ಬೆಂಗಳೂರು: ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಫೆ 19, ಬುಧವಾರ ಸಂಜೆ 06.00 ಗಂಟೆಗೆ ನಗರದ ಜೆಸಿ ರಸ್ತೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶ್ರೀ ಭವಾನಿ ಪೀಠ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್, ಕುಮಾರಿ ಶೋಭಾ ಕರಂದ್ಲಾಜೆ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವ ಶಿವರಾಜ ಎಸ್ ತಂಗಡಗಿ ಉಪಸ್ಥಿತರಿರುವರು. ಶಾಸಕ ಉದಯ ಬಿ ಗರುಡಾಚಾರ್ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ರಾಜ್ಯ ಸರ್ಕಾರದ ಅನೇಕ ಸಚಿವರು ಶಾಸಕರು ವಿಧಾನ ಪರಿಷತ್ ಸದಸ್ಯರು ಲೋಕಸಭಾ ಸದಸ್ಯರು ರಾಜ್ಯಸಭಾ ಸದಸ್ಯರು ಭಾಗವಹಿಸುವರು.
ಶಾಸಕರಾದ ಶ್ರೀನಿವಾಸ ವಿ ಮಾನೆ, ವಿಠ್ಠಲ ಸೋಮಣ್ಣ ಹಲಗೇಕರ್, ಮಾರುತಿರಾವ್ ಮುಳೆ, ಕರ್ನಾಟಕ ಸ್ಕೌಟ್ಸ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂಧ್ಯಾ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ರಾಜ್ಯಧ್ಯಕ್ಷ ಎಸ್ ಸುರೇಶ್‌ರಾವ್ ಸಾಠೆ ಮತ್ತು ಕರ್ನಾಟಕ ಮರಾಠ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಎಸ್ ಮನೋಜ್‌ಕುಮಾರ್ ರಣ್ಣೋರೆ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಸಾಹಿತಿ ಜಗನಾಥರಾವ್ ಬಹುಳೆರವರು ಶಿವಾಜಿ ಮಹಾರಾಜರ ಕುರಿತು ಉಪನ್ಯಾಸ ನೀಡುವರು. ಇದೇ ಸಂದರ್ಭದಲ್ಲಿ ಕರ್ನಾಟಕ ಮರಾಠ ಸಮುದಾಯದ ಅಭಿವೃದ್ಧಿ ನಿಗಮದ ಹೊಸ ಯೋಜನೆಗಳ ಚಾಲನೆ ನೀಡಲಾಗುವುದು ಎಂದು ಕರ್ನಾಟಕ ಮರಾಠ ಸಮುದಾಯದ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶ್ ಆರ್ ಪಾಗೋಜಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾರ್ಯಕ್ರಮದ ಆರಂಭದಲ್ಲಿ ಶಿವಾಜಿ ಮಹಾರಾಜರ ಬಗ್ಗೆ ಗೀತೆ ಹಾಗೂ ರಾಜ ಶ್ರೀ ಶಾಹುಮಹಾರಾಜರ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಗುವುದು ಮತ್ತು ವಿವಿಧ ಜಾನಪದ ಕಲಾ ತಂಡಗಳಿಂದ ಜಾನಪದ ಕಲಾ ಪ್ರದರ್ಶನ, ಹೊಸಪೇಟೆಯ ಮಾರುತಿರಾವ್ ಮತ್ತು ತಂಡದಿಂದ ಸುಗಮ ಸಂಗೀತ ಏರ್ಪಡಿಸಲಾಗಿದೆ.
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಕಾರ್ಯಚಟುವಟಿಕೆಗಳ ಕಿರುಪರಿಚಯ
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮವನ್ನು 2013ರ ಕಂಪನಿ ಕಾಯ್ದೆ ಅನ್ವಯ ದಿನಾಂಕ:13-12-2021ರಂದು ನೋಂದಣಿ ಮಾಡಿಸುವ ಮೂಲಕ ಸ್ಥಾಪನೆ ಮಾಡಲಾಗಿದ್ದು, ಸದರಿ ನಿಗಮವು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯದ ಅಧೀನದಡಿ ಕಾರ್ಯನಿರ್ವಹಿಸುತ್ತಿದೆ.
