ವಿಶ್ವ ಹವ್ಯಕ ಸಮ್ಮೇಳನದಲ್ಲಿ ಒಂದು ದಿನ

Upayuktha
0


ದೊಂದು ದಿನ ರಾತ್ರಿ 10:15 ಗಂಟೆ. ಸಣ್ಣಕೆ ನಿದ್ರಾವಶನಾಗಿದ್ದೆ. ನನ್ನ ಸಂಚಾರವಾಣಿ ರಿಂಗಣಿಸಿತು. ಹವ್ಯಕ ಮಹಾಸಭಾ ಬೆಂಗಳೂರಿನಿಂದ ಮಾತನಾಡುತ್ತಿದ್ದೇವೆ. ಪ್ರಶಸ್ತಿ ಆಯ್ಕೆ ಸಮಿತಿ ಸಭೆ ಸೇರಿದೆ. ಹವ್ಯಕ ಕೃಷಿ ರತ್ನಕ್ಕಾಗಿ ನಿಮ್ಮನ್ನು ಆಯ್ಕೆ ಮಾಡಿದ್ದೇವೆ. ಕುಟುಂಬ ಸಮೇತರಾಗಿ ಬರಲೇಬೇಕು ಎಂಬ  ಹಕ್ಕೊತ್ತಾಯದ ಕರೆ. ಯೋಚಿಸಲೂ ಸಮಯವಕಾಶ ನೀಡದೆ ಒಪ್ಪಿಗೆ ತೆಗೆದುಕೊಂಡೇ ಬಿಟ್ಟರು.


ಬೆಂಗಳೂರಿನ ವಾಹನದಟ್ಟಣೆ, ಅಪರಿಚಿತ ಮಾರ್ಗಗಳು ನನ್ನಂತವರಿಗೆ ಹೋಗುವುದೇ ಬೇಡ ಅಂತ ಅನಿಸುವ ಹೊತ್ತಿಗೆ, ಹೇಗಪ್ಪ ಹೋಗುವುದು ಎಂದು ಯೋಚಿಸುತ್ತಿರುವಾಗ ಆರ್.ಸಿ. ಭಾರದ್ವಾಜರ ಕರೆ ಬಂತು. ಇವರು ಬುತ್ತಿ ಎಂಬ ಸಂಘಟನೆಯೊಂದನ್ನು ಸ್ಥಾಪಿಸಿ ಅದರ ಮೂಲಕ ಚಿಕ್ಕ ಚಿಕ್ಕ ಮೊತ್ತವನ್ನು ಬಂಧುಗಳಿಂದ ಸಂಗ್ರಹಿಸುವ ಬುತ್ತಿಯ ಮಹತ್ವವನ್ನು ಜನರಲ್ಲಿ ಬಿತ್ತಿದವರು. ಆ ಮೂಲಕ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ನಿರಂತರ ಹಣ್ಣು ಮತ್ತು ತರಕಾರಿಗಳನ್ನು ಉಚಿತವಾಗಿ ನೀಡುವ ಮಹಾನುಭಾವ. ನನಗೆ ಕರೆ ಮಾಡಿದ ಇವರು ನೀವು ಬೆಂಗಳೂರಿಗೆ ಬರುವಿರೆಂದು ಗೊತ್ತಾಯಿತು. ಯಶವಂತಪುರದಲ್ಲಿ ಬಸ್ಸಿಳಿದರೆ ನಾನು ಬಂದು ಕರಕೊಂಡು ಹೋಗಿ ಪುನಃ ನಿಮ್ಮನ್ನು ಬಸ್ಸು ಹತ್ತಿಸುವ ಜವಾಬ್ದಾರಿ ನನ್ನದು ಅಂತ ತಿಳಿಸಿ ಒತ್ತಾಯಿಸಿದರು. ದೂರವಾಣಿ ಸಂಪರ್ಕದ ನಾಲ್ಕಾರು  ಕರೆಗಿಂತ  ಹೆಚ್ಚಿನ ಗುರುತು ಪರಿಚಯ ನನಗಿಲ್ಲದೆ ಇರುವಾಗ ಅವರ ಪ್ರೀತಿಯ ಕರೆಯನ್ನು ದಾಕ್ಷಿಣ್ಯದಿಂದಲೇ ಒಪ್ಪಿಕೊಂಡೆ. ಅತಿಥಿ ಸತ್ಕಾರದ ಮಹತ್ವವನ್ನು ಭಾರದ್ವಾಜ ದಂಪತಿಗಳಿಂದ ಕಲಿಯಬೇಕು.


