ಹಿಂದೂ ಜನಜಾಗೃತಿ ಸಮಿತಿಯಿಂದ ಜಿಗಣಿಯಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆ

Upayuktha
0

ಮತಾಂತರವನ್ನು ತಡೆಯಲು ಹಿಂದೂಗಳು ಧರ್ಮಶಿಕ್ಷಣ ಪಡೆಯಬೇಕು ! -  ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.


ಬೆಂಗಳೂರು :  ಭಾರತವು ಸ್ವಯಂಭೂ ಹಿಂದೂ ರಾಷ್ಟ್ರವಾಗಿದೆ ಆದರೆ 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ, ವಿರೋಧ ಪಕ್ಷದವರನ್ನು ಜೈಲಿನಲ್ಲಿಟ್ಟು, ಭಾರತದ ಜನರ ಸ್ವಾತಂತ್ರ್ಯವನ್ನು ಕಸಿದುಕೊಂಡು ಅಂದಿನ ಕೇಂದ್ರ ಸರಕಾರ ಭಾರತವನ್ನು ಜಾತ್ಯತೀತ ರಾಷ್ಟ್ರ'ವನ್ನಾಗಿ ಮಾಡಲು ಸಂವಿಧಾನದಲ್ಲಿ ತಿದ್ದುಪಡಿಯನ್ನು ಮಾಡಿತು. ಇದರ ಪರಿಣಾಮವಾಗಿ ಇಂದು ನೂರು ಕೋಟಿ ಜನರಿರುವ ಹಿಂದೂಗಳಿಗಾಗಿ ಒಂದೇ ಒಂದು ಹಿಂದೂರಾಷ್ಟ್ರವಿಲ್ಲ. 


ಅದಕ್ಕಾಗಿ ನಾವೆಲ್ಲಾ ಇಂದು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಬದ್ಧರಾಗೋಣ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ  ಮೋಹನ್ ಗೌಡ ಇವರು ಪ್ರತಿಪಾದಿಸಿದರು. ಅವರು ಜಿಗಣಿಯ ನಿಸರ್ಗ ಲೇಔಟ್ ನಲ್ಲಿ ಆಯೋಜಿಸಲಾದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ವೇಳೆ ಸ್ಥಳೀಯ ಹಿಂದೂ ಮುಖಂಡರಾದ  ರಾಜಶೇಖರ್ ರೆಡ್ಡಿ ಮತ್ತು ಸನಾತನ ಸಂಸ್ಥೆಯ ಸೌ. ದೇವಕಿ ಪುಂಡಲೀಕ ಇವರು ಉಪಸ್ಥಿತರಿದ್ದರು. 300 ಕ್ಕೂ ಅಧಿಕ ಧರ್ಮಾಭಿಮಾನಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


ಮೋಹನ್ ಗೌಡ ಅವರು ಮುಂದೆ ಮಾತನಾಡಿ, ಕ್ರೈಸ್ತರ ಮತಾಂತರವನ್ನು ತಡೆಯಲು ಹಿಂದೂಗಳು ಧರ್ಮಶಿಕ್ಷಣವನ್ನು ಪಡೆಯಬೇಕು. ಇಂದು ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಇರುವಾಗಲು ಬಹುದೊಡ್ಡ ಪ್ರಮಾಣದಲ್ಲಿ ಮತಾಂತರ ನಡೆಯುತ್ತಿದೆ. ಅಮಾಯಕ ಹಿಂದೂಗಳನ್ನು ಮೋಸ ಮತ್ತು ವಂಚನೆಯಿಂದ ಮತಾಂತರ ಮಾಡಲಾಗುತ್ತಿದೆ. 


ಇದನ್ನು ತಡೆಯಲು ಹಿಂದೂಗಳು ದೇವಸ್ಥಾನಗಳ ಮೂಲಕ ಹಿಂದೂ ಧರ್ಮದಶಿಕ್ಷಣವನ್ನು ಸಮಾಜಕ್ಕೆ ನೀಡಬೇಕಾಗಿದೆ. ಅದರಿಂದ ಮತಾಂತರವನ್ನು ತಡೆಯಬಹುದು. ದೇಶದಲ್ಲಿ ಲವ್ ಜಿಹಾದ್, ಹಲಾಲ್ ಜಿಹಾದ್, ಜನಸಂಖ್ಯೆ ಅಧ್ಯಯನದ ಜಿಹಾದ್ ಮುಂತಾದವುಗಳ ಮೂಲಕ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಈ ಎಲ್ಲ ಷಡ್ಯಂತ್ರಗಳನ್ನು ವಿಫಲಗೊಳಿಸಲು ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡುವುದೊಂದೇ ಪರ್ಯಾಯವಾಗಿದೆ ಎಂದರು.


