ಬಿಜೆಪಿ ಶಾಸಕರನ್ನು ಸಸ್ಪೆಂಡ್‌ ಮಾಡಿದ ಸ್ಪೀಕರ್‌ ನಡೆ ಖಂಡನೀಯ: ಸಂಸದ ಕ್ಯಾ. ಚೌಟ

Upayuktha
0

ಗುತ್ತಿಗೆ ಮೀಸಲಾತಿ ಮಸೂದೆ :  ಡಾ. ಅಂಬೇಡ್ಕರ್  ಮತ್ತು ಸಂವಿಧಾನವನ್ನು ಕಾಂಗ್ರೆಸ್ ಇನ್ನೆಷ್ಟು ಅವಮಾನಿಸುತ್ತದೆ?



ನವದೆಹಲಿ: ರಾಜ್ಯದಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ನೀಡುವ ಮಸೂದೆ ಸಂವಿಧಾನ ವಿರೋಧಿಯಾಗಿದ್ದು, ಸ್ವತಃ ಡಾ.ಬಿ.ಆರ್‌. ಅಂಬೇಡ್ಕರ್‌ ಅವರೇ ಧರ್ಮಾಧಾರಿತ ಮೀಸಲಾತಿಯನ್ನು ವಿರೋಧಿಸಿದ್ದರು. ಇದೇ ವಿಚಾರವಾಗಿ ಸದನದಲ್ಲಿ ತಮ್ಮ ಧ್ವನಿಯೆತ್ತಿರುವುದಕ್ಕೆ 18 ಮಂದಿ ಶಾಸಕರನ್ನು ಸಸ್ಪೆಂಡ್‌ ಮಾಡಿರುವುದು ಅತ್ಯಂತ ಖಂಡನೀಯವಾಗಿದ್ದು, ಮೂಲಕ ಕಾಂಗ್ರೆಸ್‌ ಸರ್ಕಾರ ಸಂವಿಧಾನಕ್ಕೆ ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ದೊಡ್ಡ ಅಪಚಾರವೆಸಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಹೇಳಿದ್ದಾರೆ.


ಮುಸ್ಲಿಮರಿಗೆ ಶೇ.4 ರಷ್ಟು ಮೀಸಲು ಮಸೂದೆ ಅಂಗೀಕಾರ ಹಾಗೂ ಬಿಜೆಪಿಯ ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಿರುವ ಸ್ಪೀಕರ್‌ ಕ್ರಮವನ್ನು ಕಟುವಾಗಿ ವಿರೋಧಿಸಿರುವ ಕ್ಯಾ. ಚೌಟ ಅವರು, ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡ 4ರಷ್ಟು ಮೀಸಲಾತಿ ಕಲ್ಪಿಸುವ ಕರ್ನಾಟಕ ಸರ್ಕಾರದ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದು ಮಾತ್ರವಲ್ಲದೇ ಎಲ್ಲ ಹಂತಗಳಲ್ಲಿ ಬಿಜೆಪಿ ಹೋರಾಟ ಮಾಡಲಿದೆ ಎಂದು ತಿಳಿಸಿದ್ದಾರೆ.


ಈ ಮಸೂದೆಯು ಸಮಾಜವನ್ನ ವಿಭಜಿಸುವ, ಪ್ರತೇಕಿಸುವ ಬಿಲ್ ಆಗಿದೆ. ಕಾಂಗ್ರೆಸ್‌ ಇಂಥಹ ಜಾತಿ ಓಲೈಕೆಯ ಕಾನೂನು ರೂಪಿಸಿ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ಜತೆಗೆ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ಸಮುದಾಯದವರ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರ ಮಾಡಿದೆ. ಓಟಿನ ರಾಜಕಾರಣಕ್ಕೆ ಜೋತುಬಿದ್ದಿರುವ ಸಿದ್ದರಾಮಯ್ಯ ಸರ್ಕಾರ ಈಗ ಮುಸ್ಲಿಂ ಮೀಸಲಾತಿ ತಂದು ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡಲು ಹೊರಟಿದೆ. 


