ನಮ್ಮ ಕನಸುಗಳು ನಿಜವಾದಾಗ ಹೆತ್ತವರು ಆನಂದಪಡುತ್ತಾರೆ: ಆದರ್ಶ ಗೋಖಲೆ

Upayuktha
0



ಪುತ್ತೂರು: ನಮ್ಮ ಭರವಸೆಗಳು ನಿಜವಾದಾಗ, ಅಂದುಕೊಂಡ ಗುರಿ ತಲುಪಿದಾಗ ಹರ್ಷದ ಕಣ್ಣೀರು ಸುರಿಸುವವರು ತಂದೆ ತಾಯಿ. ನಮ್ಮ ಎಲ್ಲಾ ತ್ಯಾಗ ಸಮರ್ಪಣೆಯ ಹಿಂದೆ ಇರುವುದು ಅಪ್ಪ-ಅಮ್ಮನ ಪ್ರೀತಿ. ಇದನ್ನರಿತು ಮುಂದುವರಿಯಬೇಕು ಎಂದು ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ದ್ವಿತೀಯ ಪಿ.ಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ‘ಸಮರ್ಪಣಮ್’ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿದರು.


ಆಧ್ಯಾತ್ಮ, ಸಂಸ್ಕೃತಿ, ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡು ದೇಶಕ್ಕಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಜೀವನ ವಿಶಾಲವಾಗಿದೆ, ಸಾಧನೆಗೆ ಕೊನೆಯಿಲ್ಲ. ಉತ್ತಮ ಅಂಕ ಗಳಿಸುವುದಷ್ಟೇ ಸಾಧನೆ ಅಲ್ಲ, ಸಾಧನೆಯ ಹಾದಿಯಲ್ಲಿ ಹೊಗಳಿಕೆ ಸಿಕ್ಕಿದಾಗ ಸಾಧನೆ ನಿಲ್ಲಿಸಬಾರದು ಎಂದರಲ್ಲದೆ ನಮ್ಮ ದಮ್ಮು, ತಾಕತ್ತು ಎಲ್ಲಿವರೆಗೆ ಇರುತ್ತದೋ ಅದುವೇ ನಮ್ಮ ದೇಶಕ್ಕೋಸ್ಕರ ಏನನ್ನೂ, ಎಲ್ಲವನ್ನು ಮಾಡುವಂತಹ ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು. 


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಗುರಿ ತಲುಪುವ ದಾರಿಯಲ್ಲಿ ಕಷ್ಟ ನಷ್ಟಗಳಿವೆ. ಹಾಗಾಗಿ ತುಂಬಾ ಜಾಗರೂಕತೆಯಿಂದ ಮುನ್ನುಗ್ಗಬೇಕು. ಶಾರೀರಿಕ ಹಾಗೂ ಮಾನಸಿಕ ಆರೋಗ್ಯವಿದ್ದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಸಂಸ್ಥೆಯಲ್ಲಿ ನೀಡಿರುವ ಧರ್ಮ ಶಿಕ್ಷಣ, ಆಧ್ಯಾತ್ಮಿಕ ಶಿಕ್ಷಣದಿಂದ ಶಕ್ತಿಯುತರಾಗಿ ಭಾರತವನ್ನು ವಿಶ್ವಗುರುವನ್ನಾಗಿಸಲು ಹಾಗೂ ಆ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಸಂಸ್ಥೆ ತನ್ನ ವಿದ್ಯಾರ್ಥಿಗಳಿಗಾಗಿ ಎಲ್ಲವನ್ನೂ ಕೊಡುವ ಪ್ರಯತ್ನ ಮಾಡಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಯೋಗವಿಜ್ಞಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಯೋಜನೆ, ವಿದ್ಯಾರ್ಥಿ ವೇತನ, ಧರ್ಮ ಶಿಕ್ಷಣ, ಅಧ್ಯಾತ್ಮ ಶಿಕ್ಷಣ ಪದವಿ ಹಂತದಲ್ಲಿ ತತ್ವಶಾಸ್ತ್ರ ಸೈನಿಕರಿಗೆ ಗೌರವ ಕೊಡುವ ಪರಿಪಾಠ ಹೀಗೆ ಹಲವಾರು ಪ್ರಥಮಗಳಿಗೆ ಅಂಬಿಕಾ ಹೆಸರಾಗಿದೆ. ವಿದ್ಯಾರ್ಥಿಗಳು ಐಎಎಸ್, ಐಪಿಸ್, ಡಾಕ್ಟರ್ಸ್, ಇಂಜಿನಿಯರ್ಸ್ ಆಗಿ ದೇಶಕ್ಕೋಸ್ಕರ ದೇಶಕ್ಕಾಗಿ ಬಾಳಿ ಬದುಕಬೇಕು ಎಂದರು.


ವಿದ್ಯಾರ್ಥಿನಾಯಕ ಪವನ್ ಭಾರಧ್ವಾಜ್, ವೈಷ್ಣವಿ ಆಳ್ವ, ತ್ರಿಶಾ ಪಿ., ಆದಿತ್ಯ ನಾರಾಯಣ ತಾವು ವಿದ್ಯಾಲಯದಲ್ಲಿ ಎರಡು ವರ್ಷಗಳಲ್ಲಿ ಪಡೆದ ಅನುಭವಗಳನ್ನು ಅನಿಸಿಕೆಯ ರೂಪದಲ್ಲಿ ಹಂಚಿಕೊಂಡರು. ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಭುವನ್ ರೈ ಹಾಗೂ 90 ಪರ್ಸೆಂಟೇಲ್‌ಗಿಂತ ಅಧಿಕ ಅಂಕ ಗಳಿಸಿದ ಸಾಧಕರನ್ನು ಸನ್ಮಾನಿಸಲಾಯಿತು. 


ದ್ವಿತೀಯ ಪಿಯುಸಿಯ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಉಪನ್ಯಾಸಕ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ವಸತಿಯುತ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರ ಪ್ರಭು ಸ್ವಾಗತಿಸಿ, ನೆಲ್ಲಿಕಟ್ಟೆ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವಂದಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ, ಸಿಇಟಿ ಸಂಯೋಜಕ ಉಪನ್ಯಾಸಕ ಕಿಶೋರ್ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top