ಕನ್ನಡ ಸಿನಿಮಾರಂಗ ಕೇವಲ ಬೆಂಗಳೂರು, ಮಂಗಳೂರಿಗೆ ಸೀಮಿತವಾಗಿ, ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಸೀಮಿತ ಅವಕಾಶಗಳು ಸಿಗುತ್ತಿರುವಾಗ ಸ್ಯಾಂಡಲ್‌ವುಡ್‌ನಲ್ಲಿ ಬದಲಾವಣೆಯ ಅಲೆಯನ್ನು ಹೊತ್ತು ತಂದಿರುವ ಯುವ ನಟ ನವೀನ್ ಶಂಕರ್ ಕನ್ನಡದ ಭರವಸೆಯ ನಟರಾಗಿ ತೆರೆಯ ಮೇಲೆ ಮಿಂಚುತ್ತಿದ್ದಾರೆ.
ಪ್ರಯೋಗಾತ್ಮಕ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಜವಾರಿ ನಟ ನವೀನ್ ಶಂಕರ್ ಮೂಲತಃ ಬಾಗಲಕೋಟೆಯ ಇಳಕಲ್ ಬಳಿಯವರು. ಮಧ್ಯಮ ವರ್ಗದ ಕುಟುಂಬದಲ್ಲಿ ಜನಸಿದ ನವೀನ್ ಶಂಕರ್ ನಟನೆ ಸೆಳೆತದಿಂದ ಓದನ್ನು ಅರ್ಧಕ್ಕೆ ಬಿಟ್ಟು ರಂಗಭೂಮಿಯ ಕಡೆ ಮುಖ ಮಾಡಿದರು. ಹಲವಾರು ನಾಟಕಗಳಲ್ಲಿ ಅಭಿನಯ ಮಾಡಿದ ನವೀನ್, ನಂತರ ಖಾಸಗಿ ವಾಹಿನಿಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿದರು. ಅದೇ ಸಮಯದಲ್ಲಿ ಗೆಳೆಯರ ಜೊತೆ ಸೇರಿ ಕಿರು ಚಿತ್ರಗಳನ್ನು ಕೂಡ ಮಾಡಿದರು.
ಆರಂಭದಲ್ಲಿ ಕ್ಲಾಸ್‌ಮೇಟ್ಸ್, ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯಲ್ಲಿ ತೆರೆಯ ಅವಕಾಶ ಗಿಟ್ಟಿಸಿಕೊಂಡರು. ನಂತರ ಗುಲ್ಟು ಸಿನಿಮಾದ ಮೂಲಕ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನವೀನ್ ಶಂಕರ್, ಹೊಂದಿಸಿ ಬರೆಯಿರಿ, ಕ್ಷೇತ್ರಪತಿ, ಧರಣಿ ಮಂಡಲ ಮಧ್ಯದೊಳಗೆ ಮುಂತಾದ ವಿಶಿಷ್ಟ ರೀತಿಯ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಕನ್ನಡದ ಗುರುದೇವ ಹೊಯ್ಸಳ, ತೆಲುಗಿನ ಸಲಾರ್ ಮುಂತಾದ ಚಿತ್ರಗಳಲ್ಲಿ ನೆಗೆಟಿವ್ ಲುಕ್‌ನಲ್ಲಿ ಕೂಡ ಮಿಂಚಿದ್ದಾರೆ.
ವಿಭಿನ್ನ ಮ್ಯಾನರಿಸಂ, ಒಳ್ಳೆಯ ಕಥೆಯ ಆಯ್ಕೆ, ಉತ್ತರ ಕರ್ನಾಟಕದ ಭಾಷೆಯ ಸೊಗಡಿರುವ ಬಯಲುಸೀಮೆಯ ಈ ಪ್ರತಿಭೆ ಸಿನಿಮಾರಂಗದಲ್ಲಿ ತನ್ನ ಪ್ರತಿಭೆಯ ಮೂಲಕವೇ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಸಿನಿಮಾ ರಂಗದಲ್ಲಿ ಹೊಸ ಪ್ರಯೋಗಗಳ ಜೊತೆಗೆ ತಮಗೆ ಸಿಕ್ಕ ಪ್ರತಿಯೊಂದು ಅವಕಾಶದಲ್ಲೂ ತಮ್ಮ ಪ್ರತಿಭೆಯನ್ನು ಹೊರ ಹಾಕಿದ್ದಾರೆ. ಇನ್ನೂ ಹೆಚ್ಚೆಚ್ಚು ಅವಕಾಶಗಳು ನವೀನ್ ಶಂಕರ್ ಅವರನ್ನು ಹುಡುಕಿಕೊಂಡು ಬರಲಿ.
ಯಾವುದೇ ಗಾಡ್‌ಫಾದರ್‌ಗಳ ನೆರವಿಲ್ಲದೇ ಸ್ವತಃ ಪರಿಶ್ರಮ, ಪ್ರತಿಭೆಯ ಮೂಲಕವೇ ಚಲನಚಿತ್ರ ರಂಗದಲ್ಲಿ ಸದ್ದು ಮಾಡುತ್ತಿದ್ದಾರೆ ನವೀನ್ ಶಂಕರ್. ಉತ್ತರ ಕರ್ನಾಟಕದ ಹಳ್ಳಿಯ ಹುಡುಗನೊಬ್ಬ ಈಗ ಸ್ಟಾರ್ ನಟನಾಗಿ ತೆರೆಯ ಮೇಲೆ ಮಿಂಚುತ್ತಿದ್ದಾನೆ. ಅವಕಾಶಕ್ಕಾಗಿ ಕಾಯದೇ, ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಯಾವ ಪಾತ್ರಕ್ಕೂ ಸೈ ಎನ್ನಿಸಿಕೊಳ್ಳುವ ಮೂಲಕ ಅವನಂತೆ ನಟನಾಗುವ ಕನಸಿಟ್ಟುಕೊಂಡ ಹಲವು ತರುಣರಿಗೆ ಮಾದರಿಯಾಗಿದ್ದಾರೆ.
- ನಮಿತಾ
ಎಸ್ ಡಿ ಎಂ ಕಾಲೇಜು ಉಜಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