ಸಂಸ್ಕೃತ ಭಗವಂತನೇ ಭೂಮಿಗೆ ಕಳುಹಿಸಿದ ಭಾಷೆ: ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ

Upayuktha
0

 ಗೀತಾಮೃತಮ್ ಕಾರ್ಯಕ್ರಮ 



ಹುಬ್ಬಳ್ಳಿ: ಜಗತ್ತಿನಲ್ಲಿ ಎಷ್ಟು ಭಾಷೆಗಳಿವೆಯೋ ಅವೆಲ್ಲಕ್ಕಿಂತ ಮೊದಲು ಹುಟ್ಟಿದ ಸಂಸ್ಕೃತವು ಭಗವಂತನು ಸ್ವತಃ ಬಳಸಿ ಭೂಮಿಗೆ ಕಳುಹಿಸಿದ ಭಾಷೆಯಾಗಿದೆ. ಸಂಸ್ಕೃತಿ, ಸಂಸ್ಕಾರ, ಜ್ಞಾನದ ಭಂಡಾರವಾಗಿರುವ ಇದು ಮಧುರವಾದದ್ದು, ಪಠಣ ಮಾಡಿದರೆ ಜ್ಞಾನ ವೃದ್ಧಿಯಾಗುತ್ತದೆ, ಅಂತಃಕರಣವು ಶುದ್ಧಿಯಾಗುತ್ತದೆ ಎಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.


ದೇಶಪಾಂಡೆ ನಗರದ ಕರ್ನಾಟಕ ಜಿಮ್ಹಾನಾ ಮೈದಾನದಲ್ಲಿ ಸಂಸ್ಕೃತ ಭಾರತೀ ವತಿಯಿಂದ ಭಾನುವಾರ ಏರ್ಪಡಿಸಿದ್ದ ಗೀತಾಮೃತಮ್ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕೆಲ ಎಡಪಂಥಿಯರು, ಭಾಷಾಂಧರು ಲ್ಯಾಟಿನ್, ಜರ್ಮನ್, ಇಂಗ್ಲಿಷ್ ಮುಂತಾದ ಭಾಷೆಗಳನ್ನು ಪ್ರೀತಿಸುತ್ತಾರೆ. ಆದರೆ, ಸಂಸ್ಕೃತವನ್ನು ದ್ವೇಷ ಮಾಡುತ್ತಾರೆ. ಆದರೆ, ಜಗತ್ತಿನಲ್ಲಿ ಸೌಹಾರ್ದ ಬೆಳೆಸಿದ ಭಾಷೆ ಇದಾಗಿದೆ. ಕೆಲವರು ಹೇಗಾದರೂ ಮಾಡಿ ಸಂಸ್ಕೃತವನ್ನು ಸಾಯಿಸಬೇಕು ಎಂದು ಹೊರಟಿದ್ದಾರೆ. ಆದರೆ, ಇದು ಸಾಧ್ಯವಿಲ್ಲ. ದೇವ ಭಾಷೆಯಾದ ಸಂಸ್ಕೃತಕ್ಕೆ ಸಾವಿಲ್ಲ ಎಂದರು.


ಭಾರತೀಯರ ಮೇಲೆ ಪಾಶ್ಚಾತ್ಯ ಸಂಸ್ಕೃತಿ ಹೇರುವ ಕೆಲಸ ನಡೆಯುತ್ತಿರುವಾಗಲೇ ಸಂಸ್ಕೃತ ಭಾರತೀ ವತಿಯಿಂದ ಇಂತಹ ಕಾರ್ಯಕ್ರಮ ಏರ್ಪಾಟಾಗಿರುವುದು ಅತ್ಯಂತ ಸೂಕ್ತವಾಗಿದೆ. ಜಗತ್ತಿನ ಎಲ್ಲ ಕಡೆ ಸನಾತನ ಧರ್ಮ ಮತ್ತು ಸಂಸ್ಕೃತ ಭಾಷೆಯನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಭಿಪ್ರಾಯಪಟ್ಟರು. ಭಗವದ್ಗೀತೆಯು ಮನುಷ್ಯ ಜೀವನದ ಪ್ರತಿ ಕ್ಷಣವನ್ನು ಹೇಗೆ ಮುನ್ನಡೆಸಬೇಕು ಎಂಬುದನ್ನು ತಿಳಿಸುತ್ತದೆ. ಅದ್ಭುತವಾದ ಸಂಸ್ಕೃತ ಭಾಷೆ ಉಳಿಸಿ, ಬೆಳೆಸಲು ದೇಶದ ಪ್ರತಿಯೊಬ್ಬ ಪ್ರಜೆಯು ಶ್ರಮಿಸಬೇಕು ಎಂದು ತಿಳಿಸಿದರು.. 


