ಮಾರ್ಚ್ 30 ರಿಂದ ಏಪ್ರಿಲ್ 7: ಭಂಡಾರಕೇರಿ ಮಠದಲ್ಲಿ ಶ್ರೀ ರಾಮನವಮಿ ಮಹೋತ್ಸವ

Upayuktha
0

  • ಹಲವು ವಿದ್ವನ್ ಮಣಿಗಳ ಸಮಾಗಮ
  • ಪ್ರವಚನ, ಸಂಗೀತ,‌ ನೃತ್ಯ ಮತ್ತು ಅಮೃತೋಪದೇಶ ಆಯೋಜನೆ
  • ಶ್ರೀ ವಿದ್ಯೇಶ ತೀರ್ಥರ ಸಾರಥ್ಯ




ಬೆಂಗಳೂರು: ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀ ಭಂಡಾರ ಕೇರಿ ಮಠದಲ್ಲಿ ರಾಮ ನವಮಿ ಸಂಭ್ರಮಕ್ಕೆ ವೇದಿಕೆ ಸನ್ನದ್ಧವಾಗಿದೆ. ಯುಗಾದಿ, ನವ ಸಂವತ್ಸರ ದಿನದಿಂದ ದಶಮಿ ಪರ್ಯಂತ ಶ್ರೀ ಮಠದಲ್ಲಿ ಧಾರ್ಮಿಕ ಸಾಂಸ್ಕೃತಿಕ ಮತ್ತು ಜ್ಞಾನಕಾರಕ 10 ಹಲವು ವೈವಿಧ್ಯಗಳು ಮೇಳೈಸಲಿವೆ.



22ನೇ ವರ್ಷದ ಶ್ರೀ ರಾಮನವಮಿ ಮಹೋತ್ಸವದ ಅಂಗವಾಗಿ ಮಾರ್ಚ್ 30 ರಿಂದ ಏಪ್ರಿಲ್ 7 ರವರೆಗೆ ವಿಶೇಷ ಕಾರ್ಯಕ್ರಮಗಳನ್ನು ಮಠ  ಆಯೋಜಿಸಿದೆ. ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ  ತೀರ್ಥ ಸ್ವಾಮೀಜಿ ಸಾನಿಧ್ಯದಲ್ಲಿ ಪ್ರತಿದಿನವೂ ವಿಭಿನ್ನವಾದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಚಿಂತನಾತ್ಮಕ ಕಾರ್ಯಕ್ರಮಗಳು ಭಕ್ತರಿಗೆ ರಂಜನೆ- ಬೋಧನೆಯೊಂದಿಗೆ ಭಕ್ತಿ ಭಾವಗಳನ್ನು ಪ್ರಚೋದಿಸಲಿದೆ. ಮಾ. 30ರ ಸಂಜೆ 5:30ಕ್ಕೆ ಶ್ರೀಮದ್ ರಾಮಾಯಣದ ಪ್ರೇರಣದಾಯಕ ಚಿಂತನೆ ಕಾರ್ಯಕ್ರಮಗಳು ಬಾಲಕಾಂಡದಿಂದ ಆರಂಭಗೊಳ್ಳಲಿದ್ದು, ಹಿರಿಯ ವಿದ್ವಾಂಸ ಡಾ. ಸತ್ಯ ನಾರಾಯಣಾಚಾರ್ಯ ಅವರು ಪ್ರವಚನ ಮಾಲಿಕೆಗೆ ಚಾಲನೆ ನೀಡಲಿದ್ದಾರೆ.


