'ಜಯಂತಭಟ್ಟನ ಆಗಮಡಂಬರ’ ಎಂಬ ಸಂಸ್ಕೃತ ನಾಟಕವನ್ನು ಪ್ರಪ್ರಥಮ ಬಾರಿಗೆ ಕನ್ನಡಕ್ಕೆ ಸಿ.ಜಿ. ವಿಜಯಸಿಂಹ ಆಚಾರ್ಯ ಅವರು ಅನುವಾದಿಸಿದ್ದಾರೆ.
ಭಾರತೀಯ ದರ್ಶನದ ಇತಿಹಾಸವನ್ನು ನೋಡಿದರೆ ಮುಖ್ಯವಾಗಿ ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವಾಮೀಮಾಂಸ ಶಾಸ್ತ್ರ, ಉತ್ತರ ಮೀಮಾಂಸ ಶಾಸ್ತ್ರಗಳೆಂಬ ಷಡ್ದರ್ಶನಗಳನ್ನು ನೋಡಬಹುದು. ವೇದ-ಸಂಹಿತೆ ಬ್ರಾಹ್ಮಣ ಆರಣ್ಯಕ ಉಪನಿಷತ್ತುಗಳನ್ನು ಆಧಾರವಾಗಿಟ್ಟುಕೊಂಡು ವೈದಿಕ ಧರ್ಮವನ್ನು ಸನಾತನವಾಗಿ ನೋಡಬಹುದು.
ಕಾಲಾಂತರದಲ್ಲಿ ಈ ವೈದಿಕ ತತ್ವಗಳನ್ನು ವಿರೋಧಿಸುವ ಮತಗಳು ಉದಯಿಸಿತು. ಬೌದ್ಧರು, ಜೈನರು, ಆಜೀವಕರು, ಚಾರ್ವಾಕರು ಮುಂತಾದವರು ಸಮಾಜದಲ್ಲಿ ಮುನ್ನೆಲೆಗೆ ಬಂದರು.
ವೇದ ಪ್ರಾಮಾಣ್ಯವನ್ನು ಅಂಗೀಕರಿಸುವುದರಿಂದ ವೈದಿಕ ದರ್ಶನಗಳನ್ನು ಆಸ್ತಿಕದರ್ಶನಗಳು ಎಂದು ಕರೆದರೆ, ಅವೈದಿಕ ಅಂದರೆ ವೈದಿಕ ತತ್ವಗಳನ್ನು ವಿರೋಧಿಸುವ ಸಿದ್ದಾಂತಗಳನ್ನು ನಾಸ್ತಿಕದರ್ಶನಗಳು ಎಂದು ಕರೆದರು. ಈ ಎರಡು ಪ್ರಧಾನ ದರ್ಶನಗಳ ನಡುವೆ ಪರಸ್ಪರ ವಾದ-ವಿವಾದ- ಚರ್ಚೆ -ವಿಮರ್ಶೆ- ಖಂಡನ -ಮಂಡನ ನಡೆಯಲು ಪ್ರಾರಂಭಗೊಂಡಿತು. ಜೊತೆಯಲ್ಲಿ ನಾನಾ ಪಂಥಗಳು, ಆಗಮ ಸಿದ್ಧಾಂತಗಳು, ತಂತ್ರ ಮಾರ್ಗಗಳು, ಭಕ್ತಿ ಸಿದ್ಧಾಂತಗಳು ಬೆಳೆದವು. ಇದರಿಂದ ಮೂಲ ವೈದಿಕ ಧರ್ಮಕ್ಕೆ ಹಾನಿಯಾದಾಗ ವೈದಿಕ ಧರ್ಮವನ್ನು ಎತ್ತಿ ಹಿಡಿಯಲು ಅನೇಕ ಸಾಧಕರು ಪ್ರಯತ್ನಿಸಿದರು. ಅಂತಹ ಒಬ್ಬ ಸಾಧಕ, ಜಯಂತ ಭಟ್ಟ. ಅವನ ನಾಟಕಕೃತಿ 'ಆಗಮ ಡಂಬರ'.
