ಗೋವಿಂದ ದಾಸ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ

Upayuktha
0



ಸುರತ್ಕಲ್‌: ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಸಾಮಾಜಿಕ ಅಗತ್ಯತೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ವೇದಿಕೆಯಾಗಿ ಕಾರ್ಯ ನಿರ್ವಹಿಸಿ ರಾಷ್ಟ್ರದ ಸುಧಾರಣೆಗೆ ಅರ್ಥಪೂರ್ಣ ಕೊಡುಗೆ ನೀಡುತ್ತದೆ. ಸೇವಾ ಬದ್ಧತೆಯಿಂದ ದುಡಿಯುವ ಯುವಜನತೆ ಮಾತ್ರ ದೇಶದ ಸಂಪತ್ತಾಗಲು ಸಾದ್ಯ ಎಂದು ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಅಧ್ಯಕ್ಷ ಹೆಚ್. ಜಯಚಂದ್ರ ಹತ್ವಾರ್ ನುಡಿದರು. 


ಅವರು ತೋಕೂರು ಸುಬ್ರಹ್ಮಣ್ಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ನಡೆಯುತ್ತಿರುವ ಹಿಂದು ವಿದ್ಯಾದಾಯಿನೀ ಸಂಘ (ರಿ)ಯ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ ಆಚಾರ್ಯ ಪಿ. ಮಾತನಾಡಿ ಶಿಸ್ತು ಮತ್ತು ಶ್ರಮ ಪ್ರತಿಯೊಬ್ಬ ಸ್ವಯಂ ಸೇವಕನ ಜೀವನದ ಆದರ್ಶವಾದಾಗ ಯಶಸ್ಸು ಲಭಿಸುತ್ತದೆ ಎಂದು ನುಡಿದರು.


ಮುಖ್ಯ ಅತಿಥಿ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ಗೋಪಾಲ ಎಂ. ಗೋಖಲೆ ಮಾತನಾಡಿ ಎನ್.ಎಸ್.ಎಸ್. ವಾರ್ಷಿಕ ಶಿಬಿರವು ವಿದ್ಯಾರ್ಥಿಗಳ ಆತ್ಮ ವಿಶ್ವಾಸ ಮತ್ತು  ನಾಯಕತ್ವದ ಗುಣಗಳನ್ನು ಹೆಚ್ಚಿಸಿ ಸಾಮಾಜಿಕ ಜವಾಬ್ದಾರಿಯ ಅರಿವನ್ನು ಮೂಡಿಸುತ್ತದೆ ಎಂದರು. 


ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಭಟ್ ಎಸ್.ಜಿ. ಮಾತನಾಡಿ ಎನ್.ಎಸ್.ಎಸ್. ಸ್ವಯಂ ಸೇವಕರು ವಿನಯತೆ ಮತ್ತು ವಿಧೇಯತೆ ಹೊಂದಿದ ಸಂವಹನ ಕಲೆಯನ್ನು ತಮ್ಮಲ್ಲಿ ಅಳವಡಿಸಿಕೊಂಡು ಸ್ಥಳೀಯ ಜನತೆಯೊಂದಿಗೆ ಉತ್ತಮ ಬಾಂಧವ್ಯವನ್ನು ವೃದ್ಧಿಸುವತ್ತ ಗಮನ ಹರಿಸಬೇಕೆಂದರು.


ಪಡುಪಣಂಬೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಕುಸಮ ಚಂದ್ರಶೇಖರ್ ಅವರು ಪಡುಪಣಂಬೂರು ಗ್ರಾಮ ಪಂಚಾಯತ್‌ನ ದತ್ತು ಸ್ವೀಕಾರ ಯೋಜನೆಗೆ ಚಾಲನೆ ನೀಡಿದರು. ಮುಖ್ಯ ಅತಿಥಿ ಆಸರೆ ಬಳಗ ಕುಂಪಲ ಹಾಗೂ ವಾತ್ಸಲ್ಯ ಛಾಯ ಟ್ರಸ್ಟ್ ಮಂಗಳೂರಿನ ಅಧ್ಯಕ್ಷ ಸೂರಜ್ ಸಾಗರ್ ಕುಂಪಲ ಶುಭ ಹಾರೈಸಿದರು.


ಉಪ ಪ್ರಾಂಶುಪಾಲ ಪ್ರೊ. ನೀಲಪ್ಪ ವಿ., ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ವಾಮನ ಕಾಮತ್, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಶಾಂತ್ ಎಂ.ಡಿ., ಲಲಿತಕಲಾ ಸಂಘದ ಸಂಯೋಜಕ ವಿನೋದ್ ಶೆಟ್ಟಿ, ಫೇಮಸ್ ಯೂತ್ ಕ್ಲಬ್, ತೋಕೂರಿನ ಅಧ್ಯಕ್ಷ ಸಂಪತ್ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ  ಕಾರ್ಯದರ್ಶಿಗಳಾದ ರಕ್ಷಿತಾ, ತೇಜಸ್ವಿನಿ, ಜೀವನ್ ಮತ್ತು ಭೂಷಣ್ ಉಪಸ್ಥಿತರಿದ್ದರು.


ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಅಕ್ಷತಾ ವಿ. ಸ್ವಾಗತಿಸಿ ಡಾ. ಭಾಗ್ಯಲಕ್ಷ್ಮಿ ಎಂ. ವಂದಿಸಿದರು. ಸ್ವಯಂ ಸೇವಕ ಸುಪ್ರೀತ್ ಕಾರ್ಯಕ್ರಮ ನಿರೂಪಿಸಿದರು. 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top