ಛೇ ಎಲ್ಲಾದ್ರೂ ಸಾಧ್ಯಾನಾ! ಎತ್ತರದ ನಿಲುವು, ದೃಢಕಾಯ ದೇಹ, ಸಿಂಹಕಂಠ. ಪೌರಾಣಿಕ ಐತಿಹಾಸಿಕ, ಸಾಮಾಜಿಕ ಹೀಗೆ ನವರಸಗಳ ಕಲಾ ಸಾರ್ವಭೌಮನಿಗೂ, ಹಾಸ್ಯ ಪಾತ್ರಕ್ಕೂ ಎಲ್ಲಿಯ ಸಂಬಂಧ ಅಂದ್ಕೊಂಡ್ರಾ. ಸಾಮಾನ್ಯ ಟ್ರಾಕ್‌ನಿಂದ ವಿಭಿನ್ನತೆಯ ಪ್ರಯತ್ನ ಶುಭಮಂಗಳ ಚಿತ್ರದಲ್ಲಿದೆ. ಪುಟ್ಟಣ್ಣ ಕಣಗಾಲ್ ಚಿತ್ರ. ಅಶ್ವಥ್ ಅವರಿಗೆ ಡಾಕ್ಟರ್ ಪಾತ್ರ ಇಟ್ಟಿದ್ದರು. ಕಂಠೀರವ ಸ್ಟುಡಿಯೋ. ಮೇಕಪ್ ಹಾಕಿ ಸೂಟ್ ಹಾಕಿ ಸೆಟ್‌ಗೆ ಕಳಿಸಿ ಅಂದಿದ್ರು ನಿರ್ದೇಶಕ ಪಾತ್ರ ಯಾವುದೂ ಅಂತ ಗೊತ್ತಿಲ್ಲ ಅಶ್ವಥ್‌ಗೆ. ಪುಟ್ಟಣ್ಣ ಪಾತ್ರ ವಿವರಿಸಿದ್ರು ಒಂದೇ ದೃಶ್ಯ. ಹೀರೊ ಕುಟುಂಬದ ಡಾಕ್ಟರ್ ನೀವು. ಹಟಮಾರಿ ಹೀರೋಯಿನ್. ನೀವು ಬಂದು ಆಕೆಗೆ ಚಿಕಿತ್ಸೆ ಮಾಡಬೇಕು ಅಲ್ಲಿ ನೀವು ಹಾಸ್ಯ ತರಬೇಕು. ಅದೂ ರಾಜ ಹಾಸ್ಯ. ಗಂಭೀರವಾಗಿ ಹಾಸ್ಯ ಮಾಡಬೇಕು” ಅಶ್ವಥ್‌ಗೆ ಶಾಕ್.
“ಪುಟ್ಟಣ್ಣ ತಮಗೇ ಈ ಪಾತ್ರ ಕಲ್ಪಿಸಿ ಮಾಡ ಹೇಳಿದ್ದಾರೆ. ನಾನು ಹಾಸ್ಯ ಪಾತ್ರ ಮಾಡಿಲ್ಲ” ತಲೆ ಕೆರೆದುಕೊಂಡ್ರು. ತಮಿಳು ನಾಟಕ ಕಲಾವಿದರ ಒಂದು ನಾಟಕ ನೆನಪಾಯ್ತು ಹೀರೋನೇ ಕ್ಷಯರೋಗಿ ಸಹಸ್ರನಾಮಂ ಅವರೇ ಆ ಕಂಪನಿ ಮಾಲೀಕರು ಹಾಗೂ ಹೀರೊ. ತಕ್ಷಣ ಅಶ್ವಥ್ ಮೇಕಪ್ ಮ್ಯಾನನ್ನು ಕರೆದ್ರು “ಕ್ರಾಪು ಈ ಕಡೆ ಈ ರೀತಿ ತೆಗಿ. ಈ ಕಡೆ ಹೀಗೆ ಬಾಚು”. ಆತ ಅಂದ “ಪುಟ್ಟಣ್ಣ ಹೇಳಿರೋದು ಹೀಗೆ. ನೀವು ಹೇಳಿದ ಹಾಗಲ್ಲ ಸಾರ್”. “ನಾನು ಹೇಳಿದ ಹಾಗೆ ಮಾಡಯ್ಯ. ಮೀಸೆ ಬೇರೆ ತರಹ ಈ ರೀತಿ ಇಡು”. ಹೆರ‍್ತಾ ಆ ರೀತಿ ಮೇಕಪ್ ಮಾಡಿದ.