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಸರ್ಕಾರದ ಆದೇಶದಂತೆ ಈ ಕೆಳಕಂಡ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
1. ಜೀಜಾವು ಜಲಭಾಗ್ಯ (ಗಂಗಾ ಕಲ್ಯಾಣ) ಯೋಜನೆ
2. ಶ್ರೀ ಶಹಜೀರಾಜೇ ಸಮೃದ್ಧಿ (ಸ್ವಯಂ ಉದ್ಯೋಗ) ಯೋಜನೆ
3. ಸ್ವಯಂ ಉದ್ಯೋಗ ಸಾಲ (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ) ಯೋಜನೆ
4. ಅರಿವು ಶೈಕ್ಷಣಿಕ ಸಾಲ ಯೋಜನೆ
5. ರಾಜಶ್ರೀ ಶಾಹುಮಹಾರಾಜ ವಿದೇಶಿ ವ್ಯಾಸಂಗ ಸಾಲ ಯೋಜನೆ
6. ಸ್ವಾವಲಂಬಿ ಸಾರಥಿ ಯೋಜನೆ
7. ಮರಾಠ ಮೀಲ್ಟ್ರೀ ಹೋಟೆಲ್ ಯೋಜನೆ
8. ಸ್ವಾತಂತ್ಯ್ರ ಅಮೃತ ಮಹೋತ್ಸವದ ಮುನ್ನಡೆ ಯೋಜನೆ
• 2024-25ನೇ ಸಾಲಿನಲ್ಲಿ ಮರಾಠ ನಿಗಮಕ್ಕೆ 50.00 ಕೋಟಿ ಅನುದಾನ ಬಿಡುಗಡೆಯಾಗಿರುತ್ತದೆ.
ಇಲಾಖೆಯ ಸಾಧನೆಗಳು / ಅಭಿವೃದ್ಧಿ ಕಾರ್ಯಾಗಳು ಹಾಗೂ ಉದ್ದೇಶಿತ ಕಾರ್ಯಕ್ರಮಗಳು.
• ಜೀಜಾವು ಜಲಭಾಗ್ಯ (ಗಂಗಾ ಕಲ್ಯಾಣ) ಯೋಜನೆ.
ಜೀಜಾವು ಜಲಭಾಗ್ಯ ಯೋಜನೆಯಡಿ ಸೌಲಭ್ಯ ಪಡೆಯಲು ಸಣ್ಣ ಹಾಗೂ ಅತಿ ಸಣ್ಣ ರೈತರಾಗಿದ್ದು, ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಒಳಗೆ ಜಮೀನು ಹೊಂದಿರಬೇಕು. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ್ಲಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ನಿಗದಿಪಡಿಸಿರುವ ಘಟಕ ವೆಚ್ಚ: ಈ ಯೋಜನೆಯಲ್ಲಿ ಘಟಕ ವೆಚ್ಚ ರೂ.3.25 ಲಕ್ಷಗಳ ಸಹಾಯಧನ ಹಾಗೂ ರೂ. 75,000/- ಗಳ ವಿದ್ಯುದೀಕರಣ ವೆಚ್ಚವನ್ನು ನೀಡಲಾಗುವುದು. ಹಾಗೂ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಂ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಿಗೆ ಘಟಕ ವೆಚ್ಚ ರೂ.4.25 ಲಕ್ಷಗಳ ಸಹಾಯಧನ ಹಾಗೂ ಅವಶ್ಯವಿದ್ದಲ್ಲಿ ರೂ.50.000/-ಗಳ ಸಾಲವನ್ನು ಶೇ.4 ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. ಮುಂದುವರೆದು ನಿಗಮದಿಂದ 847 ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ.
• ಶ್ರೀ ಶಹಜೀರಾಜೇ ಸಮೃದ್ಧಿ (ಸ್ವಯಂ ಉದ್ಯೋಗ) ಯೋಜನೆ.
