ಅಪ್ರತಿಮ ಕನ್ನಡ ಸಾಹಿತಿ, ಕವಿಯಾಗಿ, ಕನ್ನಡ ಭಾಷೆಯನ್ನು ಗಾಯತ್ರಿ ಮಂತ್ರವೆಂದು, ಶಿಷ್ಯರನ್ನು ತಮ್ಮ ಮಕ್ಕಳಂತೆ ಕಂಡವರು ಸಾಲಿ ರಾಮಚಂದ್ರ ರಾಯರು. ದೇಶಭಕ್ತರಾಗಿ, ಶಿಕ್ಷಣ ಕ್ಷೇತ್ರ ದೇವಾಲಯವೆಂದು ಭಾವಿಸಿದರು. ಅನೇಕ ಶಿಷ್ಯರನ್ನು ಸಂಪಾದಿಸಿ, ಸ್ವಾತಂತ್ರ್ಯಕ್ಕಾಗಿ ಚಳುವಳಿ ಮಾಡಿದರು. ಅಪ್ಪಟ ದೇಶಾಭಿಮಾನ ವ್ಯಕ್ತಪಡಿಸಿ, ಲೋಕಮಾನ್ಯ ತಿಲಕರ ಬಂಧನದಿಂದ ಪ್ರೇರಣೆಯನ್ನು ಪಡೆದು ಚಳುವಳಿಗೆ ಧುಮುಕಿದ ಮಹನೀಯರು. ಕನ್ನಡ ಭಾಷೆಯ ಅಭಿಮಾನ ತೋರ್ಪಡಿಸಲು ಅದ್ಭುತ ಕವನವನ್ನೇ ಹೀಗೆ ರಚಿಸಿ ನಾಡಿಗೆ ನೀಡಿದ ಅಪರೂಪದ ಕವಿ.
ಕನ್ನಡದ ನೆಲದ ಪುಲ್ಲೆನಗೆ ಪಾವನ ತುಳಸಿ
ಕನ್ನಡದ ನೆಲದ ನೀರ್ವೊನಲಗೆ ದೇವನದಿ
ಕನ್ನಡದ ನೆಲದ ಕಲ್ಲೆನಗೆ ಶಾಲಿಗ್ರಾಮ ಶಿಲೆ
ಕನ್ನಡಂ ದೈವಮೈ ಕನ್ನಡದ ಶಬ್ದಮೆನಗೋಂಕಾರ
ಮೀಯೆನ್ನ ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ
ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕ ಜಗದೊಳೆನಗೆ ॥
ಬೆಳಗಾವಿ ಜಿಲ್ಲೆಯ ರಾಮದುಗ೯ದಲ್ಲಿ ಸುಬ್ಬರಾಯರ ಪುತ್ರನಾಗಿ ತಾ॥ 10-10-1880 ರಂದು ಜನಿಸಿದರು. ಸಾಲಿ ರಾಮಚಂದ್ರರಾಯರು ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು, ಪ್ರೀತಿಯಿಂದ ವಂಚಿತಗೊಂಡು ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ತದನಂತರ ಇವರು ಹತ್ತು ವರ್ಷದಲ್ಲಿರುವಾಗ ತಮ್ಮ ತಾಯಿ, ಅಜ್ಜಿಯನ್ನೂ ಕಳೆದುಕೊಂಡರು. ತಮ್ಮ 36ನೇ ವರ್ಷದಲ್ಲಿ ಪತ್ನಿಯನ್ನೂ ಕಳೆದುಕೊಂಡರು. ಆಗ ಗಾಂಧೀಜಿಯ ಕರೆಗೆ ಓಗೊಟ್ಟು ಸತ್ಯಾಗ್ರಹಕ್ಕೆ ಪುತ್ರನನ್ನು ಕಳಿಸಿದಾಗ ಅವನೂ ಪ್ಲೇಗ್ ಗೆ ತುತ್ತಾಗಿ ಸಾವನ್ನಪ್ಪಿದ್ದು ದುರಂತ. ತಮ್ಮ ಕಷ್ಟಗಳನ್ನೇ ಸಂಗಾತಿಯೆಂದು ಭಾವಿಸಿದರೂ ಕನ್ನಡವನ್ನು ಮಾತ್ರ ವ್ರತದಂತೆ ಸ್ವೀಕರಿಸಿದರು.
