ಉಜಿರೆ ಎಸ್‌.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆಗೆ ಚಾಲನೆ

Upayuktha
0


ಉಜಿರೆ: ಆರ್ಥಿಕ ಅಗತ್ಯವಿರುವ ರೋಗಿಗಳಿಗೆ ಸಹಾಯವಾಗಲಿ ಅನ್ನುವ ಉದ್ದೇಶದಿಂದ ಎಸ್‌.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಾರ್ಷಿಕ 1.40 ಕೋಟಿ ರೂ. ಮೊತ್ತದ ಉಚಿತ ಡಯಾಲಿಸಿಸ್ ಸೇವೆ ನೀಡುವ ಯೋಜನೆಯನ್ನು ಇಂದಿನಿಂದ ಪ್ರಾರಂಭಿಸಲಾಗಿದೆ ಎಂದು ಡಾ. ಹೇಮಾವತಿ ವೀ. ಹೆಗ್ಗಡೆ ಹೇಳಿದರು.


ಅವರು ಉಜಿರೆಯ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು.


ಡಯಾಲಿಸಿಸ್ ರೋಗಿಗಳಿಗೆ ನಿರಂತರ ಆರೈಕೆ ಬೇಕಾಗಿದ್ದು, ಅವರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಖರ್ಚು ಮಾಡಬೇಕಾದ ಪರಿಸ್ಥಿತಿಯಿದೆ. ಆದರೆ ಬಡ ರೋಗಿಗಳಿಗೆ ಇದು ಸವಾಲಿನ ಸಂಗತಿಯಾಗಿದ್ದು, ಅವರ ಉಳಿತಾಯವೆಲ್ಲಾ ಡಯಾಲಿಸಿಸ್-ನಂತಹ ಚಿಕಿತ್ಸೆಗೇ ವ್ಯಯವಾಗುತ್ತದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಈ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಲಾಗಿದೆ ಎಂದರು.


ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಆರ್ಥಿಕ ಸಹಾಯದ ಅಗತ್ಯವಿರುವವರಿಗೆ ಹಾಗೂ ಅಶಕ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಹಿಂದೆಯೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದ್ದು, ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಸಂಪೂರ್ಣ ಸುರಕ್ಷಾ ಯೋಜನೆಯೂ ಜಾರಿಯಲ್ಲಿದೆ ಎಂದರು.


ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರು, ಉಜಿರೆಯ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2022ರ ಜನವರಿಯಲ್ಲಿ ಡಯಾಲಿಸಿಸ್ ಸೇವೆ ಆರಂಭವಾಗಿದ್ದು, ಒಟ್ಟು 11 ಡಯಾಲಿಸಿಸ್ ಯಂತ್ರಗಳಿವೆ‌. ಈ ಹವಾನಿಯಂತ್ರಿತ ಕೇಂದ್ರದಲ್ಲಿ ಇದುವರೆಗೂ ಪ್ರತಿದಿನ‌ 30ಕ್ಕೂ ಅಧಿಕ ಡಯಾಲಿಸಿಸ್ ಸೇವೆ ನೀಡಲಾಗಿದ್ದು, ಒಟ್ಟು 10 ಸಾವಿರಕ್ಕೂ ಅಧಿಕ ಡಯಾಲಿಸಿಸ್ ಸೇವೆ ನೀಡಲಾಗಿದೆ. ಬೆಳ್ತಂಗಡಿ ತಾಲೂಕಿನ ಆಸುಪಾಸಿನಲ್ಲಿರುವ ರೋಗಿಗಳಿಗೆ ಈ ಡಯಾಲಿಸಿಸ್ ಸೆಂಟರ್ ವರದಾನವಾಗಿತ್ತು. ಇದರ ಜೊತೆಗೆ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭಿಸಿರುವುದು ಬಹಳಷ್ಟು ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.


ಪ್ರತಿ ರೋಗಿಗೆ ಒಂದು ಬಾರಿಯ ಡಯಾಲಿಸಿಸ್-ಗೆ 1,500 ರೂಪಾಯಿ ವೆಚ್ಚವಾಗುತ್ತದೆ. ಒಬ್ಬ ರೋಗಿಗೆ ವಾರಕ್ಕೆ 3 ರಿಂದ 4 ಡಯಾಲಿಸಿಸ್ ಅಗತ್ಯವಿರುತ್ತದೆ. ಇದೀಗ ಉಚಿತ ಡಯಾಲಿಸಿಸ್ ಸೇವೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ, ಒಬ್ಬ ರೋಗಿಗೆ ತಿಂಗಳಿಗೆ 12 ಸಾವಿರದಿಂದ 24 ಸಾವಿರ ರೂಪಾಯಿಗಳವರೆಗೂ ಉಳಿತಾಯವಾಗುತ್ತದೆ. ಉಚಿತ ಡಯಾಲಿಸಿಸ್ ಯೋಜನೆಯಲ್ಲಿ ಒಬ್ಬ ರೋಗಿ ಮಾಸಿಕ 12 ಡಯಾಲಿಸಿಸ್  ಮಾಡಿಸಿಕೊಳ್ಳಬಹುದು.


ಇದರ ಜೊತೆಗೆ ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2024 ನೇ ಸಾಲಿನಲ್ಲಿ 4.98 ಕೋಟಿ ರೂ. ಮೊತ್ತದ ಉಚಿತ ವೈದ್ಯಕೀಯ ಸೇವೆಯನ್ನು ರೋಗಿಗಳಿಗೆ ನೀಡಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ವರ್ಷವೂ 40ಕ್ಕೂ ಅಧಿಕ ಉಚಿತ ವೈದ್ಯಕೀಯ ಶಿಬಿರಗಳನ್ನೂ ಆಯೋಜಿಸಲಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಫಿಜಿಶಿಯನ್ ಡಾ. ಸಾತ್ವಿಕ್ ಜೈನ್, ಜೆನರಲ್ ಫಿಜಿಶಿಯನ್ ಡಾ. ಬಾಲಕೃಷ್ಣ ಭಟ್, ಮೆಡಿಕಲ್ ಸುಪರಿಡೆಂಟ್ ಡಾ. ದೇವೇಂದ್ರ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ವೈದ್ಯೆ ಅನುಷಾ ನಿರೂಪಿಸಿದರು. ಸಂಪರ್ಕಾಧಿಕಾರಿ ಚಿದಾನಂದ್ ಅವರು ಧನ್ಯವಾದ ಸಮರ್ಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top