ಯಕ್ಷಗಾನ ರಂಗದ ಹಿರಿಯ ಭಾಗವತ ಕೆ. ಗೋವಿಂದರಾಯ ಶೆಣೈ ಹಾಗೂ ಮುಕ್ತಾಬಾಯಿ ದಂಪತಿಯರ ಮಗನಾಗಿ 10.10.1950ರಂದು ಆರ್ಗೋಡು ಮೋಹನದಾಸ್ ಶೆಣೈ ಅವರ ಜನನ. ಅವರ ಪತ್ನಿ ಕಸ್ತೂರಿ. ದಂಪತಿಗೆ ಮೂವರು ಪುತ್ರಿಯರು, ಇಬ್ಬರು ಪುತ್ರರಿದ್ದಾರೆ. ಎಂಟು ಮಂದಿ ಮೊಮ್ಮಕ್ಕಳು. ಇಡೀ ಕುಟುಂಬ ಯಕ್ಷಗಾನದ ಪ್ರೋತ್ಸಾಹಕರು ಹಾಗೂ ಆರಾಧಕರಾಗಿದ್ದಾರೆ.
ತಂದೆ ಹಿರಿಯ ಭಾಗವತ ಕೆ. ಗೋವಿಂದರಾಯ ಶೆಣೈ ಯಕ್ಷಗಾನ ಪಾದಾರ್ಪಣೆಗೆ ಗುರುಗಳು. ದೊಡ್ಡಪ್ಪಂದಿರಾದ ರಾಮಚಂದ್ರ ಶೆಣೈ, ನರಸಿಂಹ ಶೆಣೈ ಮಾತುಗಾರಿಕೆಯ ಗುರುಗಳು. ಹಾಸ್ಯ ಕಲಾವಿದ ಕಮಲಶಿಲೆ ಮಹಾಬಲ ದೇವಾಡಿಗ ಕುಣಿತದ ಗುರುಗಳು. ಪಿಯುಸಿ ವಿದ್ಯಾಭ್ಯಾಸದ ಬಳಿಕ ಸುಮಾರು 43 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಹಿರಿಯಡ್ಕ, ಪೆರ್ಡೂರು, ಸಾಲಿಗ್ರಾಮ, ಶಿರಸಿ, ಕುಮಟ, ಕೋಟ ಅಮೃತೇಶ್ವರಿ ಹಾಗೂ ಕಮಲಶಿಲೆ ಮೇಳದಲ್ಲಿ ಕಾರ್ಯ ನಿರ್ವಹಿಸಿದ್ದರು.
ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ:-
ಸ್ಫೂರ್ತಿಯ ಮೂರ್ತಿ ತೀರ್ಥರೂಪರಾದ ತಂದೆ ಕೆ. ಗೋವಿಂದರಾಯ ಶೆಣೈ ಹಾಗೂ 158 ವರ್ಷಗಳಿಂದ ಗಣೇಶ ಚತುರ್ಥಿಯ ದಿನ ನಮ್ಮ ಮನೆಯಲ್ಲಿ ತಾಳಮದ್ದಲೆ ನಡೆಸುತ್ತಾ ಬಂದಿದ್ದೇವೆ. ಇದು ನನಗೆ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು.
ನಿರ್ವಹಿಸಿದ ಪಾತ್ರಗಳು:-
ಸುಧನ್ವ, ದಶರಥ, ಭೀಷ್ಮ, ಶ್ರೀರಾಮ, ಪರಶುರಾಮ, ಬ್ರಹ್ಮ, ವಿಷ್ಣು, ರಾವಣ, ಶಂತನು, ದೇವವೃತ, ಉಘ್ರಸೇನಾ, ಅಕ್ರೂರ, ನಾರದ, ಭೀಮ, ಹರಿಶ್ಚಂದ್ರ, ವೀರಮಣಿ, ಜಮದಗ್ನಿ, ಸಹಿತ ವಿವಿಧ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ರಚಿಸಿರುವ ಕೃತಿಗಳು:-
ಸ್ವಪ್ನ ಸಾಮ್ರಾಜ್ಯ, ರಕ್ತತಿಲಕ, ಮೃಗನಯನೆ, ಯಶೋಧ-ಕೃಷ್ಣ, ಪಾರ್ಥೀವಾಗೃಣಿ, ಕರ್ಣಕಥಾಮೃತಂ.