ಇದು 9ನೇ ಶತಮಾನದ ನಾಟಕ. ಈತ ನ್ಯಾಯ ಶಾಸ್ತ್ರ ಪ್ರವೀಣ. ನ್ಯಾಯ ಶಾಸ್ತ್ರಕ್ಕೆ ಮುಖ್ಯ ಗ್ರಂಥ ಗೌತಮರ ನ್ಯಾಯ ಸೂತ್ರಗಳು. ಜಯಂತ ಭಟ್ಟ ಈ ನ್ಯಾಯ ಸೂತ್ರಗಳಿಗೆ ನ್ಯಾಯ ಮಂಜರಿ ಎಂಬ ವ್ಯಾಖ್ಯಾನ ಗ್ರಂಥವನ್ನು ಬರೆದನು. ಆದರೆ ಅದಕ್ಕಿಂತ ಮುಖ್ಯವಾಗಿ ಈತ ನಾಟಕ ಸಾಹಿತ್ಯದ ಮೂಲಕ ಸುಂದರ ಭಾಷೆಯಲ್ಲಿ ಅವೈದಿಕ ಮತಗಳನ್ನು ತೀಕ್ಷ್ಣವಾಗಿ ವಿಮರ್ಶೆ ಮಾಡಿದ್ದಾನೆ. ಜನಸಾಮಾನ್ಯರಿಗೆ ವೈದಿಕ ಧರ್ಮದ ಮಹತ್ವವನ್ನು ತಿಳಿಸಲು ಪ್ರಯತ್ನಿಸುತ್ತಾನೆ.
ಈ ಕೃತಿಯನ್ನು ನಾವು ಯಾಕಾಗಿ ಅಧ್ಯಯನ ಮಾಡಬೇಕು?
1. ಮೂಲ ಕೃತಿ ಸಂಸ್ಕೃತದಲ್ಲಿ ಇರುವುದರಿಂದ, ಅದರ ಕನ್ನಡ ಅನುವಾದದ ಸೌಂದರ್ಯವನ್ನು ಈ ಕೃತಿಯಲ್ಲಿ ನೋಡಬಹುದು.
2. ಈ ನಾಟಕವು ತತ್ವಶಾಸ್ತ್ರವನ್ನು ತಿಳಿಯ ಬಯಸುವ ಎಲ್ಲರಿಗೂ ಪ್ರವೇಶಿಕೆಯಾಗಿ ನಿಲ್ಲುತ್ತದೆ. ವೇದಾಂತ ಸಾಮ್ರಾಜ್ಯದಲ್ಲಿ ಅದ್ವೈತ ಸ್ಥಾಪನೆಯಾದ ಹೊಸ್ತಿಲಲ್ಲೇ ಅದ್ವೈತ ಮತ್ತು ವಿಶಿಷ್ಟಾದೈತ ಸ್ಥೂಲ ಹಾಗೂ ತತ್ವವಾದ ಸ್ಥಾಪನೆಯಾಗುವ ಮುನ್ನ ಭಾರತದಲ್ಲಿ ಷಣ್ಮತಗಳದರ್ಶನ ಹಾಗೂ ಅಂದಿನ ಕಾಲದ ಬೌದ್ಧಿಕಮಟ್ಟವನ್ನು ಸ್ಥೂಲವಾಗಿ ಪರಿಚಯಿಸುತ್ತದೆ.
3. ಇಲ್ಲಿ ಬೌದ್ಧ, ಚಾರ್ವಾಕ, ನೈಯಾಯಿಕ, ನಾಸ್ತಿಕ, ಹೀಗೆ ಅನೇಕ ಮತಗಳ ವಿಮರ್ಶೆಯನ್ನು ಕಾಣಬಹುದು.
4. ಈ ಕೃತಿಯಲ್ಲಿ ವೇದ- ಆಗಮಗಳ ಪ್ರಾಮಾಣಿಕತೆಯ ಬಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ಪ್ರಸ್ತುತಪಡಿಸಲಾಗಿದೆ. ಇದು ಸಜ್ಜನರ ನಂಬಿಕೆಗಳನ್ನು ಪ್ರಶ್ನಿಸುವಂತೆ ಮಾಡುತ್ತದೆ ಮತ್ತು ತಾತ್ವಿಕ ಚರ್ಚೆಗಳನ್ನು ಹುಟ್ಟುಹಾಕುತ್ತದೆ.
5. ಈ ನಾಟಕ ಅಧ್ಯಯನ ಮಾಡುವುದರಿಂದ ಬೌದ್ಧರು ಭಾರತವನ್ನು ತೊರೆಯಲು ಯಾರು ಕಾರಣರಾದರು ಎನ್ನುವುದು ಐತಿಹಾಸಿಕವಾಗಿ ಸ್ಪಷ್ಟವಾಗುತ್ತದೆ.
6. ಆ ಕಾಲದಲ್ಲಿ ಪ್ರಚಲಿತವಾಗಿದ್ದ ಎಲ್ಲ ಅವೈದಿಕ-ನಾಸ್ತಿಕ್ಯಮತಗಳ ವಿಮರ್ಶೆ, ಅಲ್ಲಿಂದ ವೇದ-ಆಗಮಗಳ ಪ್ರಮಾಣ್ಯವನ್ನು ಸ್ಥಾಪಿಸಿ ಜಯಭೇರಿ ಬಾರಿಸಿದ ಪೂರ್ಣಚಿತ್ರವನ್ನು ಕಾಣಬಹುದು.
