ಭಾರತದ ವಿಜ್ಞಾನಿಗಳ ಸಾಧನೆ ಅಪೂರ್ವ: ಡಾ. ರವಿಪ್ರಕಾಶ್

Upayuktha
0

 


ಮಂಗಳೂರು: ಸ್ಕೂಲ್ ಆಫ್ ಫಿಸಿಕಲ್ ಮತ್ತು ಲೈಫ್ ಸೈನ್ಸ್ ವತಿಯಿಂದ, ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ವಿವಿಯ ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಈ ವರ್ಷದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ 2025ರ ಧ್ಯೇಯವಾಕ್ಯ “ವಿಕಸಿಕ ಭಾತರಕ್ಕಾಗಿ ಯುವ ವಿಜ್ಞಾನಿಗಳ ವೈಜ್ಞಾನಿಕ ಸಬಲೀಕರಣ” ಎಂಬ ವಿಷಯವನ್ನು ಮುಂದಿಟ್ಟುಕೊಂಡು ನಡೆಸಲಾಯಿತು.


ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಣಿಪಾಲ ಎಂಐಟಿ ತಾಂತ್ರಿಕ ವಿಜ್ಞಾನ ಸಂಸ್ಥೆಯ ಭೌತಶಾಸ್ತ್ರ ಪ್ರಾಧ್ಯಾಪಕರು ಹಾಗೂ ಎಂಐಟಿಯ ಎಕಾಡೆಮಿಕ್ಸ್ ಸಹನಿರ್ದೇಶಕರಾಗಿರುವ ಡಾ. ರವಿಪ್ರಕಾಶ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ “ಭಾರತದ ವಿಜ್ಞಾನಿಗಳ ಅಪೂರ್ವ ಸಾಧನೆಗಳ ಬಗ್ಗೆ ಎಳೆ ಎಳೆಯಾಗಿ ಪ್ರಸ್ತುತ ಪಡಿಸ್ತುತ್ತ ಯುವ ವಿಜ್ಞಾನದ ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನು ನೀಡಿದರು. 


ಆರ್ಯಭಟ, ಸುಶ್ರುತರಿಂದ ಹಿಡಿದು ಇತ್ತೀಚಿಗಿನ ಇಸ್ರೋದ ವಿಜ್ಞಾನಿಗಳ ಸಾಧನೆ, ಡಿಜಿಟಲ್ ವಿಜ್ಞಾನದ ಕ್ರಾಂತಿ, ಇವೇ ಮೊದಲಾದ ವಿಜ್ಞಾನ ಕ್ಷೇತ್ರಗಳಲ್ಲಿ ಭಾರತದ ಸಾಧನೆಯನ್ನು ತೆರೆದಿಟ್ಟರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಭಾರತದ ಹೆಮ್ಮೆಯ ನೋಬೆಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ.ವಿ. ರಾಮನ್ ಅವರ “ರಾಮನ್ ಪರಿಣಾಮ” ಎಂಬ ಸಂಶೋಧನೆಯ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿದೆ ಎಂಬುದಾಗಿ ತಿಳಿಸಿದರು. ಸರ್ ಸಿ.ವಿ. ರಾಮನ್ ಅವರ ಕೊಡುಗೆ ವಿಜ್ಞಾನ ಲೋಕಕ್ಕೆ ಅಪೂರ್ವವಾದುದು ಎಂದು ಕೊಂಡಾಡಿದರು.


ವಿವಿಯ ಕುಲಪತಿಗಳಾದ ವಂ. ಡಾ. ಪ್ರವೀಣ್ ಮಾರ್ಟಿಸ್ ಅವರು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ವಿಜ್ಞಾನ ದಿನಕ್ಕಾಗಿ ಎಲ್ಲರಿಗೂ ಶುಭ ಹಾರೈಸುವುದರೊಂದಿಗೆ, ವಿಜ್ಞಾನದ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಪ್ರೇರಣಾ ಶಕ್ತಿಯನ್ನು ನೀಡುವುದರೊಂದಿಗೆ, ವೈಜ್ಞಾನಿಕ ಸಂಶೋಧನೆ ಮೂಲಕ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಬೇಕೆಂದರು.


ಕ್ಸೇವಿಯರ್ ಬ್ಲಾಕಿನ ನಿರ್ದೇಶಕ ಡಾ. ಈಶ್ವರ ಭಟ್ ವಿಜ್ಞಾನ ದಿನಾಚರಣೆಯ ಪ್ರಸ್ತುತತೆಯನ್ನು ತಿಳಿಸಿ ಎಲ್ಲರನ್ನೂ ಸ್ವಾಗತಿಸಿದರು. ಮಾತ್ರವಲ್ಲ, ವಿಜ್ಞಾನದ ಆವಿಷ್ಕಾರಗಳನ್ನು ಸಂವಿಧಾನದ ಆಶಯಗಳೊಂದಿಗೆ ಮನುಕುಲದ ಒಳಿತಿಗಾಗಿ ಬಳಸಿಕೊಳ್ಳುತ್ತೇವೆ, ವೈಜ್ಞಾನಿಕವಾಗಿ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತೇವೆ ಎಂಬ ಸದಾಶಯದ ಪ್ರತಿಜ್ಞಾ ವಿಧಿಯನ್ನು ಎಲ್ಲರಿಗೂ ಬೋಧಿಸಿದರು. ಭೌತವಿಜ್ಞಾನ ವಿಭಾಗದ ಡೀನ್ ಡಾ. ಅರುಣಾ ಕಲ್ಕೂರ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಲಿನಾ ಜೆನೀಷಾ ದಾಲ್ಮೇಡಾ ಕಾರ್ಯಕ್ರಮ ನಡೆಸಿಕೊಟ್ಟರು.



Post a Comment

0 Comments
Post a Comment (0)
To Top