ಏ. 7ರವರೆಗೆ ಪ್ರತಿದಿನವೂ ಸಂಜೆ 5.30ಕ್ಕೆ ವಿವಿಧ ವಿದ್ವಾಂಸರಿಂದ ಚಿಂತನ- ಮಂಥನ ಸರಣಿ ಪ್ರವಚನ ನೆರವೇರಲಿದೆ. ಹಿರಿಯ ವಿದ್ವಾಂಸರಾದ ಆನಂದತೀರ್ಥಾಚಾರ್ಯ ವೆಂಕಟೇಶ ಆಚಾರ್ಯ ನಾಗರಾಜ ಆಚಾರ್ಯ ವಿಜಯಸಿಂಹ ಆಚಾರ್ಯ ಶ್ರೀನಿಧಿ ಮಾಶಿಷ್ಠ ಮತ್ತು ನಾಗೇಂದ್ರ ಆಚಾರ್ಯ ಅವರು ಶ್ರೀಮದ್ ರಾಮಾಯಣದ ವಿಶೇಷ ಪ್ರಸಂಗ ಸನ್ನಿವೇಶ ಮತ್ತು ಸಂದೇಶಗಳನ್ನು ಪಾಂಡಿತ್ಯ ಪೂರ್ಣ ಉಪನ್ಯಾಸದ ಮೂಲಕ ಹೊರ ಹೊಮ್ಮಿಸಲಿದ್ದಾರೆ. ನಂತರ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಶಿಖರಪ್ರಾಯ ಅಮೃತೋಪದೇಶ ನೀಡಲಿದ್ದಾರೆ. ಏಪ್ರಿಲ್ 3ರ ಸಂಜೆ 5:30ಕ್ಕೆ ಗಾಯಕರಾದ ಅಕ್ಷಯ್ ಮತ್ತು ಅಭಿಷೇಕ್ ಸಂಗಡಿಗರು ಶ್ರೀ ವಿದ್ಯೇಶ ವಿಠಲಾಂಕಿತ ಕೃತಿಗಳ ಗಾಯನ ಕಚೇರಿ ನಡೆಸಿಕೊಡಲಿದ್ದಾರೆ.


ನರ್ತನ ವೈಭವ: 

ಏ. 4ರ ಸಂಜೆ 5:30ಕ್ಕೆ ಮಯೂರಿ ನಾಟ್ಯಶಾಲೆಯ ವಿದುಷಿ ಪ್ರಜ್ಞಾ ಹರಿದಾಸ ಭಟ್ ಶಿಷ್ಯರು ಶ್ರೀ ವಿದ್ಯೇಶ ವಿಠಲ ಅಂಕಿತ ಕೃತಿಗಳನ್ನು ಆಧರಿಸಿ ನೃತ್ಯೋತ್ಸವ ಪ್ರಸ್ತುತ ಪಡಿಸಲಿದ್ದಾರೆ. 10 ಕಲಾವಿದರು 7 ಕೃತಿಗಳಿಗೆ ನರ್ತನ ಮಾಡುತ್ತಿರುವುದು ವಿಶೇಷವಾಗಿದೆ‌. 


ರಥೋತ್ಸವ: 

ಶ್ರೀ ರಾಮನವಮಿ ಪ್ರಯುಕ್ತ ಏ. 6 ರಂದು ಶ್ರೀಮಠದಲ್ಲಿ ಬೆಳಗ್ಗೆ 7.30 ರಿಂದ ಶ್ರೀ ಕೋದಂಡರಾಮ ದೇವರಿಗೆ ಪಂಚಾಮೃತ ಅಭಿಷೇಕ, ನಂತರ ಸಂಸ್ಥಾನ ಪೂಜೆ, ಸಂಜೆ 6 ಕ್ಕೆ ರಂಗ ಪೂಜೆ, 7ಕ್ಕೆ ಕೋದಂಡರಾಮ ದೇವರ ರಥೋತ್ಸವ ಸಂಪನ್ನಗೊಳ್ಳಲಿದೆ. ಏಪ್ರಿಲ್ 7ರಂದು ಮಠದಲ್ಲಿ ಬೆಳಗಿನ ಅವಧಿಯಲ್ಲಿ ಶ್ರೀ ರಾಮ ತಾರಕ ಹೋಮ ಮತ್ತು ಸಂಜೆ ಶ್ರೀಮದ್ ರಾಮಾಯಣ ಪ್ರವಚನ ಮಂಗಳ ಮಹೋತ್ಸವ ನೆರವೇರಲಿದೆ‌. ಭಕ್ತರು ಆಗಮಿಸಬೇಕು ಎಂದು ಶ್ರೀ ಭಂಡಾರಕೇರಿ ಮಠದ ಪ್ರಕಟಣೆ ತಿಳಿಸಿದೆ. ವಿವರಗಳಿಗೆ 99728362 05 ಸಂಪರ್ಕಿಸಲು ಕೋರಲಾಗಿದೆ.