7. ಯಾರೇ ಒಬ್ಬ ವಿದ್ಯಾರ್ಥಿ ತತ್ವಶಾಸ್ತ್ರಕ್ಕೆ ಪ್ರವೇಶ ಪಡೆಯಬೇಕಿದ್ದರೆ, ಮತತ್ರಯಗಳು ಕಾಲಿಡುವ ಮುನ್ನ ವಿದ್ವತ್ ಪ್ರಪಂಚದ ಬೌದ್ಧಿಕ ಚಿತ್ರಣವನ್ನು ಅರಿಯುವುದು ತುಂಬ ಮುಖ್ಯವಾಗುತ್ತದೆ ಹಾಗು ತತ್ವಶಾಸ್ತ್ರದ ಪಯಣದಲ್ಲಿ ಮುಂದಿನ ಅಧ್ಯಯನಕ್ಕೂ ಈ ಕೃತಿ ಉಪಯುಕ್ತವಾಗಿದೆ.
8. ತುಲನಾತ್ಮಕ ಅಧ್ಯಯನಕ್ಕೆ ಈ ಕೃತಿ ಒಂದು ಮಾದರಿಯಾಗಿ ನಿಲ್ಲುತ್ತದೆ. ಇದು ನಮ್ಮನ್ನು ಸತ್ಯದೆಡೆಗೆ ಹೇಗೆ ಕರೆದುಕೊಂಡು ಹೋಗುತ್ತದೆ ಎನ್ನುವುದನ್ನು ಗಮನಿಸಬಹುದು.
9. ವಿಮರ್ಶೆಯ ವಿವಿಧ ಹಂತ ಮತ್ತು ಬೆಳವಣಿಗೆಗಳನ್ನು ಇಲ್ಲಿ ಗಮನಿಸಬಹುದು.
10. ಯಾವುದೇ ಕಾಲಕ್ಕೂ ಯಾವುದೇ ಒಂದು ಮತ ಇರುತ್ತದೆ ಎಂಬ ಕಲ್ಪನೆ ಅಸಾಧ್ಯ. ಎಲ್ಲಾ ಕಾಲದಲ್ಲಿಯೂ ವೈವಿಧ್ಯತೆ ಇದ್ದೇ ಇರುತ್ತದೆ. ವೈವಿಧ್ಯತೆಯೊಂದಿಗೆ ನಾವು ಹೇಗೆ ಕೂಡಿ ಬಾಳಬೇಕು, ನಮ್ಮ ಚಿಂತನೆ, ನಮ್ಮ ನಡೆ ಹೇಗೆ ಇರಬೇಕು ಎಂದು ತಿಳಿಸುತ್ತದೆ.
11. ಸನಾತನ ವೈದಿಕ ಮತದ ಪುನರುತ್ಥಾನಕ್ಕೆ ಹಿಂದಿನವರು ಎಷ್ಟು ಶ್ರಮ ಪಟ್ಟರು, ಎಷ್ಟು ದೈಹಿಕ ಮಾನಸಿಕ ಹಿಂಸೆಗಳನ್ನು ತಡೆದುಕೊಂಡರು, ಕೊನೆಗೆ ವೈದಿಕ ಧರ್ಮದ ವಿಜಯಪತಾಕೆಯನ್ನು ಹೇಗೆ ಹಾರಿ ಸಿದರು ಎಂಬುದನ್ನು ಗಮನಿಸಬಹುದು.
12. ವೈದಿಕ ದರ್ಶನದ ಶ್ರೇಷ್ಠತೆಯ ವಿಚಾರಗಳನ್ನು ಕೃತಿಯ ಆದ್ಯಂತಗಳಲ್ಲಿ ನೋಡಬಹುದು. ನಾಟಕಕೃತಿಯ ಕಡೆಯಲ್ಲಿ ಬರುವ ಕ್ಲೈಮ್ಯಾಕ್ಸ್ (ಕೊನೆಯ ದೃಶ್ಯ) ಅದ್ಭುತವಾಗಿದೆ.
