ಜೀವನದ ಪ್ರತಿ ಹಂತದಲ್ಲಿಯೂ ಉದ್ದೇಶದ ಅರಿವಿರಲಿ: ಸುರೇಶ್ ಕಾಮತ್

Upayuktha
0



ಮೂಡುಬಿದಿರೆ; ‘ಶಿಕ್ಷಣ ವ್ಯವಸ್ಥೆಯ ಆರಂಭದಲ್ಲೆ, ಒಬ್ಬ ವ್ಯಕ್ತಿಯಾಗಿ ತನ್ನ ಜೀವನದ ಉದ್ದೇಶವೇನೆಂಬುದನ್ನು ಅರಿಯಬೇಕು’ ಎಂದು ಕೋಟೇಶ್ವರದ ರಾಜಾರಾಮ್ ಪೋಲಿಮರ್ಸ್ ಸಂಸ್ಥೆಯ ಸ್ಥಾಪಕ ಸುರೇಶ್ ಕಾಮತ್ ಹೇಳಿದರು.


ಆಳ್ವಾಸ್(ಸ್ವಾಯತ್ತ) ಕಾಲೇಜಿನ ಮ್ಯಾನೇಜ್‌ಮೆಂಟ್ ವಿಭಾಗದ ವತಿಯಿಂದ ಹಮ್ಮಿಕೊಂಡ ಎಂತುಝಿಯಾ ಕೋರ್ಪೊ ಕನೆಕ್ಟ್ ಫೆಸ್ಟ್ ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೀವನದಲ್ಲಿ ಗುರಿಯನ್ನು ಆರಂಭದಲ್ಲೆ ಅರಿಯುವುದು ಉತ್ತಮ. ಪ್ರತಿ ಕೆಲಸದಿಂದ ಬರುವ ಅನುಭವದಿಂದ ಬದುಕನ್ನು ಶ್ರೇಷ್ಠತೆಯೆಡೆಗೆ ಒಯ್ಯುವ ಕೆಲಸವಾಗಬೇಕಿದೆ ಎಂದರು.  


ಮುಖ್ಯಅತಿಥಿ ನೆಲೆಯಲ್ಲಿ ಮಾತನಾಡಿದ ಯುವ ಪ್ರತಿನಿಧಿ ಮಿಥುನ್ ರೈ, ವೃತ್ತಿಪರ ಜೀವನವನ್ನು ಅತ್ಯುತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಮ್ಯಾನಜ್ಮೆಂಟ್ ಪದವಿ ಸೂಕ್ತ ಆಯ್ಕೆ.  ಎಲ್ಲವನ್ನು ಪರಿಶ್ರಮದಿಂದ ಕಲಿಯಬೇಕು. ಸವಾಲುಗಳನ್ನು ಎದುರಿಸಿ ಮುನ್ನಡೆಯುವವ ನಿಜವಾದ ನಾಯಕನೆನಿಸಿಕೊಳ್ಳಬಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ ಅದನ್ನು ತಾವೇ ಗುರುತಿಸಿಕೊಳ್ಳಬೇಕು ಹಾಗೂ ಉಪನ್ಯಾಸಕರು ಸರಿಯಾದ  ಮಾರ್ಗದರ್ಶನ ನೀಡಬೇಕು ಎಂದರು. 


ದಶಕಗಳ ಹಿಂದೆ ತಾನು ಪದವಿ ವಿದ್ಯಾರ್ಥಿಯಾಗಿದ್ದಾಗ  ಆಯೋಜಿಸಿದ ಅಂತರಾಷ್ಟ್ರೀಯ ಸಮ್ಮೇಳನ ಯಶಸ್ಸನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.  ಏಷ್ಯಾ ಖಂಡದ ಹಲವು ದೇಶಗಳ ಪ್ರತಿನಿಧಿಗಳು ಪಾಲ್ಗೊಂಡು, ಸರ್ವರಿಂದಲೂ ಪ್ರಶಂಸೆಗೆ ಪಾತ್ರವಾದ ಸನ್ನಿವೇಶ ತನ್ನ ಮುಂದಿನ ಬದುಕಿಗೆ ನಾಯಕತ್ವವಹಿಸಲು ಸಹಕರಿಯಾದದ್ದನ್ನು ಸ್ಮರಿಸಿದರು. ತನ್ನ ಸಹಪಾಠಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವರ ಕಾಲೇಜು ದಿನಗಳಲ್ಲಿನ ನಾಯಕತ್ವ ಗುಣವನ್ನು ಕೊಂಡಾಡಿದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ಅರಳುವಂತೆ ಮಾಡಲು ಆಳ್ವಾಸ್ ನೀಡುತ್ತಿರುವ ಪ್ರೋತ್ಸಾಹವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.  


ಇನ್ನೊರ್ವ ಮುಖ್ಯ ಅತಿಥಿ ಹಾಗೂ ಯುವ ಪ್ರತಿನಿಧಿ ನಂದನ್ ಮಲ್ಯ ಮಾತನಾಡಿ, ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳುವ ಸ್ವಾತಂತ್ರ‍್ಯ ಪ್ರತಿಯೊಬ್ಬರಿಗೂ ಇದೆ. ಕನಸುಗಳನ್ನು ಕಟ್ಟಿಕೊಂಡಲ್ಲಿ ಮಾತ್ರ ಯಶಸ್ಸನ್ನು ಕಾಣುತ್ತೇವೆ. ಸೋಲು ಯಶಸ್ಸಿನ ಭಾಗ, ಹೊರತು ಪ್ರತಿಸ್ಪರ್ಧಿಯಲ್ಲ. ಅವಕಾಶಗಳ ಬಳಸುವಿಕೆಯಲ್ಲಿ ಫಲಿತಾಂಶವನ್ನು ಕಾಣಬಹುದು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಅನುಭವಗಳಿಂದ ಶ್ರೇಷ್ಠ ಪಾಠವನ್ನು ಕಲಿಯಬೇಕು. ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯವಲ್ಲ. ಅದರಿಂದ ಲಭಿಸುವ ಅನುಭವ ಮುಖ್ಯ ಎಂದರು. ಎಂತುಝಿಯಾ ಕೋರ್ಪೊ ಕನೆಕ್ಟ್ ಫಸ್ಟ್ನ ಪೋಸ್ಟರ್ ಬಿಡುಗಡೆ ನಡೆಯಿತು. 

 

ಕಾರ್ಯಕ್ರಮದಲ್ಲಿ   ಪದವಿ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್, ಸಂಯೋಜಕಿ ಅಕ್ಷತಾ ಪ್ರಭು, ಸಂಯೋಜಕ ಸುಹಾಸ್ ಶೆಟ್ಟಿ, ವಿದ್ಯಾರ್ಥಿ ಸಂಯೋಜಕ ಪ್ರಾಣೇಶ್ ಶೆಟ್ಟಿ ಮತ್ತು ವಿಧಿತ್ ಜೈನ್ ಇದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಸಾಥ್ವಿಕ್ ಸ್ವಾಗತಿಸಿ, ಸಾಗರ್ ವಂದಿಸಿ, ವಿದ್ಯಾರ್ಥಿನಿ ವೃಂದ ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top