ವಾರಾನ್ನದಿಂದ ಶಿಕ್ಷಣ ಮುಂದುವರಿಸುವ ಸಮಯದಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಆರ್.ಎ. ಜಾಗಿರದಾರ್ ಇವರಿಗೆ ಅಭಯ ಹಸ್ತ ನೀಡಿದರು. ಸಾಲಿ ರಾಮಚಂದ್ರರಾಯರು ಮೆಟ್ರಿಕ್ ಮುಗಿಸಿ ಮೊದಲು ಅಂಚೆ ಇಲಾಖೆಗೆ ಸೇರಿದರು. ಆದರೆ ಅಂಚೆ ಇಲಾಖೆ ಸರಿಹೊಗದೆ, ಪುಣೆಗೆ ಹೋಗಿ, ಫರ್ಗುಸನ್ ಕಾಲೇಜು ಸೇರಿದರು. ಸ್ವಲ್ಪಸಮಯದ ನಂತರ ಕಾಲೇಜು ಬಿಟ್ಟು, ಚಳುವಳಿಗೆ ಧುಮುಕಿ, ಪುನಃ ಪುಣೆಯ ಡೆಕ್ಕನ್ ಕಾಲೇಜು ಸೇರಿ, ಬಿ.ಎ. ಪದವಿ ಪಡೆದರು. ರೊದ್ದ ಶ್ರೀನಿವಾಸರಾಯರು ಪ್ರಾರಂಭಿಸಿದ್ದ ಕರ್ನಾಟಕ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ವಿದ್ಯಾರ್ಥಿಗಳಿಗೆ ಶಿಸ್ತು ಬದ್ದ ಶಿಕ್ಷಣ ನೀಡಿದರು. ತಪ್ಪು ಮಾಡುವ ಮಕ್ಕಳನ್ನು ಶಿಕ್ಷಿಸಿ ಅವರನ್ನು ತಿದ್ದುತ್ತಿದ್ದರು. ಹುಬ್ಬಳ್ಳಿಯ ತೊರವಿ, ವಿಜಯಪುರದ ಕೃಷ್ಣಾ ಪಾಠಶಾಲೆಯಲ್ಲಿ ಕೆಲಸ ಮಾಡಿದರು.
"ನವರತ್ನಮಂಡಲ" ಎಂಬ ಸಾಹಿತಿ ಮಿತ್ರರ ಬಳಗವನ್ನು ಸ್ಥಾಪಿಸಿ, ಕಾವ್ಯಕೃಷಿ ಮಾಡಿದ ಸಾಹಿತಿ. ವಿಶೇಷವೇನೆಂದರೆ ಬೆಳಗಾವಿಯ ಮಹಾ ಕಾಂಗ್ರೆಸ್ ಮಹಾಧಿವೇಶನ 1924 ರಲ್ಲಿ ಜರುಗಿದಾಗ, ಮಹಾತ್ಮಾ ಗಾಂಧೀಜಿಯವರ ಹಿಂದಿ ಭಾಷಣ ಕನ್ನಡಕ್ಕೆ ಅನುವಾದಿಸಿದರು. ವಿವಿಧ ಪತ್ರಿಕೆಗಳಲ್ಲಿ ಗಾಂಧೀಜಿಯವರ ಭಾಷಣದ ಲೇಖನಗಳನ್ನು ಅನುವಾದಿಸಿ ಪ್ರಕಟಿಸಿದರು. ಧಾರವಾಡದ ರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಕರ ವೃತ್ತಿಯನ್ನು ಸಹ ಮಾಡಿದರು. ಸಂಸೃತ, ಕನ್ನಡ, ಹಿಂದಿ, ಪಾಲಿ, ಗುಜರಾತಿ, ಮರಾಠಿ, ಬಂಗಾಲಿ ರಷ್ಯನ್ ಭಾಷೆ ಬಲ್ಲವರಾಗಿದ್ದರು. ಕವಿಯಾಗಿ, ಕತೆಗಾರರಾಗಿ, ಕಾದಂಬರಿಕಾರರಾಗಿ, ನಾಟಕಕಾರಾಗಿ ಮತ್ತು ಅನುವಾದಕರಾಗಿ 200ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಸಾಹಿತಿ.
