- ಎಸ್.ಡಿ.ಎಂ. ಕಾಲೇಜ್ ನಲ್ಲಿ ಅಂತರರಾಷ್ಟ್ರೀಯ ವಿಚಾರ ಸಂಕಿರಣ
- ಎಂಎಸ್ಎಂಇಗಳನ್ನು ಪ್ರೋತ್ಸಾಹಿಸುವ ಮೂಲಕ ಗ್ರಾಮೀಣ ಅಭಿವೃದ್ಧಿ ಸಾಧ್ಯವಾಗಿಸಬೇಕಿದೆ: ಪ್ರೊ. ಕೃಷ್ಣರಾಜ್
ಉಜಿರೆ: ಭಾರತವು ಪ್ರಧಾನವಾಗಿ ಗ್ರಾಮೀಣ ಆರ್ಥಿಕತೆಯಾಗಿದ್ದು, ಆರ್ಥಿಕತೆಯ ಬೆಳವಣಿಗೆಯ ಎಂಜಿನ್ ಆದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್ಎಂಇ)ಗಳನ್ನು ಪ್ರೋತ್ಸಾಹಿಸುವ ಮೂಲಕ ಗ್ರಾಮೀಣ ಅಭಿವೃದ್ಧಿ ಸಾಧ್ಯವಾಗಿಸಬೇಕಿದೆ ಎಂದು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಆ್ಯಂಡ್ ಎಕನಾಮಿಕ್ ಚೇಂಜ್ (ISEC)ನ ಪ್ರಾಧ್ಯಾಪಕ, ರಾಜ್ಯ ಸರ್ಕಾರದ ಅಸೆಟ್ ಮಾನಿಟೈಸೇಶನ್ ತಜ್ಞರ ಸಮಿತಿ ಸದಸ್ಯ ಪ್ರೊ. ಕೃಷ್ಣರಾಜ್ ಹೇಳಿದರು.
ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗದ ವತಿಯಿಂದ ಆಯೋಜಿಸಿದ ‘ಪ್ರವರ್ಧಿತ ಆರ್ಥಿಕತೆಯಲ್ಲಿ ಗ್ರಾಮೀಣ ಉದ್ಯಮಶೀಲತೆಯ ಪಾತ್ರ’ (Rural Enterprenuriship in Emerging Economics- A way forward) ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣ (Multi-disciplinary International Conference)ದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಕೊರೊನಾ ನಂತರ ಎಂಎಸ್ಎಂಇಗಳು ಅನಿಶ್ಚಿತತೆಯನ್ನು ಎದುರಿಸುತ್ತಿವೆ. ಭಾರತೀಯ ಸಾಂಪ್ರದಾಯಿಕ ಕೃಷಿ ಆಧಾರಿತ ಉತ್ಪನ್ನ ಹಾಗೂ ಕುಶಲಕರ್ಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸುವ ಮೂಲಕ, ತಂತ್ರಜ್ಞಾನ ಬಳಕೆ, ಹೇರಳ ಹೂಡಿಕೆ ಮೂಲಕ ಎಂಎಸ್ಎಂಇಗಳನ್ನು ಸರಕಾರಗಳು ಪ್ರೋತ್ಸಾಹಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
“ಗಾಂಧೀಜಿ ಅವರು ಹಳ್ಳಿಗಳ ಉದ್ಧಾರ ಮುಖ್ಯವೆಂದು ಭಾವಿಸಿದ್ದರು. ಆದರೆ ನೆಹರೂ ಅವರು ಭಿನ್ನ ತತ್ತ್ವ ಹೊಂದಿದ್ದರು. ಕ್ರಮೇಣ ಹಳ್ಳಿಗಳ ಅಭಿವೃದ್ಧಿಗೆ ಸರಕಾರಗಳು ಕ್ರಮ ಕೈಗೊಳ್ಳುತ್ತ ಬಂದಿದ್ದರೂ 2047ರ ವೇಳೆಗೆ ಭಾರತವು ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ದೇಶ) ಎನಿಸಿಕೊಳ್ಳಬೇಕಾದರೆ ವಿಭಿನ್ನ ವಿಧಾನ ಅಗತ್ಯವಾಗಿದೆ.
ದೇಶದ ಮೈಕ್ರೋ ಎಕನಾಮಿಕ್ ತತ್ತ್ವದಲ್ಲಿ ಬದಲಾವಣೆ ತರುವ ಮೂಲಕ, ಹೂಡಿಕೆ, ಆವಿಷ್ಕಾರ, ತಂತ್ರಜ್ಞಾನ ಇತ್ಯಾದಿ ಅಂಶಗಳಿಂದ ಕೂಡಿದ ಮಿಶ್ರ ತತ್ತ್ವದ ಮೂಲಕ ಎಂಎಸ್ಎಂಇಗಳನ್ನು ಪ್ರೋತ್ಸಾಹಿಸಿದಲ್ಲಿ ಅಭಿವೃದ್ಧಿ ಕಾಣಬಹುದು” ಎಂದರು.
