ಪುತ್ತೂರು: ಮಂಡ್ಯ ಜಿಲ್ಲೆಯಲ್ಲಿ ನಡೆದ ಹೃದಯವಿದ್ರಾವಕ ಘಟನೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದನ್ನು ಸ್ಪಷ್ಟಪಡಿಸುತ್ತದೆ. ಇತ್ತೀಚೆಗೆ ಶಾಲೆಯಲ್ಲಿ ನಡೆದ 8 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ದೇಶದ ನೀತಿಮೌಲ್ಯಗಳಿಗೆ ಹೊಡೆಯುತ್ತಿರುವ ದೊಡ್ಡ ಹೊಡೆತ. ಇದು ತಾಯಿ, ತಂದೆ, ಸಹೋದರಿಯುಳ್ಳ ಪ್ರತಿಯೊಬ್ಬನ ಮನಸ್ಸಿಗೆ ಆಘಾತಕಾರಿಯಾದ ಘಟನೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಪ್ರತಿಕ್ರಿಯಿಸಿದ್ದಾರೆ.
ಮಂಡ್ಯದ ಘಟನೆ ಸಂಬಂಧ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಅವರು, "ನಾನು ಕೂಡಾ ಪುಟ್ಟ ಹೆಣ್ಣುಮಗುವಿನ ತಂದೆ. ಪ್ರತಿದಿನವೂ ಇಂತಹ ಸುದ್ದಿಗಳನ್ನು ಕೇಳಿದಾಗ, ನನ್ನ ಮಗುವಿಗೆ ನಾನು ಏನು ಹೇಳಬೇಕು? ಈ ದೇಶದಲ್ಲಿ, ಈ ರಾಜ್ಯದಲ್ಲಿ, ಹೆಣ್ಣುಮಕ್ಕಳಿಗೆ ಸುರಕ್ಷತೆ ಇದೆಯೇ ಎಂದು ಪ್ರಶ್ನಿಸುವಂತಾಗಿದೆ. ನಾವು ನಮ್ಮ ಮಕ್ಕಳನ್ನು ಕನಸುಗಳೆದುರು ಬೆಳೆಯಬೇಕಾ, ಅಥವಾ ಭಯದ ನೆರಳಲ್ಲಿ ಜೀವನ ಸಾಗಿಸಬೇಕಾ?" ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಅಪರಾಧಗಳು ದಿನೇದಿನೇ ಹೆಚ್ಚುತ್ತಿವೆ. ಆದರೆ ರಾಜ್ಯ ಸರ್ಕಾರ ಮಾತ್ರ ನಿರ್ಲಕ್ಷ್ಯದಿಂದ ನಡೆದುಕೊಳ್ಳುತ್ತಿದೆ. ಪಿಡುಗಿನಂತೆ ಹೆಚ್ಚುತ್ತಿರುವ ಅತ್ಯಾಚಾರ, ಮಹಿಳಾ ದೌರ್ಜನ್ಯಗಳಿಗೆ ತಡೆಯಿಲ್ಲದೆ, ಸರ್ಕಾರ ಕೈಕಟ್ಟಿ ಕುಳಿತಿದೆ. ಪೊಲೀಸ್ ವ್ಯವಸ್ಥೆ ನಿಷ್ಕ್ರಿಯವಾಗಿದೆ, ಕಾನೂನು ಶಿಸ್ತು ಸಂಪೂರ್ಣ ಕುಸಿದಿದೆ. ಇದು ಸರ್ಕಾರದ ವೈಫಲ್ಯದ ಸ್ಪಷ್ಟ ಪ್ರಮಾಣವಾಗಿದೆ ಎಂದು ಕಿಶೋರ್ ಟೀಕಿಸಿದ್ದಾರೆ.
