ಸನಾತನ ಧರ್ಮ ವಿಶಿಷ್ಟ ಧರ್ಮ, ವಿಶೇಷ ಆಚಾರ ವಿಚಾರಗಳಿಂದ ಕೂಡಿದ ಧರ್ಮ.
ಭೂಮಿ ತಾಯಿ ನಮ್ಮೆಲ್ಲರಿಗೂ ಅನ್ನ ಕೊಡುವ ಮಹಾತಾಯಿ. ಮಣ್ಣನ್ನು ಕೂಡ ನಾವು ಹೊನ್ನು ಎಂದೇ ಭಾವಿಸುತ್ತೇವೆ. ಯಾಕೆಂದರೆ ಒಂದೇ ಕಾಳು ಬೀಜ ಬಿತ್ತಿದರೂ ಅದನ್ನು ಸಾವಿರ ಕಾಳುಗಳನ್ನಾಗಿ ಮಾಡಿ ಕೊಡುತ್ತದೆ ಭೂಮಿ.
ಭೂಮಿಯನ್ನು ಬೇಸಿಗೆಯಲ್ಲಿ ಹದಗೊಳಿಸಿ, ಮಳೆಗಾಲ ಬಂದಾಗ ಬಿತ್ತುತ್ತಾರೆ, ಮಳೆಯಾದಾಗ ಬಿತ್ತಿದ್ದ ಕಾಳುಗಳು ಇಮ್ಮಡಿ, ನೂರ್ಮಡಿಯಾಗಿ ಬೆಳೆದು ಫಸಲು ನೀಡಿ ಅದನ್ನು ರೈತ ರಾಶಿ ಮಾಡಿ ಲಾಭ ಗಳಿಸುತ್ತಾನೆ.
ಸರ್ವಜ್ಞ ಹೇಳುತ್ತಾನೆ
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು
ಮೇಟಿಯಿಂ ರಾಟಿ ನಡೆದುದಲ್ಲದೆ
ದೇಶದಾಟವೇ ಕೆಡಗು ಸರ್ವಜ್ಞ
ಅಂದ್ರೆ ಯಾವುದೇ ಬೇರೆ ವಿದ್ಯೆಗಿಂತ ಕೃಷಿ ಕೆಲಸವೇ ಮೇಲು. ಹೊಲದಲ್ಲಿ ಕೆಲಸ ಮಾಡಿದರೇನೇ ನಮಗೆ ಅನ್ನ ಸಿಗುತ್ತದೆ. ಈ ಕೆಲಸವೇ ಶ್ರೇಷ್ಠ. ಈ ಮೇಟಿ (ಕೃಷಿ ಕೆಲಸ) ಯಿಂದಲೇ ದೇಶಗಳು ಅಭಿವೃದ್ಧಿ ಆಗುತ್ತವೆ, ಈ ಕೆಲಸ ಮಾಡದಿದ್ದರೆ, ದೇಶದ ಪರಿಸ್ಥಿತಿ ಕೆಡುತ್ತದೆ ಎಂದು. ಇದು ನಿಜವಾದ ಮಾತು. ಯಾಕೆಂದರೆ ಮೊದಲು ಹೊಟ್ಟೆ ತುಂಬಿದರೆ ಮಾನವ ಜೀವಿಗೆ ಬಲ, ಅನ್ನ ಇಲ್ಲದಿದ್ದರೆ ಕೆಲಸ ಮಾಡಲು ಆಗುವುದಿಲ್ಲ.
ಹೀಗೇ ಕೃಷಿಯ ಮಹತ್ವವನ್ನು ಸಾರಿ ಹೇಳಿದ್ದಾರೆ ನಮ್ಮ ಪೂರ್ವಜರು. ಅದಕ್ಕಾಗಿ ಅನ್ನ ಕೊಡುವ ಭೂಮಿತಾಯಿಯನ್ನು ಪೂಜಿಸುವ ಹಬ್ಬವೇ ಎಳ್ಳು ಅಮವಾಸೆ. ಅಥವಾ ಧಾನ್ಯಲಕ್ಷ್ಮಿಯನ್ನು ಪೂಜಿಸುವ ಹಬ್ಬವೇ ಎಳ್ಳಮಾಸೆ.