ಮಹರ್ಷಿ ವಾಲ್ಮೀಕಿ ಅವರಿಂದ ರಚಿತಗೊಂಡ ಶ್ರೀಮದ್ ರಾಮಾಯಣವು ವಿಶ್ವ ಪರಂಪರೆಗೆ ಮಹತ್ತರ ಆದರ್ಶವನ್ನು ಪ್ರತ್ಯಕ್ಷವಾಗಿ ತೋರಿಸಿದ ಮಹೋನ್ನತ ಕೃತಿ. ಶ್ರೀರಾಮಚಂದ್ರ ಇಡೀ ಜಗತ್ತಿನ ಮೇರು ಮರ್ಯಾದಾ ಪುರುಷೋತ್ತಮ. ಶ್ರೀ ರಾಮನವಮಿ ಸಂದರ್ಭದಲ್ಲಿ ನಾಡಿನ ಭಕ್ತ ಸಮುದಾಯಕ್ಕೆ ಸರಳ ಮತ್ತು ಸುಲಭವಾಗಿ ತಿಳಿಯುವ ಬಹು ಮಾಧ್ಯಮದ ಮೂಲಕ ರಾಮಾಯಣದ ಸಂದೇಶಗಳನ್ನು ತಲುಪಿಸಲು ಹೆಮ್ಮೆ ಮತ್ತು ಸಂಭ್ರಮ ಎನಿಸುತ್ತದೆ.

- ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ.

ಪೀಠಾಧಿಪತಿ, ಭಂಡಾರ ಕೇರಿ ಮಠ.






ಧರ್ಮ, ಸಂಸ್ಕೃತಿ, ಭಾಷೆ ಮತ್ತು ಪರಂಪರೆಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ನೂರಾರು ಭಕ್ತಿ ಕೃತಿಗಳನ್ನು ರಚಿಸಿದ್ದಾರೆ. ಅವುಗಳನ್ನು ನೃತ್ಯಕ್ಕೆ ಸಂಯೋಜಿಸಿ ನರ್ತನ ಮಾಡುವುದು ಒಂದು ಸವಾಲು. ಕೃತಿ ಒಳಗಿರುವ ಅರ್ಥವನ್ನು ತಿಳಿದುಕೊಳ್ಳಲು ನಾನು ಅನೇಕ ಪ್ರವಚನ ಗಳನ್ನು ಕೇಳಿದೆ. ನನ್ನ ತಂದೆ ವಿದ್ವಾನ್ ಹರಿದಾಸ ಭಟ್ಟರಲ್ಲಿ ಸಾಕಷ್ಟು ಚರ್ಚೆಗಳನ್ನು ಮಾಡಿದೆ. ವಿದುಷಿ ಶುಭಾ ಸಂತೋಷ್  ಸಂಗೀತ ಸಂಯೋಜನೆಯಲ್ಲಿ ಈಗಾಗಲೇ ಮೂಡಿಬಂದಿರುವ ಕೃತಿಗಳಲ್ಲಿ ಕೆಲವಾರು ನೃತ್ಯಕ್ಕೂ ಹೊಂದುವ ಹಾಗೆ ಇದೆ. ಕೃತಿಯ ಆಳ, ಅಗಲ, ವಿಸ್ತಾರ ತಿಳಿದು ನರ್ತನದ ಮೂಲಕ ಭಾವ ಹೊಮ್ಮಿಸುವುದು ರಾಮ ನವಮಿಯ ಸಂದರ್ಭದಲ್ಲಿ ವಿಶೇಷ ಸುಕೃತವಾಗಿದೆ.

- ವಿದುಷಿ ಪ್ರಜ್ಞಾ ಕಿಶೋರ್.

ಮಯೂರಿ ನಾಟ್ಯಶಾಲೆ ನಿರ್ದೇಶಕಿ. ಬೆಂಗಳೂರು.



ವರದಿ: ಶಿವಮೊಗ್ಗ ರಾಮ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top