ಸಾಂದರ್ಭಿಕ ಚಿತ್ರ
ಯಕ್ಷಗಾನದಲ್ಲಿನ ಶಬರಿಮಲೆ ಸ್ವಾಮಿ ಅಯ್ಯಪ್ಪ ಪ್ರಸಂಗದ ವಾವರನ ಪಾತ್ರವು ಸೇರಿದಂತೆ ಬಹಳಷ್ಟು ಮುಸ್ಲಿಂ ಪಾತ್ರಗಳನ್ನು ತೆಗೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಇದಕ್ಕೆ ಎಂದಿನಂತೆ ಕೋಮುವಾದ ಮತ್ತು ಸಮೂಹದ್ವೇಷವೇ ಮೂಲ ಕಾರಣವಾದರೂ, ನೈಜ ಯಕ್ಷಾಭಿಮಾನಿಗಳು ಹಾಗೂ ಮುಸ್ಲಿಮರ ಮಟ್ಟಿಗೆ ಇದು ಸ್ವಾಗತಾರ್ಹ ಬೆಳವಣಿಗೆ. ಯಕ್ಷಗಾನದಲ್ಲಿ ಮುಸ್ಲಿಂ ಪಾತ್ರಗಳನ್ನು ಹಲವು ಕಾರಣಗಳಿಗಾಗಿ ಬಳಸಿಕೊಳ್ಳುತ್ತಾರೆ. ಇವುಗಳಲ್ಲಿ ಸೌಹಾರ್ದದ ಉದ್ದೇಶಕ್ಕೋಸ್ಕರ ಬಳಸಿಕೊಳ್ಳುವ ಒಳ್ಳೆಯ ಮನಸ್ಥಿತಿಯ ಜೊತೆಗೆ, ಮುಸ್ಲಿಮರನ್ನು ಕೆಟ್ಟದಾಗಿ ಚಿತ್ರಿಸಿ ಸುಲಭದಲ್ಲಿ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಉದ್ದೇಶದ ವಿಕೃತಿ ಕೂಡ ಇದೆ.
ಯಕ್ಷಗಾನದಲ್ಲಿ ಮುಸ್ಲಿಂ ಪಾತ್ರಗಳ ಉಪಸ್ಥಿತಿ ತರ್ಕ, ತತ್ವ ಮತ್ತು ಕಾಲಜ್ಞಾನಗಳಿಗೆ ನಿಲುಕದ್ದು. ಕೇವಲ 1400 ವರ್ಷಗಳ ಹಿಂದಷ್ಟೇ ಭಾರತೀಯ ಉಪಖಂಡಕ್ಕೆ ಬಂದ ಮುಸಲ್ಮಾನರು ಪೌರಾಣಿಕ ಕಲ್ಪನೆಯಲ್ಲಿ ಪಾತ್ರವಾಗಿ ಮೂಡಿಬರುವುದು ಒಂದು ದೊಡ್ಡ ಅಸಂಬದ್ಧ. ಬಹಳಷ್ಟು ಕ್ಷೇತ್ರ ಮಹಾತ್ಮೆ ಮತ್ತು ಕಾಲ್ಪನಿಕ ಪ್ರಸಂಗಗಳಲ್ಲಿ ಮುಸ್ಲಿಂ ಪಾತ್ರಗಳನ್ನು ಸೃಷ್ಟಿಸಿದವರಿಗೆ ಪುರಾಣ ಮತ್ತು ಇತಿಹಾಸದ ಕನಿಷ್ಠ ಜ್ಞಾನದ ಕೊರತೆಯಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.
