ಉಡುಪ ಪ್ರತಿಷ್ಠಾನ ಆಯೋಜನೆ | ವಿಜೃಂಭಿಸಿದ ನೃತ್ಯಕಥಾ ನೃತ್ಯೋತ್ಸವ
ಬೆಂಗಳೂರು: ಕಲಾತ್ಮಕ ಕಾರ್ಯಕ್ರಮಗಳನ್ನು ಕಲಾವಿದರೇ ರೂಪಿಸಿ, ಪ್ರಸ್ತುತಿ ಜವಾಬ್ದಾರಿ ತೆಗೆದುಕೊಂಡಾಗ ಅದರ ಮಹತ್ವವೇ ಭಿನ್ನವಾಗಿರುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಖ್ಯಾತ ಕಲಾವಿದೆ ಮಾಳವಿಕಾ ಸಾರುಕ್ಕೈ ಹೇಳಿದರು.
ಉಡುಪ ಪ್ರತಿಷ್ಠಾನ ಬೆಂಗಳೂರಿನ ಜಯನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೃತ್ಯಕಥಾ -ನೃತ್ಯೋತ್ಸವ 4ನೇ ಆವೃತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭ ಅವರು ಮಾತನಾಡಿದರು.
ಕಲಾ ಆಸಕ್ತರೇ ಅನೇಕ ಬಾರಿ ಸಂಗೀತ- ನೃತ್ಯ ಕಾರ್ಯಕ್ರಮ ಆಯೋಜನೆ ಮಾಡುತ್ತಾರೆ. ಆದರೆ ಸ್ವತಃ ಕಲಾವಿದನೇ ಮಾಡಿದಾಗ ಅದರ ಆಳ, ಅಗಲ, ಮಹತ್ವ, ಹಿಂದಿನ ನೋವು, ನಲಿವುಗಳು ಅರ್ಥವಾಗಿರುತ್ತವೆ. ಈ ನಿಟ್ಟಿನಲ್ಲಿ ಪ್ರಖ್ಯಾತ ಘಟಂ ಕಲಾವಿದ ಗಿರಿಧರ ಉಡುಪ ಅವರ ಫೌಂಡೇಷನ್ ಚಟುವಟಿಕೆಗಳು ವಿಶೇಷವಾಗಿರುತ್ತವೆ ಎಂದರು.
ಪ್ರತಿಷ್ಠಾನದ ಸೇವೆಗೆ ದಶಕದ ಸಂಭ್ರಮ:
ಉಡುಪ ಪ್ರತಿಷ್ಠಾನದ ಮುಖ್ಯಸ್ಥ ವಿದ್ವಾನ್ ಗಿರಿಧರ ಉಡುಪ ಮಾತನಾಡಿ, ದಶಮಾನೋತ್ಸವ ಸಂಭ್ರಮದಲ್ಲಿರುವ ಪ್ರತಿಷ್ಠಾನವು ಈವರೆಗೆ ದೇಶ- ವಿದೇಶಗಳ 292 ಪ್ರಖ್ಯಾತ ಕಲಾವಿದರನ್ನು ಆಹ್ವಾನಿಸಿ 148 ಸಂಗೀತ ಕಛೇರಿಗಳನ್ನು ಆಯೋಜನೆ ಮಾಡಿದ ಕೀರ್ತಿಗೆ ಭಾಜನವಾಗಿದೆ ಎಂದರು. ಪ್ರತಿ ತಿಂಗಳೂ ಗ್ರಾಮೀಣ ಭಾಗದ ಸರ್ಕಾರಿಶಾಲೆ, ವೃದ್ಧಾಶ್ರಮ, ಕ್ಯಾನ್ಸರ್ ಪುನರ್ವಸತಿ ಕೇಂದ್ರ ಮತ್ತು ಆಟಿಸಂ ಕೇಂದ್ರಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿ ಅಲ್ಲಿನವರಿಗೆ ಮನೋಲ್ಲಾಸ ನೀಡುವ ಸೇವೆಯನ್ನು ಫೌಂಡೇಷನ್ ಮಾಡುತ್ತಿದೆ ಎಂದು ವಿವರಿಸಿದರು.
ಫೌಂಡೇಷನ್ ಟ್ರಸ್ಟಿ ಸಂಧ್ಯಾ ಉಡುಪ, ಪ್ರಖ್ಯಾತ ಭರತನಾಟ್ಯ ವಿದ್ವಾಂಸರಾದ ಲಕ್ಷ್ಮೀ ಗೋಪಾಲಸ್ವಾಮಿ, ವೈಜಯಂತಿ ಕಾಶಿ, ಪ್ರವೀಣ್ ಕುಮಾರ್, ರಮಾ ಭಾರದ್ವಾಜ, ತೊಗಲು ಗೊಂಬೆ ಕಲಾವಿದೆ ಅನುಪಮಾ ಹೊಸಕೆರೆ ಇತರರು ಇದ್ದರು.
ರಸಿಕರ ಮನಗೆದ್ದ ಪ್ರಸ್ತುತಿ:
ಖ್ಯಾತ ಕಲಾವಿದೆ ಮಾಳವಿಕಾ ಸಾರುಕ್ಕೈ ಅವರು ‘ದರ್ಶನ’ ಮತ್ತು ಆಚಾರ್ಯ ಇಂದಿರಾ ಕಡಂಬಿ ಅವರು ಅಂಬಲಂ ತಂಡದೊಂದಿಗೆ ‘ಕೊಹಂ- ದಿ ಸರ್ಚ್ ಎಂಬ ವಿಷಯಾಧಾರಿತ ವಿಶೇಷ ನೃತ್ಯ ಪ್ರಸ್ತುತಪಡಿಸಿ ಕಲಾ ರಸಿಕರ ಮನ ಗೆದ್ದರು. 2 ತಾಸುಗಳ ಪ್ರದರ್ಶನ ವೀಕ್ಷಿಸಿದ ಪ್ರೇಕ್ಷಕರು ಚಪ್ಪಾಳೆ ಮೂಲಕ ಕಲಾವಿದರ ಪಾಂಡಿತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯತೆ ಮೆರೆದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