ಉಡುಪಿ: ಉಡುಪಿಯಿಂದ ಪ್ರಯಾಗರಾಜ್ ಕುಂಭಮೇಳಕ್ಕೆ ವಿಶೇಷ ರೈಲು ಸೋಮವಾರ ಆರಂಭಗೊಂಡಿದ್ದು, ರೈಲಿನಲ್ಲಿ 1,410 ಭಕ್ತರು ತೆರಳಿದ್ದಾರೆ.
ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹರಸಿ, ಹಸಿರು ನಿಶಾನೆ ತೋರಿದರು. ರೈಲು ಬೋಗಿಗೆ ಗಂಧ, ಕುಂಕುಮ ಹಚ್ಚಿ ಮಲ್ಲಿಗೆ ಹೂವಿಟ್ಟು, ಫ್ಲ್ಯಾಟ್ ಫಾರಂನಲ್ಲಿ ತೆಂಗಿನಕಾಯಿ ಒಡೆದು ಭಗವಾಧ್ವಜ ಬಳಿಕ ಹಸಿರು ನಿಶಾನೆಯನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೋರಿದಾಗ ಜೈಶ್ರೀರಾಮ್ ಘೋಷಣೆ ಮೊಳಗಿತು.
ಆಶೀರ್ವಚನ ನೀಡಿದ ಪೇಜಾವರ ಶ್ರೀಪಾದರು ಭಕ್ತರು ಗಡಿಬಿಡಿ, ನೂಕುನುಗ್ಗಲು, ತಳ್ಳಾಟ ಮಾಡದೇ ಸಾವಧಾನದಿಂದ ವರ್ತಿಸಬೇಕು. ಗಂಗಾಮಾತೆ, ಯಮುನೆ, ಸರಸ್ಕೃತಿಯ ಅನುಗ್ರಹ ಪಡೆಯಬೇಕು. ಹೆಚ್ಚುವರಿ ರೈಲಿಗೆ ಬೇಡಿಕೆ ಇದೆ, ಜಗತ್ತಿಗೇ ಕ್ಷೇಮವಾಗಲಿ. ಅವಘಡಗಳಿಗೆ ಎಡೆಯಾಗದಂತೆ ಕರಾವಳಿಯ ವಿವೇಕತನ ಮರೆಯದಿರಿ. ವಿಶೇಷ ರೈಲು ಹೊರಡುವಲ್ಲಿ ಸಹಕರಿಸಿದ ರೈಲ್ವೆ ಸಚಿವರು, ಇಲಾಖಾಧಿಕಾರಿಗಳು, ಸಂಸದರಿಗೆ ಅಭಿನಂದನೆಗಳು ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕುಂಭಮೇಳಕ್ಕೆ ಉಡುಪಿಯಿಂದ ತೆರಳುವ ಭಕ್ತರಿಗಾಗಿ ವಿಶೇಷ ರೈಲು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಸಹಾಯಕ ಸಚಿವ ವಿ.ಸೋಮಣ್ಣ ಪ್ರಯತ್ನದಿಂದ ಸಾಧ್ಯವಾಗಿದ್ದು 21 ಬೋಗಿಗಳಲ್ಲಿ ಬುಕ್ ಮಾಡಿ, ವೆಯಿಂಗ್ ಲಿಸ್ಟ್ ನಲ್ಲಿದ್ದವರಿಗೂ ತೆರಳಲು ಅವಕಾಶವಾಗಿದೆ ಎಂದರು.
ಕುಂಭಮೇಳ ಫೆ.25ರ ನಂತರವೂ ವಿಸ್ತರಣೆಯಾದರೆ ಉಡುಪಿಯಿಂದ ಇನ್ನೊಂದು ರೈಲು ಆರಂಭಕ್ಕೆ ಯತ್ನಿಸಲಾಗುವುದು ಎಂದರು.
ಶಾಸಕರಾದ ಯಶಪಾಲ್ ಎ. ಸುವರ್ಣ, ಕಿರಣ್ ಕೊಡ್ಲಿ, ಸುರೇಶ್ ಶೆಟ್ಟಿ ಗುರ್ಮೆ ಮತ್ತು ಗುರುರಾಜ್ ಶೆಟ್ಟಿ ಗಂಟಿಹೊಳೆ, ಜಿ. ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ವೀಣಾ ಎಸ್. ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ಗಣೇಶ್ ಪುತ್ರನ್, ಗೌತಮ್ ಶೆಟ್ಟಿ, ರೈಲ್ವೆ ಇಲಾಖೆ ಪಿಆರ್.ಓ ಸುಧಾ ಕೃಷ್ಣಮೂರ್ತಿ ಇದ್ದರು. ಸಂಸದ ಕೋಟ ಹಾಗೂ ರೈಲ್ವೆ ಅಧಿಕಾರಿಗಳನ್ನು ಗೌರವಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