ಪದ್ಯ ರಚನೆ ಹಾಗೂ ಅರ್ಥ ಬರೆದ ಪ್ರಸಂಗಗಳು:-
ಬೆಳ್ಳಿ ನಕ್ಷತ್ರ, ಶಿವಭೈರವಿ, ವರ್ಣವೈಭವ, ವಜ್ರ ಕಿರೀಟ, ರಾಣಿಮೃಣಾಲಿನಿ, ನಾಗನಯನೆ, ಅಮರದೀಪ, ಸೌಮ್ಯ ಸೌಂದರ್ಯ, ಅವನಿ-ಅಂಬರ ಮೊದಲಾದ ಪದ್ಯ ರಚಿಸಿದ್ದಾರೆ. ಲವಕುಶ ಕಾಳಗ, ಶ್ರೀರಾಮಾಂಜನೇಯ, ಕೃಷ್ಣಾರ್ಜುನ, ಜಾಂಬವತೀ ಕಲ್ಯಾಣ, ಸುಧನ್ವ ಕಾಳಗ, ವೀರಮಣಿ, ಮಹಿಷಮರ್ದಿನಿ, ಮಧುರಾಮಹೀಂದ್ರ, ಕರ್ಣಾರ್ಜುನ ಪ್ರಸಂಗಗಳಿಗೆ ಅರ್ಥ ಬರೆದಿದ್ದಾರೆ.
ಯಕ್ಷಗಾನದಲ್ಲಿ ಬಡಗಿನಲ್ಲಿ ಶ್ರೀ ರಾಮನ ಪಾತ್ರ ಜನಪ್ರಿಯ. ಆ ಪಾತ್ರವನ್ನು ಕಟ್ಟುವ ನಿಮ್ಮ ಚಿಂತನೆ ಏನು:-
ಶ್ರೀ ರಾಮ ಒಬ್ಬ ಪರಿಪೂರ್ಣ ವ್ಯಕ್ತಿ. ಹಾಗೆಯೇ ಶ್ರೀ ರಾಮನ ಪಾತ್ರ ಕೂಡ ಪರಿಪೂರ್ಣ ಪಾತ್ರ. ಎಲ್ಲರಲ್ಲೂ ಆ ಪಾತ್ರ ಬಿಂಬಿಸುವ ಕಲೆ ಅಥವಾ ಜಾಣ್ಮೆ ಇರುವುದಿಲ್ಲ. ಹಾಗೆಯೇ ನಮ್ಮ ಬಾಲ್ಯದಲ್ಲಿ ನಮ್ಮ ಮನೆಯ ಪಡಸಾಲೆಯಲ್ಲಿ ಭಾಗವತ, ರಾಮಾಯಣ, ಮಹಾಭಾರತದ ಕಥಾ ಕಾಲಕ್ಷೇಪಗಳು ಪುರಾಣ ಪುರುಷರ ರೂಪ ಸ್ವರೂಪಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಸಹಾಯವಾಗಿದೆ. ವಿಶೇಷವಾಗಿ ಎಲ್ಲ ಪ್ರಸಂಗದ ಎಲ್ಲಾ ರಾಮನ ಪಾತ್ರ ನಿರ್ವಹಿಸಲು ಅತ್ಯಂತ ಪ್ರಭಾವ ಬೀರಿದ ಕೃತಿ ಎಂದರೆ ಅದು ಕವಿ ದೇರಾಜೆ ಸೀತಾರಾಮಯ್ಯ ಅವರು ರಚಿಸಿದ ಶ್ರೀ ರಾಮ ಚರಿತಾಮೃತಮ್ ಎಂಬ ಅದ್ಭುತ ಕಾವ್ಯ.
