ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗುವಾಗಲೇ ಐದು ದಿನಗಳ ಕಾಲ ಅಲ್ಲಿ ತಂಗುವುದು ಗೊತ್ತಿದ್ದ ಕಾರಣ ಎಂದಿನಂತೆ ಮೂರು ನಾಲ್ಕು ಪುಸ್ತಕಗಳನ್ನು ತೆಗೆದಿಟ್ಟೆ. “ಕರ್ತವ್ಯದ ಮೇಲೆ ಹೋಗುವಾಗ ಇಷ್ಟೊಂದು ಪುಸ್ತಕಗಳ ಅವಶ್ಯಕತೆ ಇದೆಯಾ? ಕೆಲಸಗಳ ನಡುವೆ ಓದಲು ಸಮಯ ಸಿಗಬಹುದಾ?” ನಮ್ ಡಾಕ್ಟ್ರು ಪ್ರಶ್ನೆ ಕೇಳಿದಾಗ ಟ್ಯೂಬ್ ಲೈಟ್ ಉರಿದು ಬೇರೆ ಪುಸ್ತಕಗಳನ್ನು ಬದಿಗಿಟ್ಟು ಹಸಿರು ಅಧ್ಯಾತ್ಮ ಒಂದನ್ನು ಮಾತ್ರ ತೆಗೆದಿಟ್ಟುಕೊಂಡೆ.
ಎರಡನೇ ದಿನ ಬಿಡುವಿನ ಹೊತ್ತಿನಲ್ಲಿ ಪುಸ್ತಕ ಮಳಿಗೆಗಳಿಗಾಗಿ ಹಾಕಿದ್ದ ಟೆಂಟ್ ನಲ್ಲಿ ಕೂತು ಹಸಿರು ಅಧ್ಯಾತ್ಮ ಓದಿ ಮುಗಿಸಿದೆ. ಮಾರನೇ ದಿನಕ್ಕೆ ಪುಸ್ತಕವಿಲ್ಲ ಎನಿಸಿದರೂ ಸಮ್ಮೇಳನಕ್ಕಾಗಿ ಬರಲಿರುವ ಪ್ರಕಾಶಕರಲ್ಲಿ ಸಾಕಷ್ಟು ಮಿತ್ರರಿದ್ದಾರೆ ಅವರ ಬಳಿ ಪುಸ್ತಕ ಕೊಟ್ಟು ಓದಿದರಾಯಿತು ಎಂದುಕೊಂಡೆ. ಯುಪಿಐ ಕೆಲಸ ಮಾಡದಿದ್ದರೆ ಇದ್ದೇ ಇದೆಯಲ್ಲ ಲೆಕ್ಕ ಪುಸ್ತಕದಲ್ಲಿ ಬರೆಸಿ ಉದ್ರಿ ವ್ಯವಹಾರ ಎಂಬ ಧೈರ್ಯ! ರಘುವೀರ್ ಅವರ ಸಾಹಿತ್ಯ ಲೋಕ ಮಳಿಗೆಗೆ ದಾಳಿಯಿಟ್ಟೆ. ಯುಪಿಐ ಪಾವತಿ ಆಗದ ಕಾರಣ “ಪುಸ್ತಕ ಕೊಡಿ, ಸಾಲ ಬರ್ಕೊಳಿ” ಎಂದರೆ, “ನೀವು ರಿವ್ಯೂ ಬರೆದು ಪುಸ್ತಕ ಚೆನ್ನಾಗಿದೆ ಅಂದರೆ ಐವತ್ತರುವತ್ತಕ್ಕೂ ಹೆಚ್ಚು ಜನ ಪುಸ್ತಕ ಆರ್ಡರ್ ಮಾಡುತ್ತಾರೆ” ಎಂಬ ಸಿಹಿ ಅಚ್ಚರಿಯನ್ನು