ಬಳ್ಳಾರಿ: ಬಳ್ಳಾರಿಯಲ್ಲಿ ಅಭಿವೃದ್ಧಿ ಪರ್ವ ಅರಂಭವಾಗಿದೆ, ಬಳ್ಳಾರಿಯನ್ನು ಸುವರ್ಣ ಬಳ್ಳಾರಿ ಮಾಡುವುದು ನನ್ನ ಕನಸಿನ ಯೋಜನೆಯಾಗಿದೆ, ಇದೆ ಇದರ ಮೊದಲ ಭಾಗವಾಗಿ ದುರ್ಗಮ್ಮ ದೇವಸ್ಥಾನ ಬಳಿಯ ಅಂಡರ್ ಪಾಸ್ ರಸ್ತೆ ಉದ್ಘಾಟನೆಯಾಗಿರುವುದೇ ಸಾಕ್ಷಿ ಎಂದು ಶಾಸಕ ಭರತ್ ರೆಡ್ಡಿ ಹೇಳಿದರು. ಭಾನುವಾರ ಸಂಜೆ ಅಂದಾಜು 2.20 ಕೋಟಿ ವೆಚ್ಚದಲ್ಲಿ ಬಳ್ಳಾರಿ ದುರ್ಗಮ್ಮ ದೇವಸ್ಥಾನದ ಅಂಡರ್ ಪಾಸ್ ರಸ್ತೆ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಬಳ್ಳಾರಿ ನಗರದಲ್ಲಿ ಒಂದೊಂದೇ ರಸ್ತೆ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ. ಬಳ್ಳಾರಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಸಿದ್ಧವಾಗಿದೆ. ಮೋಕಾ ರಸ್ತೆ ಅಭಿವೃದ್ಧಿಗಾಗಿ ಏಳು ಕೋಟಿ ಮೀಸಲಿಡಲಾಗಿದೆ. ಗಡಿಗಿ ಚೆನ್ನಪ್ಪ ವೃತ್ತದಿಂದ ಅಂಡರ್ ಪಾಸ್ ವರೆಗೆ ರಸ್ತೆ ಅಭಿವೃದ್ಧಿ ಮಾಡಲಾಗುವುದು ಮತ್ತು ಅನಂತಪುರ ರಸ್ತೆ ಈಗಾಗಲೇ ಅಭಿವೃದ್ಧಿ ಮಾಡಲಾಗಿದೆ ಎಂದರು.
ಬಳ್ಳಾರಿಯ ಪ್ರತಿ ರಸ್ತೆ ದೊಡ್ಡ ಮಟ್ಟದಲ್ಲಿ ಅಗಲೀಕರಣ ಮಾಡಿ ಅಭಿವೃದ್ಧಿ ಮಾಡುತ್ತೇವೆ. ಕ್ಷೇತ್ರಕ್ಕೆ ಬೇಕಾದ ಅನುದಾನ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ನೀಡಿದ್ದಾರೆ, ಹೀಗಾಗಿ ಬಳ್ಳಾರಿಯನ್ನು ಸುವರ್ಣ ಬಳ್ಳಾರಿ ಮಾಡುತ್ತೇನೆ ಎಂದು ಅವರು ಹೇಳಿದರು. ಕೆಎಂಅರ್ಸಿ, ಕೆಕೆಅರ್ಡಿಬಿ, ಡಿಎಂಎಫ್ ಸೇರಿದಂತೆ ಹಲವು ಕಡೆಯಿಂದ ಬರುವ ಅನುದಾನ ಬಳಸಿ ಬಳ್ಳಾರಿ ಅಭಿವೃದ್ಧಿ ಮಾಡಲಾಗುತ್ತಿದೆ.
ತುಂಗಭದ್ರಾ ಜಲಾಶಯದಿಂದ ಬಳ್ಳಾರಿ ನಗರಕ್ಕೆ ನೇರ ನೀರು ತರುವ 1200 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಇದರ ಭಾಗಬಾಗಿ ಇದೀಗ ಬಳ್ಳಾರಿ ನಗರಕ್ಕೆ ಪ್ರತ್ಯೇಕ 24x 7 ಕುಡಿಯುವ ನೀರಿಗಾಗಿ 260 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಕುಡಿಯುವ ನೀರಿನ ಯೋಜನೆ ಪೂರ್ಣಗೊಳ್ಳಲಿದೆ ಎಂದರು.