ಸುದೀರ್ಘವಾದ ಯಕ್ಷಗಾನದ ವ್ಯವಸಾಯದಲ್ಲಿ ನೀವು ಇಚ್ಚಿಸುವುದು ಪುರಾಣ ಅಥವಾ ಸಾಮಾಜಿಕ ಪ್ರಸಂಗ:-
ಅತೀ ಹೆಚ್ಚು ಪ್ರೀತಿಸುವುದು ಪುರಾಣವನ್ನು. ಸಾಮಾಜಿಕ ಪ್ರಸಂಗಗಳು ಮನರಂಜನೆಗಾಗಿ ಸೀಮಿತ. ಸಾಧ್ಯವಾದರೆ ಕೆಲವು ಪ್ರಸಂಗಗಳು ಒಳ್ಳೆಯ ಮೌಲ್ಯಗಳನ್ನು ಕೊಡಲು ಶಕ್ತವಾಗಿವೆ. ಆದರೆ ಪುರಾಣ ಪ್ರಸಂಗಗಳು ಮನರಂಜನೆಗಾಗಿ ಮಾತ್ರವಲ್ಲದೆ ಮನೋವಿಕಾಸಕ್ಕೆ, ನಮ್ಮ ಪುರಾಣವನ್ನು ತಿಳಿಯುವುದಕ್ಕೆ ಹಾಗೂ ಮುಂದಿನ ಪೀಳಿಗೆಗೆ ಪುರಾಣದ ಬಗೆಗಿನ ಭದ್ರ ಬುನಾದಿಯನ್ನು ಹಾಕಿಕೊಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.
ಸಾಮಾಜಿಕ ಪ್ರಸಂಗದಲ್ಲಿ ಆಧುನಿಕ ಸಂವೇದನೆಯ ಪಾತ್ರಗಳು ಬಂದಾಗ ಹೇಗೆ ನಿಭಾಯಿಸುತ್ತೀರಾ:-
ರಂಗಸ್ಥಳ ಎನ್ನುವುದು ನಮಗೆ ಅನ್ನ ಕೊಡುವ ಸ್ಥಳ. ಅದಕ್ಕೆ ಚ್ಯುತಿ ಬಾರದಂತೆ ಪ್ರೇಕ್ಷಕರಿಗೆ ನಿರಾಸೆಯ ಮಬ್ಬು ಮುಸುಕದಂತೆ ಪಾತ್ರ ನಿರ್ವಹಿಸುವುದು ಅನಿವಾರ್ಯ.
ಯಕ್ಷಗಾನ ಪ್ರಸಂಗ ರಚನೆ ಹಾಗೂ ತಾಳಮದ್ದಲೆ ಕ್ಷೇತ್ರದಲ್ಲಿ ನಿಮ್ಮ ಅನುಭವ:-
ಪುರಾಣ ಪ್ರಸಂಗದ ಅಧ್ಯಯನ, ಪ್ರಸಂಗಗಳಲ್ಲಿ ಬರುವ ಪದ್ಯಗಳ ತಾಳ, ಮಟ್ಟು ರಾಗಗಳ ಹಿಡಿತ ಇರುವುದರಿಂದ ನಾನ್ಯಾಕೆ ಪ್ರಸಂಗ ರಚನೆ ಮಾಡಬಾರದು ಅಂತ ಅನ್ನಿಸಿ, ನಾನೂ ಪ್ರಸಂಗ ರಚನೆಯಲ್ಲಿ ತೊಡಗಿ, ಮುಂಬೈಗೆ ಕಾರ್ಯಕ್ರಮದ ನಿಮಿತ್ತ ತೆರಳಿದ್ದರಿಂದ ಅಲ್ಲಿ ನಮ್ಮ ಸ್ನೇಹಿತರ ಮನೆಯಲ್ಲಿ ಟಿವಿಯಲ್ಲಿ ನೋಡಿದ ತುಂಬಾ ಹಳೆಯ ರಾಜಶೇಖರ ಎಂಬ ಚಲನಚಿತ್ರ ನನ್ನ ಪ್ರಸಂಗ ರಚನೆಯ ಉತ್ಸಾಹಕ್ಕೆ ಒತ್ತು ನೀಡಿತು. ಅದನ್ನೇ ಆಧರಿಸಿ ಸ್ವಪ್ನ ಸಾಮ್ರಾಜ್ಯ ಎನ್ನುವ ಸಾಮಾಜಿಕ ಪ್ರಸಂಗ ರಚನೆ ಮಾಡಿ ಅದು ಶ್ರೀ ಪೆರ್ಡೂರು ಮೇಳದಲ್ಲಿ ಒಳ್ಳೆಯ ಜನಮನ್ನಣೆ ಗಳಿಸಿತು.