"ಜನರ ಬದುಕುಳಿಯುವಿಕೆ ಮತ್ತು ಆರ್ಥಿಕ ಸುಸ್ಥಿರತೆಗಾಗಿ ಪ್ರಕೃತಿ ಮತ್ತು ಅದರ ಸಂಪನ್ಮೂಲಗಳ ಪಾತ್ರವನ್ನು ಗುರುತಿಸುವುದು ಇಂದಿನ ತುರ್ತು. ಕೃಷಿ ಆಧಾರಿತ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಮೂಲಕ ಧರ್ಮಸ್ಥಳದ ಸಿರಿ, ರುಡ್ಸೆಟ್, ಗ್ರಾಮಾಭಿವೃದ್ಧಿ ಯೋಜನೆಗಳು ಉತ್ತಮ ಕಾರ್ಯ ಮಾಡುತ್ತಿವೆ. ಸರಕಾರಗಳು ಯುವಜನರ ಮೇಲೆ ವಿಶ್ವಾಸ ಇಟ್ಟು, ಅವರು ಉದ್ಯಮಿಗಳಾಗುವ ನಿಟ್ಟಿನಲ್ಲಿ ಹೂಡಿಕೆ ಮಾಡಬೇಕು" ಎಂದರು.
ಮುಖ್ಯ ಅತಿಥಿ, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿದರು. ಆರ್ಥಿಕತೆ ಬೆಳೆದು ಸುಸ್ಥಿರವಾಗಬೇಕು. ಈ ನಿಟ್ಟಿನಲ್ಲಿ, ಉದ್ಯಮಶೀಲತೆಗೆ ಇರುವ ನೀತಿ ನಿರೂಪಣೆಗಳು ಅಭಿವೃದ್ಧಿ ಹೊಂದಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಉದ್ಯೋಗ ಬೇಕು, ಕೆಲಸ ಮಾಡಲು ಇಷ್ಟವಿಲ್ಲ ಎಂಬ ಮನಃಸ್ಥಿತಿ ಸಲ್ಲದು. ಯುವಜನತೆ ಬದ್ಧತೆ ಹೊಂದಿ ಸವಾಲುಗಳನ್ನು ಸ್ವೀಕರಿಸಬೇಕು. ಉದ್ದಿಮೆಗಳು ಉದ್ಯೋಗ ಕಲ್ಪಿಸಬೇಕು. ಸಿರಿ ಸಂಸ್ಥೆ ಅಂತಹ ಬೃಹತ್ ಉದ್ದಿಮೆಯಾಗಿದೆ ಎಂದರು. ಕಾರ್ಯಕ್ರಮಕ್ಕಾಗಿ ಅರ್ಥಶಾಸ್ತ್ರ ವಿಭಾಗವನ್ನು ಅಭಿನಂದಿಸಿದರು.
ಅತಿಥಿ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ ಮಾತನಾಡಿದರು. "ಉದ್ಯಮಿಗಳು ವ್ಯವಹಾರವನ್ನು ಪ್ರಾರಂಭಿಸುವುದು ಮಾತ್ರವಲ್ಲ, ಅವರು ಸಮಸ್ಯೆಗಳನ್ನು ಪರಿಹರಿಸುವವರು ಮತ್ತು ನಿರ್ಧಾರ ತೆಗೆದುಕೊಳ್ಳುವವರು ಕೂಡ ಆಗಿರಬೇಕಾಗುತ್ತದೆ. ಉದ್ಯಮಶೀಲತೆ ಉದ್ಯೋಗವನ್ನು ನೀಡುತ್ತದೆ ಮತ್ತು ನಿರುದ್ಯೋಗವನ್ನು ಕಡಿಮೆ ಮಾಡುತ್ತದೆ.
ವಾಣಿಜ್ಯೋದ್ಯಮಿಗಳನ್ನು ಕನಸುಗಾರರು ಎಂದು ಕರೆಯುತ್ತಾರೆ. ವಾಣಿಜ್ಯೋದ್ಯಮವು ಪರಿವರ್ತನೆಯ ಪ್ರಯಾಣವಾಗಿದೆ" ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. "ಅರ್ಥಶಾಸ್ತ್ರ ವಿಭಾಗದಿಂದ ನಡೆದ ವಿಚಾರ ಸಂಕಿರಣವು ಅಚ್ಚುಕಟ್ಟಾಗಿ ಮೂಡಿಬಂದಿದ್ದು, ಇದು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಈ ವಿಚಾರ ಸಂಕಿರಣವು ಗ್ರಾಮೀಣದ ಅಭಿವೃದ್ಧಿಗೆ ಕೊಡುಗೆ ನೀಡಿದೆ" ಎಂದರು.
ವಿಚಾರ ಸಂಕಿರಣದ ಮುಖ್ಯ ಸಲಹೆಗಾರ, ರಾಜ್ಯ ಯೋಜನಾ ಮಂಡಳಿ ಸದಸ್ಯ, ಮಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ, ಡಾ. ಜಿ.ವಿ. ಜೋಷಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಜಿ.ವಿ. ಜೋಷಿ ಹಾಗೂ ಪ್ರೊ. ಕೃಷ್ಣರಾಜ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ. ಗಣರಾಜ ಕೆ. ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಸಫೀರ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