ನನ್ನ ಮುಂದಿಟ್ಟು “ಯಾವ ಪುಸ್ತಕ ಬೇಕೋ ತೆಗೆದುಕೊಂಡು ಹೋಗಿ, ಬೆಂಗಳೂರು ತಲುಪಿದ ನಂತರವೇ ಪಾವತಿಸಿ ಪರವಾಗಿಲ್ಲ” ಎಂಬ ಔದಾರ್ಯ ತೋರಿದರು. ಸುಪ್ರೀತ್ ಬರೆದ, ಸುಮಾರು ಮುನ್ನೂರು ಪುಟಗಳ ʼಉತ್ತರʼ ಮತ್ತು ʼಸಾವುʼ ಆಯ್ಕೆ ಮಾಡಿದೆ. ದಿನಕ್ಕೊಂದರಂತೆ ಓದು ಮುಗಿದು ಇವರ ಮಳಿಗೆಯಿಂದ ಸಾಲ ಕೊಂಡಿದ್ದು ಸಾಕೆನಿಸಿದ ನಂತರ ಲೆಕ್ಕ ಪುಸ್ತಕದಲ್ಲಿ ಉದ್ರಿ ಬರೆದುಕೊಂಡು ʼಅಪ್ಪನ ಹಾದಿʼ ಕೊಟ್ಟ ಕೀರ್ತಿ ಸಾವಣ್ಣರಿಗೆ ಸಲ್ಲುತ್ತದೆ. ಹೀಗೆ ಅಕ್ಷರದಿಂದ ದೊರಕಿದ ಅಕ್ಕರೆಗಳು ನೂರಾರು ಮತ್ತು ಇವೆಲ್ಲವನ್ನೂ ಸಾಧ್ಯವಾಗಿಸಿದ್ದು ಕನ್ನಡ.
ಯಾರಾದರೂ ನೀನು ಚೆಂದ ಎಂದರೆ ಖಂಡಿತವಾಗಿಯೂ ಆನಂದ; ಆದರೆ ನಿನ್ನ ಕನ್ನಡ ಚೆಂದ ಎಂದರೆ ನನ್ನ ಪಾಲಿಗದು ಅಮಿತಾನಂದ. ಕನ್ನಡದ ಮಟ್ಟಿಗೆ ಹೇಳುವುದಾದರೆ ನನ್ನ ಹೆಗಲ ಮೇಲಿನ ಋಣಭಾರ ಬಹಳವಿದೆ. ಮೊದಲಿಗೆ ಮಾತು ಕಲಿಸಿದ ಅಮ್ಮ, ಮಗುವಿಗದು ಸಹಜ ಕಲಿಕೆಯಾದರೂ ತೀರಿಸಲಾರದ ಮಾತೃ ಋಣ.
ನಂತರ ಪ್ರಾಥಮಿಕ ಶಾಲೆಯ ಶಶಿಕಲಾ ಟೀಚರ್. ಇವತ್ತಿಗೂ ತಾಯಿ ಪ್ರೀತಿ ತೋರುವ ಅಕ್ಕರೆಯ ಕನ್ನಡ ಟೀಚರ್ ಅವರು. ಅನಿವಾರ್ಯವಾಗಿ ಯಾವತ್ತಾದರೂ ಅವರು ತನ್ನ ಮಕ್ಕಳು ಪ್ರೇಮ ಮತ್ತು ಪ್ರತಿಭಾರನ್ನು ಶಾಲೆಗೆ ಕರೆದುಕೊಂಡು ಬಂದಾಗೆಲ್ಲ ಇಬ್ಬರೂ ನನ್ನ ಅಕ್ಕ ಪಕ್ಕ ಕೂರುತ್ತಿದ್ದು ಇವತ್ತಿಗೂ, ಅಂದರೆ, ಮೂರು ದಶಕಗಳ ನಂತರವೂ ಅಚ್ಚಳಿಯದ ನೆನಪು.
