ಜಗತ್ತಿನ ಆರ್ಥಿಕತೆಗೆ ಬಹುದೊಡ್ಡ ಕಾಣಿಕೆ ನೀಡುತ್ತಿರುವುದು ಕೃಷಿ ಕ್ಷೇತ್ರ. ಬಹುತೇಕ ಎಲ್ಲ ಉದ್ಯಮಗಳ ಮೂಲವನ್ನು ಹುಡುಕುತ್ತಾ ಹೋದರೆ ಅದು ಒಂದಿಲ್ಲ ಒಂದು ವಿಷಯದಲ್ಲಿ ಕೃಷಿಯನ್ನೇ ಅವಲಂಬಿಸುತ್ತದೆ. ರೈತ ಒಂದು ಬಾರಿ ಕೈಕಟ್ಟಿ ಕುಳಿತುಬಿಟ್ಟರೆ ಇಡೀ ಜಗತ್ತೇ ಕ್ಷಣಮಾತ್ರದಲ್ಲಿ ಅದೋಪತನಕ್ಕೆ ಜಾರಿ ಬಿಡುತ್ತದೆ ಎಲ್ಲ ಉದ್ಯಮ ಕ್ಷೇತ್ರಗಳು ದಿವಾಳಿಯ ಅಂಚಿಗೆ ಬಂದು ನಿಲ್ಲುತ್ತವೆ. ಇಲ್ಲಿ ಎಲ್ಲ ಉದ್ಯೋಗಿಗಳು, ನೌಕರರು ಕ್ಷಣಕಾಲ ವಿಶ್ರಾಂತಿಯನ್ನು ತೆಗೆದುಕೊಂಡರು ನಡೆಯುತ್ತದೆ. ಆದರೆ ರೈತನಿಗೆ ಮಾತ್ರ ವಿಶ್ರಾಂತಿ ಎನ್ನುವುದೇ ಇಲ್ಲ ಆತ ಸದಾಕಾಲ ಕಾಯಕದ ಜೀವಿ. ಅದಕ್ಕಾಗಿಯೇ ಕುವೆಂಪು ಅವರು ರೈತನನ್ನು ನೇಗಿಲಯೋಗಿ ಎಂದಿದ್ದಾರೆ.
ಇಲ್ಲಿ ಎಲ್ಲಾ ಆರ್ಥಿಕತೆಯೂ ರೈತನನ್ನೆ ಅವಲಂಬಿಸಿದ್ದರೂ ರೈತನ ಕಷ್ಟ ಮಾತ್ರ ತಪ್ಪಿಲ್ಲ. ಜಗತ್ತಿಗೆ ಅನ್ನ ಹಾಕುವವನೇ ಕೆಲವು ಬಾರಿ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಳ್ಳುವ ಪ್ರಸಂಗ ತಪ್ಪುತ್ತಿಲ್ಲ. ಯಾರಿಗೆ ನಷ್ಟವಾಗಿರಲಿ ಅದೆಲ್ಲವೂ ರೈತನ ಕೊರಳ ಮೇಲೆ ಬೀಳುತ್ತದೆ. ಸಕ್ಕರೆಯ ಬೆಲೆ ಕಡಿಮೆಯಾಗಿ ಕಾರ್ಖಾನೆಯ ಮಾಲೀಕರಿಗೆ ನಷ್ಟವಾಯಿತೆಂದರೆ ಅವರು ಅದನ್ನು ರೈತ ಬೆಳೆದ ಕಬ್ಬಿನ ಬೆಲೆ ಕಡಿಮೆ ಮಾಡಿ ತಮ್ಮ ನಷ್ಟವನ್ನು ತುಂಬಿಕೊಳ್ಳುವರು. ಆದರೆ ಆ ಅಮಾಯಕ ರೈತ ಯಾರ ಮೇಲೆ ಹಾಕಬೇಕು ಹೇಳಿ? ಹಾಗೆ ನೀವು ಏನನ್ನೇ ತೆಗೆದುಕೊಳ್ಳಿ ಇಲ್ಲಿ ಬಟ್ಟೆ ಬೆಲೆ ಕಡಿಮೆಯಾದರೆ ಆ ನಷ್ಟವನ್ನು ರೈತನ ಹತ್ತಿಯ ಮೇಲ್ ಹಾಕಿ ಉದ್ಯಮಿಗಳು ನಷ್ಟವನ್ನು ಸರಿದೂಗಿಸಿಕೊಳ್ಳುವರು. ಜಗತ್ತಿಗೆ ಅನ್ನ ಹಾಕುವ ಆ ಕೈಗಳೇ ಇಂದು ಅಭದ್ರವಾಗಿವೆ. ಎಲ್ಲ ಪ್ರಕೃತಿ ವಿಕೋಪಗಳ ಮೊದಲ ಹೊಡೆತವನ್ನು ಅನುಭವಿಸುವವನೇ ರೈತ. ಅಂತಹ ಮುಗ್ಧರೈತನನ್ನು ಮೋಸಗೊಳಿಸಿದೋಚಿಕೊಳ್ಳುವವರೇ ಅನೇಕರು.
