ಹುನಗುಂದ: ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

Upayuktha
0


ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ ಹೆಚ್ಚು ಚಿಣ್ಣರು ತಮ್ಮ ಪ್ರತಿಭೆ ಪ್ರದರ್ಶಿಸಿದರು.


ಬೆಳಿಗ್ಗೆ 10-30 ಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಿಗೆವ್ವ ಮಾದರ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ದಲ್ಲಿ ಹುನಗುಂದ ಬಿ ಆರ್ ಸಿ ಯ ಪ್ರೌಢ ವಿಭಾಗದ ಸಂಪನ್ಮೂಲ ವ್ಯಕ್ತಿ ವಿನೋದಕುಮಾರ ಭೋವಿ ಮಾತನಾಡಿ, ಎಫ್ ಎಲ್ ಎನ್ ಎಂದರೆ ಫಂಡಮೆಂಟಲ್ ಲಿಟರಸಿ ಅಂಡ್ ನ್ಯೂಮರಸಿ ಎಂಬುದು ಮಗುವಿನ ಕನಿಷ್ಠ ಕಲಿಕೆಯ ಮಾನದಂಡಗಳಾದ ಸ್ಪಷ್ಟ ಓದು ಶುದ್ಧ ಬರಹ ಸರಳ ಲೆಕ್ಕಾಚಾರ ಸಾಮರ್ಥ್ಯವಾಗಿದೆ. ಯಾವ ಮಕ್ಕಳು ಸಾಮಾನ್ಯ ಕಲಿಕೆಯಲ್ಲಿ ಈ ಸಾಮರ್ಥ್ಯಗಳನ್ನು ಸಾಧಿಸಿಲ್ಲವೋ ಅಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಚಟುವಟಿಕೆಯಾಧಾರಿತ ವಿಶೇಷ ಬೋಧನೆಯ ಮೂಲಕ ಕಲಿಸುವ ಪ್ರಕ್ರಿಯೆಯಾಗಿದೆ. ವರ್ಷದ ಉದ್ದಕ್ಕೂ ನಡೆದ ಈ ಪ್ರಕ್ರಿಯೆ ಈಗ ಅಂತ್ಯಗೊಂಡಿದ್ದು ಆ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಕಲಿಯುವಂತವರಾಗಿದ್ದು ಅಂಥವರಿಗೆ ವಿಶೇಷ ಸ್ಪರ್ಧೆಗಳನ್ನು ನಡೆಸಿ ಪ್ರೋತ್ಸಾಹಿಸುವ ಕಾರ್ಯಕ್ರಮವೇ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬವಾಗಿದೆ ಎಂದರು.


ಬಿ ಐ ಇ ಆರ್ ಟಿ ಸಂಗಮೇಶ್ ಹೊದ್ಲೂರ ಮಾತನಾಡಿ, ತಾವು ನಿಧಾನ ಗತಿಯ ಕಲಿಕೆಯ ಮಕ್ಕಳು ಎಂಬ ಕೀಳರಿಮೆಯಲ್ಲಿದ್ದ ಮಕ್ಕಳಲ್ಲಿ ವಿಶೇಷ ಚಟುವಟಿಕೆಗಳ ಮೂಲಕ ಎಲ್ಲ ಸಾಮರ್ಥ್ಯಗಳನ್ನು ಸಾಧಿಸುವಲ್ಲಿ ನಾವು ಸಹ ಮುಂದಿದ್ದೇವೆ ಎಂಬ ಭಾವನೆಯನ್ನು ಹುಟ್ಟು ಹಾಕಿ ಸ್ವಯಂ ಪ್ರೇರಣೆಯಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಹಾಗೂ ಮಕ್ಕಳ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ ಕೀರ್ತಿ ಎಲ್ಲಾ ಶಾಲೆಗಳ ಗುರುವೃಂದಕ್ಕೆ ಸಲ್ಲುತ್ತದೆ ಎಂದರು.