ಹೈಸ್ಕೂಲಿಗೆ ಬಂದ ಮೇಲೆ ಕನ್ನಡ ಕಲಿಸಿದವರು ಕನ್ನಡದಷ್ಟೇ ಚಂದವಿದ್ದ ಶಾಂತ ಟೀಚರ್. ನನ್ನ ಮೂಗಿನಲ್ಲಿ ಮೂಗುತಿ ಇತ್ತು ಎಂಬ ಒಂದೇ ಕಾರಣಕ್ಕೆ ಅವರ ಮಗಳು ಅಶ್ವಿನಿ ತನಗೂ ಮೂಗು ಚುಚ್ಚಿಸಬೇಕೆಂದು ಹಠ ಮಾಡಿದ್ದಳು. ಕನ್ನಡ ಶಿಕ್ಷಕರ ಜೊತೆ ನನ್ನ ಬಾಂಧವ್ಯವೇ ಹಾಗಿತ್ತು. ಇಷ್ಟಿದ್ದರೂ ಕನ್ನಡದ ಮೇಲಾಣೆ ಮಾಡಿ ಹೇಳುವೆ, ಭಾಷೆಯ ಮಹತ್ವ, ಮೌಲ್ಯ ಯಾವುದರ ಅರಿವೂ ಆವಾಗ ಇರಲಿಲ್ಲ.
ನಂತರದ್ದು ಕಾಲೇಜು ದಿನಗಳು, ನನ್ನ ಕನ್ನಡದ ಮಟ್ಟಿಗದು ಸುವರ್ಣ ಕಾಲ. ಎರಡನೇ ಪಿಯುಸಿಯ ಮೊತ್ತ ಮೊದಲನೇ ಕನ್ನಡ ತರಗತಿಗೆ ಸೌಮ್ಯವಾಗಿ ಅಡಿಯಿಟ್ಟ ಶಾಂತಮೂರ್ತಿ ಚೇತನ್ ಸೋಮೇಶ್ವರ್ ಎಂಬವರು ನನ್ನ ಬದುಕಿನ ಭಾಗವಾಗುತ್ತಾರೆ ಎಂಬುದಾಗಲೀ, ಮನಸ್ಸಿನ ಮಂದಿರದಲ್ಲಿ ದೇವರಾಗಿ ಆಸೀನರಾಗುತ್ತಾರೆ ಎಂದಾಗಲೀ ಲವಲೇಶ ಕಲ್ಪನೆ ಇರಲಿಲ್ಲ. ದಿನಕಳೆದಂತೆಲ್ಲ ಇವರು ನಮ್ಮನ್ನು ಎಷ್ಟು ಆವರಿಸಿಕೊಂಡರೆಂದರೆ, ಕನ್ನಡ ಪೀರಿಯಡ್ ಇದ್ದ ದಿನ ಎಲ್ಲರೂ ಹಾಜರ್ ಸಾರ್! ನಿತ್ಯ ಆಡುತ್ತಿದ್ದ ಕನ್ನಡ ಭಾಷೆಗಿರುವ ಆಯಾಮಗಳು, ಬಳಕೆಯ ಬಹುವಿಧಗಳು, ಅದರ ಅಪ್ರತಿಮ ಸೌಂದರ್ಯ, ಲಾಲಿತ್ಯ, ಸೊಗಸು ಮತ್ತು ಅದನ್ನು ಕಲಿಯುತ್ತ, ಒಲಿಸಿಕೊಳ್ಳುವಾಗಿನ ಕಡು ಕಷ್ಟಗಳು ನನ್ನ ತಿಳಿವಿಗೆ ನಿಲುಕಿದ್ದು ಮತ್ತು ಕನ್ನಡ ನನ್ನನ್ನು ಪೊರೆದದ್ದು ಈ ದೇವರ ಅನುಗ್ರಹದಿಂದಲೇ ಹೌದು. ಇಂಥ ಚೇತನ್ ಸರ್ ಅವರಿಗೆ ಇದ್ದಕ್ಕಿದ್ದಂತೆ ಸರ್ಕಾರಿ ನೇಮಕಾತಿಯಾಗಿ ನಮ್ಮ ಕಾಲೇಜು ಬಿಟ್ಟಾಗ ಅನಾಥ ಪ್ರಜ್ಞೆ ಕಾಡುವುದು ಅಪ್ಪಮ್ಮ ಇಲ್ಲದಾಗ ಮಾತ್ರವಲ್ಲ ಅರಿವಾಗಿತ್ತು. ವರ್ಷಗಳ ನಂತರ ನಮ್ಮೂರ ಬೇರೆ ಕಾಲೇಜಿಗೆ ಅವರು ವರ್ಗವಾಗಿ ಬಂದಾಗ ಕಾಡಿ ಬೇಡಿ ಆ ಕಾಲೇಜಿಗೂ ಹೋಗಿ ಅವರ ತರಗತಿಯಲ್ಲಿ ಕುಳಿತು ಪಾಠ ಕೇಳಿದ ತಳಿ ನಾನು!