ಅಂತಹ ಧರ್ಮವಿರೋಧಿ, ಸಮಾಜ ಒಡೆಯುವ ಮಸೂದೆಯನ್ನು ವಿರೋಧಿಸುವುದು ಸದನದ ಅಗೌರವಕ್ಕೆ ತರುವ ಕೆಲಸವೇ? ಅಂದರೆ, ಒಂದು ಸಮುದಾಯದವರನ್ನು ಓಲೈಸುವುದಕ್ಕೆ ಅಂಬೇಡ್ಕರ್‌ ಅವರ ತತ್ವಾದರ್ಶಗಳನ್ನೂ ಗಾಳಿಗೆ ತೂರಿ ಸಂವಿಧಾನ ಪೀಠವನ್ನು ದುರುಪಯೋಗ ಮಾಡಿಕೊಂಡು ಈ ರೀತಿ ಬಿಜೆಪಿ ಶಾಸಕರ ಮೇಲೆ ದಬ್ಬಾಳಿಕೆ, ಸರ್ವಾಧಿಕಾರಿ ಧೋರಣೆ ತೋರುವುದನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತದೆ ಎಂದು ಕ್ಯಾ. ಚೌಟ ತಿಳಿಸಿದ್ದಾರೆ.


ಈ ಹಿಂದೆ ಕಾಂಗ್ರೆಸ್‌ ಶಾಸಕರು ಕಲಾಪ ನಡೆಯುತ್ತಿದ್ದ ವೇಳೆ ಯಾವ ರೀತಿ ದುವರ್ತನೆ ತೋರಿದ್ದಾರೆ ಎಂಬುದನ್ನು ಈ ರಾಜ್ಯದ ಜನತೆ ಮರೆತಿಲ್ಲ. ಖುದ್ದು ಸಿಎಂ ಸಿದ್ದರಾಮಯ್ಯನವರೇ ಸದನದೊಳಗೆ ತೊಡೆತಟ್ಟಿ ನಿಂತು ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಲು ಪ್ರಯತ್ನಿಸಿರುವುದು ರಾಜ್ಯದ ಇತಿಹಾಸದಲ್ಲಿ ದಾಖಲಾಗಿರುವುದನ್ನು ಇದೇ ಕಾಂಗ್ರೆಸ್‌ನವರು ಮರೆತಿದ್ದಾರೆಯೇ?  ಹೀಗಿರುವಾಗ, ಸದನದಲ್ಲಿ ಕೇವಲ ಘೋಷಣೆ ಕೂಗಿ ಸಂವಿಧಾನ ವಿರೋಧಿ ಮಸೂದೆಯನ್ನು ವಿರೋಧಿಸಿದ ಕಾರಣಕ್ಕೆ 18 ಶಾಸಕರನ್ನು ಯಾವುದೇ ಸದನ ತನಿಖೆಗೂ ಆದೇಶ ಮಾಡದೆ ಏಕಾಏಕಿ ಅಮಾನತುಗೊಳಿಸುತ್ತಾರೆ.


ಅಂದರೆ ಅದು ಯಾವ ನ್ಯಾಯ? ಹೀಗಾಗಿ, ಸ್ಪೀಕರ್‌ ಅವರು ಯಾರನ್ನೋ ಖುಷಿಪಡಿಸುವುದಕ್ಕೆ ಅಥವಾ ರಕ್ಷಣೆ ಮಾಡುವುದಕ್ಕೆ ನಮ್ಮ ಪಕ್ಷದ ಶಾಸಕರ ಮೇಲೆ ಗಧಾಪ್ರಹಾರ ಮಾಡಿದ್ದಾರೆ. ಸ್ಪೀಕರ್‌ ಅವರ ಈ ಪಕ್ಷಪಾತಿ ತೀರ್ಮಾನದ ವಿರುದ್ಧ ಹಾಗೂ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲು ಮಸೂದೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟ ಮಾಡುವುದಾಗಿ ಕ್ಯಾ. ಚೌಟ ಹೇಳಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top