ನಂತರದಲ್ಲಿ ರಕ್ತತಿಲಕ, ಮೃಗನಯನೆ, ಯಶೋದಾ ಕೃಷ್ಣ (ಪೌರಾಣಿಕ), ಬೆಳ್ಳಿ ನಕ್ಷತ್ರ ( ಪದ್ಯ ರಚನೆ) ಕರ್ಣ ಕಥಾಮೃತಮ್ (ಪೌರಾಣಿಕ) ಪ್ರಸಂಗಗಳು ನನ್ನಿಂದ ಮೂಡಿ ಬಂದ ಕೆಲವು ಪ್ರಸಂಗಗಳು. ತಾಳಮದ್ದಳೆ ನನ್ನ ಅತ್ಯಂತ ಅಚ್ಚುಮೆಚ್ಚಿನ ಒಂದು ವಿಷಯ. ಅದಕ್ಕೆ ಕಾರಣ ನಮ್ಮ ಮನೆಯ ಚೌತಿಯ ಗಣಪತಿ. ಕಳೆದ 157 ವರ್ಷಗಳಿಂದ ನಡೆದುಕೊಂಡು ಬಂದ ತಾಳಮದ್ದಳೆ ಕೂಟ. ದೊಡ್ಡ ವಿದ್ವಾಂಸರು, ಅರ್ಥಧಾರಿಗಳು, ಭಾಗವತರ ಸಮ್ಮಿಲನ, ಒಡನಾಟ ನನ್ನನ್ನು ಒಬ್ಬ ಕಲಾವಿದನನ್ನಾಗಿ ರೂಪಿಸಲು ಸಹಕರಿಸಿದೆ.
ಚೌಕಿ ಮನೆಯ ಗುರು ಆದ ನಿಮ್ಮ ಕಲಾ ಅನುಭವ ಏನು:-
ಗುರು ಎಂದೆನಿಸಿಕೊಳ್ಳಲು ಶಿಷ್ಯರೂ ಬೇಕಲ್ಲವೇ..! ಹಾಗೆಯೇ ಕಲಿಯುವ ಗುಣ ಹಾಗೂ ಶೃದ್ಧೆ ಯಾರಲ್ಲಿ ಇದೆಯೋ ಅಂಥವರಿಗೆ ನನ್ನ ವಿದ್ಯೆಯನ್ನು ಧಾರೆ ಎರೆದಿದ್ದೇನೆ. ನನ್ನಿಂದ ಕಲಿತ ಶಿಷ್ಯರು ಇಂದು ಅತ್ಯಂತ ಶ್ರೇಷ್ಠ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವುದು ನನಗೆ ಅತ್ಯಂತ ಹೆಮ್ಮೆಯ ಸಂಗತಿ. ನನ್ನನ್ನು ಗುರುವೆಂದು ಒಪ್ಪಿ ಆ ಶ್ರೇಷ್ಠ ಸ್ಥಾನವನ್ನು ಕರುಣಿಸಿದ ಪ್ರೀತಿಯಿಂದ ನನ್ನನ್ನು ಆರಾಧಿಸುವ ನನ್ನ ಕಿರಿಯ ಕಲಾವಿದರ ಮೇಲೆ ನನಗೆ ಅತ್ಯಂತ ವಾತ್ಸಲ್ಯವಿದೆ.