ತಮ್ಮ ಅಂತರಂಗದ ಹಂಬಲ, ಕವನದಲ್ಲಿ ಬರೆದಾಗ ಓದಿದ ಆಲೂರು ವೆಂಕಟರಾಯರು, ತಮ್ಮ "ವಾಗ್ಭೂಷಣ" ಪತ್ರಿಕೆಯಲ್ಲಿ ಪ್ರಕಟಿಸಿದರು. ತಮ್ಮ ಪುತ್ರನನ್ನು ಕಳೆದುಕೊಂಡು, ತಿಲಾಂಜಲಿ ಎಂಬ ನೀಳ್ಗವಿತೆಯನ್ನು ಬರೆದರು. ಇದು ಮೊಟ್ಟ ಮೊದಲ ಶೋಕಗೀತೆಯೆಂದು ವಿಮಶೆ೯ಕಾರರು ಗುರುತಿಸಿ ಗೌರವ ಸೂಚಿಸಿದರು. ಇವರ ಪ್ರಥಮ ಕವನ ಸಂಕಲನ 1925ರಲ್ಲಿ ಪ್ರಕಟಗೊಂಡು, ತದನಂತರ ಕುಸುಮಾಂಜಲಿ, ಚಿತ್ರ ಸೃಷ್ಟಿ ಮುಂತಾದವು ಪ್ರಕಟಿಸಿ ನಾಡಿಗೆ ನೀಡಿದರು. ಅಭಿಸಾರ ಕಥನಕಾವ್ಯ ಮತ್ತು ಇನ್ನಿತರ ಮಕ್ಕಳ ಸಾಹಿತ್ಯ, ಏಕಾಂಕ ನಾಟಕ, ಕಾದಂಬರಿಗಳನ್ನು ರಚಿಸಿದರು. ರಾಮಾಯಣ ಕಾವ್ಯವನ್ನು ಸರಳ ಭಾಷೆಯಲ್ಲಿ ಶರಚತುಷ್ಟದಿಯಲ್ಲಿ ರಚಿಸಿ ನಾಡಿಗೆ ನೀಡಿರುವುದಲ್ಲದೇ ಸಂಸೃತದಲ್ಲೂ ಗದ್ಯರಾಮಾಯಣವನ್ನು ಬರೆದರು.
ಅನೇಕ ಖಂಡ ಕಾವ್ಯಗಳನ್ನು ಪ್ರಕಟಿಸಿದರು. ಕೌಸಲ್ಯಾ ವಿವಾಹ, ಮೇಘದೂತ, ಕನ್ನಡ ಭಾಗವತ ಮುಂತಾದ ಖಂಡಕಾವ್ಯಗಳನ್ನು ರಚಿಸಿದ್ದಾರೆ. ಅನೇಕ ಸಾಹಿತ್ಯದ ಪ್ರಕಾರಗಳನ್ನು ರಚಿಸಿ ನಾಡಿಗೆ ನೀಡಿ ತಮ್ಮ 90ನೆಯ ವಯಸ್ಸಿನಲ್ಲಿ ತಾ॥ 31-10-1978 ರಂದು ಸಾಹಿತ್ಯ ಲೋಕದಿಂದ ಕಣ್ಮರೆಯಾದರು.
ಇಬ್ಬರು ಪುತ್ರಿಯರು, ಆತ್ಮೀಯರು, ಶಿಷ್ಯ ಬಳಗದವರು ಇವರನ್ನು ಸ್ಮರಿಸಿ, ಗೌರವಾರ್ಥ 1980ರಲ್ಲಿ "ಸಾಲಿ ರಾಮಚಂದ್ರರಾಯರು" ಎಂಬ ಸಂಸ್ಮರಣ ಗ್ರಂಥ ಬಿಡುಗಡೆ ಮಾಡಿದರು. ಇವರ ಸಮಗ್ರ ಕಾವ್ಯವನ್ನು ಜನಪ್ರಿಯ ಪುಸ್ತಕಮಾಲೆಯಡಿಯಲ್ಲಿ ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರ 1996ರಲ್ಲಿ ಹೊರತಂದಿದೆ. 1968 ರಲ್ಲಿ ಇವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