ಯಕ್ಷಗಾನದ ಪ್ರಸಿದ್ಧ ಮೇಳಗಳಾದ ಧರ್ಮಸ್ಥಳ ಮತ್ತು ಬಪ್ಪನಾಡು ಮೇಳಗಳ ಕ್ಷೇತ್ರ ಮಹಾತ್ಮೆ ಪ್ರಸಂಗಗಳಲ್ಲಿ ಕಾಣಿಸಿಕೊಳ್ಳುವ ಮುಸ್ಲಿಂ ಪಾತ್ರಗಳ ಬಗ್ಗೆ ಸಣ್ಣ ಅವಲೋಕನ ನಡೆಸಿದರೂ ಅವು ಕಾಲಜ್ಞಾನ, ಸಾಮಾನ್ಯ ತರ್ಕ ಮತ್ತು ಮುಸ್ಲಿಂ ಜನಜೀವನದ ಲಕ್ಷಣಗಳಿಗೆ ಹೊಂದಿಕೊಳ್ಳುವುದಿಲ್ಲ. ತೆಂಕು- ಬಡಗುತಿಟ್ಟಿನವರು ಕಾಲಗಳಿಂದ ಆಡಿಕೊಂಡು ಬರುವ ಶನೀಶ್ವರ ಮಹಾತ್ಮೆ ಸೇರಿದಂತೆ ಹಲವು ಪ್ರಸಂಗಗಳಲ್ಲಿ ಮುಸ್ಲಿಂ ಪಾತ್ರಗಳ ಸುತ್ತಲಿನ ಪ್ರಮುಖ ಕಲಾವಿದರ ಸಂಭಾಷಣೆಗಳು ಸೊಂಟದ ಕೆಳಗಿನ ಸಕಲ ಸಂದುಗಳಲ್ಲೂ ಸುಳಿದಾಡಿ ಅಸಹ್ಯ ಮೂಡಿಸುತ್ತವೆ. ಹೀಗಿನ ಅಸಂಬದ್ಧಗಳು ಪೌರಾಣಿಕತೆ ಮತ್ತು ನಂಬಿಕೆಯ ನೆಲೆಗಟ್ಟನ್ನೇ ಶಿಥಿಲಗೊಳಿಸುತ್ತವೆ ಎನ್ನುವ ಸಾಮಾನ್ಯ ಪ್ರಜ್ಞೆ ಪಾತ್ರ ಸೃಷ್ಟಿಕಾರರಲ್ಲಿ ಕಾಣುವುದಿಲ್ಲ ಎನ್ನುವುದು ದುರಂತ. ಇತ್ತೀಚೆಗೆ ವಿವಾದದಲ್ಲಿರುವ ವಾವರನ ಪಾತ್ರವೂ ಇದಕ್ಕೆ ಹೊರತಲ್ಲ.
ಪೌರಾಣಿಕತೆಯ ಪರಿಭಾಷೆಯಲ್ಲಿ ಪ್ರತ್ಯೇಕ ಅಥವ ಪರ ಎನ್ನುವ ಧರ್ಮವೇ ಇರುವುದಿಲ್ಲ. ಹೀಗಿರುವಾಗ ಪರಧರ್ಮ ಎನ್ನುವ ಪರಿಕಲ್ಪನೆ ಮತ್ತು ಪಾತ್ರಗಳು ಯಕ್ಷಗಾನದಲ್ಲಿ ಬರುವುದು ಹೇಗೆ? ಒಂದು ವೇಳೆ ಪರಧರ್ಮದ ಪಾತ್ರವಾಗಿ ಮುಸ್ಲಿಂ ಪಾತ್ರಗಳು ಬರುವುದಾದರೆ, ಮುಸ್ಲಿಮರಿಗಿಂತ ಅದೆಷ್ಟೋ ಶತಮಾನಗಳ ಹಿಂದಿನ ಸಾಮುದಾಯಿಕ ವ್ಯವಸ್ಥೆಯಾದ ಪಾರ್ಸಿ, ಕ್ರೈಸ್ತ, ಯಹೂದಿ ಜೊತೆಗೆ ಇತರ ಸಮುದಾಯಗಳ ಪಾತ್ರಗಳು ಮುಸ್ಲಿಂ ಪಾತ್ರಗಳಷ್ಟೇ ವ್ಯಾಪಕವಾಗಿ ಯಾಕೆ ಬರುವುದಿಲ್ಲ ಎಂಬಂತಹ ಹಲವಾರು ಪ್ರಶ್ನೆಗಳು ಮೂಡುತ್ತವೆ. ಒಂದುವೇಳೆ ರಾಮಾಯಣ ಮತ್ತು ಮಹಾಭಾರತ ಗಟ್ಟಿ ಕಾವ್ಯಗಳಾಗಿ ಜನಮಾನಸದ ಸಹಜ ಜ್ಞಾನದೊಳಗೆ ಸರಾಗ ಹರಿವು ಪಡೆದು ಮಿಳಿತವಾಗದಿದ್ದರೆ ತ್ರೇತಾಯುಗ ಮತ್ತು ದ್ವಾಪರಯುಗದ ಪ್ರಸಂಗದಲ್ಲೂ ಮುಸ್ಲಿಮರು ಅದ್ಯಾವತ್ತೋ ಕಾಣಿಸಿಕೊಳ್ಳುತ್ತಿದ್ದರು. ಹೀಗಿದ್ದರೂ, ಶೂರ್ಪನಖಿಯನ್ನು ಮುಸ್ಲಿಂ ಹೆಂಗಸೆನ್ನುವ ಮತ್ತು ವಸಿಷ್ಠಾಶ್ರಮದ ನಂದಿನಿಯ ಮೈಯಿಂದ ಉದುರಿದವರು ಮುಸ್ಲಿಮರೆನ್ನುವ ಸಣ್ಣ ಸಣ್ಣ ಕೀರಲು ಧ್ವನಿಗಳು ಅಲ್ಲಲ್ಲಿ ಇರುವುದನ್ನು ಕಾಣಬಹುದು.
