ಆಯುರ್ವೇದ ವಿಜ್ಞಾನದಲ್ಲಿ ಸಂಶೋಧನೆ ಅಗತ್ಯ: ಡಾ. ಎಂ ಮೋಹನ್ ಆಳ್ವ

Upayuktha
0



ಮೂಡುಬಿದಿರೆ: ಭಾರತೀಯ  ವೈದ್ಯಕೀಯ ಪರಂಪರೆಯಲ್ಲಿ ಆಯುರ್ವೇದ ವೈದ್ಯ ಪದ್ದತಿಗೆ ಶ್ರೇಷ್ಠ ಸ್ಥಾನಮಾನವಿದೆ. ಆದರೆ ಅದನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಸಾಕ್ಷಾಧಾರದ ಕೊರತೆಯಿದ್ದು ಅದನ್ನು ನೀಗಿಸುವ ನಿಟ್ಟಿನಲ್ಲಿ ಆಯುರ್ವೇದ ವಿಜ್ಞಾನದಲ್ಲಿ ಇನ್ನಷ್ಟು ಸಂಶೋಧನೆಯನ್ನು ಕೈಗೊಳ್ಳಬೇಕಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದ್ದಾರೆ.


ಆಳ್ವಾಸ್‌ನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಇಂದು ನಡೆದ ಆಯುರ್ವೇದ ಕಾಲೇಜಿನ ಆಳ್ವಾಸ್ ‘ಧನ್ವಂತರಿ ಪೂಜಾ ಮಹೊತ್ಸವ’, ಶಿಶ್ಯೋಪನಯನ ಸಂಸ್ಕಾರ ಹಾಗೂ ಆಳ್ವಾಸ್ ಧನ್ವಂತರಿ ಪ್ರಶಸ್ತಿ ವಿತರಣಾ  ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಆಯುವೇದದಲ್ಲಿ ಉಜ್ವಲ ಭವಿಷ್ಯವಿದ್ದು, ಅದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಹೆಚ್ಚು ಹೆಚ್ಚು ಸಂಶೋಧನೆಗೆ ಒತ್ತು ಕೊಡಬೇಕು. 


ಕಾಲೇಜಿನಲ್ಲಿ ಕಲಿತ ವಿದ್ಯೆ ಕೇವಲ ಮೆದುಳಿಗೆ ಜ್ಞಾನವನ್ನು ಕೊಡುತ್ತದೆ. ತರಗತಿಯ ಹೊರಗೆ ಕಲಿತ ಬಯಲು ಶಿಕ್ಷಣ ಪ್ರಾಯೋಗಿಕತೆಯಿಂದ ಕೂಡಿದ್ದು, ಅದು ಶ್ರೇಷ್ಠ ಜ್ಞಾವನ್ನಾಗಿಸುತ್ತದೆ. ಆಯುರ್ವೇದದಲ್ಲಿರುವ ವಿಫುಲ ಅವಕಾಶಗಳನ್ನು ಅರ್ಥಮಾಡಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಆಳ್ವಾಸ್ ಧನ್ವಂತರಿ ಪ್ರಶಸ್ತಿ ಸ್ವೀಕರಿಸಿದ ಪಡುಬಿದಿರೆಯ ಅಂಚನ್ ಫಾರ್ಮಸಿಯ ಮುಖ್ಯಸ್ಥ  ಡಾ. ನಾರಾಯಣ ಟಿ. ಅಂಚನ್ ಮಾತನಾಡಿ ಆತ್ಮವಿಶ್ವಾಸ ಹಾಗೂ ಪರಿಶ್ರಮದಿಂದ ಆಯುರ್ವೇದ ವೃತ್ತಿಯಲ್ಲಿ ಪಾಲ್ಗೊಂಡು ಭಾರತೀಯ ವೈದ್ಯಕೀಯ ಪರಂಪರೆಯನ್ನು ಜಾಗತಿಕವಾಗಿ ಪ್ರಚುರ ಪಡಿಸುವ ಕೆಲಸವಾಗಬೇಕಿದೆ ಎಂದರು.


