಕಾದರೆ ನಮ್ಮ ದೇಶದ ಆಧ್ಯಾತ್ಮಿಕತೆಯಿಂದ ಮಾತ್ರ ಸಾಧ್ಯ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾದ ವಿಚಾರದ ಬಗೆಗೆ ಗಮನ ಸೆಳೆದರು. 


ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಏರ್ಪಡಿಸಿದ್ದ ತರಗತಿವಾರು ವಿಜ್ಞಾನ ಮಾದರಿ, ರಸಪ್ರಶ್ನೆ, ಪಿ ಪಿ ಟಿ  ಹಾಗೂ ವಿಜ್ಞಾನ ಪ್ರಯೋಗ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಆಸಕ್ತ ವಿದ್ಯಾರ್ಥಿಗಳು ಉತ್ಸುಕತೆಯಿಂದ ವಿಜ್ಞಾನ ಮಾದರಿಯನ್ನ ತಯಾರಿಸಿ ಪ್ರದರ್ಶಿಸಿದರು. ವಿದ್ಯಾರ್ಥಿನಿ ತನ್ವಿ ಬಿ ಸ್ವಾಗತಿಸಿ, ಯಶಿಕಾ ರೈ ವಂದಿಸಿದರು. ಧನ್ವಿ ಜಿ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಶ್ರೀವತ್ಸ ವಿಠ್ಠಲ ಭಟ್ ವಿಜ್ಞಾನ ದಿನದ ಪ್ರಯುಕ್ತ ಭಾಷಣಗೈದರು.



Post a Comment

0 Comments
Post a Comment (0)
To Top