ಈ ಯೋಜನೆಯಲ್ಲಿ, ಮರಾಠ ಸಮುದಾಯಕ್ಕೆ ಸೇರಿದ ಅರ್ಜಿದಾರರು ಆಟೋ ರಿಕ್ಷಾ, ಬೇಕರಿ, ಹೋಟೆಲ್, ಕಂಪ್ಯೂಟರ್ ಘಟಕ, ಹಿಟ್ಟಿನ ಗಿರಣಿ, ಆಟೋಮೊಬೈಲ್ ಗ್ಯಾರೇಜ್, ಮೊಬೈಲ್ ರಿಪೇರಿ ಅಂಗಡಿ, ಇಟ್ಟಿಗೆ ವ್ಯಾಪಾರದಂತಹ ಕೈಗಾರಿಕಾ, ಇತ್ಯಾದಿ ಚಟುವಟಿಕೆಗಳಿಗೆ, ಈ ಯೋಜನೆಯಡಿ ರೂ.1,00,000/-ಗಳ ವರೆಗಿನ ಘಟಕ ವೆಚ್ಚದ ಆರ್ಥಿಕ ಚಟುವಟಿಕೆಗಳಿಗೆ ಶೇ.20 ರಷ್ಟು ಗರಿಷ್ಠ ರೂ. 20,000/-ಗಳ ಸಹಾಯಧನ ಉಳಿಕೆ ಶೇ.80 ರಷ್ಟು ಗರಿಷ್ಠ ರೂ.80,000/- ಗಳು ವಾರ್ಷಿಕ ಶೇ 4%ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡುವುದು. ಮುಂದುವರೆದು ನಿಗಮದಿಂದ 500 ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ.
• ಸ್ವಯಂ ಉದ್ಯೋಗ ಸಾಲ (ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದೊಂದಿಗೆ) ಯೋಜನೆ-
ನಿಗಮವು ಹಿಂದುಳಿದ ವರ್ಗಗಳಿಗೆ ಸೇರಿದ ಫಲಾನುಭವಿಗೆ ಸ್ವಯಂ ಉದ್ಯೋಗ ಅಡಿಯಲ್ಲಿ ವ್ಯಾಪಾರ ಸಂಬಂಧಿತ ಚಟುವಟಿಕೆಗಳಿಗಾಗಿ ವಾಣಿಜ್ಯ ಬ್ಯಾಂಕಗಳ ವತಿಯಿಂದ ಪಡೆಯುವ ಲೋನ್‌ಗಳಿಗೆ ಯೋಜನಾ ವೆಚ್ಚದ 20% ಅಥವಾ ಗರಿಷ್ಠ ರೂ.1,00,000/- ವರೆಗೆ ಸಹಾಯಧನ. ನಿಗಮದಿಂದ 48 ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ.
• ಅರಿವು ಶೈಕ್ಷಣಿಕ ಸಾಲ ಯೋಜನೆ :-
ವೃತ್ತಿಪರ ಕೋರ್ಸ್‌ಗಳಾದ CET, NEET ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.1.00 ಲಕ್ಷಗಳ ಮಿತಿಯಲ್ಲಿ ಗರಿಷ್ಠ ರೂ.5.00 ಲಕ್ಷಗಳವರೆಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುವುದು. ನಿಗಮದಿಂದ 201 ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ.
• ರಾಜಶ್ರೀ ಶಾಹುಮಹಾರಾಜ ವಿದೇಶಿ ವ್ಯಾಸಂಗ ಸಾಲ ಯೋಜನೆ:
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ (1) ಇಂಜಿನಿಯರಿಂಗ್ & ಟೆಕ್ನಾಲಜಿ (2) ಮ್ಯಾನೇಜ್‍ಮೆಂಟ್ & ಕಾಮರ್ಸ್ (3) ಸೈನ್ಸ್ & ಟೆಕ್ನಾಲಜಿ, (4) ಅಗ್ರಿಕಲ್ಚರ್ & ಅಲೈಡ್ ಸೈನ್ಸಸ್ / ಟೆಕ್ನಾಲಜಿ, (5) ಮೆಡಿಸಿನ್ ಮತ್ತು (6) ಹ್ಯುಮ್ಯಾನಿಟೀಸ್& ಸೊಸಿಯಲ್ ಸೈನ್ಸಸ್ (ಈ 6 ಕೋರ್ಸ್‍ಗಳ, ಕ್ಷೇತ್ರಗಳಿಗೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಲಾಗುತ್ತದೆ). ಈ ಕೋರ್ಸ್‍ಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಹಾಗೂ 18 ರಿಂದ 25 ವರ್ಷ ವಯೋಮಿತಿಯ ವಾರ್ಷಿಕ ಗರಿಷ್ಠ ರೂ.25 ಲಕ್ಷಗಳಂತೆ ಎರಡು/ಮೂರು ವರ್ಷಗಳ ಅವಧಿಗೆ ಗರಿಷ್ಠ ರೂ 50.00 ಲಕ್ಷಗಳ ಸಾಲವನ್ನು ಒದಗಿಸಿಕೊಡಲಾಗುವುದು. ಮುಂದುವರೆದು ನಿಗಮದಿಂದ ಈ ಯೋಜನೆಯಡಿ 5 ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ.