ಊರಿಗೆ ಹೋದರೆ ಇವತ್ತಿಗೂ ಅವರ ಮನೆ ನನ್ನ ತಂಗುದಾಣ. ಅಪ್ಪಣೆ ಕೇಳುವುದಿರಲಿ, ಒಂದು ಕರೆಯನ್ನೂ ಮಾಡದೇ ನಡುರಾತ್ರಿಯಲ್ಲಾದರೂ ಹೋಗಿ ಬಾಗಿಲು ಬಡಿಯಬಹುದಾದ ನನ್ನ ನೆಮ್ಮದಿ ಕುಟೀರ. ಹುಟ್ಟಿದಾರಭ್ಯ ನಾನು ಎತ್ತಿ ಆಡಿಸಿದ ಅವರ ಮಗ ಸೃಜನ್ ನನ್ನ ಕೈಗೂಸಾಗಿದ್ದು, ಅವರ ಮಡದಿಯಾಗುವ ಮೊದಲಿನಿಂದಲೂ ರಾಜಿ ಮತ್ತು ನನ್ನ ನಡುವಿದ್ದ ಸ್ನೇಹದ ಖಾಸಗಿ ಮಲ್ಲಿಗೆ ಬಳ್ಳಿ ಇವತ್ತಿಗೆ ಇನ್ನಷ್ಟು ಆಳವಾಗಿ ಬೇರೂರಿ ಹಬ್ಬಿರುವುದು ಬದುಕಿನ ಅದೃಷ್ಟಗಳಲ್ಲೊಂದು.
ಎಲ್ಲರ ಮನೆಯಲ್ಲಿ ಮಕ್ಕಳ ಬರವಣಿಗೆಯ ಅಭ್ಯಾಸವನ್ನು ಬೆರಗು, ಹೆಮ್ಮೆಗಳಿಂದ ಕಂಡರೆ ನಮ್ಮ ಮನೆಯ ಕತೆ ಬೇರೆಯೇ ಆಗಿತ್ತು. ಬರೆದೂ ಬರೆದೂ ಹಾಳಾಗ್ತಾಳೆ, ಪ್ರೀತಿಯಲ್ಲಿ ಬಿದ್ದಿರಬಹುದಾ? ಮತ್ತು ಇತ್ಯಾದಿ ಇತ್ಯಾದಿ ಅನಪೇಕ್ಷಿತ ಪ್ರಶ್ನೆಗಳಿಂದ ಅಮ್ಮನ ಮನಸು ಕೆಡಿಸಿದ್ದು ಹಾಗೂ ಮೊದಲು ಇವಳು ಬರೆಯುವುದನ್ನು ನಿಲ್ಲಿಸಬೇಕು ಎಂದಿದ್ದು PG degree ಪಡೆದಿದ್ದ ಆಕೆಯ highly qualified’ ಶ್ರೀಮಂತ ತಮ್ಮಂದಿರು. ದಿನಸಿ ಕಟ್ಟಿ ತಂದ ಕಾಗದದ ತುಂಡುಗಳನ್ನೂ ಓದುತ್ತಿದ್ದ ಅಮ್ಮನಿಗೂ ನಾನು ಬರೆಯುವುದು ಬೇಡವಾಯಿತು ಎಂದರೆ ಬಡತನದ ಅಸಹಾಯಕತೆ ಹೇಗಿದ್ದಿರಬಹುದು?