ಚಕ್ಕಡಿ ಗಾಡಿ ತೊಳೆದು ಎತ್ತುಗಳನ್ನು ತೊಳೆದು, ಅಲಂಕಾರ ಮಾಡಿ ಕೊರಳಿಗೆ ಗಂಟೆ, ಬೆನ್ನ ಮೇಲೆ ಝುಲಾ ಹಾಕಿ ಹಣೆಗೆ ಕುಂಕುಮ ಹಚ್ಚಿ ಶೃಂಗಾರ ಮಾಡುತ್ತಾರೆ. ಮನೆಯಲ್ಲಿ ಎಳ್ಳು ಹೋಳಿಗೆ ಅಥವಾ ಶೇಂಗಾ ಹೋಳಿಗೆ, ಕರ್ಜಿಕಾಯಿ , ಸೆಜ್ಜಿ ರೊಟ್ಟಿ, ಹೂರಣ ಕಡಬು, ಶೇಂಗಾ ಚಟ್ನಿ, ಕಾರೆಳ್ಳು ಚಟ್ನಿ, ಅಗಸಿ ಚಟ್ನಿ, ಮೊಸರು ಬೆಣ್ಣೆ, ತುಪ್ಪ, ಬಾನ ( ಬಾನ ಎಂದರೆ ಜೋಳವನ್ನು ಒನಕೆಯಿಂದ ಥಳಿಸಿ, ಮೇಲಿನ ಸಿಪ್ಪೆ ಮಾತ್ರ ಹೋಗುವಂತೆ ಮಾಡಿ, ಚೆನ್ನಾಗಿ ಕುದಿಸಿ, ಆರಿಸಿ, ಮೊಸರು ಕಲೆಸಿ ತಯಾರು ಮಾಡುತ್ತಾರೆ )ಸಾರು, ಅಕ್ಕಿ ಅನ್ನ ಎಲ್ಲವನ್ನೂ ಸಿದ್ಧಪಡಿಸಿ ಎತ್ತಿನ ಗಾಡಿಯಲ್ಲಿ ಕುಳಿತು ಹೊಲಕ್ಕೆ ಹೋಗುತ್ತಾರೆ.
ಹೊಲದಲ್ಲಿ ಇರುವ ಬನ್ನಿಗಿಡದ ಕೆಳಗೆ ಐದು ಸಣ್ಣ ಕಲ್ಲುಗಳನ್ನು ತಂದು ಕರ್ಪೂರ ಬೆಳಗಿ, ಊದುಬತ್ತಿ ಬೆಳಗಿ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸುತ್ತಾರೆ.
ಮಾಡಿದ ಅಡುಗೆಯನ್ನು ಒಂದು ತಟ್ಟೆಯಲ್ಲಿಟ್ಟು ನೈವೇದ್ಯ ಮಾಡಿ, ಹೊಲದ ತುಂಬೆಲ್ಲ ಅಡ್ಡಾಡಿ ಮೂಲೆ ಮೂಲೆಗೂ, ಹುಲ್ಲು ಹುಲ್ಲಿಗೋ, ಚೆಲ್ಲಂಬರಿಗೋ ಎನ್ನುತ್ತಾ ಚೆಲ್ಲುತ್ತಾರೆ. ಹುಲ್ಲು ಹುಲ್ಲಿಗೋ ಹೀಗೆನ್ನುವುದರ ಅರ್ಥ, ಹೊಲದಲ್ಲಿ ಬೆಳೆದ ಎಲ್ಲ ಹುಲ್ಲಿಗೂ, ಮತ್ತು ಚೆಲ್ಲು ಅಂಬರಿಗೂ ಎಂದರೆ ಆಕಾಶಕ್ಕೂ ತಲುಪಲಿ ಈ ನೈವೇದ್ಯ ಎಂದು ಹೇಳುತ್ತಾರೆ.ಜೋಳದ ತೆನೆಗಳಲ್ಲಿ ಅಲ್ಲಲ್ಲಿ ಕಡಬು, ಕರ್ಜಿಕಾಯಿ ಇಟ್ಟು ತಿರುಗಿ ಬಂದು ಎಲ್ಲಾರೂ ಸೇರಿ ಊಟ ಮಾಡುತ್ತಾರೆ. ಊಟದ ನಂತರ ಹೊಲದಲ್ಲಿ ಬೆಳೆದ ಕಬ್ಬು ಕಡ್ಲಿಗಿಡಗಳನ್ನು ತೆಗೆದುಕೊಂಡು, ತಿನ್ನುತ್ತಾ, ಎತ್ತಿನ ಬಂಡಿಯಲ್ಲಿ ಕುಳಿತು ಮನೆಗೆ ಬರುತ್ತಾರೆ.
ಒಟ್ಟಿನಲ್ಲಿ ಉತ್ತಮ ಪೌಷ್ಟಿಕ ಆಹಾರ ತಯಾರಿಸಿ ದೇವರಿಗೆ ನಿವೇದಿಸಿ ತಿಂದು, ಉತ್ತಮ ಅರೋಗ್ಯ, ಅಭಿವೃದ್ಧಿ ಪಡೆಯುವದೇ ಈ ಹಬ್ಬದ ವಿಶೇಷ.
-ರೇಖಾ ಮುತಾಲಿಕ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