27-12-2024ರಂದು ಬೆಳಿಗ್ಗೆ ಪೂರ್ವ ನಿರ್ಧರಿಸಿದಂತೆ ಅವರ ಮನೆಗೆ ಹೋಗಿ ನಿತ್ಯ ಕರ್ಮಗಳನ್ನು ಪೂರೈಸಿ 8 ಗಂಟೆಗೆ ಸರಿಯಾಗಿ ಅರಮನೆ ಮೈದಾನದ ದ್ವಾರಕ್ಕೆ ನಮ್ಮ ಪಯಣ. ದ್ವಾರದಲ್ಲಿ ನಾವಿಳಿಯುವುದು ಗುರುಗಳ ಆಗಮನವೂ ಏಕಕಾಲಕ್ಕೆ ಆದದ್ದೊಂದು ಯೋಗ. ಹೆಚ್ಚುಕಮ್ಮಿ ಅರ್ಧ ಕಿಲೋಮೀಟರ್ 1300ರಷ್ಟು ಮಾತೆಯರಿಂದ ಪೂರ್ಣ ಕುಂಭ ಸ್ವಾಗತದ ದೃಶ್ಯ ಬಲು ಸುಂದರ. ಕ್ಲಪ್ತ ಸಮಯಕ್ಕೆ ಸಭೆಯ ಆರಂಭ.


ಪ್ರಾಸ್ತಾವಿಕ ಮಾತನಾಡಿದ ಹವ್ಯಕ ಮಹಾಸಭಾ ಅಧ್ಯಕ್ಷ ಗಿರಿಧರ ಕಜೆಯವರ ಮಾತಂತೂ ನಾವೆಲ್ಲರೂ ನೆನಪಿಟ್ಟುಕೊಳ್ಳಬೇಕಾದದ್ದು. ದೇಶಕ್ಕೆ ಹವ್ಯಕ ಸಮಾಜದ ಕೊಡುಗೆಯ ಬಗ್ಗೆ ದಾಖಲೆಗಳ ಸಮೇತ ವಿಷಯ ಮಂಡನೆ ಹವ್ಯಕರ ಬೌದ್ಧಿಕ ಸಾಮರ್ಥ್ಯದ ಪ್ರತೀಕ. ಜನಸಂಖ್ಯೆಯ ದೃಷ್ಟಿಯಿಂದ ಕೇವಲ ಅರ್ಧ ಶೇಕಡವು ಇಲ್ಲದ ಸಮಾಜ ಒಂದರ ಕೊಡುಗೆ ಅಸಾಧಾರಣವಾದದ್ದು ಅಂತ ಅರಿವು ಈ ಸಮ್ಮೇಳನದ ಮೂಲಕ ಸಮಾಜಕ್ಕೆ ಗೊತ್ತಾಗಿದೆ. ಮುಂದುವರಿದು ಮಾತನಾಡಿದ ಹಲವರ ಮಾತುಗಳಲ್ಲಿ ಹವ್ಯಕ ಸಮಾಜದ ಮೇಲಿನ ಗೌರವವನ್ನು ನಾವು ಕಾಣಬಹುದು.


ಹವ್ಯಕ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದದ್ದು ಗುರುವೊಬ್ಬರ ಕರ್ತವ್ಯ. 30 ವರ್ಷಗಳಿಂದ ನಿರಂತರವಾಗಿ ಆ ಕರ್ತವ್ಯವನ್ನು ಮುಂದುವರಿಸುತ್ತಿರುವ ನಮ್ಮ ಗುರುಗಳಾದ ರಾಘವೇಶ್ವರ ಶ್ರೀಗಳ ಆಶೀರ್ವಚನದ ಮಾತಂತೂ ನೆರೆದವರ ಹೃದಯವನ್ನು ಕಲಕಿತ್ತು. ಹವ್ಯಕರ ಆದರ್ಶವನ್ನು, ಕೃಷಿ ಮತ್ತು ಋಷಿ (ವೇದ) ಸಂಸ್ಕೃತಿಯನ್ನು ತುಂಬಾವಾಗಿ ಮೆಚ್ಚಿಕೊಂಡರು. ನಾನು, ನನಗೆ, ನನ್ನದು ಎಂಬುದನ್ನು ಬಿಟ್ಟು ನಾವು ನಮಗೆ ನಮ್ಮದು ಎಂಬ ಆದರ್ಶದ ಕಡೆಗೆ ಹೋಗುವುದೇ ಸಮ್ಮೇಳನದ ಔಚಿತ್ಯ ಅಂತಂದರು.


