ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ

Upayuktha
0



ಮೂಡುಬಿದಿರೆ: ಜಾಗತೀಕರಣದ ಪ್ರಭಾವದಿಂದಾಗಿ ಯುವಜನರ ಓದಿನ ಆಯ್ಕೆ ರೀತಿ ಬದಲಾಗಿದೆ. ಏನು ಕೂಡಾ ಬರೆಯಬಹುದೆನ್ನುವ ಸ್ಥಿತಿಗೆ ತಲುಪಿರುವ ಈ ಸಂಕೀರ್ಣ ಸಂದರ್ಭದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸುವ ಹೊಣೆಗಾರಿಕೆಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಸವಾಲು ನಮ್ಮ ಮುಂದಿದೆ ಎಂಬುದಾಗಿ ಉಡುಪಿಯ ಶಿವರಾಮ ಕಾರಂತ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಜಾನಪದ ವಿದ್ವಾಂಸರೂ ಆಗಿರುವ ಡಾ ಡಾ. ಗಣನಾಥ ಎಕ್ಕಾರು ಹೇಳಿದರು. ಕಾಂತಾವರ ಕನ್ನಡ ಸಂಘದ ಮುದ್ದಣ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಕನ್ನಡ ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆಯವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸುತ್ತಾ ಕನ್ನಡ ಕೆಲಸವನ್ನು ಮಾಡುವ ಸಂಘವನ್ನು ಸರಕಾರ ಕಡೆಗಣಿಸುತ್ತಿರುವುದಕ್ಕೆ ಖೇದ ವ್ಯಕ್ತಪಡಿಸಿದರು.


ಕಲಬುರ್ಗಿಯ ಕಾವ್ಯಶ್ರೀ ಮಹಾಗಾಂವಕರ್ ಹಾಗೂ ಉಡುಪಿಯ ಪೂರ್ಣಿಮಾ ಸುರೇಶ್ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಹಾಗೂ ಮಂಗಳೂರಿನ  ಸರ್ಪಂಗಳ ಈಶ್ವರ ಭಟ್, ಅವರಿಗೆ ಗಮಕ ಕಲಾ ಪ್ರವಚನ ಪ್ರಶಸ್ತಿ, ಯಜ್ಞೇಶ ಆಚಾರ್ಯ ಸುರತ್ಕಲ್ ಅವರಿಗೆ ಗಮಕ ಕಲಾ ವಾಚನ ಪ್ರಶಸ್ತಿ ಮತ್ತು ರಥಶಿಲ್ಪಿ ಶಂಕರ ಆಚಾರ್ಯ ಕೋಟೇಶ್ವರ ಅವರಿಗೆ ಕಾಷ್ಠ ಶಿಲ್ಪ ಕಲಾ ದತ್ತಿ ಪ್ರಶಸ್ತಿಗಳನ್ನು ಸಭಾಧ್ಯಕ್ಷತೆಯನ್ನು ವಹಿಸಿದ್ದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪ್ರದಾನಿಸಿದರು. 


ಐದೂ ಪ್ರಶಸ್ತಿಗಳು ತಲಾ ಹತ್ತು ಸಾವಿರದ ಗೌರವ ಸಂಭಾವನೆ, ಮಾನಪತ್ರ ಹಾಗೂ ಸನ್ಮಾನವನ್ನೊಳಗೊಂಡಿದೆ. ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಐದು ನೂತನ ಕೃತಿಗಳನ್ನು ಮತ್ತು ಮುದ್ದಣ ಕಾವ್ಯ ಪ್ರಶಸ್ತಿ ಪಡೆದ ಎರಡು ಕೃತಿಗಳನ್ನು ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕರಾದ ಸೂರ್ಯನಾರಾಯಣ ಭಟ್ ಲೋಕಾರ್ಪಣೆಗೊಳಿಸಿ ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಮುಖಾಂತರ ಮಹಾನ್ ವ್ಯಕ್ತಿಗಳ ಸಾಧನೆಗಳನ್ನು ಇಲ್ಲಿ ಚಿರಸ್ಮರಣೀಯಗೊಳಿಸಲಾಗಿದೆ ಎಂದರು.


ಇದೇ ಸಂದರ್ಭದಲ್ಲಿ ಉಡುಪಿಯ ಹಿರಿಯ ಜಾನಪದ ಗಾಯಕರಾದ ಶಂಕರದಾಸ್ ಚೆಂಡ್ಕಳ ಅವರಿಂದ ಕನ್ನಡ ಗೀತಗಾಯನ ಕಾರ್ಯಕ್ರಮ ನೆರವೇರಿತು. ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


ನಾಡಿಗೆ ನಮಸ್ಕಾರ ಗ್ರಂಥಮಾಲೆಯಲ್ಲಿ ಲೋಕಾರ್ಪಣೆಗೊಂಡ ಕೃತಿಗಳು ಮತ್ತು ಲೇಖಕರು.

1. ಶಿಕ್ಷಣ ತಜ್ಞ ಎಸ್.ಜಿ. ಕೃಷ್ಣ (ಲೇ: ಡಾ. ಜಿ.ಎಸ್.ಹೆಗ್ಡೆ, ಹಡಿನಬಾಳ) 2. ಭರತನಾಟ್ಯ ವಿದುಷಿ ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್ (ಲೇ : ಕೋಡಿಬೆಟ್ಟು ರಾಜಲಕ್ಷ್ಮಿ) 3. ಹಿರಿಯ ಸಾಹಿತಿ ಡಾ. ವಸಂತ ಕುಮಾರ್ ಪೆರ್ಲ (ಲೇ : ಕೆ. ರಾಧಾಕೃಷ್ಣ ಉಳಿಯತ್ತಡ್ಕ ) 4. ಜಾನಪದ ವಿದ್ವಾಂಸ ಡಾ. ಗಣನಾಥ ಎಕ್ಕಾರು (ಲೇ : ಡಾ. ದುಗ್ಗಪ್ಪ ಕಜೆ) 5. ಪ್ರಸಿದ್ಧ ಲೇಖಕಿ ಡಾ. ಪ್ರಮೀಳಾ ಮಾಧವ ಚೇವಾರು, ಕಾಸರಗೋಡು (ಲೇ : ಡಾ. ಮೀನಾಕ್ಷಿ ರಾಮಚಂದ್ರ). 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top