ಸ್ಥಳೀಯ ಹಿಂದೂ ಮುಖಂಡರಾದ  ರಾಜಶೇಖರ್ ರೆಡ್ಡಿ ಇವರು ಮಾತನಾಡಿ, ನಮ್ಮ ಹಿರಿಯರು ನಮಗೆ ನೀಡಿದ ಈ  ಸನಾತನ ಸಂಸ್ಕೃತಿ ಹಾಗೂ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಅನಿವಾರ್ಯತೆ ನಮ್ಮ ಮುಂದಿದೆ, ಕಾಶ್ಮೀರಿ ಹಿಂದೂಗಳು ತಮ್ಮ ಮನೆ-ಮಠ ಬಿಟ್ಟು ಜೀವ ಉಳಿಸಿಕೊಳ್ಳಲು ಇಂದು ನಿರ್ಗತಿಕರಾಗಿ ದೇಶದ ಮೂಲೆ ಮೂಲೆಗಳಲ್ಲಿ ವಾಸಿಸುವ ಪರಿಸ್ಥಿತಿ ಬಂದಿದೆ. ನಾವೆಲ್ಲಾ ಹಿಂದೂಗಳು ಜಾತಿ-ಬೇಧ ಮರೆತು ಹಿಂದೂರಾಷ್ಟ್ರದ ಸ್ಥಾಪನೆಗಾಗಿ ಒಂದುಗೂಡೋಣ ಎಂದರು.


ಸನಾತನ ಸಂಸ್ಥೆಯ ಸೌ. ದೇವಕಿ ಪುಂಡಲೀಕ ಇವರು ಮಾತನಾಡಿ, ಹಿಂದೂ ವಿರೋಧಿಗಳು ಸನಾತನ ಹಿಂದೂ ಧರ್ಮ ಡೆಂಗ್ಯೂ, ಮಲೇರಿಯಾ ಎನ್ನುವ ಅನೇಕ ಹಿಂದೂ ವಿರೋಧಿ ಹೇಳಿಕೆಗಳನ್ನ ನೀಡುತ್ತಿದ್ದಾರೆ, ಇದನ್ನು ನಾಶಮಾಡಬೇಕು ಎಂದು ಹೇಳುತ್ತಿದ್ದಾರೆ. ಆದರೆ ಸನಾತನ ಹಿಂದೂ ಧರ್ಮವು ನಿತ್ಯ ನೂತನವಾಗಿದ್ದು, ಇದು ಈಶ್ವರನ ನಿರ್ಮಾಣವಾದ್ದರಿಂದ ಇದಕ್ಕೆ ಅಳಿವಿಲ್ಲ. 


ಹಿಂದಿನ ಗುರುಕುಲ ಪದ್ಧತಿಯಲ್ಲಿ ತಂದೆ ತಾಯಿಯೇ ದೇವರು ಎನ್ನುತ್ತಿದ್ದರು, ಆದರೆ ಇದರ ವಿರುದ್ಧ ಇಂದಿನ ಮೆಕಾಲೆ ಶಿಕ್ಷಣ ಪದ್ಧತಿಯಿಂದ ಅನಾಥಶ್ರಮ, ವೃದ್ಧಾಶ್ರಮಗಳೇ ಹೆಚ್ಚಾಗಿದೆ` ಎಂದರು. ಆಪತ್ಕಾಲದಿಂದ ಸ್ವಂತದ ಮತ್ತು ತಮ್ಮ ಪರಿವಾರದ ರಕ್ಷಣೆಗಾಗಿ ಭಗವಂತನ ನಾಮಜಪ ಇಂದಿನಿಂದಲೇ ಪ್ರಾರಂಭಿಸೋಣ` ಎಂದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top