• ಸ್ವಾವಲಂಬಿ ಸಾರಥಿ ಯೋಜನೆ:
ಸ್ವಾವಲಂಬಿ ಸಾರಥಿ ಯೋಜನೆಯಡಿ ಮರಾಠ ಸಮುದಾಯದ ಸೇರಿದ ನಿರುದ್ಯೋಗಿ ಯುವಜನರು ನಾಲ್ಕು ಚಕ್ರ ವಾಹನ ಖರೀದಿಗೆ ಪಡೆಯುವ ಸಾಲಕ್ಕೆ ಶೇ.50 ರಷ್ಟು ಅಥವಾ ಗರಿಷ್ಠ ರೂ.3,00,000/- ಸಹಾಯಧನ ನೀಡಲಾಗುವುದು. ನಿಗಮದಿಂದ 300 ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ.
• ಮರಾಠ ಮಿಲ್ಟ್ರೀ ಹೋಟೆಲ್ ಯೋಜನೆ:
ಮರಾಠ ಸಮುದಾಯದವರು ಆರ್ಥಿಕವಾಗಿ ಸಧೃಡಗೊಳ್ಳಲು ಹೋಟೆಲ್ ಉದ್ದಿಮೆ ಕೈಗೊಳ್ಳಲು ಆರ್ಥಿಕ ನೆರವಿಗಾಗಿ ಸಾಲ ಸೌಲಭ್ಯವನ್ನುಶೇ.4%ರ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುವುದು. ಈ ಯೋಜನೆಯ ಘಟಕ ವೆಚ್ಚ 5,00,000/- ಸಹಾಯಧನ ಮೊತ್ತ 40,000/-ಸಾಲದ ಮೊತ್ತ 4,60,000/- ಲಕ್ಷಗಳವರೆಗೆ ಸೌಲಭ್ಯವನ್ನು ನಿಗಮದಿಂದ ನೀಡಲಾಗುತ್ತದೆ. ನಿಗಮದಿಂದ 80 ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ.
• ಸ್ವಾತಂತ್ಯ್ರ ಅಮೃತ ಮಹೋತ್ಸವದ ಮುನ್ನಡೆ ಯೋಜನೆ
ಮರಾಠ ಸಮುದಾಯದ ಯುವಕ ಯುವತಿಯರಿಗೆ “ಸ್ವಾತಂತ್ಯ್ರ ಅಮೃತ ಮಹೋತ್ಸವದ ಮುನ್ನಡೆ ಯೋಜನೆಯ" ಅಲ್ಪಾವಧಿ ಕೋರ್ಸ್‌ಗಳ ಮೂಲಕ ಉಚಿತ ಕೌಶಲ್ಯ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ ಆರಂಭಿಸಲಾಗಿದೆ. ಸರ್ಕಾರದ ಸಂಸ್ಥೆಗಳಾದ ಐಟಿಐ, ಜಿಟಿಟಿಸಿ, ಕೆಜಿಟಿಟಿ ಮತ್ತು ಎಟಿಡಿಸಿ ವಿಟಿಯುಗಳಲ್ಲಿ ಉಚಿತವಾಗಿ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುವುದೆಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶ್ ಆರ್ ಪಾಗೋಜಿ ಅವರು ತಿಳಿಸಿರುತ್ತಾರೆ.
ಆಸಕ್ತ ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ತರಬೇತಿ ಪಡೆಯಲು ಕೆಳಕಂಡ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
http://bcwd.kaushalkar.com
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ
+918867537799
080-299003994