ಗಟ್ಟಿ ಓದು, ಕೈಬರೆಹ, ಮೆಮೊರಿ ಪರೀಕ್ಷೆ, ರಸಪ್ರಶ್ನೆಯಂತಹ ಏಳು ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಪಡೆದುಕೊಂಡರು. ಇಪ್ಪತ್ತಕ್ಕೂ ಹೆಚ್ಚು ಸಂಪನ್ಮೂಲ ಶಿಕ್ಷಕರು ಎಲ್ಲ ಸ್ಪರ್ಧೆಗಳನ್ನು ನಡೆಸಿಕೊಟ್ಟರು. 


ಬಹುಮಾನ ವಿತರಣೆ ಹಾಗೂ ಸಮಾರೋಪ: ಹುನಗುಂದ ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಎಸ್ ಗುಡಗುಂಟಿಯವರ ನೇತೃತ್ವದಲ್ಲಿ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಸ್ ಎಸ್ ಎಲ್ ಸಿ ಹಂತದಲ್ಲಿ ಮಕ್ಕಳು ಅಮೋಘ ಸಾಧನೆ ಮಾಡಲು ಪ್ರಾಥಮಿಕ ಶಿಕ್ಷಣ ಅವರಿಗೆ ಭದ್ರ ಬುನಾದಿ ಆಗಬೇಕು. ಆ ನಿಟ್ಟಿನಲ್ಲಿ ಮಕ್ಕಳಲ್ಲಿ ಕಲಿಕಾ ಶಕ್ತಿ ಉಂಟುಮಾಡುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪಾತ್ರ ದೊಡ್ಡದಾಗಿದೆ. ಕೋವಿಡ್ಡೋತ್ತರ ಕಾಲದಿಂದ ಮಕ್ಕಳ ಕಲಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹಿನ್ನಡೆಯಾಗಿದ್ದು ಸರಕಾರ ಎಲ್ಲಾ ಸೌಲಭ್ಯಗಳನ್ನು ನೀಡಿದರೂ ನಿಗದಿತ ಕಲಿಕಾ ಸಾಧನೆ ಮಾಡುವಲ್ಲಿ ವಿಫಲತೆ ಕಾಣುತ್ತಿದ್ದು, ಮಕ್ಕಳ ಹೆಸರು ಮಕ್ಕಳ ವಿಕಾಸಕ್ಕೆ ನಾವೆಲ್ಲರೂ ಕಂಕಣ ಬದ್ಧರಾಗಿ ದುಡಿಯಬೇಕಾಗಿದೆ ಎಂದರು. 


ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ಸಂಗಮೇಶ ಸಿಂಗಾಡಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹಾಂತೇಶ ಮುರಡಿ, ಸದಸ್ಯ ಬಸ್ಸೆಟ್ಟೆಪ್ಪ ಸಿಂಗಾಡಿ, ಕಾರ್ಯದರ್ಶಿ ಆದನಗೌಡ ಹಿರೇಅಮರಗೌಡ್ರ, ಎಂ.ಬಿ. ಪರುತಗೌಡ್ರು,  ಈರಪ್ಪ ಅಂಬಿಗೇರ, ಪರಶುರಾಮ ಹೂಲಗೇರಿ, ಬಸವರಾಜ ಮಾದರ, ಗುರಪ್ಪ ಹುಚನೂರ, ಅಯ್ಯನಗೌಡ ಗೌಡರ, ಶರಣಪ್ಪ ಗುರಿಕಾರ, ಸಿ ಆರ್ ಪಿ ಸಂಗಪ್ಪ ಸಂಗಮ, ಬಿ ಆರ್ ಪಿ ಜಿ ವೈ ಆಲೂರ, ಶಿಕ್ಷಕರಾದ ಸಿದ್ದು ಶೀಲವಂತರ, ಬಿ ಜಿ ಗೌಡರ, ಬಿ.ಎಚ್ ಭಜಂತ್ರಿ, ಅಶೋಕ ಬಳ್ಳಾ, ಎಸ್ ಡಿ ಎಂ ಸಿ ಸದಸ್ಯರು ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top