ಅಂದಿನ ರಾಜನಿಂದ ಹಿಡಿದು ಇಂದಿನ ರಾಜಕಾರಣಿಗಳವರೆಗೂ ಬಲಿಪಶುವಾಗಿ ನಿಂತವನೇ ರೈತ. ಆತ ಎಲ್ಲರನ್ನು ಬಹುಬೇಗನೆ ನಂಬಿ ಮೋಸಗೊಳ್ಳುತ್ತಾನೆ. ನಾವುಗಳು ಮಾರುಕಟ್ಟೆಯಲ್ಲಿ ಒಂದು ಮೊಬೈಲ್ ಫೋನಿನಿಂದ ಕಾಲಲ್ಲಿ ಧರಿಸುವ ಚಪ್ಪಲಿಯವರೆಗೂ ಅಂಗಡಿಯವನು ಎಷ್ಟು ಹೇಳುತ್ತಾನೆಯೋ ಅಷ್ಟನ್ನೇ ಕೊಟ್ಟು ಖರೀದಿಸುತ್ತೇವೆ. ಹೋಟೆಲ್ ಊಟಕ್ಕೆ ಹೋದರೆ ಆ ಊಟದ ಬಿಲ್ಲಿನ ಜೊತೆಗೆ ಟಿಪ್ಪನ್ನ ಕೊಟ್ಟು ಬರುತ್ತೇವೆ. ಆದರೆ ನಮ್ಮನ್ನೆಲ್ಲರನ್ನು ಬದುಕಿಸುವ ತರಕಾರಿ ದವಸಧಾನ್ಯಗಳನ್ನು ಖರೀದಿಸುವಾಗ ಆ ರೈತ ಹೇಳಿದ ಅರ್ಥ ಬೆಲೆಗಿಂತ ಕಡಿಮೆ ನೀಡಿ ಕೊಂಡುಕೊಳ್ಳಲು ಹಿಂದೆ ಮುಂದೆ ನೋಡುತ್ತೇವೆ.
ನಮ್ಮಲ್ಲಿ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಒಬ್ಬನೇ ಒಬ್ಬ ರಾಜಕಾರಣಿಯೂ ಕಾಣಿಸುವುದಿಲ್ಲ. ಆದರೆ ಆ ರಾಜಕಾರಣಿಗೆ ಜೈಕಾರ ಕೂಗುವ ರೈತ ಮಾತ್ರ ಸಾಲದ ಸುಲಿಗೆ ಸಿಲುಕಿ ತನ್ನ ಜೀವನವನ್ನೇ ಕಳೆದುಕೊಳ್ಳುವ ದುರಂತ ಸ್ಥಿತಿ ಬಂದೊದಗಿದೆ. ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿದ ರೈತನಿಗೆ ಶಕ್ತಿಯಾಗಿ ನಿಂತು ಅವನ ಕಣ್ಣೀರು ವರೆಸುವ ಮಹಾಯೋಗಿಯಾಗಿ ಈ ನಾಡಿಗೆ ಅವತರಿಸಿದವರೇ ಮರೆಗುದ್ದಿಯ ಪರಮಪೂಜ್ಯ ಗುರುಪಾದ ಮಹಾಸ್ವಾಮಿಗಳು ಶ್ರೀಗಳು ನಿರಂತರವಾಗಿ ತಮ್ಮ ಪಟ್ಟಾಧಿಕಾರ ಮಹೋತ್ಸವದಿಂದ ಹಿಡಿದು ಸುಮಾರು 25 ವರ್ಷಗಳ ಕಾಲ ರೈತರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಪ್ರತಿವರುಷವೂ ಸಾವಯುವ ಕೃಷಿ ಮೇಳವನ್ನು ಆಯೋಜಿಸುತ್ತಾ ರೈತರನ್ನು ಸನ್ಮಾನಿಸಿ ಅವರಿಗೊಂದು ಸ್ಪೂರ್ತಿಯ ಚಿಲುಮೆಯಾಗಿ ನಿಂತಿದ್ದಾರೆ.