ತುಂಬಾ ತುಂಬಾ ನೋವಿನ ಮಾತೊಂದನ್ನು ಹಲವರು ನಿಂದಿಸಿಯಾರು, ಹಾಸ್ಯ ಮಾಡಿಯಾರು ಎಂಬ ಮುನ್ನೆಚ್ಚರಿಕೆಯನ್ನು ಹೇಳಿಯೇ ಆರಂಭಿಸಿದ್ದರು. ಹೇಗೆ ದೇಶೀ ಗೋಸಂತತಿಯಲ್ಲಿ ತಳಿ ವೈವಿಧ್ಯಗಳು ಇವೆಯೋ ಅದೇ ರೀತಿ ಹವ್ಯಕರೆಂಬುದು ಒಂದು ವಿಶಿಷ್ಟ ತಳಿ. ತಾವು ಸನ್ಯಾಸ ಸ್ವೀಕಾರದ 30 ವರ್ಷಗಳ ಹಿಂದೆಗೆ ಹೋಲಿಸಿದರೆ ಈಗಿರುವ ಹವ್ಯಕಸಂತತಿ ಆಗಿನ ಅರ್ಧಕ್ಕಿಂತಲೂ ಕಡಿಮೆ. ಮಿತ ಸಂತಾನದ ವ್ಯಾಖ್ಯೆಯನ್ನು ತಪ್ಪಾಗಿ ಅರ್ಥೈಸಿ ಅದನ್ನು ಸಂತತಿಯಿಂದ ಸಂತತಿಗೆ ಹರಿಸಿದುದರ ಪರಿಣಾಮವಾಗಿ ಇಂದು ಮಕ್ಕಳೇ ಬೇಡ ಎಂಬ ಸ್ಥಿತಿಗೆ ನಮ್ಮ ಸಮಾಜ ತಲುಪಿದ್ದು ಖೇದದ ಸಂಗತಿ. ಒಂದು ಮಗುವಾದರೆ ಮಗುವಾದರೆ ಮಗುವಲ್ಲ, ಎರಡು ಆದರೆ ಸಮಾಜಕ್ಕೆ ಸಮವಲ್ಲ, ಮೂರಾದರೂ ಇರಲಿ ಅದುವೇ ಸಮಾಜದ ಬೆಳವಣಿಗೆ ಅಂತಂದರು. ಅದಕ್ಕಿಂತ ಹೆಚ್ಚಾಗಿ ನಿಮಗೆ ತೊಂದರೆಯಾದರೆ ಮಠಕ್ಕೆ ದಾನವಾಗಿನೀಡಿ ಮಠ ಬೆಳೆಸುತ್ತದೆ ಎಂಬ ಘೋಷಣೆಯನ್ನೂ ಕೈಗೊಂಡರು. ಗೋ ಉಳಿಸುವಿಕೆಗೆ ಕೈಗೊಂಡ ಆಂದೋಳನದಂತೆ ಹವ್ಯಕ ಸಂತತಿಯನ್ನು ಉಳಿಸುವ ಆಂದೋಳನ ಕೈಗೊಳ್ಳಬೇಕಾದ ಸಮಯವಿದು  ಎಂಬ ಎಚ್ಚರಿಕೆಯನ್ನು ಹವ್ಯಕ ಸಮಾಜಕ್ಕೆ ನೀಡಿದರು.


ನಿಜವಾದ ಗುರು ಒಬ್ಬರಿಗೆ ಭವಿಷ್ಯದ ಬಗ್ಗೆ ಇಂತಹ ಆತಂಕ ಬರಬಹುದು ಮತ್ತು ಪರಿಹಾರದ ದಾರಿಯನ್ನು ಕಂಡುಕೊಳ್ಳಬಹುದು ಅಂತ ನನಗನಿಸಿತು. ಆಚಾರ್ಯ ಶಂಕರರು ಸನಾತನ ಧರ್ಮಕ್ಕೆ ಹೇಗೆ ಗುರುವಾದರೋ, ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯಕ್ಕೆ ಹೇಗೆ ಗುರುವಾದರೋ, ಸಮರ್ಥ ರಾಮದಾಸರು ಶಿವಾಜಿಗೆ ಹೇಗೆ ಗುರುವಾದರೋ ಅದೇ ರೀತಿ ಹವ್ಯಕ ಸಮಾಜಕ್ಕೆ  ರಾಘವೇಶ್ವರ ಶ್ರೀಗಳು ಮಾರ್ಗದರ್ಶನ ಮಾಡಿದರು. ಗುರುವಾಣಿಯನ್ನು ಅರ್ಥೈಸಿಕೊಂಡರೆ  ಸಮಾಜಕ್ಕೆ ಒಳಿತು.