ಎಲ್ಲಿಯವರೆಗೆ ಎಂದರೆ ಚೌಕಿಯಲ್ಲಿ ನಾನು ನಿದ್ದೆಯಲ್ಲಿ ಇದ್ದಾಗಲೂ ನನ್ನನ್ನು ಎಬ್ಬಿಸಿ ಈ ಪದ್ಯದ ಅರ್ಥ ಹೇಗೆ ಹೇಳಬಹುದು ಎಂದು ಕೇಳುವ ಕಲಾವಿದರಿಗೆ ತಾಳ್ಮೆಯಿಂದ, ಪ್ರೀತಿಯಿಂದ ಕಲಿಸಿ ಕೊಟ್ಟಿದ್ದೇನೆ. ಯಾಕೆಂದರೆ ಅವರಲ್ಲಿ ಇರುವ ಶೃದ್ಧೆಗೆ, ಕಲಿಯಬೇಕು ಎಂಬ ಗುಣ ಅವರಲ್ಲಿ ಇರುವುದಕ್ಕೆ. ಇನ್ನೊಂದು ಮುಖ್ಯವಾದ ವಿಷಯ ಏನೆಂದರೆ ಕಲಾವಿದನಾದವನು ತಾನೂ ಬೆಳೆದು ಇನ್ನೊಬ್ಬರನ್ನು ಬೆಳೆಸುವ ಹಿರಿದಾದ ಗುಣ ಅವನಲ್ಲಿ ಇದ್ದಾಗ ಮಾತ್ರ ಎಲ್ಲವೂ ಚಂದ.
ರಂಗಸ್ಥಳದಲ್ಲಿ ಕಿರಿಯ ಎದುರು ಕಲಾವಿದನಲ್ಲಿ ನಮ್ಮ ಪಾಂಡಿತ್ಯ ಪ್ರದರ್ಶನ ಮಾಡುವುದು ಉಚಿತವಲ್ಲ ಎಂಬುದು ನನ್ನ ಭಾವನೆ. ಉದಾಹರಣೆಗೆ: ಪತಾಕೆ ಎಂದರೇನು.. ಧ್ವಜ ಎಂದರೇನು? ಇಂತಹ ಸಣ್ಣ ಸಣ್ಣ ವಿಷಯಗಳನ್ನು ಕಿರಿಯ ಕಲಾವಿದರನ್ನು ಹಿರಿಯ ಕಲಾವಿದರು ಪೇಚಿಗೆ ಸಿಲುಕಿಸುವುದುಂಟು. ಪ್ರಸ್ತುತವಲ್ಲದ ಅರ್ಥಗಳು, ತೀರಾ ಲೌಕಿಕ ವಿಚಾರಗಳೂ, ರಾಜಕೀಯ ವಿಷಯಗಳೂ ಈಗಂತೂ ಯಾವುದೇ ತಡೆಯಿಲ್ಲದೇ ಪುಂಖಾನುಪುಂಖವಾಗಿ ಕಲಾವಿದರ ಬಾಯಲ್ಲಿ ಬರುತ್ತಿರುವುದು ಖೇದಕರ.