ಇನ್ನೂ ಗಡಿಗಿ ಚೈನ್ನಪ್ಪ ವೃತ್ತದ ಕಾಮಗಾರಿ ಮುಗಿದಿದೆ, ಸಣ್ಣಪುಟ್ಟ ಕೆಲಸ ಬಾಕಿ ಇದ್ದು, ಸಿಎಂ ಸಿದ್ದರಾಮಯ್ಯ ಅವರು ಸಮಯ ನೀಡಿದ ಬಳಿಕ ಕ್ಲಾಕ್ ಟವರ್ ಅನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಇದೇ ವೇಳೆ ರಾಜ್ಯಸಭಾ ಸದಸ್ಯ ದಾ.ಸಯ್ಯದ್ ನಾಸೀರ್ ಹುಸೇನ್ ಮಾತನಾಡಿ; ದುರ್ಗಮ್ಮ ದೇಗುಲದ ಅಂಡರ್ ಪಾಸ್ ರಸ್ತೆ ಮಳೆ ನೀರು ನಿಂತು ತುಂಬಾ ಹಾಳಾಗಿ ಹೋಗಿತ್ತು. ಹೀಗಾಗಿ ಎರಡು ಕೋಟಿ ವೆಚ್ಚದಲ್ಲಿ ದುರಸ್ತಿ ಮಾಡಲಾಗಿದೆ. ಗಡಿಗಿ ಚೆನ್ನಪ್ಪ ವೃತ್ತದ ಕ್ಲಾಕ್ ಟವರ್ ಅನ್ನು 7 ಕೋಟಿ ರು. ಖರ್ಚು ಮಾಡಿ ನಿರ್ಮಾಣ ಮಾಡಲಾಗುತ್ತಿದೆ.
ಕೆಕೆಅರ್.ಡಿಬಿ, ಡಿಎಂಎಫ್ ಸೇರಿದಂತೆ ಸಾಕಷ್ಟು ಹಣ ಬಳ್ಳಾರಿ ಅಭಿವೃದ್ಧಿಗೆ ನೀಡಲಾಗಿದೆ ಶಾಸಕ ಭರತ್ ರೆಡ್ಡಿ ಅವರ ಮುತುವರ್ಜಿಯಿಂದ ಬಳ್ಳಾರಿ ಅಭಿವೃದ್ಧಿಯಾಗಲಿದೆ ಎಂದರು. ವಿಳಂಬವಾಗಿರುವ ಬಳ್ಳಾರಿ ಹೊಸಪೇಟೆ ರಸ್ತೆ ಶೀಘ್ರದಲ್ಲಿ ಮುಗಿಯಲಿದೆ. ಬಳ್ಳಾರಿಗೆ ನಿಮಾನ್ಸ್ ಆಸ್ಪತ್ರೆಯ ಶಾಖೆಯನ್ನು ತರುತ್ತೇವೆ. ಜೀನ್ಸ್ ಪಾರ್ಕ್ ಮಾಡಲು 125 ಎಕರೆ ಸ್ಥಳ ನಿಗದಿ ಮಾಡಲಾಗಿದೆ ಎಂದು ಹೇಳಿದರು.
ಹರ ಗುರು ಚರ ಮೂರ್ತಿಗಳಿಂದ ಕನಕದುರ್ಗಮ್ಮ ಗುಡಿ ರೈಲ್ವೆ ಅಂಡರ್'ಪಾಸ್ ಉದ್ಘಾಟನೆ-ಬಳ್ಳಾರಿ ನಗರದ ಬಹು ನಿರೀಕ್ಷಿತ ಕನಕದುರ್ಗಮ್ಮ ಗುಡಿ ರೈಲ್ವೆ ಅಂಡರ್'ಪಾಸ್ ಅನ್ನು ಭಾನುವಾರ ಸಂಜೆ ಹರ ಗುರು ಚರ ಮೂರ್ತಿಗಳು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.ಉದ್ಘಾಟನೆಗೂ ಮುನ್ನ ಕೊಟ್ಟೂರು ಸಂಸ್ಥಾನ ಮಠದ ಕೊಟ್ಟೂರು ಮಹಾಸ್ವಾಮಿ ಹಾಗೂ ಎಮ್ಮಿಗನೂರು ಹಂಪಿಸಾವಿರ ಮಠದ ವಾಮದೇವ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರಿಗೆ ಆಶೀರ್ವದಿಸಿದ ನಂತರ ಅಂಡರ್'ಪಾಸ್ ಅನ್ನು ಉದ್ಘಾಟಿಸಿದರು.
ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮೇಯರ್ ಮುಲ್ಲಂಗಿ ನಂದೀಶ್, ವಕ್ಫ್ ಬೋರ್ಡ್ ಅಧ್ಯಕ್ಷ ಹುಮಾಯುನ್ ಖಾನ್, ಉಪಮೇಯರ್ ಡಿ.ಸುಕುಂ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಕಮ್ಮ ಮಹಾಜನ ಸಂಘದ ಅಧ್ಯಕ್ಷ ಮುಂಡ್ಲೂರು ಅನುಪಕುಮಾರ್, ರೆಡ್ಡಿ ಮಹಾಜನ ಸಂಘದ ನಾರಾ ಪ್ರತಾಪ್ ರೆಡ್ಡಿ, ಅಖಿಲ ಭಾರತ ವೀರಶೈವ ಮಹಾಸಭಾದ ದಂಡಿನ ಶಿವಾನಂದ, ಎ.ಮಾನಯ್ಯ, ಅಯಾಜ್ ಅಹ್ಮದ್, ಅಸ್ಲಂ ಫರವೇಜ್, ಮಹಾನಗರ ಪಾಲಿಕೆಯ ಸದಸ್ಯರು, ಚಾನಾಳ್ ಶೇಖರ್, ಕೆ.ಎನ್.ಎಂ.ಅಭಿಲಾಷ್, ಹುಸೇನ್ ಪೀರಾ, ಗುಡ್ಲೂರು ರವಿ, ಚಂಪಾ ಚವ್ಹಾಣ್, ರಾಮು ಚವ್ಹಾಣ್, ಶಮೀಮ್ ಜೊಹ್ರಾ, ಸಲ್ಮಾ ಎಸ್.ಕೆ, ಅಖಿಲಾ ಇತರರು ಹಾಜರಿದ್ದರು.
ಉದ್ಘಾಟನೆಗೆ ಸೇರಿದ ಜನಸಾಗರ: ಅಂಡರ್'ಪಾಸ್ ಉದ್ಘಾಟನೆ ಯಾವಾಗ ಆಗಲಿದೆ ಎಂದು ಬಹು ದಿನಗಳಿಂದ ಜನರು ಕಾತರದಿಂದ ಇದ್ದರು. ಕಾಮಗಾರಿ ಉದ್ಘಾಟನೆಯ ಘಳಿಗೆಯನ್ನು ಕಣ್ತುಂಬಿಕೊಳ್ಳಲು ಕನಕದುರ್ಗಮ್ಮ ದೇವಸ್ಥಾನದ ಬಳಿ ಸಾವಿರಾರು ಜನರು ಸೇರಿದ್ದರು.ಅಂಡರ್'ಪಾಸಿನ ಎರಡೂ ಬದಿಯ ಗೋಡೆಗಳನ್ನು ದೀಪಗಳಿಂದ ಅಲಂಕರಿಸಲಾಗಿತ್ತು. ಪುಟ್'ಪಾತಿನ ಕಂಬಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ತಾಷಾ ರಾಂಡೋಲುಗಳನ್ನು ವಾದ್ಯಗಳ ಮೂಲಕ, ಆಕಾಶದಲ್ಲಿ ಚಿತ್ತಾರ ಮೂಡಿಸುವ ಪಟಾಕಿಗಳ ಸದ್ದಿನೊಂದಿಗೆ ಅತಿಥಿಗಳನ್ನು ಸ್ವಾಗತಿಸಲಾಯಿತು. ಶಾಸಕ ನಾರಾ ಭರತ್ ರೆಡ್ಡಿ, ರಾಜ್ಯಸಭಾ ಸಂಸದ ಡಾ.ಸಯ್ಯದ್ ನಾಸಿರ್ ಹುಸೇನ್ ಅವರಿಗೆ ಕ್ರೇನ್ ಮೂಲಕ ಹಾರ ಹಾಕುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.ಹರ ಗುರು ಚರ ಮೂರ್ತಿಗಳಿಂದ ರಸ್ತೆ ಉದ್ಘಾಟನೆಯಾದ ನಂತರ ಅತಿಥಿಗಳು, ಶಾಸಕರು, ಸಂಸದರು ರಸ್ತೆಯಲ್ಲಿ ನಡೆದುಕೊಂಡು ಹೋದರು. ತದನಂತರ ಸ್ವಾಮೀಜಿಗಳ ವಾಹನಗಳು ಸಂಚರಿಸುವ ಮೂಲಕ ರಸ್ತೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