ಇನ್ನು, ಆರಾಧನೆಯಲ್ಲಿ ಸೌಹಾರ್ದ ಎನ್ನುವುದೇ ಒಂದು ಅವಿವೇಕದಿಂದ ಕೂಡಿದ ಕಲ್ಪನೆ. ಪರಸ್ಪರರು ನಂಬುವ ಶಕ್ತಿಯನ್ನು ಸೌಹಾರ್ದ ಕಾಣಿಸುವ ಉದ್ದೇಶಕ್ಕೆ ಆರಾಧಿಸುವುದು ಸೌಹಾರ್ದವಲ್ಲ, ಅದೊಂದು ಬೌದ್ಧಿಕ ಬರಡುತನ. ಮುಸ್ಲಿಮರು ಅಯ್ಯಪ್ಪ ಮಾಲೆ ಧರಿಸುವುದು, ಹಿಂದೂಗಳು ಮುಸ್ಲಿಮರ ಟೋಪಿ ಹಾಕಿಕೊಂಡು ಶಾಲು ಸುತ್ತಿಕೊಂಡು ನಿಲ್ಲುವುದು, ಇಂಥದ್ದೆಲ್ಲ ಧರ್ಮ ಸಿದ್ದಾಂತದ ಪರಿಜ್ಞಾನವಿಲ್ಲದ ಅಸಂಬದ್ಧವೇ ಹೊರತು ಸೌಹಾರ್ದವಾಗದು. ಸೌಹಾರ್ದವು ಕಲ್ಪನೆ ಮತ್ತು ಕೃತಕತೆಯ ಮೇಲೆ ಹೀಗೆಲ್ಲ ಸ್ಥಾಪಿತವಾದರೆ ಅದಕ್ಕೊಂದು ಭವಿಷ್ಯವೂ ಇರುವುದಿಲ್ಲ. ಭಾರತೀಯ ಸಮಾಜ ಮತ್ತು ಕಲೆಗಳೊಳಗೆ ಆರಾಧನೆಯಲ್ಲಿ ಸೌಹಾರ್ದ ಕಾಣಿಸುವ ಅನಗತ್ಯ ಚಾಳಿ ವ್ಯಾಪಕವಾಗಿದೆ.
ಯಕ್ಷಗಾನದ ಪಾತ್ರ, ವ್ಯಕ್ತಿತ್ವ, ಪ್ರಸಂಗ ಯಾವುದೇ ಇರಲಿ, ಅದು ಕಲ್ಪನೆಯೇ ಆದರೂ ನೈಜತೆಯೊಂದಿಗೆ ಸೆಣಸಬೇಕೇ ಹೊರತು ಕೃತಕತೆಯೊಂದಿಗಲ್ಲ. ಅಪಕ್ವ ಜ್ಞಾನದ ತಳಹದಿಯ ಮೇಲೆ ಸೃಷ್ಟಿಸಲ್ಪಟ್ಟ ಮುಸ್ಲಿಂ ಪಾತ್ರಗಳಿಂದಾಗಿ ಯಕ್ಷಗಾನವು ಘನತೆ ಮತ್ತು ಪ್ರೇಕ್ಷಕರನ್ನು ಸಮಾನವಾಗಿ ಕಳೆದುಕೊಂಡಿದೆ. ಯಕ್ಷಗಾನದಂತಹ ಸದೃಢ ಕಲೆಯಲ್ಲಿ ಪೌರಾಣಿಕ ಪಾತ್ರಗಳು ವಿಶಾಲ ಮತ್ತು ವಿವೇಕಯುತವಾದ ಕಲ್ಪನೆಯಲ್ಲಿ ಪ್ರಸ್ತುತಿಯನ್ನು ಕಾಣುತ್ತವೆ..
