ಉಜಿರೆ: ಎಸ್.ಡಿ.ಎಂ. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ‘ಗ್ರಾಮ ಸ್ವರಾಜ್’ ಕಾರ್ಯಕ್ರಮದಡಿಯಲ್ಲಿ 'ಜಾಗೃತರಾಗಿರಿ - ಇದು ಗುರಿ’ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಕ್ಕೆ ಚಾರ್ಮಾಡಿ ಗ್ರಾಮ ಪಂಚಾಯತಿಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಾರದಾ ಅಣಿಯೂರು ಚಾಲನೆ ನೀಡಿದರು.
ಮನೆ ಮನೆಗೆ ಭೇಟಿ ನೀಡಿ ತ್ಯಾಜ್ಯ ವಿಲೇವಾರಿ, ಮತದಾನದ ಆವಶ್ಯಕತೆ, ಡಿಜಿಟಲ್ ಪಾವತಿ ಬಗ್ಗೆ ಜಾಗೃತಿ ಸಹಿತ ಅನೇಕ ವಿಚಾರಗಳ ಬಗೆಗೆ ಜನರಲ್ಲಿ ವಿದ್ಯಾರ್ಥಿಗಳು ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಜಾಗೃತಿ ಕರಪತ್ರವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್ ಮಾತನಾಡಿ, “ಮನೆ ಮನೆಗೆ ಭೇಟಿ ನೀಡಿ ಜನರಿಗೆ ಮಾಹಿತಿ ನೀಡುವ ಬಗ್ಗೆ ನಮ್ಮ ಪಂಚಾಯತ್ ಹೊಂದಿದ್ದ ಚಿಂತನೆ ಈಗ ಪ್ರತಿಷ್ಠಿತ ಎಸ್.ಡಿ.ಎಂ. ಕಾಲೇಜಿನ ಮೂಲಕ ಕಾರ್ಯರೂಪಕ್ಕೆ ಬಂದಿದೆ” ಎಂದರು.
“ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಕೈ ಜೋಡಿಸಿ ನಡೆಸಬೇಕಿದೆ. ಇಂತಹ ಕಾರ್ಯಕ್ರಮಗಳು ಗ್ರಾಮಗಳ ಅಭಿವೃದ್ಧಿಗೆ ಆವಶ್ಯಕ. ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಕಾಲೇಜಿನ ಸಹಕಾರ ಅಗತ್ಯ” ಎಂದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ನಟರಾಜ್ ಹೆಚ್.ಕೆ. ಮಾತನಾಡಿದರು. “ಸರ್ಕಾರದ ಕೆಲಸಗಳು ಮೊದಲು ಗ್ರಾಮಗಳಲ್ಲಿ ನಡೆಯುತ್ತವೆ. ಗ್ರಾಮಗಳು ಬೆಳೆದರೆ ದೇಶ ಅಭಿವೃದ್ಧಿ ಹೊಂದಿದಂತೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಗ್ರಾಮದ ಅಭಿವೃದ್ಧಿಗಾಗಿ ಮನೆಮನೆಯಲ್ಲೂ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ” ಎಂದರು.
“ನಮ್ಮ ವಿಭಾಗದ ಚಟುವಟಿಕೆಗಳಲ್ಲಿ ಒಂದಾದ ಗ್ರಾಮ ಸ್ವರಾಜ್ ಕಾರ್ಯಕ್ರಮ 30 ವರ್ಷಗಳಿಂದ ನಡೆದು ಬಂದಿದೆ. ಹಳ್ಳಿಗಳ ಉದ್ಧಾರಕ್ಕೆ, ವಿದ್ಯಾರ್ಥಿಗಳ ಶಿಕ್ಷಣ ಅಭಿವೃದ್ಧಿಗೆ, ನಾಯಕತ್ವ ಗುಣ ವೃದ್ಧಿಗೆ, ಜನರಲ್ಲಿ ಬೆರೆತು ಅನುಭವ ಪಡೆಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಪೂರಕ” ಎಂದು ಅವರು ತಿಳಿಸಿದರು.
ಪಂಚಾಯತ್ ಕಾರ್ಯದರ್ಶಿ ಕುಂಞ ಹಾಗೂ ಸದಸ್ಯರು, ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಭಾಗ್ಯಶ್ರೀ, ಶಿವಕುಮಾರ್ ಪಿ., ಕಿರಣ್ ಜೈನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಪ್ರಿತಾ ಎಂ.ಎಸ್. ಸ್ವಾಗತಿಸಿ, ಹರ್ಷಿತಾ ಎಂ.ಕೆ. ವಂದಿಸಿದರು. ಮಾನಸ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಹತ್ತು ತಂಡಗಳಾಗಿ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