ಮುಂದಿನ ಉತ್ಕೃಷ್ಟ ಗೋಷ್ಠಿಗಳ ಮತ್ತು ಸಾಧಕರತ್ನಗಳ ಸನ್ಮಾನಗಳ ನಂತರ  81 ಕೃಷಿ ರತ್ನಗಳ ಸನ್ಮಾನ ಕಾರ್ಯಕ್ರಮ ನಡೆಯಿತು. ಎಲ್ಲಾ ಕೃಷಿರತ್ನಗಳ ವಿವರಗಳನ್ನು ಭಾವಚಿತ್ರ ಸಹಿತವಾಗಿ ಸಾರ್ವಜನಿಕವಾಗಿ ಫಲಕಗಳಲ್ಲಿ ಪ್ರದರ್ಶಿಸಿ  ಉಚಿತ ಆಸನದಲ್ಲಿ ಕುಳ್ಳಿರಿಸಿ ಚಕ್ರವರ್ತಿ ಸೂಲಿಬೆಲೆಯವರ ಮೂಲಕವಾಗಿ ದಿಕ್ಸೂಚಿಯ ಮಾರ್ಗದರ್ಶನ ಮಾಡಿಸಿದ್ದರು. ಕೃಷಿ ಎಂಬುದು ಮಣ್ಣನ್ನು ಪರಿಸರವನ್ನು ಉಳಿಸಿ ಬೆಳೆಸುವುದೇ ಸಂಸ್ಕೃತಿ. ಕೇವಲ ಅರ್ಥ ದೃಷ್ಟಿಯಿಂದ ನೋಡಿದರೆ ಕೃಷಿ ಬಹುಕಾಲ ಉಳಿಯದು ಎಂಬುದನ್ನು ಬಹಳ ಮಾರ್ಮಿಕವಾಗಿ ನುಡಿದಿದ್ದರು. ನನ್ನ ಮಟ್ಟಿಗೆ ಕೃಷಿ ರತ್ನದ ಗೌರವವೆಂದರೆ ನನ್ನ ಸಾಧನೆಗಲ್ಲ ಅದು ನಮ್ಮ ಪೂರ್ವಜರು ಕೊಟ್ಟ ಕೃಷಿ ಪರಂಪರೆಗೆ. ಈ ಗೌರವವೆಲ್ಲಾ ಪಾರಂಪರಿಕ ಕೃಷಿ ಸಂಪ್ರದಾಯವನ್ನು ಹಾಕಿಕೊಟ್ಟ ನಮ್ಮ ಹಿರಿಯರಿಗೆ  ಸಮರ್ಪಣೆ ಅಂತ ಸ್ವೀಕರಿಸಿದೆ.


ಅನೇಕ ತಿಂಗಳುಗಳಿಂದ ನಡೆದ ಅತ್ಯಂತ ವ್ಯವಸ್ಥಿತ ಕಾರ್ಯಕ್ರಮಗಳು. ಎಲ್ಲಿಯೂ ನೂಕು ನುಗ್ಗಾಟವಿಲ್ಲ, ಅವ್ಯವಸ್ಥೆ ಇಲ್ಲ, ಕೊಳಕು ರಾಶಿ ಬಿದ್ದಿದೆ ಎಂದು ಮೂಗುಮುರಿಯುವಂತಿಲ್ಲ. ಊಟೋಪಚಾರದ ಆತಿತ್ಯ ನೆರೆದ ಅಷ್ಟೊಂದು ದೊಡ್ಡ ಸಂಖ್ಯೆಗೆ ಸಾಧ್ಯವಾದಷ್ಟು ಸುಲಲಿತಗೊಳ್ಳಲು ಕಾರ್ಯಕರ್ತರ ಶ್ರಮವಂತೂ ಹೆಮ್ಮೆ ಪಡಬೇಕು.


ಸಂಘಟಕರೆಲ್ಲರಿಗೂ ಮನದಲ್ಲಿ ಶುಭ ಹಾರೈಸಿ ನನ್ನ ಪ್ರಯಾಣವನ್ನು ಸುಲಲಿತಗೊಳಿಸಿದ ಆರ್.ಸಿ. ಭಾರದ್ವಾಜರಿಗೆ ಮತ್ತೊಮ್ಮೆ ಕೃತಜ್ಞತೆಯನ್ನು ಸಲ್ಲಿಸಿ ಮನೆಯತ್ತ ಪಲ್ಲಕ್ಕಿಯಲ್ಲಿ (ಕೆ ಎಸ್ ಆರ್ ಟಿ ಸಿ) ಪಯಣಿಸಿದೆ.


ಹರೇ ರಾಮ.


-ಎ.ಪಿ. ಸದಾಶಿವ ಮರಿಕೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top