ಮಂಗಳೂರು: ವಿಜ್ಞಾನ ಸಂವಹನ ಕಾರ್ಯಾಗಾರ

Upayuktha
0


ಮಂಗಳೂರು:  ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಬಿ.ಎಸ್ಸಿ ಮತ್ತು ಬಿ.ಎಡ್.  ವಿದ್ಯಾರ್ಥಿಗಳಿಗೆ ಒಂದು ದಿನದ ‘ವಿಜ್ಞಾನ ಸಂವಹನ’ ಕಾರ್ಯಾಗಾರ ಆಯೋಜಿಸಲಾಗಿತ್ತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಇಸ್ರೋದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿಯ ನಿವೃತ್ತ ಗ್ರೂಪ್ ಡೈರೆಕ್ಟರ್ ಎಚ್.ಡಿ.ಆನಂದ್ ಮಾತನಾಡಿ, ವಿದ್ಯಾರ್ಥಿಗಳು ಯಾವತ್ತೂ ಉನ್ನತ ಗುರಿಗಳನ್ನು ಇಟ್ಟುಕೊಳ್ಳಬೇಕು. ಗುರಿಯ ಈಡೇರಿಕೆಗೆ ಸರಿಯಾದ ಪರಿಶ್ರಮವನ್ನು ಮಾಡಬೇಕು. ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ ಗೆಲುವಿಗೆ ಪ್ರಯತ್ನ ಮಾಡುತ್ತಿರಬೇಕೆಂದರು. ವೈಜ್ಞಾನಿಕ ಮನೋಭಾವದಿಂದ ಪ್ರಶ್ನೆಗಳನ್ನು ಸತತವಾಗಿ ಚರ್ಚಿಸುವುದು ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗುತ್ತದೆ ಎಂಬ ಕಿವಿಮಾತನ್ನು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಮಾತನಾಡಿ, ಬದಲಾವಣೆಯ ಗಾಳಿ ಭರದಿಂದ ಬೀಸುತ್ತಾ ಇದೆ. ವಿಜ್ಞಾನ ಹೊಸ ಹೊಸ ಆಯಾಮಗಳನ್ನು ಸೃಷ್ಟಿಸುತ್ತಾ ಇದೆ. ಅವುಗಳನ್ನು ಆಯಾಯ ಕಾಲಘಟ್ಟದಲ್ಲಿ ನಾವು ತಿಳಿದುಕೊಳ್ಳಬೇಕು. ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು. ಪ್ರಥಮ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿ  ಕೊಳ್ಳೆಗಾಲ ಶರ್ಮ ಇವರಿಂದ ಶಿಕ್ಷಣದಲ್ಲಿ ಕೃತಕ ಬುದ್ದಿಮತ್ತೆಯ ಬಗ್ಗೆ ವಿವರಣೆ ಮತ್ತು ಪ್ರಾತ್ಯಕ್ಷಿಕೆಗಳು ನಡೆದವು. ನಂತರದ ಉಪನ್ಯಾಸದಲ್ಲಿ ಹೆಚ್.ಡಿ.ಆನಂದ ಅವರು ಇಸ್ರೋದ ಬೆಳವಣಿಗೆ ಹಾಗೂ ಉಪಗ್ರಹಗಳ ಉಡಾವಣೆಗಳ ಬಗ್ಗೆ ಮಾಹಿತಿಗಳನ್ನು ನೀಡಿದರು. ಅಪರಾಹ್ನದ ಅವಧಿಯಲ್ಲಿ ಕೃತಕ ಬುದ್ಧಿಮತ್ತೆಯ ಉಪಯೋಗಗಳು ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್ ಬಗ್ಗೆ ಪ್ರಾತ್ಯಕ್ಷಿಕೆಗಳು ನಡೆದವು.


ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಕಾರ್ಯಾಗಾರದ ಅಂಶಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿಜ್ಞಾನ ವಿಷಯದ ರೀಲ್ಸ್ ಬಗ್ಗೆ ನಡೆದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್ ಸ್ವಾಗತಿಸಿದರು. ಕೇಂದ್ರದ ಕ್ಯುರೇಟರ್ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು. ಇನ್ನೊವೇಶನ್ ಹಬ್‍ನ ಮೆಂಟರ್ ಅಂಬಿಕಾ ವಂದಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top