ಆತನಿಗೆ ಹೆದರಿಕೆ. ಪುಟ್ಟಣ್ಣ ಕೇಳಿದ್ರು. “ಏನ್ರೀ ದಿಢೀರ್ ಬದಲಾವಣೆ”. “ಒಂದು ತರಹ ಪಾತ್ರಕ್ಕೆ ರೆಡಿಯಾಗಿದೀನಿ. ಅದಕ್ಕೆ ಈ ಬದಲಾವಣೆ, ಇದರಲ್ಲಿ ಆತನ ತಪ್ಪಿಲ್ಲ.” ಅಶ್ವಥ್ ಉವಾಚ. “ಸರಿ ಏನಾದ್ರು ಮಾಡಿ” ಅಂದ್ರು ಪುಟ್ಟಣ್ಣ. “ಸಾರ್ ನನ್ನ ಪಾತ್ರಕ್ಕೆ ಗೂರಲು. ನಮ್ಮ ಅಕ್ಕ ಅವರಿಗೆ ಬ್ರಾಂಕೆಟೈಸ್ ಇತ್ತು. ಅದೇ ಪ್ರೇರಣೆ. ನನಗೇ ಆರೋಗ್ಯ ಚೆನ್ನಾಗಿಲ್ಲ ಅಂತ ಡಾಕ್ಟರ್ ಹೇಳಿದ್ರೆ ಜನ ನಂಬೋಲ್ಲ ಆದ್ರೆ ಅದನ್ನೆ ಅಭಿನಯದಲ್ಲೇ ತೋರಿಸಿದಾಗ ಜನ ನಂಬ್ತಾರೆ. ನಗ್ತಾರೆ” ಅಂತ ಮಾಡಿ ತೋರಿಸಿದ್ರು. ಅಶ್ವಥ್ ಸೂಟ್ ಹಾಕಿದ್ರೂ, ವಿಚಿತ್ರವಾಗಿ ಬಾಚಿದ ತಲೆಕೂದಲು, ಸೆಟೆದ ಕೆಲವು ನೀಳ ಕೂದಲು. ವಿಚಿತ್ರ ಗೆಟ್‌ಅಪ್ ಉಸಿರು ಎಳೆದು ಎಳೆದು ಗಾಳೀಲಿ ಬಿಟ್ಟಾಗ “ಹ್ಹೀ-ಹ್ಹೀ” ಅಂತ ಕುದುರೆ ಕೆನೆದ ಹಾಗೆ ಬರ್ತಿತ್ತು ಮಾತಿಗಿಂತ ಈ ವಿಚಿತ್ರ ಸದ್ದು. ಹಾಗೆ ಮಾಡ್ತಾ ಬಂದು 1 ಲೋಟ ನೀರು ತರಿಸಿದ್ರು ಹೀರೊ ಹಿರೋಯಿನ್‌ಗೆ ಕೊಡ್ತಾರೆ ಅಂತ ಯೋಚಿಸಿದ ಪ್ರೇಕ್ಷಕರ ತರಹ. ಮಾತ್ರೆ ಜೇಬಿಂದ ತೆಗೆದು ತೋರಿಸಿ, ಅದೇ ಮಾತ್ರೇನ ತಾವೇ ನುಂಗಿ ನೀರು ಕುಡಿದರು ಡಾಕ್ಟರ್ ಆಮೇಲೆ ಹಿರೋಯಿನ್ ಟೆಸ್ಟ್. ಉಬ್ಬಸದ ಧ್ವನಿ ಕುದುರೆ ಕೆನೆತದ ಉಸಿರು ಜನರಿಗೆ ನಗು ಅಲೆ ತರಿಸ್ತು ಒಂದೇ ದೃಶ್ಯದಲ್ಲಿ ಬಂದು ಹೋದ್ರೂ ಅಶ್ವಥ್ ಚೆನ್ನಾಗಿ ಮಾಡಿದ್ದಾರೆ. ಅಂತ ವಿಮರ್ಶೆ ಬಂತು ಟಾಕೀಸ್‌ನಲ್ಲಿದ್ದ ಜನ ದೃಶ್ಯ ನೋಡಿ, ನಂತರ ನೆನೆಸಿಕೊಂಡು ನಗುತ್ತಿದ್ದರು.