ಆಳ್ವಾಸ್ ಧನ್ವಂತರಿ ಪ್ರಶಸ್ತಿ ಸ್ವೀಕರಿಸಿದ ಇನ್ನೋರ್ವ ಸಾಧಕ ಕೊಪ್ಪ ಎ.ಎಲ್.ಎನ್ ರಾವ್ ಮೆಮೋರಿಯಲ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಸಂಜಯ ಕೆ.ಎಸ್. ಮಾತನಾಡಿ, ಆಯುರ್ವೇದದಲ್ಲಿ ಉತ್ತಮ ಆಹಾರ ಪದ್ದತಿಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಆ ಮೂಲಕ ನಿರಂತರ ಕಲಿಕೆ ಹಾಗೂ ಜೀವನೋತ್ಸಾಹ ರೂಡಿಸಿಕೊಳ್ಳಬಹುದು ಎಂದರು.


ಆಳ್ವಾಸ್ ಧನ್ವಂತರಿ ಪ್ರಶಸ್ತಿ ಸ್ವೀಕರಿಸಿದ ಮತ್ತೋರ್ವ ಸಾಧಕಿ ಕೇರಳ ತಿರುವನಂತಪುರದ ಡಾ. ಸೀಮಾ’ಸ್ ಆಯುರ್ವೇದಿಕ್ ವೆಲ್‌ನೆಸ್ ಸೆಂಟರ್‌ನ ಮುಖ್ಯಸ್ಥೆ ಡಾ. ಸೀಮಾ ರಂಜಿತ್ ಮಾತನಾಡಿ ಸ್ವಾಭಿಮಾನ ಹಾಗೂ ಸಕಾರಾತ್ಮಕ ಚಿಂತನೆಯಿಂದ ಮುನ್ನಡೆದರೆ ಯಶಸ್ಸು ಸಾಧ್ಯ ಎಂದರು.


ಅಂತಿಮ ಸ್ನಾತಕೋತ್ತರ ಆಯುರ್ವೇದ  ವಿಭಾಗದಲ್ಲಿ ಚಿನ್ನದ ಪದಕ ಪಡೆದ ಶಿಕ್ಷಣದಲ್ಲಿ  ಕಾಯಚಿಕಿತ್ಸಾ ವಿಭಾಗದ ಡಾ. ಪ್ರಥ್ವಿ ಭಟ್, ಡಾ. ರಚನಶಾರೀರ ವಿಭಾಗದ ಸೌಮ್ಯಾ ಎಸ್., ಹಾಗೂ ಕಿಯಾಶಾರೀರ ವಿಭಾಗದ ಶೆಟ್ಟಿ ಸುಪ್ರೀತಾ ಸುಂದರ್ ಅವರನ್ನು ಸನ್ಮಾನಿಸಲಾಯಿತು. ಹರ್ಷಿತಾ ಅವರಿಗೆ ಪ್ರಸೂತಿ ತಂತ್ರ ವಿಭಾಗದಲ್ಲಿ ಹೆಚ್ಚಿನ ಅಂಕ ಪಡೆದ ಹಿನ್ನಲೆಯಲ್ಲಿ  ‘ಸೀತಾಲಕ್ಷ್ಮಿ ಪ್ರಶಸ್ತಿ’ ನೀಡಲಾಯಿತು.


ಅಲಂಗಾರು ಸುಭ್ರಮಣ್ಯ ಭಟ್ ಮುಂದಾಳತ್ವದಲ್ಲಿ ಧನ್ವಂತರಿ ಪೂಜಾ ಮಹೊತ್ಸವ,  ನಂತರ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಂಕಣವನ್ನು ಧಾರಣೆ ಮಾಡಲಾಯಿತು. ಧನ್ವಂತರಿ ಪೂಜಾ ಮಹೊತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು. ‘ಚಿರಂತನ’ ಕಾಲೇಜಿನ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು.


ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಸುಜಿತ್ ಎಮ್ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕ ಡಾ. ಮಂಜುನಾಥ್ ಭಟ್ ವಂದಿಸಿದರು. ಕಾಲೇಜಿನ ಪ್ರೊಫೆಸರ್ ಡಾ. ಗೀತಾ ಬಿ.ಎಂ. ಕಾರ್ಯಕ್ರಮ ನಿರ್ವಹಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top