ಶುಭ ನುಡಿ: ತೆನೆ ತುಂಬಿದಾಗ ಪೈರು ಬಾಗುತ್ತದೆ

Upayuktha
0


ಜೀವಜಗತ್ತಿನಲ್ಲಿ ಬೆಳಕನ್ನು ಕಂಡ ಮೇಲೆ ನಮ್ಮದೇ ಆದ ಕೆಲವು ಕರ್ತವ್ಯಗಳಿವೆ. ಅದು ಇನ್ನೊಬ್ಬರು ಹೇಳಿಕೊಟ್ಟು ಬರುವುದಲ್ಲ. ನಾವೇ ಸುತ್ತಮುತ್ತಲಿನ ವ್ಯವಹಾರವನ್ನು, ಆಗು-ಹೋಗುಗಳನ್ನು ನೋಡಿ, ಕೇಳಿ ಕಲಿಯಬೇಕು. ದುಷ್ಟರಿಗೆ ಮಣೆಯ ಹಾಕದೆ ಒಳ್ಳೆಯವರ ಸ್ನೇಹದಲ್ಲಿರಬೇಕು. ಧರ್ಮಕ್ಕೆ ಚ್ಯುತಿ ಬಾರದಂತಿರಬೇಕು. ನಮ್ಮ ದೇಶದಲ್ಲಿ ಹುಟ್ಟಿ ಬಂದ ಅನೇಕ ಜನರು ದೇಶಕ್ಕಾಗಿ, ಸತ್ಯನಿಷ್ಠೆಗಾಗಿ ಮಹಾನ್ ತ್ಯಾಗವನ್ನು, ತಮ್ಮ ಜೀವವನ್ನೇ ಬಲಿಕೊಟ್ಟವರಿದ್ದಾರೆ. ಸತ್ಯಕ್ಕೆ, ನ್ಯಾಯಕ್ಕೆ, ಧರ್ಮಕಾರ್ಯಗಳಿಗೆ ಚ್ಯುತಿ ಬಂದಾಗ ಖಂಡಿಸಿದವರಿದ್ದಾರೆಂಬುದು ಇತಿಹಾಸದ ಪುಟಗಳಲ್ಲಿ ಓದಿದ್ದೇವೆ.


ಉಪಕಾರ ಸ್ಮರಣೆ ಬಹಳ ದೊಡ್ಡ ಗುಣ. ಅವರೆಲ್ಲರ ಆದರ್ಶಗಳ ನೆರಳಿನಡಿಯಲ್ಲಿ ಬದುಕುತ್ತಿರುವವರು ನಾವು. ಒಂದಷ್ಟು ಉತ್ತಮ ಅಂಶಗಳನ್ನು ಮೈಗೂಡಿಸಿಕೊಳ್ಳೋಣ. ಮೂರ್ಖರ ಗೆಳೆತನ ಸಲ್ಲದು. ಕನ್ನಡಿಯನ್ನು ಬಳಸುವವನಿಗೆ ಕೊಟ್ಟರೆ ಅದರ ಉಪಯೋಗವಾಗಬಹುದು. ಕಣ್ಣುಕಾಣದವಗೆ ಕೊಟ್ಟರೆ ಪ್ರಯೋಜನವಿಲ್ಲ. ಹಾಗೆ ನಮ್ಮ ಕಾರ್ಯ ಕ್ಷೇತ್ರ ಸಹ ಉಪಯೋಗವಿದ್ದವರೊಂದಿಗಿದ್ದರೆ ಒಳ್ಳೆಯದು.


ಹತ್ತು ಮಂದಿ ಒಳ್ಳೆಯವ ಎಂದಾಗ, ಎರಡು ಮಂದಿ ಕೆಟ್ಟವ ಎನ್ನುವವರ ನಡುವೆ ನಾವಿದ್ದೇವೆ.'ತೆನೆ ತುಂಬಿದಾಗ ಪೈರು ಬಾಗುತ್ತದೆ' ಅದು ಅದರ ಗುಣ. ನಾವು ಸಹ ಬಾಗ ಬೇಕಾದಲ್ಲಿ ಬಾಗೋಣ. ಸಮಾಜ ಎಂದ ಮೇಲೆ ಧಾನ್ಯದಲ್ಲಿ ಜಳ್ಳುಗಳಿದ್ದಂತೆ. ಅದನ್ನು ಹಾರಿಸಿ ಬಿಡೋಣ. ಯಾರು ಏನೆಂದರೂ ನಾವು ನಾವಾಗಿರೋಣ. ಟೀಕೆಗಳಿಗೆ ಹಿಮ್ಮೆಟ್ಟದೆ ಮುಂದಡಿಯಿಡುವವರಾಗಬೇಕು.


ಕ್ಷಾರ ಜಲಂ ವಾರಿಮುಚ: ಪಿಬಂತಿ

ತದೇವ ಕೃತ್ವಾ ಮಧುರಂ ತ್ಯಜಂತಿ

ಸಂತ: ತಥಾ ದುರ್ಜನ ದುರ್ವಚಾಂಸಿ

ಪೀತ್ವಾ ಚ ಸೂಕ್ತಾನಿ ಸಮುದ್ಗಿರಂತಿ


ಸಾಗರದ ನೀರು  ಅಳತೆಗೆ ನಿಲುಕದು. ರುಚಿಯಲ್ಲಿ ಉಪ್ಪಾದರೂ ಅದು ಆವಿಯಾಗಿ ಮಳೆಯ ಮೋಡವಾಗಿ ಭೂಮಿಗೆ ಮಳೆಯಾಗಿ ಸುರಿಯುತ್ತದೆ. ಆ ನೀರು ಸಿಹಿಯಾಗಿರುತ್ತದೆ. ಅದೇ ರೀತಿ ಸಜ್ಜನರು ದುಷ್ಟ ಮನದವರ ಟೀಕೆಗಳನ್ನು ಸ್ವೀಕಾರ ಮಾಡುತ್ತಾ, ಉತ್ತಮೋತ್ತಮ ವಿಚಾರಗಳನ್ನು, ಒಳ್ಳೆಯ ಮಾರ್ಗದರ್ಶನವನ್ನು ಲೋಕಮುಖಕ್ಕೆ ನೀಡಿ ಸಹಕರಿಸುತ್ತಾರೆ. ನಮ್ಮಿಂದ ಸಾಧ್ಯವಿದ್ದಷ್ಟೂ ಒಳ್ಳೆಯದನ್ನು ಸಮಾಜಕ್ಕೆ ನೀಡೋಣ.


- ರತ್ನಾ ಕೆ ಭಟ್, ಪುತ್ತೂರು

(ಆಕರ: ಸಂಸ್ಕೃತ ಸುಭಾಷಿತ ಭಂಡಾರ)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top