ರೈತನ ಎಲ್ಲ ಹೋರಾಟಗಳಿಗೂ ಮುಂಚೂಣಿಯಲ್ಲಿ ನಿಂತು ಧ್ವನಿಗೂಡಿಸುವ ಪರಮಪೂಜ್ಯರು ಆ ರೈತನ ಕಷ್ಟಗಳಿಗೆ ಸದಾಕಾಲ ಸ್ಪಂದಿಸುತ್ತಾ ಆತನ ಬಾಳಿಗೆ ಬೆಳಕಾಗಿದ್ದಾರೆ. ತಮ್ಮ ಶ್ರೀಮಠದ ಜಮೀನಿನಲ್ಲಿ ಅನೇಕ ವಿಧವಿಧವಾದ ಕೃಷಿ ಪ್ರಯೋಗಗಳನ್ನ ನಡೆಸುತ್ತಾ ಅವುಗಳನ್ನ ಇತರರಿಗೆ ತಿಳಪಡಿಸುತ್ತಿದ್ದಾರೆ. ನಾವೆಲ್ಲರೂ ಡಾ. ರಾಜಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದಲ್ಲಿ ಗುಡ್ಡವನ್ನು ಒಡೆದು ಭೂಮಿ ಮಾಡಿ ಫಲವತ್ತಾದ ಬೆಳೆಯನ್ನ ಬೆಳೆದದ್ದನ್ನು ನೋಡುತ್ತೇವೆ. ಆ ಚಿತ್ರದ ಸಾಕ್ಷಾತ್ ರೂಪವನ್ನು ಇಂದು ನಾವುಗಳು ನೋಡಬೇಕಾದರೆ ಪರಮಪೂಜ್ಯರು ಗುಡ್ಡವನ್ನು ಒಡೆದು ಅದನ್ನು ಕೃಷಿ ಭೂಮಿಯಾಗಿ ಬದಲಿಸಿ ಸಾವಯುವ ಕೃಷಿಯನ್ನು ಬೆಳೆಯುತ್ತಿರುವುದು ಕಣ್ಣ ಮುಂದೆ ರಾರಾಜಿಸುತ್ತದೆ. ಶ್ರೀಗಳ ಕೃಷಿ ಕಾರ್ಯಗಳನ್ನು ಗಮನಿಸಿ ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಕೃಷಿ ರತ್ನ ಪ್ರಶಸ್ತಿಯನ್ನು ಕೊಡಮಾಡಿದೆ. ಜೊತೆಗೆ ಬಾಗಲಕೋಟೆ ಮಹಾವಿದ್ಯಾಲಯವು ಸಹ ಕೃಷಿ ಪ್ರಶಸ್ತಿಯನ್ನು ಗುರುಗಳಿಗೆ ಅರ್ಪಿಸಿ ತಮ್ಮ ಗಣತೆಯನ್ನು ಹೆಚ್ಚಿಸಿಕೊಂಡಿವೆ. ಪೂಜ್ಯರು ರೈತ ಸನ್ಯಾಸಿ ಎಂದೇ ಉತ್ತರ ಕರ್ನಾಟಕದ ಭಾಗದಲ್ಲಿ ಮನೆ ಮಾತಾಗಿದ್ದಾರೆ ಅಂತಹ ಪೂಜ್ಯರಿಗೆ ಶತಕೋಟಿ ನಮನಗಳು.
- ಶ್ರೀರಾಮಕೃಷ್ಣ ದೇವರು
ಶ್ರೀ ಷಣ್ಮುಖಾರೂಢ ಮಠ, ವಿಜಯಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