ಹೀಗೆ ಹಲವು ರೀತಿಯಲ್ಲಿ ಈ ಕೃತಿ ಹಿಂದೂ ಸಮಾಜಕ್ಕೆ ಅಗತ್ಯ ಮತ್ತು ಅವಶ್ಯವಾಗಿ ಬೇಕು. ಆದ್ದರಿಂದಲೇ ಈ ಕೃತಿ ಎರಡು ಬಾರಿ ಬಿಡುಗಡೆಯನ್ನು ಹೊಂದಿದೆ. ಮೊದಲಿಗೆ ಉಡುಪಿಯಲ್ಲಿ ಪರ್ಯಾಯ ಶ್ರೀಪಾದಂಗಳವರಾದ ಶ್ರೀಶ್ರೀ ಸುಗುಣೇಂದ್ರ ತೀರ್ಥರು ಮತ್ತು ಶ್ರೀಶ್ರೀ ಸುಶ್ರೀಂದ್ರ ತೀರ್ಥರ ಮೂಲಕ ಶ್ರೀಕೃಷ್ಣನಿಗೆ ಅರ್ಪಣೆಯಾದರೆ, ಇನ್ನೊಂದು ಬಾರಿ ಬೆಂಗಳೂರಿನ ಶ್ರೀಪುತ್ತಿಗೆಯ ಮಠದ ಗೋವರ್ಧನಗಿರಿ ಕ್ಷೇತ್ರದಲ್ಲಿ ಕ್ಷತ್ರಿಯ ಪೀಠದ ವಿದ್ಯಾ ರಾಜೇಶ್ವರ ತೀರ್ಥರು, ಪ್ರಕಾಶ್ ಬೆಳವಾಡಿ, ರೋಹಿತ್ ಚಕ್ರತೀರ್ಥ ಇವರುಗಳಿಂದ ಲೋಕಾರ್ಪಣೆಗೊಂಡಿತು.
ನಮ್ಮ ಕೃಷ್ಣ ಕೈಯಲ್ಲಿ ಹಿಡಿದುಕೊಂಡದ್ದು ಮಥನ ಮಾಡುವ ಕಡೆಗೋಲನ್ನು. ಆಚಾರ್ಯ ಮಧ್ವರು ಯಾಕೆ ವೇಣುಗೋಪಾಲ ಅಥವಾ ಇತರ ಭಂಗಿಯ ಕೃಷ್ಣನನ್ನು ಸ್ಥಾಪಿಸದೆ, ಕಡೆಗೋಲನ್ನು ಹಿಡಿದಿರುವ ಕೃಷ್ಣನನ್ನು ಸ್ಥಾಪಿಸಿದರು ಎಂದರೆ...
ನಾವು ಕಡೆಯಬೇಕು. ನಾವು ಮಥಿಸಬೇಕು. ಯಾವುದನ್ನು? ಶಾಸ್ತ್ರ -ಸಿದ್ಧಾಂತ -ಮತ- ನಂಬಿಕೆಗಳನ್ನು.
ಯಾವುದು ಪ್ರಮಾಣ ಪೂರ್ವಕವಾಗಿ ಸಾತ್ವಿಕವಾಗಿ ಇದೆಯೋ ಅವನು ಮಾತ್ರ ಸ್ವೀಕರಿಸಬೇಕು. ಅದನ್ನೇ ಆಚಾರ್ಯ ಮಧ್ವರು ತಮ್ಮ ಸರ್ವಮೂಲ ಗ್ರಂಥಗಳಲ್ಲಿ ತೋರಿಸಿ ಕೊಟ್ಟಿರುವುದು. ಇದೇ ರೀತಿಯಾದಂತಹ ಕೆಲಸ ಆ ಕಾಲದಲ್ಲಿಯೂ ಜಯಂತ ಭಟ್ಟನ ಆಗಮ ಡಂಬರ ಎಂಬ ಕೃತಿಯಿಂದಲೂ ನಡೆದಿತ್ತು. ಈಗಲೂ ಮಂಥನ ನಡೆಯಬೇಕಿದೆ. ಹಾಗಾಗಿ ಈ ಕೃತಿ ಎರಡೆರಡು ಬಾರಿ ಕೃಷ್ಣನಿಗೆ ಅರ್ಪಣೆಯಾಗಿ, ಶಾಸ್ತ್ರದ ಮಥನದ ಮಹತ್ವವನ್ನು ತಿಳಿಸುತ್ತದೆ. ಜಿಜ್ಞಾಸುಗಳೆಲ್ಲರೂ ಅವಶ್ಯವಾಗಿ ಓದಲೇಬೇಕಾದ ಕೃತಿ ಇದು.
ಪುಸ್ತಕದ ಬೆಲೆ : ₹150 (ಅಂಚೆ ವೆಚ್ಚ ಪ್ರತ್ಯೇಕ)
ಪ್ರತಿಗಳು ಬೇಕಿದ್ದಲ್ಲಿ ಸಂಪರ್ಕಿಸಿ
ಬೆಂಗಳೂರು: 9148832207
ಉಡುಪಿ: 9482414444
- ಓಂಪ್ರಕಾಶ್ ಭಟ್, ಉಡುಪಿ
9964025922
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