ಕಲಾವಿದರಿಗೆ ಯಕ್ಷಗಾನದ ಪದ್ಯಗಳ ಕಂಠ ಪಾಠ ಮತ್ತು ಹಿಮ್ಮೇಳದ ಸಾಮರಸ್ಯ ಬಗ್ಗೆ ಏನು ಹೇಳುತ್ತೀರಿ:-
ಯಾವುದೇ ಪಾತ್ರ ಯಾವುದೇ ಕಲಾವಿದ ಮಾಡಲು ಅವನಿಗೆ ಪ್ರಸಂಗದ ಪದ್ಯಗಳು ಪೂರ್ಣ ಕಂಠ ಪಾಠ ಬಂದಿರಬೇಕು. ಆಗಷ್ಟೇ ಅವನಿಗೆ ನಿರರ್ಗಳವಾಗಿ ಅರ್ಥ ಹೇಳುವ ಸಾಮರ್ಥ್ಯ, ಧೈರ್ಯ ಬರುತ್ತದೆ. ಇಲ್ಲವಾದರೆ ಕಥೆಯ ಮುನ್ನಡೆಗೆ ಕ್ಲಿಷ್ಟವಾಗುತ್ತದೆ. ಪದ್ಯಗಳ ಕಂಠಪಾಠ ಎಷ್ಟು ಮುಖ್ಯವೋ ಹಿಮ್ಮೇಳದ ಸಹಕಾರ, ಪ್ರೋತ್ಸಾಹ ಅಷ್ಟೇ ಮುಖ್ಯವಾದ ಅಂಶ. ಕೇವಲ ನಾಟ್ಯದಲ್ಲಿ ಮಾತ್ರವಲ್ಲದೆ ಕೆಲವು ರಂಗದ ಶಿಸ್ತನ್ನೂ ಕಲಿಸುವ ಅಗತ್ಯತೆ ಭಾಗವತನದ್ದಾಗಿರುತ್ತದೆ. ಪದ್ಯದ ಎತ್ತುಗಡೆ, ಪ್ರಯಾಣ ಕುಣಿತ, ತೆರೆ ಕುಣಿತ, ಒಡ್ಡೋಲಗ ಇಂತಹ ರಂಗದ ಕೆಲವು ಅವಕಾಶಗಳನ್ನು ಕಲಾವಿದರಿಗೆ ಒದಗಿಸಿದರೆ ಅವನ ಪಾತ್ರ ನಿರ್ವಹಣೆ ಇನ್ನಷ್ಟು ಅಚ್ಚು ಕಟ್ಟಾಗಿ ಚಂದವಾಗಿ ಮೂಡಿ ಬರಲು ಸಾಧ್ಯ.
ಕಾಲಮಿತಿ ಯಕ್ಷಗಾನದಿಂದ ನಿಮ್ಮಂತ ಹಿರಿಯ ಕಲಾವಿದರಿಗೆ ಪದ್ಯದ ಅರ್ಥ ಸ್ವಾರಸ್ಯವನ್ನು ಪ್ರೇಕ್ಷಕರಿಗೆ ಮುಟ್ಟಿಸಲು ಸಾಧ್ಯವಾಗುತ್ತಿದೆಯೇ:-
ಕಾಲಮಿತಿ ಎನ್ನುವುದು ಅನಿವಾರ್ಯವಾದ ವಿಷಯ. ಬದಲಾದ ಕಾಲಘಟ್ಟದಲ್ಲಿ , ಕಾಲಕ್ಕನುಗುಣವಾಗಿ ನಾವೂ ಕೂಡ ಬದಲಾಗಬೇಕು ಎನ್ನುವ ಪರಿಸ್ಥಿತಿ ಎದುರಾಗಿದೆ. ಆದರೂ ಒಳ್ಳೆಯ ಪ್ರೇಕ್ಷಕರು ಇಂದಿಗೂ ಇದ್ದಾರೆ. ಯುವ ಜನತೆ ಯಕ್ಷಗಾನವನ್ನು ಇಷ್ಟಪಡುತ್ತಿದ್ದಾರೆ. ಇದೊಂದು ಅತ್ಯಂತ ನೆಮ್ಮದಿಯ ವಿಚಾರ. ಪದ್ಯದ ಅರ್ಥ ಹೇಳುವ ಕಾಲಾವಕಾಶ ಖಂಡಿತ ಕಡಿಮೆ ಆಗುವುದಿಲ್ಲ. ಕಾಲಮಿತಿ ಯಕ್ಷಗಾನದಲ್ಲಿ ವೇಗ ಹೆಚ್ಚಿರುತ್ತದೆ. ಅದೇ ವೇಗದಲ್ಲಿ ಚಲಿಸುವ ಮನೋಸ್ಥಿತಿ ಕಲಾವಿದರೆಲ್ಲರಲ್ಲೂ ಇರುವುದರಿಂದ ಯಾವುದಕ್ಕೂ ಕುಂದು ಕೊರತೆ ಬಾಧಿಸುವುದಿಲ್ಲ.
