ಹಳೆಯ ದಿನದರ್ಷಿಕೆ ಹೋಗಿ ಹೊಸತೊಂದು ಬಂತು
ಕಳೆದ ನೆನಪನು ಮರೆತು ಹೊಸ ಚಿಂತನೆಯ ತಂತು |
ಚಳಿಗಾಳಿ ಬಿಸುಪಾಗಿ ಶಿಶಿರಕ್ಕೆ ಮನಸೋತು ಬಂತು
ಮಳೆಮುಗಿಲ ತೊಲಗಿಸುತ ಬಿಳಿಮೋಡ ತೇಲಿಬಂತು ||
ಜೀವಿಗಳ ಬದುಕಿನಲಿ ನೆಳಲುಬೆಳಕುಗಳ ಚೆಲ್ಲಿ
ಭಾವನೆಯ ಸಾಮ್ರಾಜ್ಯ ವಿಸ್ತರಿಸಿತ್ತು ಮೇರೆ ಮೀರಿ |
ಇರುಳು ಹಗಲೆನದೆ ದುಡಿದು ಮೂರ್ತರೂಪವ ನೀಡಿ
ಭವಿತವ್ಯದುಜ್ವಲಕೆ ಬೆವರ ಸುರಿಸಿತ್ತು ಪ್ರಭಾವ ಬೀರಿ ||
ಹಳೆಬೇರುಗಳು ಬಳಲಿದುವು ಮುದಿತನದ ನಿಜಗುಣಕೆ
ಒಣಗಿದೆಲೆಗಳು ಉದುರಿದುವು ಚಿಗುರೆಲೆಯ ಸ್ವಾಗತಿಸಿ |
ಮಂಜುಮುಸುಕಲು ಸೂರ್ಯ ಮರೆಯಾಗಿ ಹೋಗಿರಲು
ಅಂಜಿಕೆಯು ಎಲ್ಲಿಹುದು ಮಮತೆಮಡಿಲು ಸಾಂತ್ವನಿಸೆ ||
ಬೆಟ್ಟಗುಡ್ಡಗಳಲ್ಲಿ ಮರಗಳಡಿಯಲ್ಲಿ ಮೃಗತತಿಯು ಮಲಗಿರಲು
ನಿಟ್ಟೆಲುವು ಮುರಿವಂತೆ ಬೇರುಗಳಲ್ಲಿ ಹೆಬ್ಬಾವು ನುಸುಳಿ ಬಂತು |
ದಿಟ್ಟಿ ನಿಲುಕದ ದೂರ ಬಾಂದಳವು ಛತ್ರಿಯನು ಬಿಚ್ಚಿ ಹಿಡಿದಿರಲು
ಹುಟ್ಟಿರುವ ಲತೆಹೊದರುಗಳು ಮಾತೆ ಮುಡಿಗೆ ಹೂ ಮುಡಿಸಿತ್ತು ||
ಇಬ್ಬನಿಯು ಕರಗಿರಲು ಬಂಗಾರದಂತೆಸೆವ ಬಿಸಿಲಕಾಂತಿಯಲಿ
ಹಬ್ಬಹರಿದಿನಕೆ ನೀಡುವರು ಪ್ರಕೃತಿಗೆ ಹಸಿರ ಸೀರೆಯನು |
ದಿಬ್ಬಣಕೆ ಸಿಡಿಸುತಿರೆ ಸುಡುಮದ್ದು ಪಟ್ಟಣದ ಸಿರಿಜನರು
ಕಬ್ಬಿಗರು ವರ್ಣಿಸುತ ಕೊಡುವರೆಣೆಯಿರದ ಕಾವ್ಯಗುಚ್ಛವನು ||
ಮನೆಮಂದಿಗಳ ಜತೆಯಲ್ಲಿ ಬಂದುಸೇರಿಹ ನೇಹಿಗರು
ಎಣೆಯಿರದ ಸಡಗರದಿ ಕುಣಿಯುವರು ಮೈಮರೆತು |
ಪುಟ್ಟಮಕ್ಕಳನೆತ್ತಿ ಮುದ್ದಿಸುವ ಹಿರಿಕಿರಿಯ ಬಂಧುಗಳು
ಹೊಸದಿನದ ಸ್ವಾಗತಕೆ ಅಣಿಯಾಗುವರು ಜತೆಗೆ ಬೆರೆತು ||
ಆಶುಕವನ: ವಿ.ಬಿ. ಕುಳಮರ್ವ, ಕುಂಬ್ಳೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