ಇದಕ್ಕೆ ಹೆಚ್ಚುವರಿಯಾಗಿ, ರಾಜ್ಯದ ಗೃಹ ಸಚಿವರು ನಿರಂತರವಾಗಿ ಅಪರಾಧಿಗಳನ್ನು ಪೋಷಿಸುವಂತೆ, ಅವರಿಗೆ ಪರೋಕ್ಷ ಬೆಂಬಲ ನೀಡುವಂತೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಈ ಹಿಂದಿನ ಅನೇಕ ಅಪರಾಧ ಪ್ರಕರಣಗಳಲ್ಲಿಯೂ ಅವರು "ಅವರು ಸ್ಕ್ರೂ ಡ್ರೈವರ್ ಬಳಸಿದ್ದಾರೆ ಕತ್ತಿ ಅಲ್ಲ", "ಇದು ಹುಡುಗಾಟಕ್ಕೆ ಮಾಡಿದ ಕೊಲೆ" ಎಂಬ ರೀತಿಯ ಹಾಸ್ಯಾಸ್ಪದ ಉದಾಹರಣೆಗಳೊಂದಿಗೆ ಜನರ ಕೋಪಕ್ಕೆ ಕಾರಣರಾಗಿದ್ದಾರೆ. ಇದು ಒಂದು ಗಂಭೀರ ಸನ್ನಿವೇಶ, ಈ ರೀತಿಯ ನಿರ್ಲಕ್ಷ್ಯದಿಂದ ರಾಜ್ಯದ ಜನತೆ ಬೇಸರಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ನಾನು ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇದನ್ನು ರಾಜಕೀಯದ ದೃಷ್ಟಿಯಿಂದ ನೋಡುವುದಿಲ್ಲ, ಇದು ಮಾನವೀಯತೆ ಮತ್ತು ಸಮಾಜದ ನೈತಿಕ ಹೊಣೆಗಾರಿಕೆಯ ವಿಷಯ. ನಾವು ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕು. ಅತ್ಯಾಚಾರಿಗಳಿಗೆ ತಕ್ಷಣ ಕಠಿಣ ಶಿಕ್ಷೆ ದೊರಕುವ ವ್ಯವಸ್ಥೆ ಮಾಡಬೇಕು. ಮಹಿಳೆಯರು, ಮಕ್ಕಳು ಭಯವಿಲ್ಲದೆ ಬದುಕುವಂತಹ ರಾಜ್ಯವನ್ನು ರೂಪಿಸಬೇಕು.
ಈ ರಾಜ್ಯ ಸರ್ಕಾರ ಇಂತಹ ಘಟನೆಗಳನ್ನು ತಡೆಯಲು ಸಂಪೂರ್ಣ ವಿಫಲವಾಗಿದೆ. ಇದು ಜನತೆಯ ವಿಶ್ವಾಸಕ್ಕೆ ಮಾಡಿದ ದ್ರೋಹ. ಕಾನೂನು ಮತ್ತು ಸುವ್ಯವಸ್ಥೆಯನ್ನು ತಿದ್ದುಪಡಿ ಮಾಡುವುದಾಗಿ ಹೇಳಿದ ಈ ಸರ್ಕಾರ, ಅದರ ವಿರುದ್ಧವೇ ನಡೆದುಕೊಳ್ಳುತ್ತಿದೆ. ರಾಜ್ಯದ ಜನತೆ ಇಂತಹ ದುರ್ಬಲ ಆಡಳಿತವನ್ನು ಸಹಿಸಿಕೊಳ್ಳುವುದಿಲ್ಲ.
ನಾನು ಈ ಪ್ರಕರಣದಲ್ಲಿ ತಕ್ಷಣ ನ್ಯಾಯ ಸಿಗಬೇಕು ಎಂದು ಒತ್ತಾಯಿಸುತ್ತೇನೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಜನರ ಆಕ್ರೋಶ ಮತ್ತು ಮಹಿಳೆಯರ ಭಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಜನರು ಅವರ ಹಕ್ಕುಗಳಿಗಾಗಿ ಬೀದಿಗಿಳಿಯುವ ದಿನ ದೂರವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