ಸನ್ಮಾನ ಹಾಗೂ ಪ್ರಶಸ್ತಿಗಳು:-
♦️ ಎಸ್ ನಿಡಂಬೂರು ಪ್ರಶಸ್ತಿ.
♦️ ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ.
♦️ ಶಿರಿಯಾರ ಮಂಜುನಾಯ್ಕ್ ಪ್ರಶಸ್ತಿ,
♦️ ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ,
♦️ ಬೈಕಾಡ್ತಿ ಪ್ರಶಸ್ತಿ,
♦️ ದ್ರೋಣಾಚಾರ್ಯ ಪ್ರಶಸ್ತಿ,
♦️ ಜಿ.ಎಸ್.ಬಿ. ಕಲಾರತ್ನ ಪ್ರಶಸ್ತಿ,
♦️ 2024 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಸಹಿತ ವಿವಿಧೆಡೆ ಸಾವಿರಾರು ಸನ್ಮಾನಗಳು ಇವರಿಗೆ ಸಂದಿವೆ.
ಯಕ್ಷಗಾನ ಕ್ಷೇತ್ರಕ್ಕೆ ನನ್ನ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಎಂಬ ಅಚಲ ಆತ್ಮತೃಪ್ತಿಯ ಜೊತೆಗೆ ಯಕ್ಷಗಾನ ನನಗೆ ಅನೇಕರನ್ನು ಒದಗಿಸಿದೆ ಎಂಬ ಕೃತಜ್ಞತೆ ಇದೆ. ಈ ಕ್ಷೇತ್ರದಲ್ಲಿ ಆರ್ಗೋಡು ಎಂಬ ಹೆಸರು ಅಚ್ಚೊತ್ತಲು ಈ ಕಲೆ ಕಾರಣವಾಗಿರುವುದು ಸ್ತುತ್ಯಾರ್ಹ.
ಅದರಿಂದ ಪ್ರಶ್ನಾತೀವಾಗಿ ಸರ್ವರೂ ಒಪ್ಪಲೇಬೇಕಾದ ಒಂದು ಅಂಶ ಎಂದರೆ ಶುದ್ಧ, ಸರಳ, ನಿರರ್ಗಳ ಪೂರ್ವ ತಯಾರಿರಹಿತವಾಗಿ ಕನ್ನಡದಲ್ಲಿ ಅಹೋರಾತ್ರಿ ಮಾತನಾಡುವವರು ಎಂದರೆ ಅವರು ಯಕ್ಷಗಾನ ಕಲಾವಿದರೇ ಎಂಬುವುದು. ಒಬ್ಬ ಪ್ರೇಕ್ಷಕನ ಸರ್ವಾಂಗೀಣ ಮನೋರಂಜನೆಗೆ, ಬುದ್ದಿಮತ್ತೆಗೆ ಬೇಕಾದ ಗಾಯನ, ನಾಟ್ಯ, ಮಾತುಗಾರಿಕೆ ಇವೆಲ್ಲವೂ ಯಕ್ಷಗಾನದಲ್ಲಿ ಅಲ್ಲದೇ ಪ್ರಂಪಚದ ಯಾವ ಕಲೆಯಲ್ಲೂ ಇಲ್ಲ ಎಂಬುದು ಮನಸ್ಸಿಗೆ ಆಪ್ಯಾಯಮಾನವಾದ ಮತ್ತು ಹೆಮ್ಮೆಯ ಸಂಗತಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