ಆದರೆ ಹಲವು ದಶಕಗಳಿಂದ ರಂಗದಲ್ಲಿ ಕಾಣಿಸಿಕೊಳ್ಳುವ ಮುಸ್ಲಿಂ ಪಾತ್ರಗಳನ್ನು ಮಾಡುವ ಪಾತ್ರಧಾರಿಗಳಲ್ಲಿ ಪಾತ್ರ ಮತ್ತು ವಿಚಾರಗಳಲ್ಲಿ ಕನಿಷ್ಠ ಕಲ್ಪನೆಯೂ ಕಂಡುಬರುವುದಿಲ್ಲ. ಬ್ರಾಹ್ಮಣ, ಅಕ್ಕಸಾಲಿಗ, ಮೊಗವೀರ ಮುಂತಾದ ನಿತ್ಯ ಬಳಕೆಯ ಜಾತಿ ಪಾತ್ರಗಳಲ್ಲಿ ಕಂಡುಬರುವ ಸ್ಪಷ್ಟ ಯಕ್ಷಗಾನೀಯ ನಡೆಗಳು ಕನಿಷ್ಠ ಮಟ್ಟದಲ್ಲೂ ಮುಸ್ಲಿಂ ಪಾತ್ರಗಳಲ್ಲಿ ಕಂಡು ಬರುವುದಿಲ್ಲ. ಮುಸ್ಲಿಮರೊಂದಿಗೆ ಸಹಜೀವನ ನಡೆಸಿದವರಿಗೆ ಹಾಗೂ ಮುಸ್ಲಿಮ್ ಪ್ರೇಕ್ಷಕರಿಗೆ ಯಕ್ಷಗಾನದ ಮುಸ್ಲಿಂ ಪಾತ್ರಗಳು ಸೆನ್ಸ್ ಮತ್ತು ಮೆಚುರಿಟಿ ಇಲ್ಲದೆ ಚೀಪ್ ಆಗಿ ಕಾಣಿಸುತ್ತವೆ.
ನಿಕಟಪೂರ್ವ ಇತಿಹಾಸದ್ದೇ ಆದರೂ, ಸಾಮಾನ್ಯ ಅಧ್ಯಯನವಿಲ್ಲದೆ ಮತ್ತು ಪಾತ್ರದೊಳಗೆ ಪ್ರವೇಶ ಸಾಮರ್ಥ್ಯ ಸಾಧ್ಯವಿಲ್ಲದ ಮೇಲೆ ಮುಸ್ಲಿಂ ಪಾತ್ರಗಳನ್ನು ರಂಗದ ಮೇಲೆ ತರುವುದು ಕಲೆ ಮತ್ತು ಕಲಾವಿದನನ್ನು ಲಘುವಾಗಿಸುತ್ತದೆ. ಹೀಗಿರುವಾಗ ಯಕ್ಷಗಾನದಲ್ಲಿ ಮುಸ್ಲಿಂ ಪಾತ್ರಗಳು ಇಲ್ಲದಿರುವುದೇ ಉತ್ತಮ. ಇಷ್ಟಾಗಿಯೂ, ಎಂದಿನಂತೆ ಸಮುದಾಯವನ್ನು ಅವಮಾನಿಸಲು ಮತ್ತು ಹೀಯಾಳಿಸಲು ಮುಸ್ಲಿಂ ಪಾತ್ರಗಳು ಬೇಕೇ ಅಂತಾದರೆ ಫೈನ್, "ಯಕ್ಷಗಾನಂ ಗೆಲ್ಗೆ "
- ಮುಷ್ತಾಕ್ ಹೆನ್ನಾಬೈಲ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