ಇವೆಲ್ಲದರ ಸುಳಿಯಲ್ಲಿ ನಾನು ಸಿಲುಕಿ ಏನು ಮಾಡಬೇಕು ಏನು ಮಾಡಬಾರದು ಎಂಬ ಸ್ಥಿತಿಯಲ್ಲಿ ಅರೆಜೀವದಂತಾಗಿದ್ದಾಗ ಇವೆಲ್ಲದರ ಸುಳಿವಿಲ್ಲದೆಯೂ ನನ್ನನ್ನು ಕಾಪಾಡಿದ ಜಾದೂವಿನ ಹೆಸರು ಚೇತನ್ ಸೋಮೇಶ್ವರ್. ಇಂದು ನನ್ನ ಕನ್ನಡ, ಭಾಷೆಯ ಸ್ಪಷ್ಟತೆ ಅಥವಾ ಬರವಣಿಗೆಯ ಶೈಲಿಯ ಬಗ್ಗೆ ಯಾರಾದರೂ ಒಂದೇ ಒಂದು ಒಳ್ಳೆಯ ಮಾತಾಡಿದರೂ ತಟ್ಟನೆ ನನ್ನ ಮನಸ್ಸು ಬಾಗಿ ನಮಿಸುವುದು ಚೇತನ್ ಸರ್ ಪಾದಗಳಿಗೆ.
ಪಿ.ಯು.ಸಿಯ ಅರ್ಧವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ನಾನು ಬರೆದ ಹತ್ತು ಅಂಕಗಳ ಕಿರು ಪ್ರಬಂಧದಡಿಯಲ್ಲಿ: ಸ್ಪಷ್ಟ ಭಾಷೆ, ಸೂಕ್ಷ್ಮ ಒಳನೋಟ, ಪ್ರಬುದ್ಧ ಆಲೋಚನೆ, ಸುಂದರ ಶೈಲಿ- ಇದನ್ನು ಉಳಿಸಿಕೊಳ್ಳಿ ಎಂಬ ಅವರ ಮಾತುಗಳು ನನ್ನ ಮನಸ್ಸಿನ ಗೋಡೆಯಲ್ಲಿ ಸುವರ್ಣಾಕ್ಷರಗಳಂತೆ ಕೆತ್ತಲ್ಪಟ್ಟಿದೆ. ಸುಮಾರು ಒಂದು ತಿಂಗಳ ಕಾಲ ಅದೇ ಗುಂಗಿನಲ್ಲಿದ್ದೆ. ಇನ್ನೆಂದಿಗೂ, ಕುಟುಂಬದ ಯಾರಿಂದ ಒತ್ತಡಗಳಿದ್ದರೂ ಓದು ಬರಹಗಳಿಂದ ದೂರಾಗಲಾರೆ ಎಂದು ನಿರ್ಧರಿಸಲು ಅಡಿಪಾಯವಾಗಿದ್ದು ಇವೇ ಮಾತುಗಳು. ಅಂದಿನಿಂದ ಇಂದಿನ ವರೆಗೂ ಅದನ್ನು ಉಳಿಸಿ ಬೆಳೆಸಿಕೊಳ್ಳಲು ನನ್ನ ಪ್ರಯತ್ನ ನಿರಂತರವಾಗಿ ಸಾಗುತ್ತಲೇ ಇದೆ. ಈ ಹಾದಿಯಲ್ಲಿ ದೀಪವಾದ ಗುರುಗಳೆಲ್ಲರ ಆಶೀರ್ವಾದ ನನ್ನ ತಲೆ ಕಾಯುತ್ತಲೇ, ಅಹಂಕಾರ ತಲೆಗೆ ಏರದಂತೆ ಎಚ್ಚರಿಸುತ್ತಿರಲಿ ಎಂಬುದು ಮಾತ್ರ ಬದುಕಿನೆದುರು ನನ್ನ ವಿನಮ್ರ ಪ್ರಾರ್ಥನೆ.
- ಶಮ ನಂದಿಬೆಟ್ಟ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