ಸಂಸ್ಕೃತ ಭಾರತೀ ಅಖಿಲ ಭಾರತ ಸಹ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ ವಜ್ರಳ್ಳಿ ಮಾತನಾಡಿ, ಮನುಷ್ಯನ ಜೀವನ ಉತ್ತಮಗೊಳಿಸುವ ಎಲ್ಲ ಸಂಗತಿಗಳು ಭಗವದ್ಗೀತೆಯಲ್ಲಿವೆ. ಉತ್ತಮ ಜೀವನಕ್ಕೆ ಇದು ಪ್ರೇರಣೆಯಾಗಿದೆ. ಲೋಕಕಲ್ಯಾಣಕ್ಕೆ ಬೇಕಾದ ಎಲ್ಲ ಅಂಶಗಳನ್ನು ಗ್ರಂಥ ಒಳಗೊಂಡಿದೆ. ಇಂತಹ ಗ್ರಂಥ ಪಾರಾಯಣ ಮಾಡುವ ಕೆಲಸ ಎಲ್ಲರಿಂದ ಆಗಬೇಕು ಎಂದರು. ಗೀತಾಮೃತಮ್ ಸ್ವಾಗತ ಸಮಿತಿ ಅಧ್ಯಕ್ಷೆ ಭಾರತೀ ಪಾಟೀಲ, ಉದ್ಯಮಿ ಮಹದೇವ ಕರಮರಿ ಮಾತನಾಡಿದರು.



ಗಮನ ಸೆಳೆದ ಸಂಸ್ಕೃತ ಪ್ರದರ್ಶಿನಿ

ಸಂಸ್ಕೃತ ಭಾರತೀ ಆಶ್ರಯದಲ್ಲಿ ಮಾಹಿತಿಪೂರ್ಣ, ಸುಲಭವಾಗಿ ಸಂಸ್ಕೃತ ಅರ್ಥವಾಗುವಂತೆ ಸಂಸ್ಕೃತ ಪ್ರದರ್ಶಿನಿ ಏರ್ಪಡಿಸಲಾಗಿತ್ತು. ಇದು ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಕೇಂದ್ರ ಸಚಿವ ಪಲ್ಲಾದ ಜೋಶಿ ಅವರು ಪ್ರದರ್ಶಿನಿ ಉದ್ಘಾಟಿಸಿ ಮಾತನಾಡಿ, ಭಾರತದ ಇತಿಹಾಸ, ಪರಂಪರೆಯಲ್ಲಿ ಒಟ್ಟು ಭಾಷೆಗಳನ್ನು ಗಮನಿಸಿದಾಗ ಅತ್ಯಂತ ಪುರಾತನ ಭಾಷೆಗಳು ನಮ್ಮಲ್ಲಿ ಇವೆ ಎಂಬುದು ಗಮನಕ್ಕೆ ಬರುತ್ತದೆ. ಸಂಸ್ಕೃತಕ್ಕೆ ಕನಿಷ್ಠ ಐದು ಸಾವಿರ ವರ್ಷಗಳ ಇತಿಹಾಸವಿದೆ. ವೇದಗಳ ರಚನೆಗೆ ಸಂಸ್ಕೃತ ಬಳಕೆಯಾಗಿದೆ. ಅಷ್ಟೊಂದು ದೊಡ್ಡ ಸಂಪತ್ತು ಸಂಸ್ಕೃತದಲ್ಲಿದೆ. ಪಾಲಕರು ಆಂಗ್ಲ ಭಾಷೆ ಕಲಿತರೆ ಸಾಕು ಎನ್ನುವ ಮನಸ್ಥಿತಿಯಿಂದ ಹೊರಬಂದು ನಮ್ಮತನ ಉಳಿಸಿಕೊಳ್ಳಲು ಮಕ್ಕಳಿಗೆ ಸಂಸ್ಕೃತ ಕಲಿಸಿಕೊಡಬೇಕು ಎಂದರು.


ಸಂಸ್ಕೃತ ಭಾಷೆ ಉಳಿಸಿ ಬೆಳೆಸುವಲ್ಲಿ ಪ್ರಸ್ತುತ ದಿನಗಳಲ್ಲಿ ಸಂಸ್ಕೃತ ಭಾರತಿಯು ಉತ್ತಮ ಕಾರ್ಯ ಮಾಡುತ್ತಿದೆ. ನಿತ್ಯ ಜೀವನದಲ್ಲಿ ಸಂಸ್ಕೃತ ಬಳಕೆಯಾಗಬೇಕು ಎಂದು ಹೇಳಿದರು. ಪ್ರಮುಖರಾದ ನಂದಕುಮಾರ, ಗೋವಿಂದ ಜೋಶಿ, ಚನ್ನು ಹೊಸಮನಿ, ಜಿತೇಂದ್ರ ಮಜೇಥಿಯಾ, ಸದಾನಂದ ಕಾಮತ್‌, ರಾಜಶೇಖರ ಪಾಟೀಲ, ಗಿರೀಶ ಟೆಂಗಿನಕಾಯಿ, ಅರುಣ ಹಬೀಬ ಇತರರು ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top