ಗುರುಶಿಷ್ಯರು
ಉತ್ತರ ಕರ್ನಾಟಕದ ವೃತ್ತಿ ರಂಗಭೂಮಿ ನಾಟಕಗಳ ಪಾತ್ರಗಳಿಗೆ ಅಶ್ವಥ್ ಅವರನ್ನು ಕರೆ ತಂದವರು ಅವರ ಕಲಾಗುರು ವಾಮನ್. ಇವರಿಬ್ಬರೂ ಜನರ ಮನರಂಜನೆಗಾಗಿ ಹಾಸ್ಯ ಸ್ಕಿಟ್ (ಪ್ರಹಸನ) ಸಿದ್ಧಪಡಿಸಿದರು. 70 ರಿಂದ 90ರ ದಶಕದವರೆಗೆ, ಯಾವುದೇ ಕಂಪನಿಯ ನಾಟಕಗಳ ಮಧ್ಯೆ ನಿಜವಾದ ಗುರುಶಿಷ್ಯರು, ಶಿಷ್ಯ ಗುರುಗಳಾಗಿ ಪಾತ್ರವಹಿಸಿ, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿದ್ದರು. ಅದರ ಜನಪ್ರಿಯತೆ ಎಲ್ಲಿಗೆ ಬಂತೂ ಅಂದ್ರೆ ಎಲ್ಲೇ ಇವರಿಬ್ಬರೂ ಭಾಷಣ ಮಾಡ ಹೋಗಲಿ, ಚರ್ಚೆ ಮಾಡ ಹೋಗಲಿ ಇವರಿಬ್ಬರೂ ಗುರು ಶಿಷ್ಯರು ಪ್ರಹಸನ ಮಾಡಲೇಬೇಕಾಯ್ತು. 1998 ಡಿಸೆಂಬರ್ 14, ಗುರುಗಳು ಇಹಲೋಕ ತ್ಯಜಿಸಿದರು. 2010 ಜನವರಿ 18, ಪಟ್ಟ ಶಿಷ್ಯ ಭೂಮಿಯಿಂದ ನಿರ್ಗಮಿಸಿದರು.
11 ವರ್ಷ 20 ದಿನಗಳ ನಂತರ ಇದೇ ರೀತಿ 1954ರಲ್ಲಿ ಸ್ತ್ರೀ ರತ್ನದಿಂದ ಚಿತ್ರರಂಗಕ್ಕೆ ಬಂದ ಅಶ್ವಥ್, ವಂಶವೃಕ್ಷದಿಂದ 1970ರಲ್ಲಿ, ಚಿತ್ರರಂಗಕ್ಕೆ ಎಂಟ್ರೆ ಕೊಟ್ಟ ಕುಮಾರ್ (ವಿಷ್ಣುವರ್ಧನ್), ಇವರಿಬ್ಬರೂ 1972ರಲ್ಲಿ ನಾಗರಹಾವು ಚಿತ್ರದಲ್ಲಿ ಗುರುಶಿಷ್ಯರು, ಚಾಮಯ್ಯ ಮೇಸ್ಟ್ರು ಹಾಗೂ ರಾಮಾಚಾರಿಯಾಗಿ, 2009ರ ಕೊನೆಯಾಗ್ತಿದ್ದ ಹಾಗೆ, ಶಿಷ್ಯ ಹೋದರೆ, 2010ರ ಆರಂಭದಲ್ಲಿ ಗುರು ನಿಧನ ಹೊಂದಿದರು, 20 ದಿನಗಳ ನಂತರ. ಶಿಷ್ಯನ ಹಿಂದೆಯೇ ಈ ಗುರು ಚಾಮಯ್ಯ ಮೇಸ್ಟ್ರು ಹೊರಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