ನಿತ್ಯ ಜೀವನದಲ್ಲಿ ಕನಿಷ್ಠ 10 ಬಾರಿಯಾದರೂ ರಾಮಮಂತ್ರ ಜಪಿಸುವಂತೆ ಪೇಜಾವರ ಶ್ರೀ ಕರೆ
ಉಡುಪಿ: ಈ ಬಾರಿಯ ಶ್ರೀರಾಮನವಮೀ ಅಂಗವಾಗಿ ಉಡುಪಿ ಶ್ರೀ ಪೇಜಾವರ ಶ್ರೀಪಾದರು ಎಪ್ರಿಲ್ 9 ರಿಂದ 13 ರವರೆಗೆ ಪುಣ್ಯಸ್ಥಳ ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಂಡ ವೈಭವದ ಭಕ್ತಿ ಸಿದ್ಧಾಂತೋತ್ಸವ ಮತ್ತು ರಾಮೋತ್ಸವದ ಅಂಗವಾಗಿ ಮಾರ್ಚ್ 15 ರಿಂದ 30ರ ವರೆಗೆ ಹಮ್ಮಕೊಂಡಿದ್ದ ದಶಕೋಟಿ ರಾಮತಾರಕ ಮಂತ್ರ ಜಪಯಜ್ಞ ಭಾನುವಾರ ಸಂಪನ್ನಗೊಂಡಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಯೋಜನೆ ಸಹಕಾರದೊಂದಿಗೆ ನಡೆದ ಈ ಜಪಯಜ್ಞದಲ್ಲಿ ಉಡುಪಿ ಜಿಲ್ಲೆಯ 45 ಸಾವಿರಕ್ಕೂ ಅಧಿಕ ಮಂದಿ ರಾಮಭಕ್ತರು15 ದಿನಗಳ ಕಾಲ ರಾಮಮಂತ್ರ ಜಪಿಸಿರುವುದು ಮತ್ತು ಇದಲ್ಲದೇ ಅನೇಕ ಖಾಸಗಿ ಶಾಲೆಗಳ ಸಾವಿರಾರು ಮಕ್ಕಳೂ ಭಾಗವಹಿಸಿರುವುದು ಅತ್ಯಂತ ಸಂತಸದ ಸಂಗತಿ.
ಇದರ ಸಮರ್ಪಣಾಂಗ ಬೃಹತ್ ರಾಮತಾರಕ ಮಂತ್ರ ಯಾಗವು ಎಪ್ರಿಲ್ 13 ರಂದು ಪೆರಣಂಕಿಲ ದಲ್ಲಿ ನಡೆಯಲಿದ್ದು ಭಾಗವಹಿಸಿದ ಸರ್ವರೂ ಅಲ್ಲಿ ಬಂದು ತಾವು ನಡೆಸಿದ ಜಪವನ್ನು ಶ್ರೀ ರಾಮದೇವರಿಗೆ ಅರ್ಪಿಸಿ, ಪ್ರಸಾದ ಮತ್ತು ಭೋಜನ ಪ್ರಸಾದ ಸ್ವೀಕರಿಸುವಂತೆ ಮತ್ತು ಅಂದು ಅಪರಾಹ್ಣ 3.30 ರಿಂದ 20ಕ್ಕೂ ಅಧಿಕ ಸಾಧು ಸಂತರ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಸಂತ ಸಂಗಮ- ಹಿಂದು ಸಮಾವೇಶದಲ್ಲೂ ಉಪಸ್ಥಿತರಿದ್ದು ಸಂತರಿಂದ ರಾಮೋತ್ಸವದ ಸಂದೇಶವನ್ನು ಕಂಡು ಕೇಳಿ ತೆರಳಬೇಕೆಂದು ಭಕ್ತಿ ಸಿದ್ಧಾಂತೋತ್ಸವ ರಾಮೋತ್ಸವ ಸಮಿತಿ ಮತ್ತು ಪೇಜಾವರ ಮಠದ ದಿವಾನರು ಪೆರಣಂಕಿಲ ದೇವಸ್ಥಾನದ ವ್ಯವಸ್ಥಾಪನಾಧಿಕಾರಿಗಳು ವಿನಂತಿಸಿದ್ದಾರೆ.
ನಿತ್ಯವೂ ರಾಮಜಪ ಮಾಡಿ: ಪೇಜಾವರ ಶ್ರೀ
15 ದಿನಗಳ ಕಾಲ ಹಮ್ಮಿಕೊಂಡ ದಶಕೋಟಿ ರಾಮಜಪಯಜ್ಞ ಸಂಪನ್ನಗೊಂಡಿದ್ದರೂ ಇದರಲ್ಲಿ ಪಾಲ್ಗೊಂಡ ಮತ್ತು ಕಾರಣಾಂತರಗಳಿಂದ ಭಾಗವಹಿಸದೇ ಇರುವ ಸಮಸ್ತರೂ ನಿತ್ಯ ಜೀವನದಲ್ಲೂ ಎಷ್ಟೇ ಬ್ಯುಸಿ ಇದ್ದರೂ ತಾವೂ ಕನಿಷ್ಢ 10 ಬಾರಿಯಾದರೂ ರಾಮಜಪ ನಡೆಸುವುದಲ್ಲದೇ ಮನೆಯವರೆಲ್ಲರೂ (ಮಕ್ಕಳೂ ಸೇರಿದಂತೆ) ಜಪವನ್ನು ಮಾಡುವಂತೆ ಆ ಮೂಲಕ ರಾಮಜಪ ನಮ್ಮೆಲ್ಲರ ನಿತ್ಯ ಜೀವನದ ಭಾಗವಾಗುವಂತೆ ಪ್ರಯತ್ನಿಸಬೇಕು ಎಂದು ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದರು. ತಾರಕವೆನಿಸಿದ ರಾಮಮಂತ್ರಜಪದಿಂದ ನಮ್ಮೆಲ್ಲರ ದುರಿತಗಳು ದೂರವಾಗಿ ನಾಡು ದೇಶದೆಲ್ಲೆಡೆ ಸುಖ ಶಾಂತಿ ಸಮೃದ್ಧಿ, ಗೋವುಗಳೂ ಸೇರಿದಂತೆ ಸಕಲ ಜೀವರಾಶಿಗಳ ನೆಮ್ಮದಿಗೆ ಕಾರಣವಾಗಲಿ ಎಂದು ಆಶಿಸಿದರು.
ಈ ಜಪಯಜ್ಞವನ್ನು ಯಶಸ್ವಿಯಾಗಿ ನಡೆಸಲು ನೂರಾರು ಸ್ವಯಂಸೇವಕರು ಸಂಘ ಸಂಸ್ಥೆಗಳು, ಜಾತಿ ಸಮುದಾಯಗಳ ಬಂಧುಗಳು ಶಾಲಾ ಆಡಳಿತ ಮಂಡಳಿಗಳು ತುಂಬ ಶ್ರಮಿಸಿದ್ದಾರೆ. ಅವರೆಲ್ಲರಿಗೂ ರಾಮಾನುಗ್ರಹದ ರಕ್ಷೆ ಸದಾ ಇರಲಿ ಎಂದು ಪ್ರಾರ್ಥಿಸುವುದಾಗಿಯೂ ಶ್ರೀಗಳು ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